ಗಡಿಯಾರ ಸಾಗಿ ಬಂದ ಹಾದಿ - ಭಾಗ ೪

ಗಡಿಯಾರ ಸಾಗಿ ಬಂದ ಹಾದಿ - ಭಾಗ ೪

ಮೇಣದ ಬತ್ತಿಯ ಗಡಿಯಾರ: ವಿದ್ಯುತ್ ಕಡಿತ ಸಮಯದಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ನಾವು ಬಳಸುವ ಕ್ಯಾಂಡಲ್ ಅಥವಾ ಮೇಣದ ಬತ್ತಿಯೂ ಒಂದು ಕಾಲದಲ್ಲಿ ಸಮಯ ಮಾಪಕವಾಗಿತ್ತು ಅಂದರೆ ನಂಬುವಿರಾ? ಇದು ಸತ್ಯ. ಮಧ್ಯ ಪ್ರಾಚ್ಯ ಹಾಗೂ ಭಾರತದಲ್ಲಿ ಸೂರ್ಯ ಗಡಿಯಾರ ಮತ್ತು ಜಲ ಗಡಿಯಾರಗಳು ಬಳಕೆಯಾಗುತ್ತಿದ್ದರೆ, ಚೀನಾ ದೇಶದಲ್ಲಿ ಮೇಣದ ಬತ್ತಿಯನ್ನು ಸಮಯ ಅಳೆಯಲು ಬಳಸುತ್ತಿದ್ದರು. 

ಇದಕ್ಕೆ ಬಳಸಲಾಗುತ್ತಿದ್ದದ್ದು ಸಾಮಾನ್ಯ ಮೇಣದ ಬತ್ತಿಯಾಗಿದ್ದರೂ ಅದಕ್ಕೆ ಕೆಲವೊಂದು ಗುರುತುಗಳನ್ನು ಮಾಡುತ್ತಿದ್ದರು. ಒಂದು ಗಂಟೆಯ ಅವಧಿಯಲ್ಲಿ ಮೇಣದ ಬತ್ತಿ ಎಷ್ಟು ಉರಿಯುತ್ತದೆ ಎಂಬುದನ್ನು ಮೊದಲೇ ಲೆಕ್ಕ ಹಾಕಿ ಖಚಿತ ಪಡಿಸಿಕೊಂಡು ಅದಕ್ಕೆ ತಕ್ಕಂತೆ ಅದರಲ್ಲಿ ಗುರುತುಗಳನ್ನು ಮಾಡುತ್ತಿದ್ದರು. ಒಂದು ನಿರ್ಧಿಷ್ಟ ಅವಧಿಯಲ್ಲಿ ಮೇಣದ ಬತ್ತಿ ಎಷ್ಟು ಉರಿಯಿತು ಎಂಬ ಆಧಾರದಲ್ಲಿ ಎಷ್ಟು ಸಮಯ ಕಳೆದು ಹೋಯಿತು ಎಂಬುದನ್ನು ನಿರ್ಧಾರ ಮಾಡುತ್ತಿದ್ದರು. 

ಕ್ರಿಸ್ತ ಪೂರ್ವ ೫೨೦ರ ಸಮಯದಲ್ಲಿ ಚೀನಾದಲ್ಲಿ ಈ ವಿಧಾನದಲ್ಲೇ ಸಮಯವನ್ನು ಅಳೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಅಗರಬತ್ತಿ ಅಥವಾ ಊದುಬತ್ತಿಯ ಬಳಕೆ ಪ್ರಾರಂಭವಾಯಿತು. ಒಂದು ನಿರ್ದಿಷ್ಟ ಸಮಯದಷ್ಟು ಉರಿಯ ಬಲ್ಲ ಊದು ಕಡ್ಡಿಗಳನ್ನು ಬಳಸಿ ಸಮಯದ ಮಾಪನ ಮಾಡುತ್ತಿದ್ದರು. ಕಾಲಾನುಕ್ರಮೇಣ ಆಧುನಿಕ ಗಡಿಯಾರಗಳ ಅನ್ವೇಷಣೆಯ ಬಳಿಕವೂ ಚೀನಾದಲ್ಲಿ ಊದು ಕಡ್ಡಿ ಮತ್ತು ಮೇಣದ ಬತ್ತಿಯ ಗಡಿಯಾರಗಳು ಚಲಾವಣೆಯಲ್ಲಿದ್ದವು. ಸತ್ಯ ಸಂಗತಿ ಏನೆಂದರೆ ಈ ಎರಡೂ ವಿಧಾನಗಳಿಂದ ನಿಖರವಾದ ಸಮಯ ಅಳೆಯಲು ಸಾಧ್ಯವಿಲ್ಲ. ಏಕೆಂದರೆ ಊದುಬತ್ತಿ ಮತ್ತು ಮೇಣದ ಬತ್ತಿ ಉರಿಯುತ್ತಿರುವಾಗ ಆ ಸಮಯದಲ್ಲಿ ಬೀಸುತ್ತಿರುವ ಗಾಳಿ, ವಾತಾವರಣದ ತೇವಾಂಶ, ತಾಪಗಳು ಇವುಗಳ ಮೇಲೆ ಪರಿಣಾಮ ಬೀರುತ್ತಿದ್ದವು. ಗಾಳಿ ಜೋರಾಗಿ ಬೀಸಿದಾಗ ಕ್ಯಾಂಡಲ್ ಆರಿ ಹೋಗುತ್ತಿತ್ತು, ಇಲ್ಲವೇ ಬೇಗನೇ ಉರಿದು ನೀರಾಗುತ್ತಿತ್ತು. ಇದರಿಂದ ನಿಖರ ಸಮಯ ತಿಳಿಯುತ್ತಿರಲಿಲ್ಲ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ