ಗಝಲ್ ಮತ್ತು ಹನಿ !
ಗಝಲ್ ೧
ಹಸಿರು ತುಂಬಿದ ಭೂಮಿಯ *ನೋಡಿದೆ* ಸಾಕಿ
ಕೆಸರಲಿ ಅರಳಿದ ತಾವರೆಯ *ಕಾಡಿದೆ* ಸಾಕಿ
ಅವಸರ ಎನಿಸುವ ಬದುಕಲಿ ಈಗ ಏನಿದೆ
ಕನಸು ಸೇರಲು ನನಸದು *ಮೂಡಿದೆ* ಸಾಕಿ
ಚಿಂತೆ ಹರಿಸುವ ಸರಕದುವು ಹೀಗೆ ಬಾರದಿರಲಿ
ಚಿಂತನೆಗೆ ಸಾಗುತಿರಲಿ ಮನ *ಬೇಡಿದೆ* ಸಾಕಿ
ಮಹಡಿಯಲಿ ನಿಂತೊಮ್ಮೆ ನಲಿದೆ ಕಣ್ಣ ಮಿಟುಕಿಸಿ
ಮೋಹ ತುಂಬುತ ನೀನು ವೈಯಾರದಿ *ಓಡಿದೆ* ಸಾಕಿ
ತನುವು ದುಃಖಿಸುತಿರೆ ಎಲ್ಲಿಗೂ ಹೋಗದಿರು ಈಶಾ
ಇಷ್ಟವಾಗುತ ಇದ್ದುಬಿಡಲು ಪ್ರೀತಿಯ *ನೀಡಿದೆ* ಸಾಕಿ
***
ಗಝಲ್ ೨
ಬರೆದಿರುವುದೇ ಸಾಹಿತ್ಯ ಅಂದುಕೊಂಡಂತೆ ಇದ್ದೇವೆ
ಬರೆಯಲಾಗದೇ ಸಾಹಿತಿ ಅನಿಸಿಕೊಂಡಂತೆ ಇದ್ದೇವೆ
ವ್ಯಂಜನವೊಂದೇ ಸಾಕು ಸ್ವರವೇ ಬೇಡವೆನ್ನುವರಿದ್ದಾರೆಯೆ
ನಾಮ ಪದಗಳನೆಲ್ಲ ದೂಡಿ ಕಳೆದುಕೊಂಡಂತೆ ಇದ್ದೇವೆ
ಪದಗಳ ಸಂದರ್ಭಗಳ ಬಗ್ಗೆ ಅರಿಯದೆ ತಿರುಳನ್ನೇ ಮುರಿದಿದ್ದೇವೆ
ಗೊತ್ತಿದ್ದರೂ ಹೊಸತನದ ಹೊಲದಿ ಕಾಲಿಟ್ಟುಕೊಂಡಂತೆ ಇದ್ದೇವೆ
ಪ್ರಾಸಗಳ ನಡುವೆ ಓದುಗರಿಗೆ ತ್ರಾಸ ಕೊಟ್ಟು ಸಾಗಿದ್ದೇವೆಯೆ
ಬಲ್ಲೆಗಳ ನಡುವೆ ಪಾರ್ಥೇನಿಯಂ ಹುಟ್ಟಿಕೊಂಡಂತೆ ಇದ್ದೇವೆ
ಬರೆದುದೆಲ್ಲ ಸಾಹಿತ್ಯವೆಂಬ ಹುಮ್ಮನಸಿನ ತಿಳುವಳಿಕೆಯಲ್ಲಿದ್ದಾರೆ ಈಶಾ
ಬಟ್ಟಿಯಿಳಿಸಿದರೂ ಸ್ವಂತ ಬರಹವಿದೆಂದು ಹೇಳಿಕೊಂಡಂತೆ ಇದ್ದೇವೆ
***
ನಾಳೆ ಎನುವ
ನಾಳೆ ಎನುವ
ಪದವ ಬಿಟ್ಟು
ಇಂದು ಎನುತ ಸಾಗುವ
ನಿನ್ನೆ ತನಕ
ಏನು ಇತ್ತೊ
ಮರೆತು ಮುಂದೆ ಹೋಗುವ
ಬಾಳ ಬಂಡಿ
ಇರುವ ಪದದ
ಜೊತೆಗೆ ನಾವು ಹಾಡುವ
ಮುರಳಿ ಗಾನ
ಕೇಳಿ ಮನದಿ
ತತ್ವ ಪದವ ಕಲಿಯುವ
ಹಿರಿಮೆ ಒಳಗೆ
ಗರಿಮೆ ಇರಲು
ಮಲಿನ ದಾರಿ ತುಳಿಯದೆ
ಮರುಗ ಎಲೆಯ
ಒಳಗೆ ಎಲ್ಲಾ
ಚೆಲುವ ಕಂಪು ಚೆಲ್ಲಿದೆ
ಮರೆಯ ಬೇಡ
ಮಮತೆ ಒಲವ
ತಾಯ ಒಡಲ ಭಾವನೆ
ಮನುಜ ಗುಣದಿ
ಮರವೆ ಇರದೆ
ಇರಲಿ ನೂರು ಸ್ಪಂದನೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ