ಗಡಿ

ಗಡಿ

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು... ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ...

ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು ಕೃಷಿಯಲ್ಲಿ ಚೆನ್ನಾಗಿದ್ದ ಅಣ್ಣೇಗೌಡರಿಗೆ ಎಕರೆಗಟ್ಟಲೆ ಕಾಫಿ ತೋಟ ಹಂಚಿದ್ದರೆ, ವ್ಯಾವಹಾರಿಕ ದೂರ ದೃಷ್ಟಿ ಇದ್ದ ತಮ್ಮ ಮರಿ ಗೌಡರಿಗೆ ಸಣ್ಣ ತೋಟದ ಜೊತೆ ಅಡಿಕೆ ಮಂಡಿ, ಗೊಬ್ಬರದ ಅಂಗಡಿ ಎಲ್ಲಾ ಹಂಚಿಕೆ ಮಾಡಿದ್ರು. ಇನ್ನುಳಿದಿದ್ದು ಗುಡ್ಡದ ತುದಿಯಲ್ಲಿದ್ದ ಸುಮಾರು 5 ಎಕ್ರೆ ಆಗೋವಷ್ಟು ಇಳಿಜಾರಿನ ಜಾಗ. ಪಕ್ಕದಲ್ಲೇ ವರ್ಷದಲ್ಲಿ 6-8 ತಿಂಗಳು ಹರಿಯೋ ಸಣ್ಣ ತೊರೆ. ಕಣ್ಣು ಹಾಯಿಸಿದಷ್ಟು ದೂರ ಹಸಿರೇ ಹಸಿರು. ಒಮ್ಮೆ ನೋಡಿದರೆ ಮನಸ್ಸಿನ ಭಾರಗಳೆಲ್ಲ ಓಡಿ ಹೋಗೋ ರೀತಿ ವಾತಾವರಣ. ಕುಲದೇವರ ಗುಡಿ ಇರೋ ಜಾಗ ಅನ್ನೋದಕ್ಕೆ ದೊಡ್ಡ ಗೌಡರು ಇನ್ನೂ ಆಸ್ತಿ ಹಂಚಿಕೆ ಮಾಡಿರಲಿಲ್ಲ. ಕುಲದೇವರು ಅಂದಿದ್ದಕ್ಕೆ ಇಬ್ಬರೂ ಗೌಡರ ತಲೆ ದೇವಿಯ ಎದುರು ಅರಿವಿಲ್ಲದೆ ಬಾಗುತ್ತಿತ್ತು. ಗೌಡತಿಯ ಸಮಾಧಿನೂ ಅಲ್ಲೇ ಕೊಂಚ ದೂರದಲ್ಲಿತ್ತು. ಈ ಜಾಗವನ್ನು ಕ್ರಮೇಣ ಹಂಚಿಕೆ ಮಾಡಿದ್ರಾಯ್ತು ಅಂತ ಅಂದ್ಕೊಂಡಿದ್ದ ಗೌಡರು ಒಂದು ದಿನ ನಿದ್ದೆಯಲ್ಲೇ ಶಿವನ ಪಾದ ಸೇರಿದ್ರು.

ನೀರಿನ ಹರಿವು ಇದ್ದ ಕೊಡಗಿನ ಇಳಿಜಾರಿನ ಪ್ರದೇಶ. ಮುಂದೆ ಆ ಜಾಗದಲ್ಲಿ ಕಾಫಿ ತೋಟ ಮಾಡಬೇಕು ಅಂತ ಒಬ್ಬ ಅಂದುಕೊಂಡಿದ್ದರೆ, ಮತ್ತೊಬ್ಬ ರೆಸಾರ್ಟ್ ಕಟ್ಟಿ ಸ್ವಿಮ್ಮಿಂಗ್ ಪೂಲಿಗೆ ತೊರೆಯ ನೀರನ್ನು ಹರಿಸಬೇಕು ಅಂದುಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಗೌಡರು ಹೋಗಿದ್ದರಿಂದ ಜಾಗ ಹಂಚಿಕೆಯಾಗದೆ ಹಾಗೇ ಉಳಿದಿತ್ತು. ಅಪ್ಪ ಹೋದ ಮೇಲೆ ಸ್ವಲ್ಪ ಸಮಯ ಅಣ್ಣ ತಮ್ಮ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ನಿಧಾನಕ್ಕೆ ಮನೆ ಹೆಂಗಸರು ಮತ್ತು ಹಿತಶತ್ರುಗಳ ಕುಮ್ಮಕ್ಕಿನಿಂದ ಶೀತಲ ಸಮರ ಶುರುವಾಗಿತ್ತು. ಕಡೆಗೆ ಆ ಜಾಗ ಪೂರ್ತಿ ತನಗೇ ಬೇಕು ಅಂತ ಇಬ್ಬರೂ ಹಠ ಹಿಡಿದು ಆಡಿದ ಜಗಳ, ಮಾತುಕತೆಯನ್ನೇ ನಿಲ್ಲಿಸಿ ಚಾಕು ಚೂರಿ ಹಿಡಿಯೋ ಹಂತಕ್ಕೆ ಬಂದು ನಿಂತಿತ್ತು. ಸದ್ಯ ದೊಡ್ಡಪ್ಪನ ಮಧ್ಯಸ್ಥಿಕೆಯಲ್ಲಿ ನಡೆದಿದ್ದರೂ ಪೂರ್ತಿ 5 ಎಕ್ರೆ ತನಗೇ ಬೇಕೆಂದು ಇಬ್ಬರೂ ಹಠ ಹಿಡಿದು ಕೂತಿದ್ದರು. ಕುಲದೇವಿಯ ಸನ್ನಿದಿಯಲ್ಲಿ ಪ್ರತಿ ವರ್ಷ ನಾಗರಪಂಚಮಿ ಪೂಜೆಯ ಸಮಯದಲ್ಲಿ ವಾರ್ಷಿಕ ಪೂಜೆ ನಡೆಯುತ್ತಿತ್ತು. ಈ ಬಾರಿ ಪೂಜೆಗೆ ಬಂದವರು ಊರಿನ ಇತರ ಹಿರಿಯರ ಸಮ್ಮುಖದಲ್ಲಿ ಈ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡು ಹಿಡಿಯುವುದಾಗಿ ದೊಡ್ಡಪ್ಪ ಹೇಳಿದ್ದರು.

ಈ ಬಾರಿ ಮುಂಗಾರು ಸಿಕ್ಕಾಪಟ್ಟೆ ಜೋರು. ಹೇಳಿ ಕೇಳಿ ಕೊಡಗಿನ ಮಳೆ. ಬಿಡದೇ 15 ದಿನದಿಂದ ಸುರಿಯುತ್ತಿದೆ. ಕುಲದೇವರ ಗುಡಿ ಪಕ್ಕದ ತೊರೆ ತುಂಬಿ ಹರಿಯುತ್ತಿದೆ ಅಂತ ಆಳುಗಳು ಬಂದು ಇಬ್ಬರಿಗೂ ತಿಳಿಸಿದ್ದರು. ಏನೇ ಇರಲಿ ಪಂಚಮಿ ದಿನ ಜಾಗದ ಸಮಸ್ಯೆ ಇತ್ಯರ್ಥ ಆದ್ರೆ ಮಹಾಪೂಜೆ ಸಲ್ಲಿಸೋದಾಗಿ ಇಬ್ಬರೂ ಮನಸ್ಸಿನಲ್ಲೇ ದೇವಿಗೆ ಹರಕೆ ಹೊತ್ತಿದ್ರು. ನಾಗರಪಂಚಮಿ ಹಿಂದಿನ ದಿನ ಇಬ್ಬರೂ ಅದೇನೋ ಸಮಾಧಾನದಿಂದ ಮಲಗಿದ್ದರು. ಮದ್ಯ ರಾತ್ರಿ ಅದೇನೋ ಭಯಂಕರ ಸದ್ದು, ಭೂಮಿಯೆಲ್ಲ ನಡುಗಿದಂತೆ ಅನುಭವ. ಭೂಕಂಪ ಇದ್ದರೂ ಇರಬಹುದೇನೋ ಅನ್ನಿಸಿತು. ಕರೆಂಟ್ ಬೇರೆ ಇರಲಿಲ್ಲ. ಅಣ್ಣೇಗೌಡರು ಕಿಟಕಿಯಿಂದ ನೋಡುತ್ತಿದ್ದಂತೆ ಬದಿಯಲ್ಲಿದ್ದ ಹಳೆ ಹಟ್ಟಿ ನೆಲಕ್ಕೊರಗಿತ್ತು. ಸುಮಾರು ಹತ್ತು ಹನ್ನೆರಡು ಹಸುಗಳು ಹೊಸ ಹಟ್ಟಿಯಲ್ಲಿ ಇದ್ದಿದ್ದಕೆ ಉಳಿದಿದ್ದವು. ಕಾಳರಾತ್ರಿ ಮತ್ತು ಭೋರ್ಗರೆಯೋ ಮಳೆಯಲ್ಲಿ ನಿಸ್ಸಹಾಯಕರಾಗಿ ನೋಡೋದು ಬಿಟ್ಟು ಇನ್ನೇನು ಮಾಡೋದು ಸಾದ್ಯವಿರಲಿಲ್ಲ.

ರಾತ್ರೆಯಿಡೀ ಭೋರ್ಗರೆದು ನಸು ಮುಂಜಾನೆಗೆ ಮಳೆ ಸ್ವಲ್ಪ ಬಿಟ್ಟಿತ್ತು. ಅಷ್ಟರಲ್ಲೇ ಆಳು ತಿಮ್ಮ ಓಡಿ ಬಂದು ಗುಡ್ಡಕ್ಕೆ ಗುಡ್ಡವೇ ಕೊಚ್ಚಿ ಹೋಗಿದೆ ಅಂದಾಗ ಅಣ್ಣೇಗೌಡರು ದಿಗ್ಬ್ರಾಂತರಾಗಿದ್ದರು. ಓಡುತ್ತಲೇ ಗುಡ್ಡದ ಅಂಚಿನ ಹತ್ತಿರ ಹೋಗಿ ನೋಡಿದರೆ ಗುಡ್ಡದ ದೊಡ್ಡ ಭಾಗವೊಂದು ತೊರೆಯೊಂದಿಗೆ ಕೊಚ್ಚಿ ಹೋಗಿತ್ತು. ಅಲ್ಲೊಂದು ತೋಟ ಇತ್ತು ಅನ್ನೋ ಯಾವ ಕುರುಹೂ ಇರಲಿಲ್ಲ. ಕುಲದೇವರ ಗುಡಿಯ ಪ್ರಾಂಗಣ ಪೂರ್ತಿ ಕೊಚ್ಚಿ ಹೋಗಿದ್ದರೆ ಗರ್ಭ ಗುಡಿಯು ವಿಗ್ರಹ ಸಮೇತ ನೀರಿನ ರಭಸಕ್ಕೆ ತೇಲಿ ಹೋಗಿ ಗುಡ್ಡದ ತುದಿಯಲ್ಲಿ ಉರುಳಿದ್ದ ಮರವೊಂದಕ್ಕೆ ತಾಗಿ ನಿಂತಿತ್ತು. ಮಂಡಿ ಕೆಲಸದಿಂದ ತಡರಾತ್ರಿ ಊರಿಗೆ ಮರಳಿದ್ದ ಮರೀಗೌಡನೂ ವಿಷಯ ತಿಳಿದು ಆತುರಾತುರವಾಗಿ ಗುಡ್ಡದಂಚಿಗೆ ಬಂದಿದ್ದ. ಅಲ್ಲಿನ ಪರಿಸ್ಥಿತಿ ನೋಡಿ ತಮ್ಮನಿಗೆ ಸಿಡಿಲು ಬಡಿದಂತಾಗಿತ್ತು. 90ರ ದಶಕದಲ್ಲಿ ಆಸ್ತಿ ಅಳತೆ ಮಾಡಿಸಿದ್ದಾಗ ಕಂದಾಯ ಇಲಾಖೆಯವರು ಹಾಕಿದ್ದ ಗಡಿಕಲ್ಲು, ಹಂದಿ ಬರದಂತೆ ಎಳೆದಿದ್ದ ತಂತಿಬೇಲಿ, ಬೆಳೆದು ನಿಂತಿದ್ದ ಮರಗಳೆಲ್ಲ ಹೆಸರಿಲ್ಲದಂತೆ ತೊಳೆದು ಹೋಗಿತ್ತು. ರೆಸಾರ್ಟ್,ತೋಟ ಎರಡೂ ಇಲ್ಲದೆ ಅದ್ಯಾವ ಸರ್ವೇಯಲ್ಲೂ ಅಳತೆ ಮಾಡಲಾಗದಂತೆ ಅಷ್ಟೂ ಜಾಗವು ಗುಡ್ಡದ ಜೊತೆ ಕುಸಿದು, ಕೊಚ್ಚಿ ನದಿ ಸೇರಿತ್ತು. ದೂರದಲ್ಲಿ ಮೂಖನಾಗಿ ನಿಂತಿದ್ದ ಅಣ್ಣನನ್ನು ನೋಡಿ ತಮ್ಮನಿಗೆ ಅದೇನು ಅನಿಸಿತೋ, ಓಡಿ ಹೋಗಿ ಅವನನ್ನು ತಬ್ಬಿಕೊಂಡ. ಅದ್ಯಾಕೋ ಗೊತ್ತಿಲ್ಲ ಇಬ್ಬರ ಕಣ್ಣಿಂದಲೂ ಒಂದೇ ಸಮನೆ ಕಣ್ಣೀರು ಸುರಿಯುತ್ತಿತ್ತು. ಅದೆಷ್ಟೋ ದಿನದಿಂದ ಬಿಡದೆ ಸುರಿಯುತ್ತಿದ್ದ ಮಳೆ ಇವತ್ತು ಸರಿದು ನಿದಾನಕ್ಕೆ ಹೊಂಬಿಸಿಲು ಮೂಡಿತ್ತು. ಅಷ್ಟರಲ್ಲೇ ಗೌಡರ ಮನೆಯ ಹಿರಿಯ ಆಳು ಪಕ್ಕದಲ್ಲೇ ಅರಳಿದ್ದ ಹೂಗಳನ್ನು ಕೊಯ್ದು ದೇವಿಯ ಮುಡಿಗಿಟ್ಟ. ನೆರೆದಿದ್ದವರೆಲ್ಲ ಕೈ ಮುಗಿದು ದೇವಿಗೆ ತಲೆಬಾಗಿದರು. ಬಗೆ ಹರಿಯದ ಜಾಗದ ಗಡಿ ಸಮಸ್ಯೆಯನ್ನು ಪರಿಹರಿಸಲು, ಆ ದೇವಿ ಗಡಿಯೇ ಇಲ್ಲದಂತೆ ಮಾಡಿದ್ದಳು. ದೇವಿಯ ಮುಖದ ಮೇಲೆ ಮೋಡದ ಮರೆಯಿಂದ ಕಿರಣ ಸ್ಪರ್ಶಿಸುತ್ತಿರಲು ಅದೇನೋ ಹೊಸಕಳೆ ಕಾಣ್ತಾ ಇತ್ತು. ಆ ದೇವಿ ಮುಗುಳ್ನಗೆ ಬೀರಿದಂತಿತ್ತು....