ಗಝಲ್ ಮತ್ತು ಹನಿಗಳು

ಗಝಲ್ ಮತ್ತು ಹನಿಗಳು

ಕವನ

ಮೋಡವು ತಂಪಿರುವ ಹಾಗೆ ಯೌವನ

ಮದವೇರಿದ ಸಲಗದ ಬೇಗೆ ಯೌವನ

 

ಉಪದೇಶವನು ಕೊಡಲಿಂದು ಜನರಿಹರು ಏಕೆ

ಮೊಗ್ಗೊಂದು ಬಿರಿದು ಅರಳಿತು ಹೀಗೆ ಯೌವನ

 

ಮದನನಿಗೆ ಕಾದಿರುವ ಪಕ್ಷಿಗಳಂತಾಯಿತೆ ನಮ್ಮೊಲವು

ಉಕ್ಕಿಹರಿವ ಜಲಧಾರೆಯದು ರಭಸದಿ ಸಾಗೆ ಯೌವನ

 

ಸೊಕ್ಕುಗಳು ಯಾಕಿಂದು ಜಲಪಾತದಂತೆ ದುಮುಕಿವೆ

ಮುತ್ತೆಲ್ಲವೂ ಮತ್ತೇರಿ ಹೊರಳುತ ಹೋಗೆ ಯೌವನ

 

ಉನ್ಮಾದದ ತೀರಕ್ಕೆ ಜಲವದುವು ಅಪ್ಪಳಿಸಿದಂತೆ ಈಶಾ

ಗೊನೆಯಬಿಟ್ಟ ಬಾಳೆ ಗಿಡವು ನಾಚುತ ಬಾಗೆ ಯೌವನ

***

ಗಝಲ್ ೨

ಜೀತಕ್ಕೆ ಇರುವವರಲ್ಲ ನಾವು ತಿಳಿಯಿರಿ

ಸ್ವಾತಂತ್ರ್ಯದ ದಿಕ್ಕಿನೆಡೆಗೆ ಈಗ ನಡೆಯಿರಿ

 

ಪ್ರಾಮಾಣಿಕ ನಂಬಿಕೆಗಳಿಂದು ಎತ್ತ ಹೋದವೊ

ಸಂವಿಧಾನದಲ್ಲಿಯ ಆಶಯಗಳ ಬಗ್ಗೆ ಕಲಿಯಿರಿ

 

ಛತ್ರಿ ಚಾಮರವ ಹಿಡಿದು ಯಾಕೆ ಹೋಗುವಿರೊ

ನಮ್ಮೊಳಗಿನ ಬಲವು ಅದೇನೆಂದು ಅರಿಯಿರಿ

 

ಸಾಮಾನ್ಯರಿಗೆ ದಾರಿ ತೋರಿಸುವರ ಕಡೆ ನೋಡಿರಿ

ಹುಮ್ಮನಸ್ಸಿನಿಂದ ಒಳ್ಳೆಯವರ ಜೊತೆಗೆ ಬೆರೆಯಿರಿ

 

ಬಡವರಲ್ಲಿಯ ನೋವನರಿತು ಸ್ಪಂದಿಸು ಈಶಾ

ಸಹೃದಯಕೆ ಸ್ವಂತಿಕೆಯು ಬಂದಾಗ ಬರೆಯಿರಿ

***

ಕಾರಣ

ಇಡೀ

ವಿಶ್ವವನ್ನೇ

ತುಳಿದು

ಬದುಕುತ್ತೇವೆ

ಎಂದವರು

ಮಸಣ

ಸೇರಿದರು !

 

ಜನ

ಸಾಮಾನ್ಯರನ್ನು

ಮೆಟ್ಟಿಲನ್ನಾಗಿಸಿ

ತುಳಿದು ಬದುಕಿದವ

ರಾಜಕಾರಣಿ !

ಅವನ ನಂಬಿ

ಮೆಟ್ಟಿಲಾದವ

ಬದುಕಿಗೆ

ಕತೆಯಾದ!!

 

ವಿಶ್ವದಲ್ಲಾಗುವ

ಜನ

ಸಾಮಾನ್ಯರ

ಹತ್ಯೆಗೆ

ಯಾರು 

ಹೊಣೆಯೆಂದು

ಕೇಳಿದೆ !

ನಾನೀಗ

ಉಗ್ರಗಾಮಿ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್