ಗಡಿಯಾರ ಸಾಗಿ ಬಂದ ಹಾದಿ... (ಭಾಗ ೧)

ಗಡಿಯಾರ ಸಾಗಿ ಬಂದ ಹಾದಿ... (ಭಾಗ ೧)

ಸಮಯ ಒಮ್ಮೆ ಕಳೆದು ಹೋದರೆ ಮತ್ತೆ ಬಾರದು. ಈಗ ಸಮಯವನ್ನು ಅಳೆಯಲು, ತಿಳಿಯಲು ಸಾಧನಗಳು ಹಲವಾರು ಇವೆ. ಮೊಬೈಲ್ ಎಂಬ ವಸ್ತು ಬಂದ ಬಳಿಕವಂತೂ ಜನರು ಕೈಗಡಿಯಾರವನ್ನು ಬಳಸುವುದನ್ನೇ ಕಡಿಮೆ ಮಾಡಿದರು. ಮೊಬೈಲ್ ನಲ್ಲಿ ಸಮಯ ನೋಡಬೇಕೆಂದೂ ಇಲ್ಲ. ಕಾಲ ಕಾಲಕ್ಕೆ ಅದು ಬೇಕಾದರೆ ಸುಂದರ ಧ್ವನಿಯಲ್ಲಿ ಸಮಯವನ್ನೂ ತಿಳಿಸುವ ಕೆಲಸ ಮಾಡುತ್ತದೆ. ಆದರೆ ಮೊದಮೊದಲು ಸಮಯವನ್ನು ನಿರ್ಧಾರ ಮಾಡಲು ಮತ್ತು ಅಳೆಯಲು ನಮ್ಮ ಪೂರ್ವಜರು ಏನೆಲ್ಲಾ ಸರ್ಕಸ್ ಮಾಡಿದರು ಎಂದು ಗೊತ್ತೇ? ಅಂದಿನ ಕಾಲದಲ್ಲಿ ಸಮಯವನ್ನು ಅಳೆಯಲು ಬಳಸುತ್ತಿದ್ದ ಕೆಲವು ಸಾಧನಗಳ ಬಗ್ಗೆ ಚಿಕ್ಕದಾಗಿ ಪರಿಚಯ ಮಾಡಿಕೊಳ್ಳೋಣ.

ಮರಳ ಗಡಿಯಾರ: ಈ ಗಡಿಯಾರ ಈಗಲೂ ಬಹುತೇಕರ ಮನೆಯಲ್ಲಿ ಇದೆ. ಆದರೆ ಸಮಯ ನೋಡುವುದಕ್ಕಲ್ಲ. ‘ಶೋ ಪೀಸ್' ನಂತೆ ಬಳಸಿಕೊಳ್ಳಲು ಅಷ್ಟೇ. ಆದರೆ ಒಂದು ಸಮಯದಲ್ಲಿ ಈ ಸಾಧನವು ಬಹಳಷ್ಟು ನಿಖರತೆಯ ಸಮಯವನ್ನು ತಿಳಿಸುವ ಕೆಲಸ ಮಾಡುತ್ತಿತ್ತು. ೮ನೇ ಶತಮಾನದಲ್ಲಿ ಫ್ರಾನ್ಸ್ ದೇಶದಲ್ಲಿ ಈ ಸಾಧನವನ್ನು ಸಿದ್ಧಪಡಿಸಲಾಯಿತು. ಆದರೆ ಈ ಸಾಧನವನ್ನು ಯಾರು ಕಂಡು ಹಿಡಿದರು ಎಂಬ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಇದನ್ನು ಹಲವಾರು ವರ್ಷಗಳ ಕಾಲ ಜನರು ಸಮಯವನ್ನು ತಿಳಿಯಲು ಬಳಸುತ್ತಿದ್ದರು.

ಇದರ ಕಾರ್ಯ ವಿಧಾನ ಬಹಳ ಸರಳ. ಪರಸ್ಪರ ಅಂಟಿಕೊಂಡಂತಿರುವ ಎರಡೂ ಸಮ್ಮಿತೀಯ (Symmetrical) ಅರ್ಧ ಗೋಳಾಕಾರದ ಗಾಜಿನ ಪಾತ್ರೆಗಳು (ಚಿತ್ರ ನೋಡಿ) ಹಾಗೂ ಅವುಗಳ ಮಧ್ಯೆ ಮರಳಿನ ಕಣಗಳನ್ನು ಸಾಗಲು ಸಾಧ್ಯವಾಗುವಂತಹ ಒಂದು ಪುಟ್ಟ ನಳಿಕೆ. ಇದಿಷ್ಟೇ ಈ ಗಡಿಯಾರದ ವ್ಯವಸ್ಥೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿದರೆ, ಈ ಸಾಧನದ ಒಂದು ಗೋಲಾಕಾರದ ಪಾತ್ರೆಗೆ ಮರಳು ತುಂಬಿ ಅದನ್ನು ಮೇಲ್ಮುಖವಾಗಿಟ್ಟಾಗ ಮರಳು, ನಳಿಕೆಯ ಮೂಲಕ ಕೆಳಗಿರುವ ಮತ್ತೊಂದು ಗೋಲಾಕಾರದ ಪಾತ್ರೆಗೆ ವರ್ಗಾಯಿಸಲ್ಪಡುತ್ತದೆ. 

ಮರಳಿನ ಕಣಗಳು ಪೂರ್ತಿಯಾಗಿ ಮೇಲಿನ ಪಾತ್ರೆಯಿಂದ ಕೆಳಗಿನ ಪಾತ್ರೆಗೆ ಬೀಳಲು ತೆಗೆದುಕೊಳ್ಳುವ ಕಾಲವನ್ನು ಅಳೆದು ತೂಗಿ ಸಮಯದ ನಿರ್ಧಾರ ಮಾಡಲಾಗುತ್ತಿತ್ತು. ಸಾಧಾರಣವಾಗಿ ಒಂದು ಗಂಟೆಯ ಅವಧಿಯಲ್ಲಿ ಮರಳು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಬೀಳುವಂತೆ ವಿನ್ಯಾಸ ಮಾಡಲಾಗುತ್ತಿತ್ತು. ಒಂದು ಗಂಟೆಯ ಬಳಿಕ ಈ ಪಾತ್ರೆಯನ್ನು ತಿರುಗಿಸಿ ಇಡಬೇಕಿತ್ತು. ಏಕೆಂದರೆ ಆಗ ಮಾತ್ರ ಕೆಳಗಿನ ಪಾತ್ರೆಯಲ್ಲಿ ಸುರಿದಿದ್ದ ಮರಳು ಮತ್ತೆ ಮೇಲಿನಿಂದ ಕೆಳಗೆ ಸುರಿಯಲು ಪ್ರಾರಂಭಿಸುತ್ತಿತ್ತು. ಈ ಗಡಿಯಾರ ಅಂದಿನ ಸಮಯದಲ್ಲಿ ಚಾಲ್ತಿಯಲ್ಲಿದ್ದ ಉಳಿದೆಲ್ಲಾ ಗಡಿಯಾರಗಳಿಗಿಂತ ನಿಖರವಾದ ಸಮಯ ತೋರಿಸುತ್ತಿದ್ದರೂ, ಗಂಟೆಗೆ ಒಮ್ಮೆ ಯಾರಾದರೊಬ್ಬರು ಈ ಪಾತ್ರೆಯನ್ನು ತಿರುಗಿಸಿ ಇಡಲೇ ಬೇಕಿತ್ತು. ಇದರ ಜೊತೆಗೆ ದಿನದಲ್ಲಿ ಎಷ್ಟು ಬಾರಿ ತಿರುಗಿಸಿ ಇಟ್ಟಿದ್ದೇವೆ ಎಂದು ನೆನಪೂ ಇಡಬೇಕಿತ್ತು. ಇಲ್ಲವಾದರೆ ಸಮಯದಲ್ಲಿ ಅದಲು ಬದಲಾಗುವ ಸಾಧ್ಯತೆ ಇತ್ತು.

(ಆಧಾರ) (ಇನ್ನೂ ಇದೆ)   

ಚಿತ್ರ ಕೃಪೆ: ಅಂತರ್ಜಾಲ ತಾಣ