ಗಝಲ್ ರಸಧಾರೆ...!

ಗಝಲ್ ರಸಧಾರೆ...!

ಕವನ

೧.

ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ

ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ

 

ಮಲ್ಲಿಗೆಯ ಬನದಲ್ಲಿ ಪರಿಮಳ ಕಂಪು ಹರಡದೆ ಇದ್ದೀತೆ

ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆ ಗೆಳೆಯಾ

 

ಹಿಮವು ತುಂಬಿದ ನೆಲದಲಿ  ತಂಪಿನೊಲವು  ಪಸರಿಸಿದೆ ನೋಡು

ಉಸಿರ ಹಸಿರಿನ ಚೆಲುವಿನೊಳು ಒಲವು ನಿಂತಿದೆ ಗೆಳೆಯಾ

 

ಬಾನು ಬುವಿಯಂತೆ ನನ್ನವಳ ಒಡನಾಟ ಹೀಗೆಯೇ ಸಾಗಲಿ

ಕೈಹಿಡಿದ ನನಸದುವು ಸವಿಗೆ ಹಿತವನ್ನು ತಂದಿದೆ ಗೆಳೆಯಾ

 

ಮನದೊಳಗೆ ಹೊಸ ಬಗೆಯ ತುಂಬಿ ಸಾಗಿದ ಈಶಾ

ಹಳೆಯ ಕೊಳಕಿನ  ನಡೆಯು ಮೆಲ್ಲನೆ ಕಂತಿದೆ ಗೆಳೆಯಾ

***

೨.

ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಿದ್ದಾರೆ ಗೆಳತಿ

ಉದರದ ನೋವುಗಳ ಹೇಳುವವರನ್ನೇ ಮೂಲೆಗುಂಪು ಮಾಡುತಲಿ ಮತ್ತೆ ಮುಳುವಾಗಿದ್ದಾರೆ ಗೆಳತಿ

 

ಮಳ್ಳಿಮಳ್ಳಗಳ  ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ ಅವರ ಕೈಯ ಹಿಡಿದು ತಿರುಗುತಿದ್ದಾರೆ ಗೆಳತಿ

ಉಪ್ಪರಿಗೆಯಲ್ಲಿ ಕೂರಲು ಅರ್ಹತೆ ಇಲ್ಲದಿದ್ದವರನ್ನೂ ತೊಡೆಯಲ್ಲೇ ಕುಳ್ಳಿರಿಸಿ ಬೆಸುಗೆಯೊಳಗೆ ಸಂತೈಸುತಿದ್ದಾರೆ ಗೆಳತಿ

 

ಮಾತುಗಳ ತೂತುಗಳೆಡೆ ಸಾಗುವವರ ನೋಡಿದಾಗಲೂ ಸುತ್ತಲಿರುವ ಯುಧಿಷ್ಟಿರರು ಸುಮ್ಮನಾಗಿದ್ದಾರೆ ಗೆಳತಿ

ಜೀವನದಲ್ಲಿಯ ರಾಜಕೀಯದ ತೆವಲಿನೊಳಗೆ ಹೊಗುಮನೆಯು ಛಿದ್ರವಾದರೂ ಮುಸುಕೆಳೆದಿದ್ದಾರೆ ಗೆಳತಿ

 

ಹಾಲು ಕೆಡುವವರೆಗೂ ಕಣ್ಮುಚ್ಚಿದ್ದು ತನುವದುವು ಚುಚ್ಚಿದಾಗಲೇ ನೋವಾಯಿತೆಂದು ನರ್ತಿಸುತಿದ್ದಾರೆ ಗೆಳತಿ

ಅನಾಹುತಗಳ ನಡುವೆಯೂ ಸೆಟೆದುನಿಲ್ಲುವ ಮನೋದೃಢತೆಯ ಕಂಡುಕೊಳ್ಳಲಾರದೆಯೇ ಕೆಡಿಸುತಿದ್ದಾರೆ ಗೆಳತಿ

 

ಈಶನೊಳಗಿನ ವಿಶಾಲತೆಯ ಅರಿವಿದ್ದರೂ ಹೃದಯಹೀನರಂತೆ ಅರಿವಿಲ್ಲದವರೂ ಗೊತ್ತಿರುವಂತೆ ಛೇಡಿಸುತಿದ್ದಾರೆ ಗೆಳತಿ

ಧರೆಯೊಳಗಿನ ನೋವುಗಳೆಲ್ಲಾ ಆತ್ಮದೊಳಗೆ ಹುದುಗಿರುವ ಹಿಂಸೆಗಳೆನ್ನುವವರಿಂದ ಹಲವರು ದೂರವಾಗಿದ್ದಾರೆ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್