ಗಣರಾಜ್ಯದ ಈ ದಿನ..
ಇತ್ತೀಚಿನ ದಿನಗಳಲಿ
ಎಂದಾದರು ನೆನಪಿದೆಯೆ?
ಗಣರಾಜ್ಯವ ಆಚರಿಸಿದ್ದು
ದಿನವೆಲ್ಲಾ ಸುದ್ದಿ ಸಂಭ್ರಮ ಸದ್ದು? ||
ಹಿಂದೆಂದಾದರು ನಡೆದಿತ್ತೆ?
ದಿನವೆಲ್ಲ ಆಚರಿಸಿದ ಹಬ್ವ
ಟೀವಿ ಚಾನೆಲ್ಲು ಟ್ವಿಟ್ಟರು ಶೆಟ್ಟರು
ಫೇಸ್ಬುಕ್ಕು ಭಟ್ಟರು ಹಾಡಿ ಹೊಗಳಿದ್ದು ? ||
ಸಾರ್ವತ್ರಿಕ ಹಬ್ಬದ ರಜೆಗೆ
ಎಡತಾಕಿದ್ದು ಟಾಕೀಸು, ಅಲೆದಾಟ
ಟ್ರಿಪ್ಪು ಟೂರು ಎಂದೆಲ್ಲ ರಜೆ ಸುತ್ತು
ಕಳೆದಿದ್ದಷ್ಟೆ ನೆನಪು, ಹಬ್ವವೆಲ್ಲಿತ್ತು ? ||
ಇಂದು ಗಾಂಧಿ ಬರಲು ಸ್ವಚ್ಚ
ಗಣರಾಜ್ಯಕೆ ಹಾಲಿವುಡ್ಡಿನ ಕಳೆ
ನಾಡ ಹಬ್ವಗಳಿಗೆಲ್ಲಿಯದೀ ಕಸು ?
ತುಂಬಿತೆಲ್ಲಿಂದ ಇದ್ದಕ್ಕಿದ್ದಂತೆ ಉತ್ಸಾಹ?! ||
ಇನ್ನೆಲ್ಲ ಬರಿಯ ರಜೆಯಾಗದು
ಆಚರಣೆ ಸರ್ಕಾರಿ ಸರಕಾಗದು
ಚೈತನ್ಯವಾವುದೊ ತುಂಬಿ ಪಸರಿಸೆ
ಗಲ್ಲಿ ಬೀದಿ ಮನೆ ಮನಗಳಲಿ ಮತ್ತೆ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಗಣರಾಜ್ಯದ ಈ ದಿನ..
ನಾಗೇಶ ಮೈಸೂರು ರವರಿಗೆ ವಂದನೆಗಳು
ಗಣ ರಾಜ್ಯದ ಆಚರಣೆಯ ಅಂದಿನ ದಿನಗಳ ನೆನಪನ್ನು ಇಂದಿನ ಆಚರಣೆಯೊಂದಿಗೆ ತಾಳೆಹಾಕಿ ನೋಡಿದ ಕ್ರಮ ಸೊಗಸಾಗಿ ಪಡಿಮೂಡಿದೆ. ಕೊನೆಯ ನುಡಿ ಹೊರಡಿಸುವ ದ್ವನಿ ಬಹಳ ಅರ್ಥಪೂರ್ಣ, ಉತ್ತಮ ಸಕಾಲಿಕ ಕವನ ಧನ್ಯವಾದಗಳು.
In reply to ಉ: ಗಣರಾಜ್ಯದ ಈ ದಿನ.. by H A Patil
ಉ: ಗಣರಾಜ್ಯದ ಈ ದಿನ..
ಪಾಟೀಲರೆ ತಮ್ಮ ಎಂದಿನ ಮೆಚ್ಚುಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು. ನಾಡಿನ ರಾಷ್ಟ್ರೀಯ ಹಬ್ಬಗಳ ಕುರಿತಾದ ಈ ಲವಲವಿಕೆ, ಉತ್ಸಾಹ ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ. ದೇಶಾಭಿಮಾನ, ಏಕತೆಗಳತ್ತ ಯಾವುದೆ ಸದ್ದುಗದ್ದಲ, ಆಡಂಬರವಿರದೆ ತುಯ್ಯುವ ಈ ಆಚರಣೆಗಳು ಹೊಸ ಪೀಳಿಗೆಯವರಲ್ಲಿ ಆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಹಳಬರಲ್ಲೂ ಬತ್ತಿದ್ದ ಉತ್ಸಾಹವನ್ನು ಮತ್ತೆ ಚಿಮ್ಮಿಸುವುದರಿಂದ ಆ ಆಚರಣೆಗೂ ಒಂದು ಅರ್ಥ ಬರುತ್ತದೆ. ಅದು ಹೀಗೆ ಮುಂದುವರೆಯಲೆಂಸು ಆಶಿಸೋಣ.
ಉ: ಗಣರಾಜ್ಯದ ಈ ದಿನ..
ಗಣರಾಜ್ಯೋತ್ಸವದಂದೇ ಬೆಂಗಳೂರಿನಲ್ಲಿ ನನ್ನ ಸೋದರಮಾವನ ಮಗಳ ಮದುವೆಯಿತ್ತು. ಅಂದು ಮದುವೆ ಸಮಾರಂಭದ ನಡುವೆಯೇ ಭಾರತಮಾತೆಯನ್ನು ಸ್ಮರಿಸಿದೆವು, ಜನಗಣಮನ ಮತ್ತು ವಂದೇಮಾತರಮ್ ಹಾಡಿದೆವು. ಭಾಗವಹಿಸಿದ ಎಲ್ಲರಿಗೂ ಆಶ್ಚರ್ಯ ಮತ್ತು ಆನಂದವಾಗಿತ್ತು.
In reply to ಉ: ಗಣರಾಜ್ಯದ ಈ ದಿನ.. by kavinagaraj
ಉ: ಗಣರಾಜ್ಯದ ಈ ದಿನ..
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನೀವು ಹೇಳಿದ ವಿಶೇಷವೆ ಈಚಿನ ಅಚ್ಚರಿ ಬೆಳವಣಿಗೆ. ನಾನೂ ಕೂಡ ಬಿಸಿನೆಸ್ ಟ್ರಿಪ್ಪಿನಲ್ಲಿ ಒಂದು ಹೋಟೆಲಿನಲ್ಲಿ ತಂಗಿದ್ದೆ. ಅಲೂ ಕೂಡ ತಂಗಿದ್ದವರೆಲ್ಲರಿಗು ಮ್ಯಾನೇಜ್ಮೆಂಟಿನಿಂದ ಒಂದು ಪತ್ರ ಬರೆದಿದ್ದರು - ಎರಡು ದಿನದ ನಂತರ ಹೋಟೆಲಿನಲ್ಲಿ ಆಚರಿಸುತ್ತಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸುತ್ತ! ಅದೊಂದು ರಜೆ ಎನ್ನುವ ಭಾವಕ್ಕಿಂತಲು, ಅದೊಂದು ಸಡಗರ, ಸಂಭ್ರಮದ ಹಬ್ಬವೆಂಬ ಭಾವನೆ ಯಾವುದೆ ಒತ್ತಾಯವಿಲ್ಲದೆ ತಂತಾನೆ ಅನಾವರಣಗೊಳ್ಳುತ್ತಿರುವುದು ನಿಜಕ್ಕೂ ಶುಭ ಸಂಕೇತ.