ಗಡಿಗೆಯ ಒಡೆದ ಗಡಿಬಿಡಿ ಗುಂಡ
ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ |
ತಡಬಡಮಾಡುತ ಓಡುತ ಬಂದ |
ಅಡಿಗೆ ಮನೆಯ ಅಡಕಲು ಗಡಿಗೆ |
ಬಡಬಡ ಮಾಡುತ ಇಳಿಸಲು ಕೆಳಗೆ |
ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು |
ತಟವಟ ಬೈಯುತ ಒಳಗಡೆ ಕಾಲಿಡೆ |
ಹೆದರಿದ ಗುಂಡನು ಗಲಿಬಿಲಿ ಗೊಂಡು |
ತಡಬಡ ಮಾಡುತ ಗಡಿಗೆಯ ಒಡೆದ || 1 ||
ಒಡೆಯುವ ಗಡಿಗೆಯ ಸದ್ದನು ಕೇಳಿ |
ಗಡಗಡ ನಡುಗುವ ಅಜ್ಜನ ಗುಡುಗು |
ಓಡುತ ಬಂದಳು ಗುಂಡನ ಅಮ್ಮ |
ಅಡಿಗೆಯ ಮನೆಯ ದಡಬಡ ಸದ್ದಿಗೆ |
ಪಕ್ಕದ ಕೋಣೆಯ ಅಕ್ಕನು ಬರಲು |
ಆಡಲು ಹೋಗದೆ ಅಡಿಗೆಯ ಮನೆಯ |
ಅಡಕಲ ಗಡಿಗೆಯ ಗೊಡವೆಯ ಬಿಡೆಯ |
ಎನ್ನುತ ಗುಂಡನ ಗಲ್ಲವ ಹಿಂಡಲು || 2 ||
ಧೈರ್ಯದಿ ಗುಂಡನು ಮಿತ್ರರಿಗೆಲ್ಲಾ |
ಕೊಬ್ಬರಿ ಬೆಲ್ಲವ ಕೊಡಲು ಎನ್ನಲು |
ನೆಲುವಿನ ಮೇಲಿನ ಗಡಿಗೆಯ ತೆಗೆದು |
ಕೈಯಲಿ ಕೊಟ್ಟಳು ಕೊಬ್ಬರಿ ಬೆಲ್ಲ |
ನೋಡದೊ ಹೊರಗಡೆ ರಿಕ್ಕು ಸಿದ್ದು |
ಚಿಂಟು ಪೃಥ್ವಿ ಲಿಕ್ಕಿ ಗಗ್ಗು |
ಪುಟ್ಟಿ ಪಿಂಕಿ ಕೀರ್ತಿ ಶಶಿ |
ಕಾದಿದೆ ಹೊರಗಡೆ ಎಲ್ಲರ ದಂಡು |
ಆಡಿರಿ ಇಲ್ಲಿಯೆ ಚಿನ್ನಿ ದಾಂಡು || 3 ||
ಜಗಳವ ಕಾಯದೆ ಗಲಭೆಯ ಮಾಡದೆ |
ಪಕ್ಕದ ಮನೆಯ ಗಾಜನು ಒಡೆಯದೆ |
ಆಟವ ಮುಗಿಸಿ ಬೇಗನೆ ಬನ್ನಿರಿ |
ಮುಖವನು ತೊಳೆದು ದೀಪವ ಬೆಳಗಿ |
ಸರಸ್ವತಿ ದೇವಿಯ ಸ್ತೋತ್ರವ ಹೇಳಿ |
ಪಾಠವ ಮುಗಿಸಿ ಊಟವ ಮಾಡಿರಿ |
ಕಥೆಯನು ಹೇಳುವೆ ಮಲಗುವ ಮೊದಲು |
ಹಾರಿದ ಗುಂಡ ಆಡಲು ಹೊರಗಡೆ |
ಒಡೆದಿಹ ಗಡಿಗೆಯ ಚೂರನು ಆರಿಸಿ |
ಹೊರಗಡೆ ಎಸೆದಳು ಗುಂಡನ ಅಮ್ಮ || 4 |
Comments
ವಹ್ವ. ವಆಹ್ವ..!! ಸೂಪರ್ ಕಣ್ರೀ..
ವಹ್ವ. ವಆಹ್ವ..!! ಸೂಪರ್ ಕಣ್ರೀ...
ಪ್ರಾಸಬದ್ದವಾದ ....ಸುಂದರ ಕವನ....
ಗುಂಡನಿಗೆ ಏಟು ಬೀಳಲಿಲ್ಲವಲ್ಲ...
ನಾ ಚಿಕ್ಕವನಾಗಿದ್ದಾಗ ಮಾಡಿದ ತುಂತಾತಗಳು ನೆನಪಿಗೆ ಬಂದವು ಮಾರಾಯ್ರೇ...!
ಈ ತರಹದ ಹುಡುಕುತ್ತ ಗಡಿಗೆ ಹುಡುಕೊದ್ರಲ್ಲಿ/ ಒಡೆಯೋದ್ರಲ್ಲಿ (ಬೆಲ್ಲಕ್ಕಾಗಿ) ಫೇಮಸ್ ಆದವರು ನಾವ್ ಅಂದೊಮ್ಮೆ...!!
ಶುಭವಾಗಲಿ..
ನನ್ನಿ
\|
In reply to ವಹ್ವ. ವಆಹ್ವ..!! ಸೂಪರ್ ಕಣ್ರೀ.. by venkatb83
ಶ್ರೀ ವೆಂಕಟೇಶರ ಮೆಚ್ಚುಗೆಗೆ
ಶ್ರೀ ವೆಂಕಟೇಶರ ಮೆಚ್ಚುಗೆಗೆ ವಂದನೆ, ಏಟುಗಳೀಗ ಪ್ರಾಶಸ್ತ್ಯ ಕಳೆದುಕೊಂಡಿವೆ.ಹಿಂದೆ ಶಾಲೆಗಳಲ್ಲಿ ಹೆಚ್ಚು ಏಟು ಹಾಕುತ್ತಿದ್ದ ಶಿಕ್ಷಕರೇ ಪ್ರಶಂಸಾರ್ಹರು ಮನೆಯಲ್ಲಿ ದೂರು ಹೇಳಿದರೆ ಮನೆಯಲ್ಲೂ ಏಟು ಜೊತೆಗೆ ಶಾಲೆಗೆ ಬಂದು ಶಿಕ್ಷಕರಿಗೆ ಪ್ರೋತ್ಸಾಹ ದೂರಿನ ಕಾರಣಕ್ಕೆ ಮತ್ತೆ ಏಟು.ಈಗೆಲ್ಲಿದೆ ಆ ಪರಿ ಶಿಕ್ಷೆಯ ತರಾವರಿ. ಎಲ್ಲಾ ವಾತ್ಸಲ್ಯ ಮಯ.
ಜಯಪ್ರಕಾಶ