ಗಡಿಯಾರ ಸಾಗಿ ಬಂದ ಹಾದಿ - ಭಾಗ ೨

ಗಡಿಯಾರ ಸಾಗಿ ಬಂದ ಹಾದಿ - ಭಾಗ ೨

ಕಳೆದ ವಾರ ಮರಳು ಗಡಿಯಾರದ ಬಗ್ಗೆ ತಿಳಿದುಕೊಂಡಿರಲ್ವಾ? ಅದಕ್ಕಿಂತಲೂ ಮೊದಲು ಆವಿಷ್ಕಾರವಾದದ್ದು ಸೂರ್ಯ ಗಡಿಯಾರ. ಹಾಗೆ ನೋಡಲು ಹೋದರೆ ಸೂರ್ಯನೇ ಒಂದು ಬಗೆಯಲ್ಲಿ ಗಡಿಯಾರದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ನಾವು ಈಗಲೂ ಸೂರ್ಯನನ್ನು ನೋಡಿ ಅಂದಾಜು ಸಮಯ ಹೇಳುವುದಿಲ್ಲವೇ? ಸೂರ್ಯೋದಯವಾದಾಗ ಸುಮಾರು ಏಳು ಗಂಟೆ, ಸೂರ್ಯ ಸ್ವಲ್ಪ ಮೇಲೆ ಬಂದರೆ ಹತ್ತು ಗಂಟೆ, ನೆತ್ತಿ ಮೇಲೆ ಬಂದರೆ ಹನ್ನೆರಡು, ಪಶ್ಚಿಮದತ್ತ ತಿರುಗಿದರೆ ನಾಲ್ಕು, ಕೆಂಪು ಬಣ್ಣ ಪಡೆದು ಸಮುದ್ರದಲ್ಲಿ ಮುಳುಗ ಹೊರಟರೆ ಆರು ಗಂಟೆ. ಹೀಗೆ ನಾವು ಶತಶತಮಾನಗಳಿಂದ ಅಂದಾಜು ಮಾಡುತ್ತಾ ಬಂದಿದ್ದೇವೆ. ಸೂರ್ಯನನ್ನೇ ಅವಲಂಬಿಸಿ ಒಂದು ಗಡಿಯಾರ ನಿರ್ಮಾಣವಾಗಿತ್ತು. ಅದೇ ಸೂರ್ಯ ಗಡಿಯಾರ.

ಸೂರ್ಯ ಗಡಿಯಾರ: ನೇಸರನ ಚಲನೆಯನ್ನು ಅವಲಂಬಿಸಿದ್ದ ಗಡಿಯಾರ ಇದು. ಸೂರ್ಯನಿರುವ ದಿಕ್ಕನ್ನು ನೋಡಿ ಸಮಯವನ್ನು ಅಂದಾಜಿಸುವ ಮೂಲ ಸಿದ್ಧಾಂತದ ಮೇಲೆ ರೂಪಿತವಾದ, ಸಮಯವನ್ನು ಅಳೆಯುವ ಮೊದಲ ಸಾಧನ- ಸೂರ್ಯ ಗಡಿಯಾರ (ಸನ್ ಡಯಲ್). ನಿಮಗೆಲ್ಲಾ ತಿಳಿದಿರುವಂತೆ ಲಂಬಾಕಾರವಾಗಿ ನಿಂತ ವಸ್ತುವಿನ ಮೇಲೆ ಬೇರೆ ಬೇರೆ ಸಮಯದಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಅದರ ವಿರುದ್ಧ ದಿಕ್ಕಿನಲ್ಲಿ ಆ ವಸ್ತುವಿನ ನೆರಳು ಬೀಳುತ್ತದೆ. ಈ ಲಂಬಾಕಾರದ ವಸ್ತುವಿನ ಸುತ್ತ ಒಂದು ವೃತ್ತವನ್ನು ರಚಿಸಿದರೆ ನೆರಳು ಬೀಳುವ ಜಾಗದ ಆಧಾರದ ಮೇಲೆ ನಾವು ಸಮಯವನ್ನು ತಿಳಿಯಬಹುದಾಗಿದೆ. ಸೂರ್ಯ ಗಡಿಯಾರ ಸಾಧನ ಸಹ ಇದೇ ರೀತಿಯ ವಿನ್ಯಾಸವನ್ನು ಹೊಂದಿದ್ದು, ಕಲ್ಲಿನ ವೃತ್ತದ ಮಧ್ಯದಲ್ಲಿ ಲಂಬವಾದ ಕಲ್ಲಿನ ಕಂಬವನ್ನು ಕೂರಿಸಲಾಗುತ್ತದೆ. ಸೂರ್ಯನ ಕಿರಣಗಳು ಈ ಗಡಿಯಾರದ ಮೇಲೆ ಬಿದ್ದಾಗ ಸುತ್ತ ಇರುವ ವೃತ್ತದಲ್ಲಿ ನಮೂದಾದ ಗಂಟೆಗಳ ಗುರುತಿನ ಮೇಲೆ ಈ ನೆರಳು ಬಿದ್ದು ಸಮಯವನ್ನು ತೋರಿಸುತ್ತದೆ.

ಈ ಬಗೆಯ ಗಡಿಯಾರದ ಆವಿಷ್ಕಾರವು ಬಹಳ ಹಿಂದೆ ಅಂದರೆ ಕ್ರಿಸ್ತಪೂರ್ವದಲ್ಲೇ ಆಗಿದೆ ಎಂಬುದು ಸಂಶೋಧಕರ ಅಭಿಮತ. ಆದರೆ ಇಲ್ಲಿಯೂ ಕೆಲವು ಭಿನ್ನ ಅಭಿಪ್ರಾಯಗಳಿವೆ. ಭಾರತೀಯ ಇತಿಹಾಸಕಾರರು ಇದನ್ನು ಭಾರತೀಯರೇ ಕಂಡು ಹಿಡಿದದ್ದು ಎಂದು ವಾದಿಸಿದರೆ, ಜಾಗತಿಕ ಇತಿಹಾಸಕಾರರು ಇದನ್ನು ಈಜಿಪ್ಟ್ ನಲ್ಲಿ ಕಂಡು ಹಿಡಿಯಲಾಯಿತು ಎಂದು ತಮ್ಮ ವಾದವನ್ನು ಮಂಡಿಸುತ್ತಾರೆ. ಈ ಗಡಿಯಾರದಲ್ಲಿ ವೃತ್ತದ ವ್ಯಾಸವನ್ನು ಹೆಚ್ಚಿಸಿದಂತೆ ಸಮಯದ ನಿಖರತೆಯೂ ಹೆಚ್ಚುತ್ತದೆ. ನವದೆಹಲಿ ಮತ್ತು ರಾಜಸ್ಥಾನದ ಜೈಪುರದಲ್ಲಿರುವ ಜಂತರ್ ಮಂತರ್ (ಚಿತ್ರ ೧)ನಲ್ಲಿ ಈ ಬಗೆಯ ದೈತ್ಯ ಸೂರ್ಯ ಗಡಿಯಾರಗಳನ್ನು ಗಮನಿಸಬಹುದಾಗಿದೆ. ಜೈಪುರದ ಜಂತರ್ ಮಂತರ್ ಗಡಿಯಾರವಂತೂ ಸೂರ್ಯನ ಕಿರಣಗಳನ್ನು ಅವಲಂಬಿಸಿ ಸೆಕೆಂಡ್ ಗಳಷ್ಟು ನಿಖರವಾದ ಸಮಯವನ್ನು ತಿಳಿಸುತ್ತದೆ. 

ಸೂರ್ಯ ಗಡಿಯಾರದ ಮುಖ್ಯ ಹಿನ್ನಡೆಯೆಂದರೆ ಸೂರ್ಯನು ಪ್ರಕಾಶಮಾನವಾಗಿರುವಾಗಷ್ಟೇ ಇದು ಸಮಯವನ್ನು ತಿಳಿಸಬಲ್ಲುದು. ಮೋಡ ಮುಸುಕಿದಾಗ ಮತ್ತು ಕತ್ತಲಿನಲ್ಲಿ ಈ ಗಡಿಯಾರ ಕೆಲಸ ಮಾಡುವುದಿಲ್ಲ. ಈ ಕಾರಣಗಳಿಂದ ಇದು ಮಳೆಗಾಲದ ಸಮಯದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲಾರದು. ಆದರೆ ಸಮಯವನ್ನು ನಿರ್ಧರಿಸಲು ನಮ್ಮ ಪೂರ್ವಜರು ಕಂಡುಕೊಂಡ ಮೊದಲ ಈ ಆವಿಷ್ಕಾರ ಭವಿಷ್ಯದ ಶೋಧನೆಗಳಿಗೆ ದಾರಿದೀಪವಾಯಿತು ಎನ್ನುವುದು ಸುಳ್ಳಲ್ಲ.

(ಇನ್ನೂ ಇದೆ)

ಆಧಾರ ಮಾಹಿತಿ- ಅಂತರ್ಜಾಲ ಚಿತ್ರ ಕೃಪೆ