ಗಡಿನಾಡ ದಡದಿಂದ…

ಗಡಿನಾಡ ದಡದಿಂದ…

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ನಾ.ಚಂಬಲ್ತಿಮಾರ್
ಪ್ರಕಾಶಕರು
ಕೈರಳಿ ಪ್ರಕಾಶನ, ಕಾಸರಗೋಡು
ಪುಸ್ತಕದ ಬೆಲೆ
ರೂ.೮೦.೦೦, ಮುದ್ರಣ: ೨೦೦೮

ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕಣ ಬರಹಗಳ ಸಂಗ್ರಹವೇ ‘ಗಡಿನಾಡ ದಡದಿಂದ...' ಎಂಬ ಪುಸ್ತಕ.

‘ಕನ್ನಡ ಕೈರಳಿ’ ಎಂಬ ಪತ್ರಿಕೆಯ ಪ್ರಕಾಶಕರೂ ಹಾಗೂ ಸಂಪಾದಕರೂ ಆಗಿರುವ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಇವರು ತಮ್ಮ ಕೈರಳಿ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರತಂದಿದ್ದಾರೆ. ಅವರು ತಮ್ಮ ಪ್ರಕಾಶಕರ ಮಾತಿನಲ್ಲಿ ಹೇಳಿದ್ದು ಹೀಗೆ “ಕಾಸರಗೋಡಿನ ಹೊಸ ತಲೆಮಾರಿನ ಪತ್ರಕರ್ತರಲ್ಲಿ ಎಂ.ನಾ.ಚಂಬಲ್ತಿಮಾರ್ ಇವರದ್ದು ಮುಖ್ಯ ಹೆಸರು. ಸಾಮಾಜಿಕ ಕಳಕಳಿ, ಸಂಸ್ಕೃತಿಯ ಮೇಲಿನ ಪ್ರೀತಿ, ಮಾನವಾಸಕ್ತಿಯ ತುಡಿತ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಆದರೆ ಎಲ್ಲೂ ಇವರ ಬರಹಗಳು ಸಂಕಲನ ರೂಪದಲ್ಲಿ ಬಂದಿರಲಿಲ್ಲ. ಬರಬೇಕೆಂದು ನಮ್ಮೆಲ್ಲರ ಬಯಕೆ.” ಎನ್ನುತ್ತಾರೆ. ಪತ್ರಕರ್ತರೂ, ಸಾಹಿತಿಗಳೂ ಆಗಿರುವ ಎ. ಈಶ್ವರಯ್ಯ ಇವರು ತಮ್ಮ ನಲ್ನುಡಿಯಲ್ಲಿ ಎಂ.ನಾ. ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇವರು ಬರೆಯುತ್ತಾರೆ “ ಪತ್ರಕರ್ತನಾದವನು ಬಹುಮುಖ ಆಸಕ್ತಿಗಳನ್ನು ಬೆಳೆಸಿಕೊಂಡಿರಬೇಕೆನ್ನುವುದು ಒಂದು ಒಪ್ಪಿತ ಗ್ರಹಿಕೆ. ಈ ಹಿನ್ನಲೆಯುಳ್ಳಾತನ ಬರಹ ವಿಸ್ತಾರವನ್ನೂ, ಆಳವನ್ನೂ, ಒಳನೋಟಗಳನ್ನೂ ಹೊಂದಿರುತ್ತದೆ. ಎಂ.ನಾ.ಚಂಬಲ್ತಿಮಾರ್ ಈ ವರ್ಗಕ್ಕೆ ಸೇರಿದವರು. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಚಾರಗಳಲ್ಲಿ ಅವರು ಆಸಕ್ತಿಯನ್ನು ಬೆಳೆಸಿಕೊಂಡಿರುವುದು ಮಾತ್ರವಲ್ಲ ಸಾಕಷ್ಟು ಅಧ್ಯಯನವನ್ನು ನಡೆಸಿರುವುದು ಮೆಚ್ಚತಕ್ಕ ವಿಚಾರ. ಪತ್ರಕರ್ತರಲ್ಲಿ ಭಾಷಾಶುದ್ಧಿ ಕಾಣ ಸಿಗುವುದು ವಿರಳ ಎನ್ನುವ ಮಾತಿಗೆ ಅವರು ಅಪವಾದವಾಗಿದ್ದಾರೆ.”

ತಮ್ಮ ಮಾತಾದ ‘ಮಾತಿನ ಮಂಟಪಕ್ಕೆ ಅಕ್ಷರದ ಹಸಿರು ತೋರಣ' ಇಲ್ಲಿ ಎಂ.ನಾ. ಅವರು ತಮ್ಮ ಬಾಲ್ಯ, ಯಕ್ಷಗಾನದ ಬಗ್ಗೆ ಪ್ರೀತಿ, ಬರವಣಿಗೆಯ ಕಡೆಗಿನ ತುಡಿತ, ಪತ್ರಿಕೆಗಳಲ್ಲಿ ದುಡಿದ ಅನುಭವಗಳನ್ನೆಲ್ಲಾ ಬರೆದಿದ್ದಾರೆ. ಅವರು ಒಂದೆಡೆ ಬರೆಯುತ್ತಾರೆ “ಹುಟ್ಟಿ ಬೆಳೆದ ಪರಿಸರದಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಒಲವಿರಲಿಲ್ಲ. ಕೂಲಿನಾಲಿ ಮಾಡಿ ಬದುಕುತ್ತಿದ್ದ ಹಿರಿಯರು, ಬೀಡಿ ಕಟ್ಟಿ ನನ್ನನ್ನು ಸಾಕಿದ ಅಮ್ಮ ಇವರಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವೇ ಇರಲಿಲ್ಲ.  ಹಳ್ಳಿಯ ನೂರಾರು ಹುಡುಗರಂತೆ ಅವರಲ್ಲಿ ಒಬ್ಬನಾಗಿ ಬೆಳೆದ ನನ್ನ ಎಳವೆಯಲ್ಲಿ ಯಕ್ಷಗಾನವೆಂದರೆ ಪಂಚ ಪ್ರಾಣವಾಗಿತ್ತು. ಕಲಾವಿದನಾಗಬೇಕೆಂಬ ಅದಮ್ಯ ಉತ್ಸಾಹವಿತ್ತಾದರೂ ಮನೆಯಿಂದ ಪ್ರೋತ್ಸಾಹ ಸಿಕ್ಕಿರಲಿಲ್ಲ. ಅಂದು ಗುರಿ ತೋರಿಸುವ ಮಾರ್ಗದರ್ಶಕರ ಒಡನಾಟಗಳೂ ಇರಲಿಲ್ಲ. ಇಷ್ಟಕ್ಕೂ ಭವಿಷ್ಯದಲ್ಲಿ ಬೇರೇನಾಗಬೇಕು? ಎಂಬ ಪ್ರಶ್ನೆಯ ಮುಂದೆ ನನಗೆ ಉತ್ತರವೇ ಇರಲಿಲ್ಲ.”

ಈ ಪುಸ್ತಕದಲ್ಲಿ ಕಾರವಲ್, ಹೊಸ ದಿಗಂತ, ಪ್ರತಿ ಸೂರ್ಯ, ಉದಯವಾಣಿ, ಜನವಾಹಿನಿ ಮೊದಲಾದ ಪತ್ರಿಕೆಗಳಲ್ಲಿ ಬರೆದ ಬರಹಗಳು ಸಂಗ್ರಹಿತವಾಗಿವೆ. ತುಂಬಾ ದೀರ್ಘವಲ್ಲದ ಬರಹಗಳು ತಮ್ಮ ತೀಕ್ಷ್ಣವಾದ ಬರವಣಿಗೆಯಿಂದ ಬಹಳ ಪ್ರಭಾವಶಾಲಿಯಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ‘ತಿಮಿರ ಗರ್ಭದ ನಡುವೆ..., ಪ್ರೇಮ ಮತ್ತು ಅತಿ ಮಧುರ..., ಗಡಿನಾಡ ಕಾವೇರಿ, ಶೇಣಿ ಚಿಂತನೆಗಳು, ಸ್ವಾತಂತ್ರ್ಯದ ಓಟ.. ಮುಂತಾದ ಬರಹಗಳು ಬಹಳ ಸೊಗಸಾಗಿವೆ. ಸುಮಾರು ೧೦೦ ಪುಟಗಳ ಈ ಪುಸ್ತಕದ ಮುಖಪುಟಕ್ಕೆ ಶ್ರೀಕಾಂತ್, ಕಾಸರಗೋಡು ಇವರು ಕ್ಲಿಕ್ಕಿಸಿದ ಚಿತ್ರವನ್ನು ಬಳಸಲಾಗಿದೆ.