ಗಣರಾಜ್ಯೋತ್ಸವ ದಿನದ ಸ್ವಾರಸ್ಯಕರ ಸಂಗತಿಗಳು
ಪ್ರತೀ ವರ್ಷ ಜನವರಿ ೨೬ ರಂದು ಬರುವ ಗಣರಾಜ್ಯೋತ್ಸವ ದಿನ ಪ್ರತಿಯೊಬ್ಬ ಭಾರತೀಯನಿಗೆ ಹಬ್ಬವೇ ಸರಿ. ಈ ವರ್ಷ ೭೫ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದೇವೆ. ಜನವರಿ ೨೬, ೧೯೫೦ರಲ್ಲಿ ಭಾರತದ ಸಂವಿಧಾನವು ಜಾರಿಯಾದ ದಿನವನ್ನು ನಾವು ಗಣರಾಜ್ಯೋತ್ಸವ ದಿನ ಎಂದು ಆಚರಿಸುತ್ತೇವೆ. ಇದು ಭಾರತೀಯ ನಾಗರಿಕರಾದ ನಮಗೆಲ್ಲರಿಗೂ ಸಿಕ್ಕಂತಹ ಗೌರವಯುತ ದಿನ. ಅದರಲ್ಲೂ ಬ್ರಿಟಿಷರು ರೂಪಿಸಿದ್ದ ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ೧೯೩೫ ಅನ್ನು ಬದಲಿಸಿದ ದಿನ. ಗಣರಾಜ್ಯೋತ್ಸವದ ದಿನ ನವ ದೆಹಲಿಯಲ್ಲಿ ನಡೆಯುವ ವಿಶೇಷ ಪೆರೇಡ್ ನೋಡಲು ನಿಜಕ್ಕೂ ಅದ್ಬುತ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಎದುರು ನಡೆಯುವ ಈ ಪರೇಡ್ ನಲ್ಲಿ ನಮ್ಮ ದೇಶದ ರಕ್ಷಣಾ ಪಡೆಗಳು, ಆಯ್ದ ರಾಜ್ಯಗಳ ವಿಶೇಷತೆಯನ್ನು ಬಿಂಬಿಸುವ ಸ್ಥಬ್ಧ ಚಿತ್ರಗಳು ಭಾಗವಹಿಸುತ್ತವೆ. ಈ ಲೇಖನದಲ್ಲಿ ಗಣರಾಜ್ಯೋತ್ಸವ ದಿನದ ಬಗೆಗಿನ ಕೆಲವೊಂದು ಮುಖ್ಯ ಮತ್ತು ಆಸಕ್ತಿಕರ ಅಂಶಗಳನ್ನು ನಿಮ್ಮ ಮುಂದೆ ತೆರೆದಿಡಲು ಬಯಸುತ್ತೇನೆ..
ಜನವರಿ ೨೬ನ್ನು ಏಕಾಗಿ ಆಯ್ಕೆ ಮಾಡಲಾಯಿತು? : ಗಣರಾಜ್ಯೋತ್ಸವದ ದಿವಸವನ್ನು ಜನವರಿ ೨೬ ರಂದು ಆಯ್ಕೆ ಮಾಡಿದ ಕಾರಣವೆಂದರೆ, ಅದು ಪೂರ್ಣ ಸ್ವರಾಜ್ಯ ದಿನದ ವಾರ್ಷಿಕೋತ್ಸವ ದಿನವಾಗಿತ್ತು ( ಸ್ವರಾಜ್ಯ ದಿನ - ೨೬ನೇ ಜನವರಿ ೧೯೩೦). ೨೬ನೇ ಜನವರಿಯ ದಿನದಂದೇ ಗಣರಾಜ್ಯೋತ್ಸವ ದಿನ ಎಂದು ಘೋಷಿಸಿದ ಕಾರಣ ಏನೆಂದರೆ, ೧೯೩೦ನೇ ಇಸವಿಯ ಇದೇ ದಿನದಂದು ಬ್ರಿಟಿಷರ ಆಡಳಿತದ ದಬ್ಬಾಳಿಕೆಯಿಂದ ಬೇಸತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯ (ಪೂರ್ಣ ಸ್ವರಾಜ್) ಎಂದು ಘೋಷಣೆ ಮಾಡಿತು.
ಭಾರತ ದೇಶದ ಅತೀ ದೊಡ್ಡ ಸಂವಿಧಾನ: ಭಾರತೀಯ ಸಂವಿಧಾನ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಉದ್ದನೆಯ ಸಂವಿಧಾನ ಎಂದು ಗುರುತಿಸಲ್ಪಟ್ಟಿದೆ. ನಮ್ಮ ಸಂವಿದಾನದಲ್ಲಿ ಆರಂಭದ ಸಮಯದಲ್ಲಿ ೨೯೫ ವಿಧಿಗಳಿದ್ದು, ೨೨ ಭಾಗಗಳು ಮತ್ತು ೮ ಸಂವಿಧಾನದ ಪರಿಚ್ಛೇದಗಳು ಸೇರಿವೆ. ಇದರಲ್ಲಿ ಏನಿಲ್ಲ ಅಂದರೂ ಸುಮಾರು ೮೦ ಸಾವಿರದಷ್ಟು ಪದಗಳಿವೆ. ಆದರೆ ಸಪ್ಟಂಬರ್ ೨೦೧೨ರಲ್ಲಿ ಸಂವಿಧಾನವು ಪ್ರಸ್ತಾವನೆಯ ಭಾಗವನ್ನು ಹೊಂದಿ, ೨೫ ಭಾಗಗಳಾಗಿ ವಿಂಗಡನೆಗೊಂಡು ೪೪೮ ವಿಧಿಗಳನ್ನು, ೧೨ ಸಂವಿಧಾನದ ಪರಿಚ್ಛೇದಗಳನ್ನು, ೫ ಅನುಬಂಧ ಮತ್ತು ೧೦೦ ತಿದ್ದುಪಡಿಗಳನ್ನು ಒಳಗೊಂಡಿದೆ. ನೆನಪಿರಲಿ, ಹೊಸ ತಿದ್ದುಪಡಿ ಮಾಡಿದ ಸಂವಿಧಾನ ೧ ನೇ ಆಗಸ್ಟ್ ೨೦೧೫ರಂದು ಜಾರಿಗೆ ಬಂದಿತು.
ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ ಎಷ್ಟು ಗೊತ್ತೇ?: ಡಾ. ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿಗೆ ಸಂವಿಧಾನವನ್ನು ರೂಪುಗೊಳಿಸಲು ಸುಮಾರು ೨ ವರ್ಷ, ೧೧ ತಿಂಗಳು ಮತ್ತು ೧೮ ದಿನಗಳೇ ಬೇಕಾಯಿತು. ಆ ಸಮಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕಾನ್ಸ್ಟಿಟ್ಯುಯೆಂಟ್ ಅಸಂಬ್ಲಿ ಸಂವಿಧಾನವನ್ನು ರೂಪುಗೊಳಿಸಲು ಒಂದು ಕರಡು ಸಮಿತಿಯನ್ನು ಏರ್ಪಾಡು ಮಾಡಿತು. ಈ ಸಮಿತಿ ಸಂವಿಧಾನದ ಕರಡನ್ನು ಸಿದ್ಧಪಡಿಸಲು ಹಲವಾರು ಸಭೆಗಳನ್ನು ಕರೆದು, ಅನೇಕ ಮಜಲುಗಳನ್ನು ದಾಟಿ ಸರಿ ಸುಮಾರು ೨ ವರ್ಷ, ೧೧ ತಿಂಗಳು ಮತ್ತು ೧೮ ದಿನಗಳನ್ನು ತೆಗೆದುಕೊಂಡಿತು.
ಮೊದಲ ಗಣರಾಜ್ಯೋತ್ಸವ ಮೆರವಣಿಗೆ: ರಾಜಪಥ (ಈಗ ಕರ್ತವ್ಯ ಪಥ) ದಲ್ಲಿ ಮೊದಲನೆಯ ಗಣರಾಜ್ಯೋತ್ಸವ ದಿನದ ಮೆರವಣಿಗೆಯನ್ನು ೧೯೫೫ರಲ್ಲಿ ನಡೆಸಲಾಯಿತು. ಐತಿಹಾಸಿಕ ರಾಜಪಥ ಜನವರಿ ೨೬ರ ಪಥಸಂಚಲನಕ್ಕೆ (ಪರೇಡ್) ಉದಾಹರಣೆಯಾಗಿದೆ. ಮೊದಲನೆಯ ಗಣರಾಜ್ಯೋತ್ಸವದ ಪೆರೇಡನ್ನು ಹೊಸ ದೆಹಲಿಯಲ್ಲಿ ೧೯೫೦ರಲ್ಲಿ ನಡೆಸಲಾಯಿತು. ಆ ಸಮಯದಲ್ಲಿ ರಾಜೇಂದ್ರ ಪ್ರಸಾದ್ ರವರು ರಾಷ್ಟ್ರಪತಿಗಳಾಗಿದ್ದರು.
೨೧ ಗನ್ನುಗಳ ಗೌರವ ಅಭಿನಂದನೆ : ಭಾರತದ ರಾಷ್ಟ್ರಪತಿಗಳು ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಾರಿಸುವ ಸಮಯದಲ್ಲಿ ನೌಕಾದಳ ಮತ್ತು ಸೇನಾದಳ ೨೧ ಗನ್ನುಗಳಿಂದ ಗುಂಡು ಹಾರಿಸಿ ಅಭಿನಂದನೆ ಸಲ್ಲಿಸುತ್ತಾರೆ. ಇದು ನೋಡಲು ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಮತ್ತು ಮೈ ರೋಮಾಂಚನಗೊಳ್ಳುತ್ತದೆ. ರಾಷ್ಟ್ರಪತಿಗಳು ಈ ದಿನದಂದು ಸೇನೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮೊದಲಾದ ಪದಕಗಳನ್ನು ನೀಡಿ ಗೌರವಿಸುತ್ತಾರೆ. ಆ ವ್ಯಕ್ತಿ ಹುತಾತ್ಮನಾಗಿದ್ದರೆ ಅವರ ಮನೆಯವರಿಗೆ ಈ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.
ವಿದೇಶೀ ಅತಿಥಿ: ಭಾರತದ ಗಣರಾಜ್ಯೋತ್ಸವದ ಸಮಯದಲ್ಲಿ ಮಿತ್ರ ರಾಷ್ಟ್ರವೊಂದರ ಮುಖ್ಯಸ್ಥರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಅವರನ್ನು ಸಕಲ ಗೌರವಗಳೊಂದಿಗೆ ಗಣರಾಜ್ಯೋತ್ಸವ ಪರೇಡ್ ನೋಡಲು ಅನುವು ಮಾಡಿಕೊಡಲಾಗುತ್ತದೆ. ಈ ವರ್ಷ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರನ್ನು ಆಹ್ವಾನಿಸಿದ್ದರೂ ಅಲ್ಲಿ ಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿರುವ ಕಾರಣ ಅವರಿಗೆ ಬರಲಾಗುತ್ತಿಲ್ಲ. ಈ ಕಾರಣದಿಂದ ಫ್ರಾನ್ಸ್ ನ ಅಧ್ಯಕ್ಷರಾದ ಇಮ್ಮಾನುಯೆಲ್ ಮ್ಯಾಕ್ರಾನ್ ಅವರನ್ನು ಆಹ್ವಾನಿಸಲಾಗಿದೆ.
ಭಾರತಕ್ಕೆ ಪ್ರವಾಸಕ್ಕೆ ಬಂದ ವಿದೇಶಿಯೊಬ್ಬ ದೆಹಲಿಯ ಸೌಂದರ್ಯದ ಬಗ್ಗೆ ಹೇಳುವ ಮಾತುಗಳು " ವಸಂತ ಋತುವಿನ ಆ ಸಮಯದಲ್ಲಿ ನಾನು ಮತ್ತು ನನ್ನ ಕುಟುಂಬ ಕೆಂಪು ಕೋಟೆಯನ್ನು ನೋಡಲು ದೆಹಲಿಗೆ ಪ್ರವಾಸಕ್ಕೆಂದು ಬಂದಿದ್ದೆವು. ಕೆಂಪು ಕೋಟೆ ತುಂಬಾ ದೊಡ್ಡದಾಗಿದ್ದು, ವಿಶಾಲವಾದ ಜಾಗವನ್ನು ಆಕ್ರಮಿಸಿಕೊಂಡಿದೆ. ನಾನಂತೂ ಕೆಂಪು ಕೋಟೆಯ ದರ್ಶನದಿಂದ ಬಹಳ ಪ್ರಸನ್ನನಾಗಿ ಚಾಂದಿನಿ ಚೌಕ್ ಮಾರ್ಕೆಟ್ ಗೆ ಹೋಗಿ ಬಹಳ ಕಡಿಮೆ ಬೆಲೆಗೆ ಸಿಗುವಂತಹ ಅತ್ಯುತ್ತಮ ವಸ್ತುಗಳನ್ನು ಕೊಂಡುಕೊಳ್ಳಲು ಶುರು ಮಾಡಿದೆ. ಅಂದಿನ ರಾತ್ರಿ ರಾಮಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಪ್ರದರ್ಶನ ಮಾಡಿದರು. ದೆಹಲಿ ಒಂದು ಸುಂದರ ರಮಣೀಯ ಸ್ಥಳವಾಗಿದ್ದು, ನೋಡಲು ಬರುವ ಪ್ರವಾಸಿಗರಿಗೆ ಐತಿಹಾಸಿಕ ಮಾಹಿತಿಯನ್ನು ಸಾರುವ ಒಂದು ಅದ್ಭುತ ಪ್ರದೇಶವಾಗಿದೆ.”
ಆದ್ದರಿಂದ ನನ್ನ ಸಲಹೆ ಇಷ್ಟೇ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೆಹಲಿಗೆ ಭೇಟಿ ನೀಡಿ ಇಲ್ಲಿನ ರಮಣೀಯತೆಯನ್ನು ಕಣ್ತುಂಬಿಕೊಳ್ಳಬೇಕು. ಏಕೆಂದರೆ ಆಗಿನ ದೆಹಲಿ ಈಗಿನ ನವದೆಹಲಿ ಆಗಿದೆ. ಜೊತೆಗೆ ನಮ್ಮ ಭಾರತ ದೇಶದ ರಾಜಧಾನಿ ಬೇರೆ. ಗಣರಾಜ್ಯೋತ್ಸವದ ಸಮಯದಲ್ಲಿ ನವದೆಹಲಿಗೆ ಹೋದರೆ ಭಾರತೀಯ ಗಣತಂತ್ರದ ಅತ್ಯದ್ಭುತ ದೃಶ್ಯಗಳು ನಿಮಗೆ ಕಾಣಸಿಗುತ್ತವೆ.
ಚಿತ್ರ ಕೃಪೆ: ಅಂತರ್ಜಾಲ ತಾಣ