ಗಝಲ್ ಹಾಡುಗಳ ಸಾಮ್ರಾಟ : ತಲತ್ ಮೆಹಮೂದ್

ಗಝಲ್ ಹಾಡುಗಳ ಸಾಮ್ರಾಟ : ತಲತ್ ಮೆಹಮೂದ್

ಹಾಡುಗಳಿಗೆ ಯಾವತ್ತೂ ಸಾವಿಲ್ಲ. ಎಷ್ಟು ಹಳೆಯದಾಗುತ್ತದೆಯೋ ಅದಕ್ಕೆ ನೂರು ಪಟ್ಟು ಅಧಿಕ ಬೇಡಿಕೆ ಇರುತ್ತದೆ. ಹಳೆಯ ಹಾಡುಗಳನ್ನು ಕೇಳುತ್ತಾ ನೀವು ನಿಮ್ಮ ಹಳೆಯ ನೆನಪುಗಳಿಗೆ ಜಾರಿ ಕೊಳ್ಳುವಿರಿ. ಕನ್ನಡವಾಗಲಿ, ಹಿಂದಿಯಾಗಲಿ ಅಥವಾ ಯಾವುದೇ ಭಾಷೆಯ ಹಾಡುಗಳಾಗಿರಲಿ, ಅವುಗಳಿಗೆ ಅದರದ್ದೇ ಆದ ಮಹತ್ವ ಇದೆ. ಹಿಂದಿ ಚಿತ್ರರಂಗದ ಹಿನ್ನಲೆ ಗಾಯಕರಾದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಕೇಶ್, ಮನ್ನಾಡೇ, ಲತಾ ಮಂಗೇಷ್ಕರ್, ಆಶಾ ಮಂಗೇಷ್ಕರ್ ಹೀಗೆ ಹತ್ತು ಹಲವಾರು ಗಾಯಕರು ತಮ್ಮ ಮಧುರ ಮಾದಕ ಕಂಠದಿಂದ ನಮ್ಮ ಬಾಳಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಅವರ ಸಾಲಿಗೇ ಸೇರುವ ಇನ್ನೊರ್ವ ಅದ್ಭುತ ಗಾಯಕ, ಗಝಲ್ ಗಳ ರಾಜ ತಲತ್ ಮೆಹಮೂದ್.

ನೀವು ಮುಖೇಶ್ ಹಾಡು ಕೇಳಿರುವಿರಾದರೆ ತಲತ್ ಮೆಹಮೂದ್ ಹಾಡುಗಳನ್ನೂ ಕೇಳಿರುತ್ತೀರಿ. ಕನ್ನಡದಲ್ಲಿ ಪಿ.ಬಿ.ಶ್ರೀನಿವಾಸ್ ಅವರ ಹಿನ್ನಲೆ ಗಾಯನ ನಮ್ಮನ್ನು ಎಷ್ಟು ಮಂತ್ರಮುಗ್ಧಗೊಳಿಸುತ್ತಿತ್ತೋ ಅದೇ ರೀತಿ ಹಿಂದಿ ಚಿತ್ರರಂಗದಲ್ಲಿ ಮುಖೇಶ್, ತಲತ್ ಹಾಡುಗಳು ತಮ್ಮ ಮಾಯಾ ಜಾಲವನ್ನು ಪಸರಿಸುತ್ತಿದ್ದವು. 

ತಲತ್ ಮೆಹಮೂದ್ ಹುಟ್ಟಿದ್ದು ೧೯೨೪ರ ಫೆಬ್ರವರಿ ೨೪ರಂದು ಲಕ್ನೋ ಪಟ್ಟಣದಲ್ಲಿ. ತಲತ್ ಅವರಿಗೆ ಆಶೆ ಇದ್ದದ್ದು ಚಿತ್ರ ನಟರಾಗಬೇಕೆಂದು. ಕೆಲವಾರು ಚಿತ್ರಗಳಲ್ಲಿ ಅವರು ನಟಿಸಿಯೂ ಇದ್ದರು. ಆದರೆ ಅವರು ಖ್ಯಾತಿ ಪಡೆದದ್ದು ಅವರ ಗಝಲ್ ಹಾಡುಗಳಿಂದ. ಇವರು ಗಝಲ್ ಹಾಡುಗಳನ್ನು ಎಷ್ಟು ಸರಾಗವಾಗಿ ಹಾಡುತ್ತಿದ್ದರೆಂದರೆ ಕೇಳುವವರು ಮಂತ್ರಮುಗ್ಧರಾಗಿ ಬಿಡುತ್ತಿದ್ದರು. ವ್ಯಾಕುಲ ಗೀತೆಗಳನ್ನು ತಲತ್ ಅತ್ಯಂತ ಶಾಂತಭಾವದಲ್ಲಿ ಹಾಡುತ್ತಿದ್ದುದೇ ಅನನ್ಯ ಅನುಭವ. 

ತಲತ್ ಮೆಹಮೂದ್ ನೋಡಲು ಸುಂದರವಾಗಿದ್ದರು. ಆದುದರಿಂದ ಅವರು ತಮ್ಮ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನವನ್ನು ನಟನೆಯಿಂದಲೇ ಪ್ರಾರಂಭಿಸಿದರು ೧೯೪೫ರಲ್ಲಿ ಬಿಡುಗಡೆಯಾದ ರಾಜಲಕ್ಷ್ಮಿ ಚಲನಚಿತ್ರವು ಇವರ ಮೊದಲನೇ ಚಿತ್ರ. ನಂತರದ ದಿನಗಳಲ್ಲಿ ಸುಮಾರು ಒಂದು ಡಜನ್ ಚಲನಚಿತ್ರಗಳಲ್ಲಿ ತಲತ್ ನಟಿಸಿದರೂ ಯಾವುದೇ ಚಿತ್ರ ಅವರಿಗೆ ಖ್ಯಾತಿಯನ್ನು ತಂದುಕೊಡಲಿಲ್ಲ. ಆಗಿನ ಖ್ಯಾತ ನಾಮ ನಟಿಯರಾದ ನಾದಿರಾ, ಸುರಯ್ಯ, ಮಾಲಾ ಸಿನ್ಹಾರವರೊಂದಿಗೆ ನಟಿಸಿದರೂ ಅವರ ಅದೃಷ್ಟದ ಬಾಗಿಲು ತೆರೆಯಲಿಲ್ಲ. ಏಕೆಂದರೆ ಬಹುಷಃ ಅವರ ಅದೃಷ್ಟ ಅವರ ಕಂಠದಲ್ಲಿತ್ತು ನಟನೆಯಲ್ಲಲ್ಲ. ೧೯೫೮ರ ತನಕವೂ ಠೋಕರ್, ಡಾಕ್ ಬಾಬು, ವಾರಿಸ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಯಾವಾಗ ನಟನೆಯು ತಮ್ಮ ಕೈ ಹಿಡಿಯುವುದಿಲ್ಲ ಎಂದು ತಲತ್ ತಮ್ಮ ಗುರಿಯನ್ನು ಬದಲಾಯಿಸಿಕೊಂಡರು. 

೧೯೬೦ರ ದಶಕದಲ್ಲಿ ಬಾಲಿವುಡ್ ಹಿನ್ನಲೆ ಗಾಯನ ಕ್ಷೇತ್ರವನ್ನು ಮೊಹಮ್ಮದ್ ರಫಿ ಹಾಗೂ ಮುಖೇಶ್ ಆಳುತ್ತಿದ್ದರು. ಅವರ ನಡುವೆ ತಲತ್ ಅವರ ವಿಶಿಷ್ಟ ಶೈಲಿಯ ಹಾಡುಗಾರಿಕೆ ಅವರಿಗೆ ಹೊಸದಾದ ಒಂದು ದಾರಿಯನ್ನು ಕಲ್ಪಿಸಿಕೊಟ್ಟಿತು. ತಲತ್ ಹಾಗೂ ಮುಖೇಶ್ ಗಾಯನ ಕ್ಷೇತ್ರದಲ್ಲಿ ಪರಸ್ಪರ ಎರಡು ಧ್ರುವಗಳೇ ಆಗಿ ಹೋಗಿದ್ದರು. ಮುಖೇಶ್ ರ ನೇರ ಗಾಯನ ಶೈಲಿ, ಮೊನಚಾದ ಕಂಠ, ಬಾಯಿ ತೆರೆದರೆ ಸುತ್ತಲೂ ಸ್ವರ ಮಾಧುರ್ಯ ಚಿಮ್ಮುತ್ತಾ ಸಂಗೀತ ಹರಡುವ ತಲತ್ ಶೈಲಿಗೆ ಹೊಂದಿಕೆಯಾದೀತೇ? ತಲತ್ ತಮ್ಮ ಜೀವಿತಾವಧಿಯಲ್ಲಿ ಪುರುಷ ಹಾಡುಗಾರರ ಜೊತೆ ಯುಗಳ ಗೀತೆ ಹಾಡಿದ್ದು ಬಹಳ ಕಮ್ಮಿ. ತಲತ್ ಮತ್ತು ಮುಖೇಶ್ ಚಲನ ಚಿತ್ರಗಳಲ್ಲಿ ಜೊತೆಯಾಗಿ ಹಾಡದೇ ಹೋದರೂ ಜೊತೆಯಾಗಿ ಕೆಲವು ಗಝಲ್ ಗಳನ್ನು ಜೊತೆಯಾಗಿ ಹಾಡಿದ್ದಾರೆ. ಹಕೀಕತ್ ಚಿತ್ರದಲ್ಲಿ ಮಾತ್ರ ಮೂರು ಮಂದಿ ಪುರುಷ ಹಿನ್ನಲೆ ಗಾಯಕರ ಜೊತೆ ತಲತ್ ಹಾಡಿರುವುದು ಅವರ ಜೀವಮಾನದ ಒಂದು ಅಪರೂಪದ ಸಂಗತಿ. ಆ ಚಿತ್ರದ ‘ಹೋಕೆ ಮಜಬೂರ್ ಉಸನೇ ಮುಜೆ ಭುಲಾಯಾ ಹೋಗಾ’ ಈ ಹಾಡನ್ನು ತಲತ್ ಅವರು ಮೊಹಮ್ಮದ್ ರಫಿ, ಮನ್ನಾಡೇ ಹಾಗೂ ಭೂಪೀಂದರ್ ಸಿಂಗ್ ಜೊತೆ ಹಾಡಿದ್ದಾರೆ. 

೧೯೫೭ರಲ್ಲಿ ಬಿಡುಗಡೆಯಾದ ‘ದೇಖ್ ಕಬೀರಾ ರೋಯಾ’ ಚಲನ ಚಿತ್ರದ ‘ಹಮ್ಸೆ ಆಯಾ ನಾ ಗಯಾ’ ಹಾಡಿನ ಮೂಲಕ ತನ್ನ ಹಾಡುಗಾರಿಕೆಯನ್ನು ಪ್ರಾರಂಭಿಸಿದ ತಲತ್ ಮೆಹಮೂದ್ ತಮ್ಮ ಹಿನ್ನಲೆ ಗಾಯನ ಕ್ಷೇತ್ರವನ್ನು ವಿಸ್ತರಿಸುತ್ತಾ ಸಾಗುತ್ತಾರೆ. ಎಸ್. ಡಿ.ಬರ್ಮನ್ ಸಂಗೀತ ನಿರ್ದೇಶನದ ಕೆಲವೊಂದು ಅಂಶಗಳಿಗೆ ಭಿನ್ನವಾದ ನಡೆಯೊಂದು ಹಾಡಿನಲ್ಲಿ ‘ತೇರೇ ಲಿಯೇ’ ಎಂದು ಬರುವಲ್ಲಿ ತಲತ್ ತನ್ನ ಧ್ವನಿಯಲ್ಲಿ ಒಂದು ಅಪರೂಪದ ಮಾಧುರ್ಯದ ತಿರುವು ನೀಡುತ್ತಾರೆ. ತಲತ್ ನ ‘ಜಾಯೆ ತೊ ಜಾಯೆ ಕಹಾಂ’ ಎಂಬ ಟ್ಯಾಕ್ಸಿ ಡ್ರೈವರ್ ಚಿತ್ರದ ಹಾಡು ಆ ಕಾಲದ ಸುಪರ್ ಹಿಟ್ ಗೀತೆ. ತಲತ್ ಅವರಿಗೆ ದೈವದತ್ತವಾಗಿ ಸಿಕ್ಕಿದ ವರವೇ ಗಝಲ್ ಹಾಡುಗಾರಿಕೆ. ಚಿತ್ರರಂಗದಲ್ಲಿ ಹಿನ್ನಲೆ ಗಾಯನದಲ್ಲಿ ಗಝಲ್ ಬಳಕೆಯನ್ನು ಸಂಗೀತ ನಿರ್ದೇಶಕರು ಮಾಡಿದ್ದು ಕಮ್ಮಿ ಎಂದೇ ಹೇಳ ಬಹುದು, ಆದರೆ ತಲತ್ ಅವರ ಸ್ವರ ಮಾಧುರ್ಯವು ಗಝಲ್ ಗಾಯನಕ್ಕೆ ಹೇಳಿ ಮಾಡಿಸಿದಂತಿತ್ತು. ಆ ಸಮಯದಲ್ಲಿ ಪುರುಷ ಹಿನ್ನಲೆ ಗಾಯಕರಲ್ಲಿ ತಲತ್ ಅವರಂತೆ ನಯವಾದ ಹಾಗೂ ಮೃದುವಾದ ಧ್ವನಿ ಇರಲಿಲ್ಲ. ಶಾಸ್ತ್ರೀಯ ಹಾಗೂ ಅರೆ ಶಾಸ್ತ್ರೀಯ ಗಝಲ್ ಗೀತೆಗಳನ್ನು ಬಹಳ ಸೊಗಸಾಗಿ ಹಾಡುತ್ತಿದ್ದರು ತಲತ್.

ಈಗಲೂ ತಲತ್ ಅವರ ಗೀತೆಯನ್ನು ರಾತ್ರಿಯ ನೀರವತೆಯಲ್ಲಿ ಕೇಳಿದರೆ ಅದರ ಮಾಧುರ್ಯವೇ ಬೇರೆ. ‘ಮೊಹಬ್ಬತ್ ಹೀ ನ ಜೋ ಸಮಝೆ' (ಚಿತ್ರ: ಪರಚಾಯೀ), ವಹೀ ಚಾಂದನೀ ಹೈ.. (ರಿಷ್ತಾ), ತಸ್ವೀರ್ ಬನಾತಾ ಹೂ ಮೈ (ಬಿರಾದರಿ), ತುಜೆ ಅಪನಿ ಪಾಸ್ ಬುಲಾತಿ ಹೈ (ಪತಿತಾ), ಏ ಮೇರಿ ದಿಲ್ ಕಹೀ ಔರ್ ಚಲ್ (ದಾಗ್) ಮೊದಲಾದ ಹಾಡುಗಳನ್ನು ಕೇಳುತ್ತಾ ಇದ್ದರೆ ನೀವು ಖಂಡಿತಾ ನಿಮ್ಮನ್ನು ನೀವು ಮರೆತು ಬಿಡುತ್ತೀರಿ. ತಲತ್ ಮೆಹಮೂದ್ ಅವರ ದೈವಿಕ ಕಂಠದ ಮಾಧುರ್ಯವೇ ಅದ್ಭುತ.

ತಲತ್ ಹಾಡುತ್ತಿದ್ದ ಸಮಯದಲ್ಲಿ ಮುಖೇಶ್, ಮೊಹಮ್ಮದ್ ರಫಿ, ಮನ್ನಾಡೇ ಅಂತಹ ಖ್ಯಾತ ಹಿನ್ನಲೆ ಗಾಯಕರು ಇದ್ದರು. ಆ ಕಾರಣದಿಂದ ತಲತ್ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿರಬಹುದೇನೋ? ಆದರೂ ಗಝಲ್ ಹಾಡಿನ ವಿಷಯದಲ್ಲಿ ಮಾತ್ರ ಅವರನ್ನು ಮೀರಿಸುವವರೇ ಇರಲಿಲ್ಲ. ಅವರನ್ನು ‘ಕಿಂಗ್ ಆಫ್ ಗಝಲ್ಸ್' ಎಂದೇ ಕರೆಯಲಾಗುತ್ತಿತ್ತು. ಇವರ ಕಲಾ ಸೇವೆಯನ್ನು ಗುರುತಿಸಿ ಭಾರತ ಸರಕಾರ ೧೯೯೨ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ತಮ್ಮ ೭೪ನೇ ವಯಸ್ಸಿನಲ್ಲಿ ತಲತ್ ಮೆಹಮೂದ್ ಮುಂಬಯಿಯಲ್ಲಿ ೧೯೯೮ರ ಮೇ ೯ರಂದು ನಿಧನ ಹೊಂದಿದರು.  ೨೦೧೬ರಲ್ಲಿ ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿಯನ್ನು ಮುದ್ರಿಸಿ ಗೌರವಿಸಿದೆ. ಗಾಯನ ಕ್ಷೇತ್ರದ ಅಪರೂಪದ ತಾರೆಯೊಂದು ನಮ್ಮನ್ನು ಅಗಲಿದರೂ ಅವರು ಹಾಡಿದ ಹಾಡುಗಳು ಸದಾ ಅಮರ.

ಚಿತ್ರಗಳ ಕೃಪೆ: ಅಂತರ್ಜಾಲ ತಾಣಗಳು