ಗಡಿಯಾರ ಸಾಗಿ ಬಂದ ಹಾದಿ - ಭಾಗ ೬

ಗಡಿಯಾರ ಸಾಗಿ ಬಂದ ಹಾದಿ - ಭಾಗ ೬

ಲೋಲಕ ಗಡಿಯಾರ ಅಥವಾ ಪೆಂಡ್ಯೂಲಮ್ ಗಡಿಯಾರ ಜನಪ್ರಿಯವೇನೋ ಆಯಿತು ಆದರೆ ಅದಕ್ಕಿದ್ದ ಬಹು ದೊಡ್ಡ ಸಮಸ್ಯೆಯೆಂದರೆ ಅದನ್ನು ನೀರಿನ ಮೇಲೆ ಪ್ರಯಾಣ ಮಾಡುವಾಗ ಬಳಸಲು ಬರುತ್ತಿರಲಿಲ್ಲ. ಸಾಗರಯಾನ, ನದಿ ಮೇಲೆ ಪ್ರಯಾಣ ಮಾಡುವಾಗ ಈ ಗಡಿಯಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಏಕೆಂದರೆ ಪೆಂಡ್ಯುಲಮ್ ಗಡಿಯಾರವನ್ನು ಒಂದು ಗಟ್ಟಿ ಆಧಾರದ ಮೇಲೆ ಸ್ಥಿರವಾಗಿ ನಿಲ್ಲಿಸುವುದು ಅತ್ಯಂತ ಅಗತ್ಯವಾಗಿತ್ತು. ಆದರೆ ಜಲಯಾನದ ಸಮಯದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ೧೭ನೇ ಶತಮಾನದ ಸಮಯದಲ್ಲಿ ಯುರೋಪಿಯನ್ನರು ಜಗತ್ತಿನ ವಿವಿಧ ಭೂಭಾಗಗಳನ್ನು ಹುಡುಕಲು ಹಡಗಿನ ಮೂಲಕ ತೆರಳುತ್ತಿದ್ದಾಗ ಅವರಿಗೆ ಸಮಯ ತಿಳಿಯಲು ಗಡಿಯಾರದ ಅಗತ್ಯತೆ ಬಹಳವಿತ್ತು. ಆದರೆ ಸಾಗರದಲ್ಲಿ ಲೋಲಕ ಗಡಿಯಾರ ಅಲೆಗಳ ಹೊಯ್ದಾಟದಲ್ಲಿ ಸರಿಯಾದ ಸಮಯ ತಿಳಿಸಲು ವಿಫಲವಾಗುತ್ತಿತ್ತು. ಆದುದರಿಂದ ಸಾಗರಯಾನದ ಸಮಯದಲ್ಲಿ ಈ ಗಡಿಯಾರ ಅಪ್ರಯೋಜಕವಾಗಿ ಹೋಯಿತು. 

ಅಂದಿನ ಆಧುನಿಕ ಕಾಲದ ಜನಪ್ರಿಯ ಗಡಿಯಾರವಾದ ಲೋಲಕ ಗಡಿಯಾರ ಹೀಗೆ ವಿಫಲವಾದಾಗ ಬ್ರಿಟನ್ ಸರಕಾರ ೧೭೧೪ರಲ್ಲಿ ಯಾರು ಈ ಗಡಿಯಾರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುತ್ತಾರೋ ಅವರಿಗೆ ಇಪ್ಪತ್ತು ಸಾವಿರ (೧೭ನೇ ಶತಮಾನದಲ್ಲಿ)  ಪೌಂಡ್ ಗಳನ್ನು ಬಹುಮಾನವಾಗಿ ನೀಡುವುದಾಗಿ ಘೋಷಣೆ ಮಾಡಿತು. ಅಷ್ಟೊಂದು ಅಗಾಧ ಮೊತ್ತದ ಬಹುಮಾನ ಕೊಡಲು ಸರಕಾರ ತೀರ್ಮಾನ ಮಾಡಿದೆ ಎಂದ ಬಳಿಕ ಈ ಸಮಸ್ಯೆ ಎಷ್ಟಾಗಿ ತೊಂದರೆ ನೀಡಿರಬಹುದು ಎಂದು ಯೋಚನೆ ಮಾಡಿ.

ಬಹಳಷ್ಟು ಮಂದಿ ಈ ಗಡಿಯಾರದ ಸಮಸ್ಯೆಯನ್ನು ಪರಿಹರಿಸಲು ಒದ್ದಾಡುತ್ತಿರುವಾಗ ಜಾನ್ ಹ್ಯಾರಿಸನ್ ಎಂಬ ಬೀಗ ತಜ್ಞ ಮುಂದೆ ಬಂದು ಸಂಪೂರ್ಣವಾಗಿ ಯಂತ್ರಗಳನ್ನು ಅವಲಂಬಿಸಿ ನಡೆಯುವ ಒಂದು ಗಡಿಯಾರವನ್ನು ಅನ್ವೇಷಣೆ ಮಾಡಿದ. ಇದನ್ನು ಭೂಮಿಯಲ್ಲೂ, ಸಮುದ್ರಯಾನದಲ್ಲೂ ಏಕ ಪ್ರಕಾರವಾಗಿ ಬಳಸಬಹುದೆಂದು ಪ್ರಯೋಗಗಳ ಮೂಲಕ ತೋರಿಸಿಕೊಟ್ಟ. ತನ್ನ ಮೊದಲ ಯಶಸ್ಸಿನ ಬಳಿಕ ಜಾನ್ ಈ ಗಡಿಯಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ಸುಧಾರಿತ ವಿನ್ಯಾಸವನ್ನು ಹೊರತಂದ. ಹಲವಾರು ಗಡಿಯಾರಗಳ ಬಳಿಕ ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದ ಪಾಕೆಟ್ ಗಡಿಯಾರ (Pocket Watch) ದ ನಿರ್ಮಾಣ ಮಾಡಿದ. ಈ ವಿನ್ಯಾಸಕ್ಕೆ ಆತ ಎಚ್-4 ಎಂದು ಹೆಸರು ನೀಡಿದ. ಒಂದು ರೀತಿಯಲ್ಲಿ ಈ ಗಡಿಯಾರ ನಮ್ಮ ಈಗಿನ ಕೈಗಡಿಯಾರದ ಅಜ್ಜ ಎನ್ನಬಹುದೇನೋ? 

ಗಡಿಯಾರ ಎಂದರೆ ಹೊರಲಾರದಷ್ಟು ಭಾರವಾದ, ಒಂದೆಡೆ ಇರಿಸಿ ಕಾಲ ನೋಡುವ ಯಂತ್ರ ಎಂಬ ಭಾವನೆ ಇದ್ದ ಸಮಯದಲ್ಲಿ ಜಾನ್ ಹ್ಯಾರಿಸನ್ ವಿನ್ಯಾಸ ಮಾಡಿದ ಕಿಸೆಯಲ್ಲಿ ಇರಿಸಿಕೊಂಡು ಹೋಗುವ ಗಡಿಯಾರ ಬಹುಬೇಗನೇ ಜನಪ್ರಿಯವಾಯಿತು. ನಿಜವಾಗಿ ನೋಡಲು ಹೋದರೆ ಈ ಗಡಿಯಾರವನ್ನು ಮೊದಲು ಕಂಡು ಹಿಡಿದವನು ಜಾನ್ ಹ್ಯಾರಿಸನ್ ಆಗಿರಲಿಲ್ಲ. ೧೫೧೦ರಲ್ಲೇ ಜೇಬಿನಲ್ಲಿಡುವ ಗಡಿಯಾರದ ಅನ್ವೇಷಣೆ ಆಗಿದ್ದರೂ ಅದರ ಸಂಕೀರ್ಣ ವಿನ್ಯಾಸದಿಂದ ಜನಪ್ರಿಯವಾಗಿರಲಿಲ್ಲ. ಆದರೆ ಜಾನ್ ಹ್ಯಾರಿಸನ್ ತಯಾರಿಸಿದ ಪಾಕೆಟ್ ವಾಚ್ ಬಹಳ ಬೇಗನೇ ಜನಪ್ರಿಯವಾಯಿತು. ಇದೇ ಬಗೆಯ ಗಡಿಯಾರವನ್ನು ಮಹಾತ್ಮಾ ಗಾಂಧಿಯವರೂ ತಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸೊಂಟದಲ್ಲಿ ಧರಿಸುತ್ತಿದ್ದರು. ಏಕೆಂದರೆ ಗಾಂಧೀಜಿಯವರು ಸಮಯಕ್ಕೆ ಬಹಳ ಮಹತ್ವ ನೀಡುತ್ತಿದ್ದರು.

ಜೀವಮಾನವಿಡೀ ಹೊಸ ಹೊಸ ಗಡಿಯಾರಗಳನ್ನು ತಯಾರಿಸುವುದರಲ್ಲೇ ನಿರತನಾಗಿದ್ದ ಜಾನ್ ಹ್ಯಾರಿಸನ್ ಗೆ ತನ್ನ ಇಳಿಗಾಲದಲ್ಲಿ ಪ್ರಸಿದ್ಧಿ ಹಾಗೂ ಹಣ ದೊರೆಯಿತು. ಬ್ರಿಟನ್ ಸರಕಾರ ಘೋಷಿಸಿದ ಇಪ್ಪತ್ತು ಸಾವಿರ ಪೌಂಡ್ ಬಹುಮಾನವೂ ದೊರೆಯಿತು. ಹೀಗೆ ಹೊಸ ಅನ್ವೇಷಣೆಯಿಂದ ಎಲ್ಲೂ ಬಳಸಬಹುದಾದ ‘ಪಾಕೆಟ್ ಗಡಿಯಾರ’ದ ಬಳಕೆ ಪ್ರಾರಂಭವಾಯಿತು.

ಚಿತ್ರ ಕೃಪೆ: ಅಂತರ್ಜಾಲ ತಾಣ