ಗಣಿಗಾರಿಕೆ ನಿಷೇಧ : ಕೆ ಆರ್ ಎಸ್ ಸುರಕ್ಷೆಗೆ ಮಹತ್ವದ ಹೆಜ್ಜೆ

ಗಣಿಗಾರಿಕೆ ನಿಷೇಧ : ಕೆ ಆರ್ ಎಸ್ ಸುರಕ್ಷೆಗೆ ಮಹತ್ವದ ಹೆಜ್ಜೆ

ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು ನಿಷೇಧಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿರುವುದು ಸಾಕಷ್ಟು ದೂರಗಾಮಿ ಪರಿಣಾಮಗಳನ್ನು ಬೀರುವ ನಿರೀಕ್ಷೆ ಇದೆ. ಒಂದು ಸರಕಾರ ಮಾಡ ಬೇಕಾದ ಕೆಲಸವನ್ನು ಹೈಕೋರ್ಟ್ ಮಾಡುವ ಮೂಲಕ ಕರ್ನಾಟಕದ ಅತ್ಯಂತ ಹೆಮ್ಮೆಯ ಕೆ ಆರ್ ಎಸ್ ಜಲಾಶಯವನ್ನು ಉಳಿಸುವಲ್ಲಿ ತನ್ನ ಕೊಡುಗೆ ನೀಡಿದೆ. ಹೋರಾಟಗಾರರು ನಡೆಸಿದ ಕೆ ಆರ್ ಎಸ್ ಉಳಿಸಿ ಆಂದೋಲನಕ್ಕೆ ಸಿಕ್ಕ ಜಯವಾಗಿದೆ. 

ಶತಮಾನದ ಇತಿಹಾಸ ಇರುವ ಕೆ ಆರ್ ಎಸ್ ಅಣೆಕಟ್ಟಿನ ಸುರಕ್ಷೆ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಆತಂಕ ವ್ಯಕ್ತವಾಗುತ್ತಲೇ ಇತ್ತು. ಈ ಕುರಿತು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕೇಂದ್ರ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಗೆ ಅಣೆಕಟ್ಟಿನ ಸುರಕ್ಷೆ ಬಗ್ಗೆ ಅಧ್ಯಯನ ನಡೆಸಲು ಸೂಚಿಸಿದೆ. ಕರ್ನಾಟಕದ ಜೀವನದಿ ಎಂದು ಹೇಳುವ ಕಾವೇರಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟಿನಿಂದಾಗಿ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿರುವುದು ಸರ್ವ ವೇದ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಅಣೆಕಟ್ಟಿನ ಸುರಕ್ಷೆ ಬಗ್ಗೆ ಆತಂಕ ವ್ಯಕ್ತವಾದರೂ ಯಾವ ಜನಪ್ರತಿನಿಧಿಗಳಾಗಲಿ, ಸರಕಾರಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಒಂದು ವೇಳೆ ಅಣೆಕಟ್ಟಿಗೆ ಒಂದಿಷ್ಟೂ ಹೆಚ್ಚು ಕಡಿಮೆ ಆದರೂ ಅದರಿಂದಾಗುವ ಅನಾಹುತವನ್ನು ಊಹಿಸಲೂ ಅಸಾಧ್ಯ.

ಹಲವು ವರ್ಷಗಳಿಂದ ಕೆ ಆರ್ ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದೆಂಬ ಕೂಗು ಕೇಳೆಬಂದಿತ್ತು. ಇದನ್ನು ನಿಷೇಧಿಸಬೇಕೆಂದು ವಿವಿಧ ಸರಕಾರಗಳ ಮೇಲೆ ಒತ್ತಡ ಹೇರಲಾಗಿತ್ತಾದರೂ, ಇದುವರೆಗೆ ಪ್ರಯೋಜನವಾಗಿರಲಿಲ್ಲ. ಗಣಿಗಾರಿಕೆಯಿಂದ ಈ ಭಾಗದ ಬೇಬಿಬೆಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹಸುರು ಮಾಯವಾಗಿತ್ತು. ಎಲ್ಲೆಲ್ಲಿಯೂ ಕಲ್ಲು ಬಂಡೆಗಳೇ ಗೋಚರವಾಗುತ್ತಿತ್ತು. ನಿರೀಕ್ಷೆಗೂ ಮೀರಿದ ದೊಡ್ದ ದೊಡ್ಡ ಕುಳಿಗಳು, ಹಳ್ಳಗಳು ನಿರ್ಮಾಣಗೊಂಡಿದ್ದವು. ಧೂಳಿನಿಂದ ಆವೃತವಾದ ಭೂಮಿ ಫಲವತ್ತತೆ ಕಳೆದುಕೊಂಡಿತ್ತು. ಬೆಳೆಗಳು ಇಳುವರಿ ಬರುತ್ತಿರಲಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಪ್ರಾಣಿ, ಪಕ್ಷಿಗಳಿಗೆ ಆಹಾರ ಇಲ್ಲದಂತಾಗಿತ್ತು. ಗಣಿಗಾರಿಕೆಯಿಂದ ಅಕ್ಕಪಕ್ಕದ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿದ್ದವು. ಬೇಬಿಬೆಟ್ಟದಲ್ಲಿರುವ ಮಠದ ಗೋಡೆಗಳು ಬಿರುಕು ಬಿಟ್ಟಿದ್ದವು. ಒಟ್ಟಾರೆ ಕಲ್ಲು ಗಣಿಗಾರಿಕೆಯಿಂದ ಇಡೀ ವಾತಾವರಣವೇ ಕಲುಷಿತಗೊಂಡು ಸಾಕಷ್ಟು ತೊಂದರೆ, ಸಮಸ್ಯೆಗಳು ಉದ್ಭವಗೊಂಡಿದ್ದವು.

೨೦೧೮ರ ಸೆಪ್ಟೆಂಬರ್ ೨೫ರಂದು ಕೇಳಿ ಬಂದ ಸ್ಫೋಟದ ಶಬ್ಧ ಆ ಭಾಗದ ಚಿತ್ರಣವನ್ನೇ ಬದಲಿಸಿತು. ಸ್ಫೋಟದ ಶಬ್ಧ ಕೆ ಆರ್ ಎಸ್ ನ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆಯ ಅಲೆಗಳು ದಾಖಲಾಗಿತ್ತು. ಇದರಿಂದ ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿಗಳೂ ಹರಿದಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಈ ಕುರಿತು ಅಧ್ಯಯನ ನಡೆಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಇಲ್ಲಿ ಗಣಿಗಾರಿಕೆ ನಡೆಸದಂತೆ ಎಚ್ಚರಿಸಿತ್ತು. ಈ ವರದಿಯ ಪರಿಣಾಮವೇ ಇದೀಗ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಇದು ಬರೆ ಕೆ ಆರ್ ಎಸ್ ಗೆ ಸೀಮಿತವಾಗಬಾರದು. ಯಾವುದೇ ಅಣೆಕಟ್ಟಿನ ಸುತ್ತಮುತ್ತಲು ಇಂಥ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು ಹಾಗೂ ರಾಜ್ಯ ಎಲ್ಲ ಅಣೆಕಟ್ಟುಗಳ ಸುರಕ್ಷೆ ಬಗ್ಗೆ ಆಗಿಂದಾಗ್ಗೆ ಪರಾಮರ್ಶೆ ನಡೆಸಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೯-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ