ಗಝಲ್ ಗಳ ಹೊತ್ತು...!
ಗಝಲ್-೧
ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ
ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ
ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು
ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ
ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು ಸಾಗಿದೆ
ಮಧುರ ತನನ ಸಮರ ಎನಿಪ ಸೃಷ್ಟಿ ಒಲವೆ ಗೆಳತಿಯೆ
ಜೀವ ಭಾವ ಜಗದ ಸುತ್ತ ಸುದಿನ ಹರಡಿ ನಲಿದಿದೆ
ನನಸು ಕಾಂಬ ಸವಿಯ ಕಿರಣ ಸುತ್ತ ಸೆಳೆದೆ ಗೆಳತಿಯೆ
ಈಶ ಬರುತ ಕೈಯ ಹಿಡಿದ ಸಖಿಯ ನೋಡು ನಾಚಿದೆ
ತಾರೆ ಜೊತೆಗೆ ಪೂರ್ಣ ಚಂದ್ರ ಒಲಿದ ಸಖನೆ ಗೆಳತಿಯೆ
***
ಗಝಲ್-೨
ಮಧುರ ಕ್ಷಣಗಳ ಹೊತ್ತು ಇರುವುದೇತಕೆ ನಲ್ಲೆ
ಬದುಕು ಸುಂದರವಾಗಿ ಬಲಿತು ಬರುವುದೇತಕೆ ನಲ್ಲೆ
ಪ್ರೀತಿಯ ತಂತಿ ಮೀಟುತ ಭಾವನೆಗಳು ಬರಬಾರದೆ
ಕೈ ಬಳೆಯ ಸದ್ದಿಗೆ ತನುವು ಕುಣಿವುದೇತಕೆ ನಲ್ಲೆ
ತುಟಿಯಾಸೆಯ ಮೀರಿದ ಬಯಕೆಯು ಹೀಗೆಯೆ ಸಾಗುತ್ತದೆ
ಚೈತ್ರದ ಸೊಗಸಿಗೆ ಭಾವನೆಗಳು ನಿಲ್ಲುವುದೇತಕೆ ನಲ್ಲೆ
ರಾತ್ರಿಯ ಚಂದಿರನ ಬೆಳದಿಂಗಳ ನೋಡುತ ಮೌನ ದಾಟುತ್ತದೆ
ತಾರೆಯ ಕುಡಿನೋಟದ ಅಮಲು ಚೆಲ್ಲುವುದೇತಕೆ ನಲ್ಲೆ
ಮಲ್ಲಿಗೆಯು ಬಿರಿದ ಕಂಪಿನಲ್ಲಿ ಮನ ಅರಳುತ್ತದೆ ಈಶಾ
ಮನದರಸಿಯ ಸವಿ ಒಡಲುಕ್ಕಿ ನಗುವುದೇತಕೆ ನಲ್ಲೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ