ಗದ್ದಲದಲ್ಲೇ ಮುಗಿದುಹೋದ ಸಂಸತ್ತಿನ ಬಜೆಟ್ ಅಧಿವೇಶನ

ಗದ್ದಲದಲ್ಲೇ ಮುಗಿದುಹೋದ ಸಂಸತ್ತಿನ ಬಜೆಟ್ ಅಧಿವೇಶನ

ಎರಡು ಹಂತಗಳಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನ ಸಮಾಪನಗೊಂಡಿದೆ. ಈ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ಗದ್ದಲದಲ್ಲಿ ಮುಳುಗಿಹೋಗಿದ್ದು ಅತ್ಯಂತ ವಿಪರ್ಯಾಸ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಕುರಿತು ಬ್ರಿಟನ್ ನಲ್ಲಿ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ, ಉದ್ಯಮಿ ಅದಾನಿ ಅಕ್ರಮದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಬಿಗಿಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ದೇಶದ ನಾಗರಿಕರಿಗೆ ಸಂಬಂಧಿಸಿದ ವಿಚಾರಗಳ ಚರ್ಚೆ ಎಂಬುದು ಹಿಂದಕ್ಕೆ ಸರಿಯಿತು. ಬಜೆಟ್ ಅಧಿವೇಶನದಲ್ಲಿ ೧೩೩ ತಾಸು ಕಲಾಪ ನಡೆಯಬೇಕಿದ್ದ ಲೋಕಸಭೆಯಲ್ಲಿ ಕೇವಲ ೪೫ ತಾಸು, ೧೩೦ ಗಂಟೆ ಕಲಾಪ ನಡೆಯಬೇಕಿದ್ದ ರಾಜ್ಯಸಭೆಯಲ್ಲಿ ಕೇವಲ ೩೧ ಗಂಟೆಯಷ್ಟು ಮಾತ್ರ ಕಲಾಪ ನಡೆದಿದೆ ಎಂದರೆ, ಯಾವ ಮಟ್ಟಿಗೆ ಸಮಯ ವ್ಯರ್ಥವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ದೆಶದ ಒಂದು ವರ್ಷದ ಖರ್ಚು - ವೆಚ್ಚಗಳನ್ನು ಬಿಂಬಿಸುವ ೪೫ ಲಕ್ಷ ಕೋಟಿ ರೂ . ಗಾತ್ರದ ಬಜೆಟ್ ಕುರಿತು ೫೪೩ ಲೋಕಸಭಾ ಸದಸ್ಯರು ಹಾಗೂ ೨೪೫ ರಾಜ್ಯಸಭಾ ಸದಸ್ಯರು ಸೇರಿ ಚರ್ಚೆ ನಡೆಸಿರುವುದು ಕೇವಲ ೧೪ ತಾಸು ಮಾತ್ರ. ಹೀಗಾದರೆ, ಸಂಸತ್ ಕಲಾಪದ ನೈಜ ಆಶಯಕ್ಕೆ ಭಂಗ ಉಂಟಾಗುವುದಿಲ್ಲವೇ? ನಿಜಕ್ಕೂ ಈ ಬಗ್ಗೆ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಜರೂರು ಇದೆ.

ಸಂಸತ್ತು ಅಧಿವೇಶನ ಅಂದರೆ ಅದಕ್ಕೆ ಹಲವು ದಿನಗಳ ಸಿದ್ಧತೆ ಇರುತ್ತದೆ. ದೇಶದ ಯಾವುದೋ ಮೂಲೆಯ ಸಂಸದ ತನ್ನ ಕ್ಷೇತ್ರಕ್ಕೆ ಅಥವಾ ತನ್ನ ರಾಜ್ಯಕ್ಕೆ ಅಥವಾ ಇಡೀ ದೇಶಕ್ಕೆ ಸಮಸ್ಯೆಯಾಗಿರುವ ವಿಷಯವನ್ನು ನೇರವಾಗಿ ಸರ್ಕಾರದ ಮುಂದೆ ಪ್ರಸ್ತಾಪಿಸಲು ಇರುವ ಸೂಕ್ತ ವೇದಿಕೆ ಇದು. ಜನತಂತ್ರ ವ್ಯವಸ್ಥೆಯಲ್ಲಿ ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುತ್ತದೆ. ಆದರೆ ಅದೇ ವೇದಿಕೆಯು ಗದ್ದಲ, ಕೋಲಾಹಲ, ಕೂಗಾಟ, ಧರಣಿಗಳ ಅಂಗಳವಾಗಿ ಬಿಟ್ಟರೆ ಅದಕ್ಕೆ ಏನೆಂದು ಕರೆಯಬೇಕು? ಸಂಸತ್ತಿನ ಕಲಾಪಕ್ಕಾಗಿ ದೇಶದ ಮೂಲೆಮೂಲೆಗಳಿಂದ ಸಂಸದರು ದೆಹಲಿಗೆ ಬರುತ್ತಾರೆ. ಅವರಿಗೆ ಪ್ರಶ್ನೆ ಕೇಳಲೂ ಈ ಗದ್ದಲಗಳಿಂದ ಅವಕಾಶ ಸಿಗುತ್ತಿಲ್ಲ. ಒಟ್ಟಾರೆ ಕಲಾಪ, ಸಂಸದರ ವೇತನ-ಭತ್ಯೆಗೆ ಸಂದಾಯವಾಗುವುದು ಜನರ ತೆರಿಗೆ ಹಣ. ಆದರೆ ಅದು ಸರಿಯಾಗಿ ಬಳಕೆಯಾಗದೆ ಹೋದರೆ, ಸಂಸದರು ತಮ್ಮ ಕರ್ತವ್ಯದಿಂದಲೇ ವಿಮುಖರಾಗಿದ್ದಾರೆ ಎಂದು ಜನರು ಭ್ರಮನಿರಸನಗೊಂಡಾರು. ಆಡಳಿತ, ಪ್ರತಿಪಕ್ಷಗಳು ಮಾತುಕತೆ ಮೂಲಕ ಕಗ್ಗಂಟು ಬಗೆಹರಿಸಿಕೊಂಡು ನೈಜ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು. ಈಗ ಬಜೆಟ್ ಅಧಿವೇಶನ ಕಳೆದು ಹೋಗಿದೆ. ಮುಂಗಾರು, ಚಳಿಗಾಲದ ಅಧಿವೇಶನಕ್ಕೂ ಇಂತಹ ಸ್ಥಿತಿ ಬಾರದಿರಲಿ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೭-೦೪-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ