ಗಣೇಶ ಹಬ್ಬಕ್ಕೆ ಎರಡು ಗಝಲ್ ಗಳು

ಗಣೇಶ ಹಬ್ಬಕ್ಕೆ ಎರಡು ಗಝಲ್ ಗಳು

ಕವನ

ಗಝಲ್ ೧

ಆದಿಪೂಜಿತ ವಂದಿತ ಮೊರೆಯ ಲಾಲಿಸು ಗಣಪನೆ

ಮೋದದಿ ಸಲಹುತ ಕಷ್ಟವ ನೀಗಿಸು ಗಣಪನೆ

 

ಒಲಿದಿರಲು ವಿನಾಯಕನು ವಿಘ್ನಗಳು ಬಲು ದೂರವಾಯಿತಲ್ಲವೆ

ಫಲಿಸಲು ಅನವರತ ನಾಲಿಗೆಯಲಿ ಹಾಡಿಸು ಗಣಪನೆ

 

ಗರಿಕೆಯನು ಅರ್ಪಿಸಿ ಬೇಡುವೆನು ಶ್ರದ್ಧೆಯಲಿ ಏಕದಂತನೆ

ಅರಿಯದೆ ಎಸಗಿದ ತಪ್ಪುಗಳ ಸರಿಸು ಗಣಪನೆ

 

ಆಕಳ ಕ್ಷೀರವನು ನಿನಗೆ ನೈವೇದ್ಯ ಮಾಡುವೆನು

ಸಕಲ ಪಾಪಂಗಳ ಕ್ಷಮಿಸುತ ಪಾಲಿಸು ಗಣಪನೆ

 

ಮೋದಕ ಲಡ್ಡು ಪ್ರಿಯ ಗಣಾಧ್ಯಕ್ಷ ಶಿವೆಯಕಂದ

ಸಾಧಕ ಬಾಧಕಗಳ ತೂಗಿ ದಯೆ ತೋರಿಸು ಗಣಪನೆ

 

ಕಷ್ಟಗಳ ಚಾಪೆಯದು ಸುತ್ತಿದೆ ಪೀಡಿಸುತ ತನುವನ್ನು

ಇಷ್ಟಗಳ ಹೊದಿಕೆಯ ಕಾರುಣ್ಯದಿ ಹೊದೆಸು ಗಣಪನೆ

 

ಪಾದ ಮೂಲದಿ ಶಿರವನಿರಿಸಿ ನಮಿಸುವಳು ರತ್ನ

ಮೋದದಿಂದಲಿ ಕಣ್ಣ ತೆರೆದು ಹರಸು ಗಣಪನೆ

***

ಗಝಲ್ ೨

ಮಣಭಾರ ಉದರವನು ಹೊತ್ತು ನಡೆದೆಯಾ ದೇವ

ಅಣಕಿಸಿದ ಚಂದ್ರನಿಗೆ ಶಾಪವನು ನೀಡಿದೆಯಾ ದೇವ

 

ಭಕುತರ ಮನೆಯ ಭೇಟಿ ಮಾಡಿದೆಯಾ ದೇವ

ಶಕುತಿಯ ರಟ್ಟೆಯಲಿ ಸಾಕಷ್ಟು ತುಂಬಿದೆಯಾ ದೇವ

 

ಮೋದಕಪ್ರಿಯ ಲಡ್ಡು ಹೋಳಿಗೆ ಸೇವಿಸಿದೆಯಾ ದೇವ

ಆದರದ ಉಪಚಾರ ಮನೆಮನಗಳಲ್ಲಿ ಸಿಕ್ಕಿದೆಯಾ ದೇವ

 

ಗರಿಕೆ ಹುಲ್ಲಿನ ಮಾಲೆ ಧರಿಸಿದೆಯಾ ದೇವ

ಎರಕ ಹೊಯಿದ ಬಣ್ಣದಲಿ ಹೊಳೆದೆಯಾ ದೇವ

 

ರತ್ನದಾಭರಣ ಕೊರಳಲಿ ಮಿಂಚುತಲಿ ಬೆಳಗಿದೆಯಾ ದೇವ

ಜತನದಲಿ  ಜೀವರ ಬೇಡಿಕೆಯ ಪರಿಹರಿಸಿದೆಯಾ ದೇವ

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್