ಗಣೇಶನ ಮೆರವಣಿಗೆ ವೇಳೆ ಕೋಮುಘರ್ಷಣೆ ಆಘಾತಕಾರಿ

ಗಣೇಶನ ಮೆರವಣಿಗೆ ವೇಳೆ ಕೋಮುಘರ್ಷಣೆ ಆಘಾತಕಾರಿ

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶನ ವಿಸರ್ಜನೆಗೂ ಮುನ್ನ ನಡೆದ ಮೆರವಣಿಗೆಯ ಸಂದರ್ಭದಲ್ಲಿ ತೀವ್ರ ಘರ್ಷಣೆ ಉಂಟಾಗಿದೆ. ಮೆರವಣಿಗೆಯು ದರ್ಗಾದ ಬಳಿ ಬಂದಾಗ ಒಂದು ಕೋಮಿನವರು ಕಲ್ಲು, ಬಾಟಲಿಗಳ ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಗಲಭೆಗೆ ಕಾರಣರಾದವರ ಬಳಿ ಮಚ್ಚು, ಲಾಂಗ್ ಗಳು ಕೂಡ ಪೋಲೀಸರಿಗೆ ಲಭಿಸಿವೆ. ಉದ್ರಿಕ್ತರನ್ನು ನಿಯಂತ್ರಿಸಲು ಪೋಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಗಲಭೆಕೋರರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಬೈಕ್ ಶೋರೂಮ್ ಗೆ ನುಗ್ಗಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಸಂಜೆಯಿಂದ ಮಧ್ಯರಾತ್ರಿಯವರೆಗೂ ಘರ್ಷಣೆ ನಡೆದಿದೆ. ಪಟ್ಟಣದಲ್ಲಿ ಅಘೋಷಿತ ಬಂದ್ ಉಂಟಾಗಿದ್ದು, ಶಾಲೆ - ಕಾಲೇಜುಗಳಿಗೂ ರಜೆ ನೀಡಲಾಗಿದೆ. ನಿಷೇಧಾಜ್ಞೆ ವಿಧಿಸಲಾಗಿದೆ. ಎರಡೂ ಧರ್ಮದ ೫೦ ಕ್ಕೂ ಅಧಿಕ ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇಷ್ಟೇ ಸಂಖ್ಯೆಯ ಎಫ್ ಐ ಆರ್ ಗಳು ದಾಖಲಾಗಿವೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗಣೇಶನ ಮೆರವಣಿಗೆಯ ಮೇಲೆ ದಾಳಿ ನಡೆದಿತ್ತು. ಆದರೆ ಯಾರ ವಿರುದ್ಧವೂ ಪೋಲೀಸರು ಕ್ರಮ ಕೈಗೊಂಡಿಲ್ಲ. ಅದರ ಪರಿಣಾಮ ಈ ಬಾರಿ ಮತ್ತೆ ದಾಳಿ ನಡೆದಿದೆ ಎಂದು ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಆರೋಪಿಸಿದ್ದಾರೆ.

ಕೋಮು ಸಂಘರ್ಷದಂತಹ ಘಟನೆಗಳು ನಡೆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುವವರು ಯಾವತ್ತೂ ಇರುತ್ತಾರೆ. ಈ ಘಟನೆಯಲ್ಲೂ ಅಂತಹ ಪ್ರಯತ್ನಗಳು ನಡೆಯಬಹುದು. ಸದ್ಯದಲ್ಲೇ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಆಗ ಪ್ರತೀಕಾರಕ್ಕೆ ಪ್ರಯತ್ನಗಳು ನಡೆಯಬಹುದು. ಈಗಾಗಲೇ ನಡೆದಿರುವ ಘಟನೆ ವಿಕೋಪಕ್ಕೆ ಹೋಗಲು ಪೋಲೀಸ್ ವೈಫಲ್ಯ ಕಾರಣವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಲ ಎಷ್ಟೇ ಮುಡುವರೆದಿದ್ದರೂ ಕೋಮು ಸೂಕ್ಷ್ಮದ ಕೆಲವು ಊರುಗಳಲ್ಲಿ ಹಲವು ದಶಕಗಳಿಂದಲೂ ಗಣೇಶನ ಮೆತವಣಿಗೆ ಇನ್ನೊಂದು ಕೋಮಿನವರ ಪ್ರಾರ್ಥನಾ ಕೇಂದ್ರದ ಬಳಿಗೆ ಹೋದಾಗ ಅಥವಾ ಮುಸ್ಲಿಮರ ಮೆರವಣಿಗೆಗಳು ಹಿಂದೂಗಳ ಧಾರ್ಮಿಕ ಕೇಂದ್ರದ ಬಳಿಗೆ ಬಂದಾಗ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಮುನ್ನೆಚ್ಚರಿಕೆ ವಹಿಸಿದರೆ ಇವುಗಳನ್ನು ತಪ್ಪಿಸಬಹುದು. ನಾಗಮಂಗಲದಲ್ಲಿ ಅದು ಸಾಧ್ಯವಾಗಿಲ್ಲ. ಈಗ ಘಟನೆಯನ್ನು ರಾಜಕೀಕರಣಗೊಳಿಸದೆ, ತಪ್ಪಿತಸ್ಥರು ಯಾವ ಕೋಮಿನವರಿದ್ದರೂ ಸರಿ, ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡರೆ ಮಾತ್ರ ಗಾಯ ಗೊಂಡವರು ಹಾಗೂ ನೋವು ಅನುಭವಿಸಿದವರಿಗೆ ನ್ಯಾಯ ನೀಡಿದಂತಾಗುತ್ತದೆ. ಕಠಿಣ ಕ್ರಮದಿಂದ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯುವುದನ್ನು ತಪ್ಪಿಸಬಹುದು. ಧರ್ಮ ಸಾಮರಸ್ಯಕ್ಕೆ ಹೆಸರಾದ ನಾಡಿನಲ್ಲಿ ಶಾಂತಿ ಕದಡುವ ಇಂತಹ ಕಿಡಿಗೇಡಿ ಕೃತ್ಯಗಳು ನಡೆಯುವುದಕ್ಕೆ ಕಾನೂನುಪಾಲಕರು ಅವಕಾಶ ನೀಡಬಾರದು. ನಾಗರಿಕ ಸಮಾಜಕ್ಕೆ ಇಂತಹ ಘಟನೆ ಕಪ್ಪುಚುಕ್ಕಿ ಇದ್ದಂತೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೩-೦೯-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ