ಗಡಿಯಾರ ಸಾಗಿ ಬಂದ ಹಾದಿ (ಭಾಗ ೩)

ಗಡಿಯಾರ ಸಾಗಿ ಬಂದ ಹಾದಿ (ಭಾಗ ೩)

ಜಲ ಗಡಿಯಾರ: ಕಳೆದ ವಾರ ನೀವು ಓದಿದ ಸೂರ್ಯ ಗಡಿಯಾರದಲ್ಲಿ ಕೆಲವು ನ್ಯೂನತೆಗಳು ಇದ್ದವು. ಅದನ್ನು ನಿವಾರಿಸಲು ನಂತರದ ದಿನಗಳಲ್ಲಿ ಜಲ ಗಡಿಯಾರ ಬೆಳಕಿಗೆ ಬಂತು. ಇದು ರಾತ್ರಿಯ ವೇಳೆಯಲ್ಲೂ ಸಮಯವನ್ನು ತಿಳಿಸುತ್ತಿತ್ತು. ಸೂರ್ಯ ಗಡಿಯಾರ ರಾತ್ರಿಯಲ್ಲಿ ಸಮಯ ತಿಳಿಸುತ್ತಿರಲಿಲ್ಲ. ಅದನ್ನು ಸರಿ ಪಡಿಸಲು ಚಂದ್ರನ ಬೆಳಕಿನಲ್ಲಿ ಗಡಿಯಾರ ನಿರ್ಮಾಣದ ಸಾಧ್ಯತೆಯನ್ನು ಸಂಶೋಧಕರು ತೆರೆದಿಟ್ಟಿದ್ದರು. ಆದರೆ ಅಮವಾಸ್ಯೆಯ ದಿನಗಳಲ್ಲಿ ಮತ್ತೆ ಅದೇ ಸಮಸ್ಯೆ ಶುರುವಾಗುವ ಸಾಧ್ಯತೆ ಇತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಜಿಪ್ಟ್ ದೇಶದವರು ಸುಮಾರು ಕ್ರಿಸ್ತಪೂರ್ವ ೧೫೦೦ರಲ್ಲಿ ನೀರಿನ ಗಡಿಯಾರವನ್ನು ಕಂಡುಹಿಡಿದರು.

ಈ ಸಾಧನದಲ್ಲಿ ಒಂದು ಅರ್ಧ ಗೋಳಾಕಾರದ ಪಾತ್ರೆಯ ಕೆಳಭಾಗದಲ್ಲಿ ಒಂದು ಚಿಕ್ಕ ರಂಧ್ರವನ್ನು ಕೊರೆಯಲಾಗುತ್ತಿತ್ತು ಮತ್ತು ಪಾತ್ರೆಯ ಒಳ ಭಾಗದಲ್ಲಿ ಸಮಯದ ಗುರುತು ಹಾಕಲಾಗುತ್ತಿತ್ತು. ಎಷ್ಟು ನೀರು ಹೊರಗೆ ಹರಿಯಿತು ಎನ್ನುವ ಆಧಾರದ ಮೇಲೆ ನೀರಿನ ಗಡಿಯಾರದಲ್ಲಿ ಸಮಯವನ್ನು ಅಳೆಯಲಾಗುತ್ತಿತ್ತು. ಈ ವಿಧಾನ ಸೂರ್ಯನ ಮೇಲೆ ಯಾವುದೇ ಅವಲಂಬನೆ ಹೊಂದಿರದ ಕಾರಣ ರಾತ್ರಿ ಮತ್ತು ಸೂರ್ಯನ ಪ್ರಕಾಶ ಇಲ್ಲದೇ ಇರುವ ಸಮಯದಲ್ಲೂ ಈ ಗಡಿಯಾರದ ಮೂಲಕ ವೇಳೆಯನ್ನು ತಿಳಿದುಕೊಳ್ಳಬಹುದಾಗಿತ್ತು. ಆದರೆ ಈ ಗಡಿಯಾರವೂ ಸಮಸ್ಯೆಗಳಿಂದ ಮುಕ್ತವಾಗಿರಲಿಲ್ಲ. ನೀರಿನ ಹರಿಯುವಿಕೆ ಪಾತ್ರೆ ಪೂರ್ತಿ ತುಂಬಿದ್ದಾಗ ಒತ್ತಡದ ಕಾರಣದಿಂದ ಹೆಚ್ಚಾಗಿದ್ದು, ನೀರಿನ ಮಟ್ಟವು ಕಡಿಮೆಯಾಗುತ್ತ ಬಂದಂತೆಲ್ಲಾ ರಂದ್ರದ ಮೂಲಕ ಹರಿಯುವಿಕೆ ನಿಧಾನವಾಗುತ್ತದೆ. ಇದರಿಂದಾಗಿ ನಿಖರ ಸಮಯವನ್ನು ಅಳೆಯಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಶೀತ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ನೀರು ಮಂಜುಗಡ್ಡೆಯಾಗುವುದರಿಂದ ಈ ಗಡಿಯಾರದಲ್ಲಿ ನೀರು ಹರಿಯುತ್ತಲೇ ಇರಲಿಲ್ಲ. ಈ ಕಾರಣದಿಂದ ಮಂಜುಗಟ್ಟುವ ಪ್ರದೇಶಗಳಲ್ಲಿ ಈ ಗಡಿಯಾರ ಉಪಯೋಗಕ್ಕೆ ಬರುತ್ತಿರಲಿಲ್ಲ. 

ಆದರೆ ಈ ಸಮಸ್ಯೆಯನ್ನು ಅಲೆಕ್ಸಾಂಡ್ರಿಯಾ ಮೂಲದ ಸಂಶೋಧಕ ಮತ್ತು ಗಣಿತಜ್ಞ ಟೇಸೀಬಿಯಸ್ ಎನ್ನುವಾತ ನೀರು ಹೊರಗೆ ಹೋಗುವ ಬದಲು ನೀರು ಒಳಗೆ ಹರಿಯುವ ಆಧಾರದ ಮೇಲೆ ಸಮಯವನ್ನು ಕಂಡು ಹಿಡಿಯುವ ಗಡಿಯಾರವನ್ನು ಕಂಡು ಹಿಡಿದ. ಒಳ ಹರಿಯುವ ನೀರು ಯಾವುದೇ ಒತ್ತಡಕ್ಕೆ ಒಳಗಾಗದ ಕಾರಣ ಈ ಗಡಿಯಾರವು ಸಾಕಷ್ಟು ನಿಖರವಾದ ಸಮಯವನ್ನು ತೋರಿಸುತ್ತಿತ್ತು. ಈ ಕಾರಣದಿಂದ ಈ ಗಡಿಯಾರವು ನೂರಾರು ವರ್ಷಗಳ ಕಾಲ ಪ್ರಪಂಚದ ಬಹುಭಾಗಗಳಲ್ಲಿ ಬಳಕೆಯಾಗುತ್ತಿತ್ತು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ