ಗಝಲ್, ಹನಿಗಳು ಇತ್ಯಾದಿ...
ಮಧುರ ಕ್ಷಣಗಳ ಅರಿವಿದೆ ಮೌನವಾಗಿರು
ಬದುಕಿಗೆ ಸುಂದರ ಹರಿವಿದೆ ಮೌನವಾಗಿರು
ಪ್ರೀತಿಯ ತಂತಿಯೊಳು ತೊಡರದು ಬೇಕೆ
ಕೈಬಳೆಯ ಸದ್ದಿಗೆ ತನುವಿದೆ ಮೌನವಾಗಿರು
ತುಟಿಯನು ಮೀರುವ ಸವಿಯದೂ ಏಕೆ
ಚೈತ್ರದ ಸೊಗಸಿಗೆ ದಿನವಿದೆ ಮೌನವಾಗಿರು
ರಾತ್ರಿಯೊಳು ಚಂದಿರ ಒಲವನು ಕೊಡುವನೆ
ತಾರೆಯ ನೋಟದಿ ಗೆಲುವಿದೆ ಮೌನವಾಗಿರು
ಬಿರಿದಿರುವ ಫಲದೊಳು ಮೌನವೇಕೊ ಈಶಾ
ಅರಸಗೆ ಸವಿಯುವ ಚೆಲುವಿದೆ ಮೌನವಾಗಿರು
***
ಹನಿಗಳು
ಜೀವಿತವನು
ಕರಗಲು ಬಿಡದೆ
ಗಟ್ಟಿಗೊಳಿಸು !
ಕಲ್ಲು ಒಡೆಯೆ
ಅಕ್ಷರವು ಬೇಕೆಂಬ
ನಿಯಮವಿಲ್ಲ !
ಒಂಟಿ ಸೀನದು
ಬಂದರೆ ಒಳಿತದು
ಜ್ವರವು ಮಾಯ !
ಮೆತ್ತುವಿರೇಕೆ
ಹೇಸಿಗೆ ಬರಹಗಳ ?
ಸಂಸ್ಕಾರವೆಲ್ಲಿ !
ಕತ್ತೂರಿಯಂಥ
ಪರಿಮಳದ ನುಡಿ
ನಮ್ಮ ಕನ್ನಡ !
ಒಲುಮೆಯಿರೆ
ನನ್ನ ನಿಮ್ಮೊಳೆಂದು
ಸ್ನೇಹ ಅಮರ !
ಮನದಾಳದ
ಮಾತುಗಳ ಕೇಳುತ
ನೀ ಬದಲಾಗು !
***
ಮುಕ್ತಕ
ಕುತ್ತಿಗೆಯ ಹಿಡಿಯುತ್ತ ಮಾತನಾಡುವ ಕಲೆಯು
ಕುತ್ತು ತರುವುದು ನೋಡು ಮುಂದೊಂದು ದಿನವು|
ಅತ್ತಿತ್ತ ತಿರುಗುತಲಿ ದೋಷವನೆ ಮಾಡಿದರೆ
ಬೆತ್ತ ಹಿಡಿವರು ಜನರು -- ಛಲವಾದಿಯೆ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ