ಗರಿಷ್ಟ ಮಾರಾಟ ದರದಿಂದ ಲಾಭ ಯಾರಿಗೆ ?
ಎಂ ಆರ್ ಪಿ ಅರ್ಥಾತ್ ಗರಿಷ್ಟ ಮಾರಾಟ ದರ ಇದಕ್ಕೂ ಉತ್ಪಾದನಾ ವೆಚ್ಚ ಮತ್ತು ನ್ಯಾಯಸಮ್ಮತ ಲಾಭಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಎಂ ಆರ್ ಪಿ ದರವನ್ನು ಎಷ್ಟು ಬೇಕಾದರೂ ಮುದ್ರಿಸಬಹುದು. ಉತ್ಪನ್ನವೊಂದು ಮಾರಲ್ಪಡುವುದು ಆ ಉತ್ಪನ್ನದ ಪ್ರಚಾರ ಮತ್ತು ಮಾರಾಟಗಾರನ ಸಮಜಾಯಿಶಿಯಿಂದ ಎಂಬುದು ಎಷ್ಟು ಜನರಿಗೆ ಗೊತ್ತಿದೆಯೋ ತಿಳಿಯದು. ಎಂಆರ್‌ಪಿ ಎಂದರೆ ಗರಿಷ್ಟ ಮಾರಾಟ ಬೆಲೆ. ಇದಕ್ಕಿಂತ ಹೆಚ್ಚಿನ ಬೆಲೆಗೆ ಅದನ್ನು ಮಾರಾಟ ಮಾಡುವಂತಿಲ್ಲ. ಆದರೆ ಎಷ್ಟು ಕಡಿಮೆಗೂ ಮಾರಾಟ ಮಾಡಬಹುದು.
ಈ ಎಂ ಆರ್ ಪಿ ದರ ನಿರ್ಧರಣೆ ಗ್ರಾಹಕನ ಪ್ರಯೋಜನಕ್ಕೆ ಅಂತೂ ಅಲ್ಲವೆ ಅಲ್ಲ. ಮಾರಾಟಗಾರ, ದಾಸ್ತಾನುಗಾರ ಮತ್ತು ಉತ್ಪಾದಕರ ಲಾಭಾಂಶವನ್ನು ಗಟ್ಟಿ ಮಾಡುವುದಕ್ಕೆ ಎಂಬುದರಲ್ಲಿ ಅನುಮಾನವಿಲ್ಲ. ಈ ಗರಿಷ್ಟ ಮಾರಾಟ ಬೆಲೆಯಲ್ಲಿ ಉತ್ಪಾದಕನಿಗೆ, ದಾಸ್ತಾನುದಾರನಿಗೆ ಮತ್ತು ಸಗಟು ಮಾರಾಟಗಾರರು ಚಿಲ್ಲರೆ ಮಾರಾಟಗಾರರಿಗೆ ಹಾಗೂ ಸರಕಾರಕ್ಕೆ ಸಲ್ಲಬೇಕಾದ ಎಲ್ಲಾ ಲಾಭ ಮತ್ತು ಕರಗಳೂ ಸೇರಿರುತ್ತವೆ. ಸರಕಾರದ ಮಾರಾಟ ಕರ, ಮೌಲ್ಯವರ್ಧಿತ ಕರ, ಮುಂತಾದವುಗಳ ಹೊರತಾಗಿ ಉಳಿದೆಲ್ಲಾ ಲಾಭಗಳೂ ವ್ಯತ್ಯಾಸಕ್ಕೆ ಹೊಂದಿಕೊಂಡು ಇರುತ್ತವೆ. ಕೆಲವು ಅಧಿಕ ಪ್ರಚಾರದ, ಹೆಚ್ಚು ಬೇಡಿಕೆ ಉಳ್ಳ ಬ್ರಾಂಡೆಡ್ ಉತ್ಪನ್ನಗಳಿಗೆ ಲಾಭ ಕಡಿಮೆ ಪ್ರಮಾಣದಲ್ಲೂ, ಹೊಸ ಉತ್ಪನ್ನಗಳಿಗೆ ಹೆಚ್ಚು ಪ್ರಮಾಣದಲ್ಲೂ ಇರುತ್ತವೆ. ಹೊಸತಾಗಿ ಪರಿಚಯಿಸಲ್ಪಡುವ ಉತ್ಪನ್ನವೊಂದು ಗ್ರಾಹಕರಿಗೆ ತಲುಪುವುದಕ್ಕೆ ಮಾರಾಟಗಾರರ ಸಹಕಾರ ತುಂಬಾ ಅಗತ್ಯ. ಅದಕ್ಕಾಗಿ ಅವರಿಗೆ ಗರಿಷ್ಟ ಲಾಭವನ್ನು ನಿಗದಿ ಮಾಡಿರುತ್ತಾರೆ. ಸಾಮಾನ್ಯವಾಗಿ ಬ್ರಾಂಡ್ ಇಮೇಜ್ ಹೊಂದಿರುವ ಉತ್ಪನ್ನಕ್ಕೆ ೧೦-೨೦ % ತನಕ ಮಾರಾಟಗಾರನ ಲಾಭವೂ, ೫-೧೦ % ತನಕ ದಾಸ್ತಾನುಗಾರನ ಲಾಭವೂ ಇದ್ದರೆ, ಹೊಸ ಅಥವಾ ಬ್ರಾಂಡ್ ಆಗಿಲ್ಲದ ಉತ್ಪನ್ನಕ್ಕೆ ೨೫-೫೦ % ತನಕ ಮಾರಾಟಗಾರರಿಗೂ, ೧೦-೧೫ % ದಾಸ್ತಾನುದಾರರಿಗೂ ಲಾಭಾಂಶಗಳಿರುತ್ತವೆ.
ಕೆಲವು ಮಾರಾಟಗಾರರು ನಾವು ಕೇಳುವ ಉತ್ಪನ್ನಕ್ಕಿಂತ ಇನ್ನೊಂದು ಉತ್ಪನ್ನ ಒಳ್ಳೆಯದಿದೆ, ಇದರ ಬೆಲೆ ಅದಕ್ಕಿಂತ ಕಡಿಮೆ. ಒಮ್ಮೆ ಬಳಕೆ ಮಾಡಿ ನೋಡಿ ಎಂದು ಮಾಮೂಲಿ ಗಿರಾಕಿಯಾದ ನಮ್ಮನ್ನು ಒಲಿಸುವುದಿದ್ದರೆ, ಅದು ಆ ಉತ್ಪನ್ನದ ಮೇಲೆ ಅವರಿಗೆ ಇರುವ ಲಾಭದ ಮೇಲೆಯೇ ಹೊರತು ನಿಮ್ಮ ಹಿತ ಬಯಸುವ ಕಾರಣಕ್ಕಾಗಿ ಅಲ್ಲ. ಇಂತಹ ಉತ್ಪನ್ನಗಳನ್ನು ಅವರು ಅದರಲ್ಲಿ ನಮೂದಿಸಲ್ಪಟ್ಟ ಗರಿಷ್ಟ ಮಾರಾಟ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.
ಎಂ ಆರ್ ಪಿ ಎಂಬುದು ಗ್ರಾಹಕನ ದೃಷ್ಟಿಯಿಂದ ನೋಡಿದರೆ ಅದೊಂದು ದೊಡ್ದ ಪೀಡೆ ಎಂದರೂ ತಪ್ಪಾಗಲಾರದು. ಈ ದರವನ್ನು ನಿರ್ಧರಿಸಲು ಕೆಲವು ಮಾನದಂಡಗಳಿವೆಯಾದರೂ, ಅದನ್ನು ಬಹುತೇಕ ಮಂದಿ ಗಾಳಿಗೆ ತೂರಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸುತ್ತಿದ್ದಾರೆಯೇನೋ ಎಂಬುದು ಈಗಿನ ಕೆಲವು ದರ ನಿರ್ಧರಣೆಯಲ್ಲಿ ಕಂಡುಬರುತ್ತದೆ. ಇದನ್ನು ಪುಷ್ಟೀಕರಿಸುವ ಹಲವಾರು ಸಂಗತಿಗಳು ನಮ್ಮ ಮುಂದೆ ಇವೆ. ಮರುಕಟ್ಟೆಯಲ್ಲಿ ಒಂದು ಬಾಲ್‌ವಾಲ್ವ್ ಖರೀದಿಸಿ ನೋಡಿ. ಪ್ಯಾಕೆಟ್ ನಲ್ಲಿ ಗರಿಷ್ಟ ಮಾರಾಟ ಬೆಲೆ ರೂ. ೩೦೦ ಎಂದು ಬರೆದಿದ್ದರೆ ಅದನ್ನು ಅಂಗಡಿಯವರು ೧೭೫ ರೂ. ಗಳಿಗೆ ಅಥವಾ ೨೦೦ ರೂ. ಗಳಿಗೆ ಕೊಡುತ್ತಾರೆ. ಇದು ಮಾರಾಟಗಾರ ತನ್ನ ಲಾಭವನ್ನು ಬಿಟ್ಟು ಮಾರಾಟ ಮಾಡುವುದೂ ಅಲ್ಲ, ತಯಾರಕ ಗ್ರಾಹಕರಿಗಾಗಿ ರಿಯಾಯಿತಿ ಮಾಡುವುದೂ ಅಲ್ಲ. ಅದರ ಉತ್ಪಾದನಾ ವೆಚ್ಚ ಮತ್ತು ಎಲ್ಲಾ ಲಾಭಗಳೂ ಸೇರಿ ಆಗುವ ವೆಚ್ಚ ಅಷ್ಟೇ. ಆದ ಕಾರಣ ಆ ಬೆಲೆಗೆ ಮಾರಿದರೂ ಪೂರೈಸುತ್ತದೆ. ಯಾಕಾದರೂ ಈ ಮಿತಿ ಮೀರಿದ ದರವನ್ನು ನಮೂದಿಸಿರುತ್ತಾರೆ ಎನ್ನುತ್ತೀರಾ, ಅದು ಬೇರೇನಕ್ಕೂ ಅಲ್ಲ , ಮಾರಾಟಗಾರರ ಅನುಕೂಲಕ್ಕೇ ಆಗಿರುತ್ತದೆ.
ಆತ ಆ ಎಂ ಆರ್ ಪಿ ದರದ ಒಳಗೆ ಎಷ್ಟು ದರಕ್ಕಾದರೂ ಮಾರಬಹುದಾಗಿದೆ. ಇದು ಹೇಗಾಗುತ್ತದೆ ಎಂದರೆ ಪೇಟೆಯಲ್ಲಿ ೩೦೦ ರೂ. ಎಂ ಆರ್ ಪಿ ಇರುವ ವಸ್ತು ೨೦೦ ರೂ ಗೆ ದೊರೆತರೆ, ಸ್ವಲ್ಪ ಗ್ರಾಮೀಣ ಭಾಗದಲ್ಲಿ ರೂ.೨೫೦ ಕ್ಕೂ, ತೀರಾ ಕಡಿಮೆ ಸಂಖ್ಯೆಯ ಅಂಗಡಿಗಳು ಇರುವಂತಹ ತೀರಾ ಹಳ್ಳಿಗಳಲ್ಲಿ ೩೦೦ ರೂ. ಗೇ ಮಾರಾಟವಾಗುತ್ತದೆ.
ದಿನ ಬಳಕೆಯ ವಸ್ತುಗಳ ಎಂಆರ್‌ಪಿ ಬಗ್ಗೆ ಮಾತಾಡುವುದು ಇಲ್ಲಿ ಅಪ್ರಸ್ತುತ. ಕೃಷಿ ಕ್ಷೇತ್ರದಲ್ಲಿ ಬಳಕೆಯಾಗುವ ಒಳಸುರಿಗಳ ಬಗ್ಗೆ ನಿರ್ಧರಿತವಾಗುತ್ತಿರುವ ಎಂಆರ್‌ಪಿ ದರದ ಬಗ್ಗೆ ಹೇಳಿದರೆ ನಮ್ಮೆಲ್ಲರ ತಲೆ ಹಾಳಾದೀತು. ನಾವೆಲ್ಲರೂ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಯಾವಾಗಲೂ ಎಂಆರ್‌ಪಿ ದರವನ್ನು ಶಿಸ್ತಿನಲ್ಲಿ ಪಾವತಿಸಿ ಒಳಸುರಿಗಳನ್ನು ಖರೀದಿ ಮಾಡಿದವರು.
ಬೆಳೆ ಪೋಷಣೆಗೆ ಬೇಕಾಗುವ ಗೊಬ್ಬರ, ಹಾರ್ಮೋನು, ಕೀಟನಾಶಕ, ಶಿಲೀಂದ್ರನಾಶಕ, ಕಳೆನಾಶಕಗಳನ್ನು ಕೃಷಿಯ ಅತೀ ದೊಡ್ಡ ಬೆಲ್ಟ್ ಗಳೆನಿಸಿದ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಖರೀದಿ ನಡೆಸಿದ್ದೇ ಆದರೆ ಅಲ್ಲಿ ಆ ಉತ್ಪನ್ನಗಳು ನಮೂದಿಸಲ್ಪಟ್ಟ ದರಕ್ಕಿಂತ ೨೦-೨೫ % ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದನ್ನು ಕಾಣಬಹುದು. ಅದಕ್ಕೆ ಕಾರಣ ಅಲ್ಲಿನ ಮಾರಾಟದ ಪ್ರಮಾಣ ಎನ್ನಲಾಗುತ್ತಿದೆ. ಅದೇನೇ ಇರಲಿ ರೈತರಿಗೆ ಕಡಿಮೆ ಬೆಲೆಗೆ ದೊರೆತಷ್ಟೂ ಲಾಭ ತಾನೇ?
ರೈತನು ತನ್ನ ಉತ್ಪಾದನೆಯಲ್ಲಿ ಪಡೆಯುವ ಆದಾಯದಲ್ಲಿ ಶೇ. ೭೫ ರಷ್ಟು ಬೆಳೆ ಪೊಷಣೆ ಹಾಗೂ ಅದರ ಮಜೂರಿಗಾಗಿ ಬಳಕೆ ಮಾಡುತ್ತಾನೆ. ಎಕ್ರೆಗೆ ಬರುವ ಉತ್ಪತ್ತಿ ೨ ಲಕ್ಷವಾದರೆ ಅದನ್ನು ಪಡೆಯಲು ೫೦,೦೦೦ ಕ್ಕೂ ಹೆಚ್ಚು ಗೊಬ್ಬರ, ಅದರ ಬಳಕೆಗೆ ಮತ್ತೆ ೫೦ ಸಾವಿರ ಹಾಗೇ ಇನ್ನಿತರ ಬೀಜ ಮುಂತಾದ ಸಾಮಾಗ್ರಿಗಳಿಗೆ ೫೦,೦೦೦ ಖರ್ಚು ಇರುತ್ತದೆ. ಲೆಕ್ಕಾಚಾರದಲ್ಲಿ ಉಳಿಯುವ ನಿವ್ವಳ ೫೦,೦೦೦ ಅವನಿಗೆ ಬೆಳೆ -ಬೆಲೆ ಅನುಕೂಲಕರವಾಗಿ ದೊರೆತರೆ ಮಾತ್ರ ಲಾಭ. ಕೃಷಿಯಲ್ಲಿ ಅನಿಶ್ಚಿತತೆ ಅಧಿಕ ಪ್ರಮಾಣದಲ್ಲಿದ್ದು, ಇದು ಅವನ ಅದೃಷ್ಟದ ಮೇಲೆ ನಿಂತಿರುತ್ತದೆ ಎಂದರೂ ತಪ್ಪಾಗಲಾರದು. ಹೀಗಿರುವಾಗ ರೈತ ಉಳಿಸುವುದೆಲ್ಲಿ? ಬಳಸುವ ಒಳಸುರಿಗಳನ್ನು ಕಡಿಮೆ ಮಾಡಿದರೆ ಇಳುವರಿ ಕಡಿಮೆಯಾಗುತ್ತದೆ. ಅದನ್ನು ಬಿಡುವಂತಿಲ್ಲ. ಕೆಲಸದವರನ್ನೂ ಬಿಡುವಂತಿಲ್ಲ. ನಿರ್ವಹಣೆಯನ್ನೂ ಬಿಡುವಂತಿಲ್ಲ. ಒಂದೇ ಒಂದು ಕಡೆ ಅವನ ಉಳಿತಾಯದ ಪ್ರಮಾಣವನ್ನು ಹೆಚ್ಚು ಮಾಡುವ ಅನುಕೂಲ ಇದೆ. ಅದುವೇ ತಾನು ಕೊಳ್ಳುವ ಕೃಷಿ ಒಳ ಸುರಿಗಳನ್ನು ಆದಷ್ಟು ಕನಿಷ್ಟ ದರದಲ್ಲಿ ಕೊಳ್ಳುವುದು. ಇದು ಹೇಗೆ ಸಾಧ್ಯ?
ಇಲ್ಲಿ ಈ ಬರಹದ ಉಲ್ಲೇಖ ಏಕೆಂದರೆ ಇಂದು ರೈತಾಪಿ ವರ್ಗ ಕೃಷಿ ಒಳಸುರಿ, ಮಿತಿಮೀರಿದ ಕೆಲಸದವರ ಮಜೂರಿ, ಅನಿಶ್ಚಿತ ಧಾರಣೆ, ಪ್ರತಿಕೂಲ ಹವಾಮಾನ, ಮುಂತಾದ ರಿಸ್ಕ್ ಗಳನ್ನು ಗೆದ್ದು ಲಾಭ ಮಾಡಿಕೊಳ್ಳಬೇಕು. ಅದು ಹೇಗೆ ಸಾಧ್ಯವೆಂದರೆ ಉಳಿತಾಯ ಮಾಡಿ. ಉಳಿತಾಯ ಎಲ್ಲಾ ಕಡೆ ಮಾಡುವಂತಿಲ್ಲ. ಇದರಿಂದ ಇಳುವರಿ ಮೇಲೆ ಪರಿಣಾಮ ಉಂಟಾಗುತ್ತದೆ. ಸಾಧ್ಯವಿರುವಲ್ಲಿ ಉಳಿತಾಯ ಮಾಡಲು ಉಪಾಯಗಳನ್ನು ಕಂಡುಕೊಳ್ಳಬೇಕು. ರೈತರು ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಾನ ಮನಸ್ಕ ರೈತರ ಸಂಘಟನೆ ಮಾಡಿಕೊಂಡು ಮಾರಾಟ ವ್ಯವಸ್ಥೆ ಮಾಡಿಕೊಂಡರೆ ತಮ್ಮ ಬೆಳೆ ಒಳ ಸುರಿ ಖರ್ಚಿನಲ್ಲಿ ೨೦-೨೫ದಷ್ಟು ನಿರಾಯಾಸವಾಗಿ ಉಳಿಸಬಹುದು.
ಕೃಷಿಕರಿಗೆ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲಾದರೂ ಇದೇ ರೀತಿಯ ವ್ಯವಸ್ಥೆ ಇರುತ್ತದೆ. ನಾವು ಕೊಳ್ಳುವ ಕೆಲವು ವಸ್ತುಗಳ ನಿಖರ ಬೆಲೆಯನ್ನು ನಮಗೆ ಅಂದಾಜಿಸಲು ಸಾಧ್ಯವೇ ಇರುವುದಿಲ್ಲ. ಆಗ ನಾವು ಮೋಸ ಹೋಗುವ ಸಾಧ್ಯತೆ ಹೆಚ್ಚು. ಒಂದೇ ಊರಿನಲ್ಲಿ ಅಂಗಡಿಯಿಂದ ಅಂಗಡಿಗೆ ಗರಿಷ್ಟ ಮಾರಾಟ ದರದಲ್ಲಿ ರಿಯಾಯಿತಿಗಳು ಬದಲಾಗುತ್ತಾ ಹೋಗುತ್ತವೆ. ನೀವು ಖರೀದಿಸುವ ವಸ್ತುವಿನ ಬಗ್ಗೆ ಜ್ಞಾನ ಇರುವವರ ಬಳಿ ಒಮ್ಮೆ ವಿಚಾರಿಸಿ, ಎಲ್ಲಿ ಮತ್ತು ಯಾವ ಬ್ರಾಂಡ್ ಖರೀದಿ ಉತ್ತಮ ಎಂದು ತಿಳಿದು ಖರೀದಿ ಮಾಡುವುದು ಉತ್ತಮ.
ಚಿತ್ರ ಕೃಪೆ: ಅಂತರ್ಜಾಲ ತಾಣ