ಗಣತಂತ್ರ ದಿನ - ಭಾರತದ ಹೆಮ್ಮೆ

ಗಣತಂತ್ರ ದಿನ - ಭಾರತದ ಹೆಮ್ಮೆ

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೂರು ವರ್ಷಗಳ ಬಳಿಕ ದೇಶಕ್ಕೆ ಸಂವಿಧಾನ ಬಂತು. ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ಉಳ್ಳ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಭಾರತದ ಸಂವಿಧಾನವು ನಾಗರಿಕರಾದ ನಮಗೆ ಹಲವಾರು ಅನುಕೂಲತೆ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಇದಕ್ಕೆ ಕಾರಣರಾದವರು ಸಂವಿಧಾನ ನಿರ್ಮಾತೃರು. ಸಂವಿಧಾನ ಶಿಲ್ಪಿ ಎಂದು ನಾವು ಕರೆಯುವ ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಹಲವಾರು ಮಂದಿ ಸಂವಿಧಾನ ಪಂಡಿತರು ಇದ್ದರು. 

ಸಂವಿಧಾನ ಸಿದ್ಧತೆಯಲ್ಲಿ ನಮ್ಮ ರಾಜ್ಯದವರದ್ದೂ ಒಂದು ಮಹತ್ವದ ಪಾತ್ರ ಇದೆ ಎನ್ನುವುದು ನಮಗೆ ಹೆಮ್ಮೆಯ ವಿಷಯ. ಸಂವಿಧಾನ ತಯಾರಿಕೆಗೆ ನಾಂದಿ ಹಾಡಿದವರೇ ನಮ್ಮ ಮಂಗಳೂರಿನವರಾದ ಬೆನಗಲ್ ನರಸಿಂಗ ರಾಯರು. ೧೯೪೬ರಲ್ಲೇ ಸಂವಿಧಾನ ಸಲಹಾ ಸಮಿತಿಗೆ ನೇಮಕವಾಗಿದ್ದ ಇವರು ಸಂವಿಧಾನದ ಮೊದಲ ಕರಡು ಪ್ರತಿಯನ್ನು ತಯಾರಿಸಿದವರು ಎನ್ನುತ್ತಾರೆ. ನಂತರ ಅದನ್ನು ಸಮಿತಿಯಲ್ಲಿ ಚರ್ಚಿಸಿ, ಗುಣಾವಗುಣಗಳನ್ನು ವಿಮರ್ಶೆ ಮಾಡಿ ಸಂವಿಧಾನಕ್ಕೆ ಅಂತಿಮ ರೂಪ ನೀಡಲಾಯಿತಂತೆ. ಆ ಸಮಯವೇ ಸುಮಾರು ೨೦೦೦ ತಿದ್ದುಪಡಿಗಳನ್ನು ಮಾಡಲಾಯಿತು. ಕಡೆಗೆ ೧೯೪೯ರ ನವೆಂಬರ್ ೨೬ರಂದು ಸಂವಿಧಾನದ ಅಂತಿಮ ಪ್ರತಿ ಸಿದ್ಧವಾಯಿತು. ೧೯೫೦ ಜನವರಿ ೨೬ರಂದು ಜಾರಿಗೆ ಬಂದು ಭಾರತ ಗಣರಾಜ್ಯವಾಯಿತು.

ಸಂವಿಧಾನ ಸಮಿತಿಯಲ್ಲಿ ೩೮೯ ಸದಸ್ಯರಿದ್ದರು ಅದರಲ್ಲಿ ಮಹಿಳೆಯರ ಸಂಖ್ಯೆ ಕೇವಲ ೧೫. ಅವರಲ್ಲಿ ಪ್ರಮುಖರು ಅಮ್ಮು ಸ್ವಾಮಿನಾಥನ್, ದುರ್ಗಾಬಾಯಿ ದೇಶಮುಖ್, ಪೂರ್ಣಿಮಾ ಬ್ಯಾನರ್ಜಿ, ರಾಜಕುಮಾರಿ ಅಮೃತ್ ಕೌರ್ (ಇವರು ಸ್ವತಂತ್ರ ಭಾರತದ ಮೊದಲ ಆರೋಗ್ಯ ಸಚಿವರೂ ಆಗಿದ್ದರು), ರೇಣುಕಾ ರೇ, ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಆನೀ ಮಸ್ಕರೀನ್. ಸ್ವತಂತ್ರ ಭಾರತದ ಮೊದಲ ಸಂವಿಧಾನ ಸಭೆಯನ್ನೇ ಮೊದಲ ಸಂಸತ್ತು ಎಂದು ಪರಿಗಣಿಸಲಾಗಿದೆ. 

ಸಂವಿಧಾನ ಜಾರಿಗೆ ಬಂದ ಕೂಡಲೇ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಮೊದಲ ರಾಷ್ಟ್ರಪತಿಯಾಗಿ ಪ್ರತಿಜ್ಞೆಯನ್ನು ಸ್ವೀಕಾರ ಮಾಡಿದರು. ನಂತರ ತೆರೆದ ಸಾರೋಟಿನಲ್ಲಿ ರಾಷ್ಟ್ರಪತಿಗಳನ್ನು ಇರ್ವಿನ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ನಂತರ ರಾಜೇಂದ್ರ ಪ್ರಸಾದ್ ಅವರು ಸೇನಾ ಜೀಪನ್ನೇರಿ ಭದ್ರತಾ ಪಡೆಗಳಿಂದ ವಂದನೆ ಸ್ವೀಕರಿಸಿ ಧ್ವಜಾರೋಹಣ ಮಾಡಿದರು. ಮೊದಲ ಗಣರಾಜ್ಯೋತ್ಸವಕ್ಕೆ ವಿದೇಶೀ ಅತಿಥಿಯಾಗಿದ್ದವರು ಇಂಡೋನೇಷಿಯಾದ ಅಧ್ಯಕ್ಷ ಸುಕಾರ್ನೋ. ಅವರ ಆಗಮನದಿಂದಾಗಿ ನಂತರದ ದಿನಗಳಲ್ಲಿ ಭಾರತ- ಇಂಡೋನೇಷಿಯಾ ನಡುವೆ ಮೈತ್ರಿಗಳು ಬಲವಾದವು.

೧೯೫೦ರಿಂದ ೧೯೫೪ರವರೆಗೆ ಗಣರಾಜ್ಯೋತ್ಸವವನ್ನು ಆಚರಿಸಲು ನಿರ್ದಿಷ್ಟ ಜಾಗ ನಿಗದಿಯಾಗಿರಲಿಲ್ಲ. ಮೊದಲು ಕೆಂಪು ಕೋಟೆ, ನಂತರದ ವರ್ಷಗಳಲ್ಲಿ ನ್ಯಾಷನಲ್ ಕ್ರೀಡಾಂಗಣ, ಕಿಂಗ್ಸ್ ವೇ ಕ್ಯಾಂಪ್ ಮತ್ತು ರಾಮಲೀಲಾ ಮೈದಾನದಲ್ಲಿ ನಡೆಯಿತು. ೧೯೫೫ರಿಂದ ರಾಜಪಥದಲ್ಲಿ ಗಣರಾಜ್ಯೋತ್ಸವವು ನಡೆಯಲು ಪ್ರಾರಂಭವಾಯಿತು. ಅಲ್ಲಿಂದ ಇಂದಿನವರೆಗೆ ಗಣರಾಜ್ಯೋತ್ಸವದ ಪಥ ಸಂಚಲನವು ರಾಜಪಥದಲ್ಲೇ ನಡೆಯುತ್ತದೆ. ಮೂರೂ ಸೇನೆಯ ಅಧಿನಾಯಕರಾದ ರಾಷ್ಟಪತಿಯವರು ಸೇನಾ ಗೌರವವನ್ನು ಸ್ವೀಕರಿಸುತ್ತಾರೆ. ವಿವಿಧ ರಾಜ್ಯಗಳ ವಿಶೇಷತೆಗಳನ್ನು ಸಾರುವ ಸ್ಥಬ್ಧ ಚಿತ್ರಗಳು ಈ ಪಥದಲ್ಲಿ ಸಂಚರಿಸುತ್ತವೆ. ಕೋವಿಡ್ ೧೯ರ ಕಾರಣದಿಂದ ಈ ವರ್ಷ ವಿದೇಶಿ ಅತಿಥಿಯ ಆಗಮನವಿರಲಿಲ್ಲ. 

ಗಣರಾಜ್ಯೋತ್ಸವದ ಮುನ್ನಾ ದಿನ ದೇಶಕ್ಕಾಗಿ ಜೀವತೆತ್ತ ಹುತಾತ್ಮರಿಗೆ, ಧೀರ ನಾಗರಿಕರಿಗೆ, ಸಾಧಕರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಭಾರತ ರತ್ನ (ಪ್ರತೀ ವರ್ಷ ಘೋಷಿಸಲೇ ಬೇಕೆಂಬ ನಿಯಮವಿಲ್ಲ) ಮೂರು ಬಗೆಯ ಪದ್ಮ ಪ್ರಶಸ್ತಿಗಳು, ಯೋಧರಿಗೆ ನೀಡಲಾಗುವ ಶೌರ್ಯ ಪ್ರಶಸ್ತಿಗಳು, ರಾಷ್ಟ್ರಪತಿಯವರ ಪೋಲೀಸ್ ಪದಕ, ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಹಾಗೂ ಜೀವನ ರಕ್ಷಾ ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ.

ಪ್ರತೀ ವರ್ಷ ನಾವು ಆಚರಿಸುವ ಭಾರತದ ಗಣತಂತ್ರದಿನವು ನಮ್ಮ ಹೆಮ್ಮೆಯ ಸಂಕೇತವಾಗಿದೆ. ಭಾರತವು ಪ್ರಜಾಪ್ರಭುತ್ವ ದೇಶ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಕಲ್ಪನೆಯಲ್ಲಿ ನಾವು ಬಾಳ್ವೆ ಸಾಗಿಸುತ್ತಿದ್ದೇವೆ. ನಮ್ಮ ಹಿರಿಯರು ನೀಡಿದ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿರಲಿ ಎಂಬುದೇ ಈ ಲೇಖನದ ಆಶಯ. 

ಪೆನ್ಸಿಲ್ ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು