ಗತವೈಭವಕ್ಕೆ ಮರಳಲಿ ಚಂದನವನ

ಗತವೈಭವಕ್ಕೆ ಮರಳಲಿ ಚಂದನವನ

ಒಂದು ಕಾಲಕ್ಕೆ ‘ಹೊಸ ಅಲೆ’ ಚಿತ್ರಗಳ ಮೂಲಕ ಒಂದಿಡೀ ಭಾರತೀಯ ಚಿತ್ರರಂಗವು ಕರ್ನಾಟಕದೆಡೆಗೆ ತಿರುಗುವಂತೆ ಮಾಡಿದ್ದು ಕನ್ನಡ ಚಿತ್ರರಂಗ. ‘ಸಂಸ್ಕಾರ, ಫಣಿಯಮ್ಮ, ಗ್ರಹಣ, ಘಟಶ್ರಾದ್ಧ, ಬರ’ ಇತ್ಯಾದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇವನ್ನು ಹೊರತು ಪಡಿಸಿದರೆ ವಾಣಿಜ್ಯಿಕ ನೆಲೆಯ ಚಿತ್ರಗಳ ವಿಷಯದಲ್ಲೂ ಕನ್ನಡ ಚಿತ್ರರಂಗ ಹೆಸರು ಮಾಡಿದ್ದಿದೆ. ಗೆಜ್ಜೆ ಪೂಜೆ, ಉಯ್ಯಾಲೆ, ನಾಂದಿ, ಶರಪಂಜರ, ನಾಗರ ಹಾವು, ಬಂಗಾರದ ಮನುಷ್ಯ, ಆಕ್ಸಿಡೆಂಟ್, ಬೂತಯ್ಯನ ಮಗ ಅಯ್ಯು, ಗಂಧದ ಗುಡಿ’ ಇವು ಅಂಥ ಒಂದಷ್ಟು ಚಿತ್ರಗಳು. ಬಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲರ ಚಿತ್ರವೊಂದು ಬಿಡುಗಡೆಯಾಗುತ್ತಿದೆಯೆಂದರೆ, ತಮಿಳಿನ ಕೆ ಬಾಲಚಂದರ್ ಅಂತಹ ನಿರ್ದೇಶಕರು ಬೆಂಗಳೂರಿಗೆ ಧಾವಿಸಿ ಬರುತ್ತಿದ್ದ ದಿನಗಳಿದ್ದವು. ‘ಸಾಕ್ಷಾತ್ಕಾರ’ ಚಿತ್ರದಲ್ಲಿ ಹಿಂದಿಯ ಪೃಥ್ವೀರಾಜ್ ಕಪೂರ್, ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ನಾಸಿರುದ್ದೀನ್ ಶಾ ನಟಿಸಿದ್ದೂ ಕನ್ನಡ ಚಿತ್ರರಂಗಕ್ಕಿದ್ದ ಗರಿಮೆಯಿಂದಲೇ.

ದಿನಗಳೆದಂತೆ ಕನ್ನಡ ಚಿತ್ರರಂಗವು ಹಾದಿ ಬದಲಿಸಿದ್ದರಿಂದಲೋ ಅಥವಾ ಮಾರುಕಟ್ಟೆಯ ಅನಿವಾರ್ಯತೆಯಿಂದಲೋ ಹಿಂದೆ ಕಾಣುತ್ತಿದ್ದ ವೈಭವವು ಇಂದಿನವರಿಗೆ ತಪ್ಪಿ ಹೋಗಿದೆ ಎನ್ನಬೇಕು. ಚಿತ್ರಗಳ ಪ್ರಸ್ತುತಿಯ ವಿಧಾನ, ತಂತ್ರಜ್ಞಾನ, ಮಾರುಕಟ್ಟೆ ಇತ್ಯಾದಿ ಬಾಬತ್ತುಗಳಲ್ಲಿ ಕನ್ನಡ ಚಿತ್ರೋದ್ಯಮದ ಸಾಧ್ಯತೆ-ಸಾಧನೆಗಳು ಸಾಕಷ್ಟು ಹಿಗ್ಗಲಿಸಲ್ಪಟ್ಟಿದೆಯಾದರೂ, ಇನ್ನೂ ಏನೋ ‘ಮಿಸ್’ ಆಗುತ್ತಿದೆ ಎಂಬ ಭಾವ ಕೆಲವು ‘ನೈಜ ಕನ್ನಡ ಚಿತ್ರಾಭಿಮಾನಿಗಳಲ್ಲಿ’ ಮೂಡಿದ್ದರೆ ಅಚ್ಚರಿಯಿಲ್ಲ. ಹಾಗಂತ, ಕಳೆದ ಕೆಲ ದಶಕಗಳಲ್ಲಿ ಕನ್ನಡದಲ್ಲಿ ಉತ್ತಮ ಚಿತ್ರಗಳು ಬಂದೇ ಇಲ್ಲ ಎಂದಲ್ಲ. ‘ತಿಥಿ, ರಂಗಿ ತರಂಗ, ಗಂಟುಮೂಟೆ, ರಾಮ ರಾಮ ರೇ, ಕೆಜಿಎಫ್, ಸ.ಹಿ.ಪ್ರಾ.ಶಾಲೆ. ಕಾಸರಗೋಡು, ಕಾಂತಾರ’ ಮುಂತಾದ ವಿಭಿನ್ನ ಪ್ರಯತ್ನಗಳೂ ಕನ್ನಡದಲ್ಲಿ ಹೊಮ್ಮಿವೆ. ಪ್ರೇಕ್ಷಕರೂ ಅವಕ್ಕೆ ‘ಉಘೇ, ಉಘೇ’ ಎಂದಿದ್ದಾರೆ. ಆದರೆ ‘ಪ್ಯಾನ್ ಇಂಡಿಯಾ’ ಎಂಬ ಮಾಯಾಂಗನೆಯ ಸೆಳೆತಕ್ಕೆ ಸಿಲುಕಿ, ಅಪ್ಪಟ ಕನ್ನಡ ಮಣ್ಣಿನ ವಾಸನೆಯನ್ನುಳ್ಳ ಚಿತ್ರಗಳು ಗಣನೀಯವಾಗಿ ಕಮ್ಮಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರೋದ್ಯಮಕ್ಕೆ ‘ಸ್ಯಾಂಡಲ್ ವುಡ್’ ಎಂಬ ಹೆಸರೂ ಇದೆ. ಈ ‘ಚಂದನವನ’ ನಿಜಾರ್ಥದಲ್ಲಿ ಘಮಘಮಿಸುವಂತಾಗಲಿ ಎಂಬುದೇ ಸಹೃದಯಿಗಳ ಆಶಯ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೩೦-೧೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ