ಗಝಲ್ ...
ಕವನ
ಟೊರಂಟೊನಗರದಲ್ಲಿ ಕನ್ನಡ ಪುಸ್ತಕ ಹುಡುಕುವುದು ಒಂದು ಪ್ರಯಾಸದ ಕೆಲಸವೇ ಸರಿ ! ಇದೇ ಅನುಭವ ನನಗೆ ಕ್ಯಾಲಿಫೋರ್ನಿಯಾದಲ್ಲಿದ್ದಾಗಲೂ ಆಗಿತ್ತು. ಅದಕ್ಕೆ ನಾವು ನಿಯೋಜಿಸಿಕೊಂಡ ಸರಳ ಉಪಾಯವೆಂದರೆ, ನಾವು ಊರಿನಿಂದ ತಂದ 'ಸುಧಾ', 'ಮಯೂರ', 'ತುಷಾರ' ಪತ್ರಿಕೆಗಳನ್ನು ಬದಿಯಲ್ಲಿ ಇಟ್ಟುಕೊಂಡು ಪ್ರತಿದಿನವೂ ಅದು ನಮಗೆ ಮೊದಲ ಬಾರಿಗೆ ಕಣ್ಣಿಗೆ ಕಾಣಿಸಿತೆಂದೂ, ಮತ್ತು ಅದೇ ಹಚ್ಚ ಹೊಸ ಪತ್ರಿಕೆಯೆಂದೂ ಮನಸ್ಸಿನಲ್ಲಿ ಭಾವಿಸಿಕೊಂಡು ಅತಿ ಕುತೂಹಲ ಮುಖ ಮುದ್ರೆಯನ್ನು ಹಾಕಿಕೊಂಡು ಓದಿದಾಗ ಆಗುವ ಆನಂದ ಅಪರಿಮಿತ ! ಮತ್ತೆಮ್ತದು ಮಾಡೋದು ಮಾರಾಯ !
ನನಗೆ ಬಡಿಗೇರರ ಈ ಸುಂದರ ಕವನ ಸಿಕ್ಕಿದ್ದೇ ಸ್ವರ್ಗ ಸಿಕ್ಕಂತಾಗಿದೆ !
ಬೆಳಗು ಸರಿಯುವಮುನ್ನ ಒಮ್ಮೆ ನಕ್ಕು ಬಿಡು
ಎದೆಯ ಆಳದಲಿ ಆರದ ಹಸಿ ಮಣ್ಣಾಗಿ ಬಿಡು
ಬಳ್ಳಿಯೊಳಗೆ ನಿತ್ಯ ನಗುವ ಸುಮವಾಗಿ
ದೃಷ್ಟಿ ತಾಗಿದವರ ಮುಡಿಗೆ ಹಿಡಿಯಾಗಿ ಬಿಡು
ಬಟ್ಟಲೊಳಗಿನ ಮಧುವಿಗೆ ರುಚಿಯಾಗಿ
ಉದರದ ಅನ್ನದೊಳಗಿನ ಜೀವ ದ್ರವ್ಯವಾಗಿ ಬಿಡು
ಇರುಳ ಮುಗಿಲಿನ ಹೊಳೆವ ತಾರೆಯಂತೆ
ಬರಡು ನೆಲದ ನನ್ನ ಸಂಸಾರಕೆ ಜೊತೆಯಾಗಿ ಬಿಡು
ಸಾಗರದ ನೀರೊಳಗೆ ಅವಿತ ಉಪ್ಪಾಗಿ
ರವಿಯ ರಷ್ಮಿಯೊಳಗಿನ ಎಳೆಯ ಶಾಖವಾಗಿ ಬಿಡು
ಸ್ವಚ್ಛ ಪ್ರೀತಿಯೊಳಗೆ ಅರ್ಥವುಳ್ಳ ಬದುಕ
ಹುಡುಕಿ, ನನ್ನೆದೆಯ ಗೂಡೊಳಗೆ ಇದ್ದು ಬಿಡು
-ಶಿ. ಕಾ. ಬಡಿಗೇರ, ಕೊಪ್ಪಳ
ಜೂನ್, ೨೦೧೨, ತುಷಾರ, ಪು. ೪೩