ಗರ್ಭದಲ್ಲಿ ಭ್ರೂಣದ ಬೆಳವಣಿಗೆ

ಗರ್ಭದಲ್ಲಿ ಭ್ರೂಣದ ಬೆಳವಣಿಗೆ

ತನ್ನ ಮಗುವಿನ ಜನ್ಮವಾಗುವುದಕ್ಕಿಂತ ಮೊದಲೇ, ಅಂದರೆ ಗರ್ಭಾಧಾರಣೆಯ ಸಮಯದಲ್ಲಿಯೇ ಹೆಣ್ಣು ತನ್ನ ಮಾತೃತ್ವದ ಸವಿಯನ್ನು ಅನುಭವಿಸುತ್ತಾಳೆ ಎಂದು ಹೇಳುತ್ತಾರೆ. ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ಪಾಲಕರಲ್ಲಿ  ಕುತೂಹಲ ಪ್ರಾರಂಭವಾಗುತ್ತದೆ. ತನ್ನ ಮಗಳು ಅಥವಾ ಸೊಸೆ ಯಾವಾಗ ಗರ್ಭವತಿಯಾಗಿ ಕುಟುಂಬದ ಕುಡಿಗೆ ಜನ್ಮ ನೀಡುತ್ತಾಳೆ ಎಂಬ ಪ್ರಶ್ನೆ ತಾಯಿ ಮತ್ತು ಅತ್ತೆಯ ಮನದಲ್ಲಿ ಮೂಡುವುದು ಸಹಜ. ತಾಯಿಯ ಗರ್ಭದಲ್ಲಿ ಬೀಜಾಂಕುರವಾಗಿ ನವ ಮಾಸಗಳನ್ನು ತಾಯಿಯ ಗರ್ಭದಲ್ಲಿಯೇ ಬೆಳೆದು, ಹೊರ ಜಗತ್ತಿಗೆ ಶಿಶು ಕಾಲಿಟ್ಟ ದಿನವನ್ನು ಜನ್ಮದಿನವೆಂದು ನಾವೆಲ್ಲ ತಿಳಿದಿದ್ದರೂ, ಶಿಶುವಿನ ನಿಜವಾದ ಜನ್ಮ ಬೀಜಾಂಕುರವಾದ ದಿನವೇ ಅಲ್ಲವೇ?

ತಾಯಿಯ ಗರ್ಭಾಶಯದಲ್ಲಿ ಸಮಯಗಳು ಗತಿಸಿದಂತೆ  ಭ್ರೂಣದ ಬೆಳವಣಿಗೆ ಯಾವ ಯಾವ  ರೀತಿಯಲ್ಲಿ ನಡೆಯುತ್ತದೆ ಎಂದು ವೇದವ್ಯಾಸರು ಸಾವಿರಾರು ವರ್ಷಗಳ ಹಿಂದೆಯೇ ರಚಿಸಿದ ಮಹಾಗ್ರಂಥ ಶ್ರೀಮದ್ಭಾಗವತದಲ್ಲಿ ಉಲ್ಲೇಖವಾಗಿದೆ ಎಂದು ನಮಗೆ ನಂಬಲೂ ಸಾಧ್ಯವಿಲ್ಲ ... ಅಲ್ಲವೇ?

ನಮಗೆಲ್ಲರಿಗೂ ತಿಳಿದಂತೆ ಸಾವಿರಾರು ವರ್ಷಗಳ ಹಿಂದೆ ಯಾವುದೇ ರೀತಿಯ ವೈದ್ಯಕೀಯ ವಿಜ್ಞಾನ ಮತ್ತು ಆಧುನಿಕ  ತಂತ್ರಜ್ಞಾನಗಳ ಆವಿಷ್ಕಾರಗಳೂ ಆಗಿರಲಿಲ್ಲ. ಈಗ ಇರುವಂತೆ ಸ್ಕ್ಯಾನಿಂಗ್ ಮೆಷಿನ್ ಅಥವಾ ಉದರ ದರ್ಶಕಗಳಂತಹ ಯಾವುದೇ ತಂತ್ರಜ್ಞಾನ ಅಥವಾ ಯಂತ್ರೋಪಕರಣಗಳೂ ಆಗ ಇದ್ದಿರಲಿಲ್ಲ. ಆದರೂ ಸಾವಿರಾರು ವರ್ಷಗಳ ಹಿಂದೆ ಬರೆದ ಆ ಮಹಾಗ್ರಂಥದಲ್ಲಿ ವೇದವ್ಯಾಸರು ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ ರೀತಿ ತಿಳಿದರೆ, ಅವರಲ್ಲಿ ಯಾವುದೋ ಒಂದು ದೈವಿಕ ಶಕ್ತಿ ಅಥವಾ ತ್ರಿಕಾಲ ಜ್ಞಾನ ಇದ್ದಿರಲೇಬೇಕು ಎಂಬ ಬಗ್ಗೆ ಕಿಂಚಿತ್ತೂ ಸಂಶಯ ಇಲ್ಲ.

ಏನು ಬರೆದಿದ್ದಾರೆ ಎ೦ದು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

ಸ್ವಯಂಭೂಮನು ತನ್ನ  ಪುತ್ರಿ ದೇವಹೂತಿಯನ್ನು ಕರ್ದಮ ಮಹಾ ಮುನಿಗಳಿಗೆ ಮದುವೆ ಮಾಡಿಕೊಡಲು ನಿಶ್ವಯಿಸಿ ಅವರಲ್ಲಿ ಹೋಗಿ ಬೇಡಿಕೊಂಡನು. ಆಗ ಅವರು ದೇವಹೂತಿಯನ್ನು ಸ್ವೀಕರಿಸಿಲು ಒಪ್ಪಿದರೂ ಒಂದು ನಿಬಂಧನೆ ಹಾಕಿದ್ದರು. ಅದೇನೆಂದರೆ 'ಆಕೆಯಲ್ಲಿ ಸಂತಾನ ಉಂಟಾಗುವ ವರೆಗೆ ಮಾತ್ರ ಗ್ರಹಸ್ಥ ಧರ್ಮ ಪಾಲಿಸಿ, ಆನಂತರ ಭಗವಂತನ ಇಚ್ಛೆಯಂತೆ ತಾನು ಸಂನ್ಯಾಸ ಧರ್ಮವನ್ನು ಪಾಲಿಸುವೆ' ಎಂಬ ಷರತ್ತು.

ಅವರು ಮೊದಲೇ ಹೇಳಿದಂತೆ, ತಮಗೆ ಒಂಬತ್ತು ಹೆಣ್ಣು ಮಕ್ಕಳು ಜನಿಸಿದ ನಂತರ ಅವರು ಗ್ರಹಸ್ಥ ಧರ್ಮ ತ್ಯಜಿಸಬೇಕೆಂದು ನಿಶ್ಚಯಿಸಿದರು. ಆಗ ದೇವಹೂತಿ ತನಗೆ ಒಂದು ಗಂಡು ಮಗುವಿನ ಅಗತ್ಯತೆಯನ್ನು ವಿಷದವಾಗಿ ತಿಳಿಸಿ ಹೇಳಿದಾಗ ಅದಕ್ಕೆ ಅವರು ಒಪ್ಪಿಗೆ ನೀಡಿದರು. ಆಗ ಶ್ರೀವಿಷ್ಣು ದೇವರೇ ದೇವಹೂತಿಯ ಗರ್ಭದಲ್ಲಿ ಕಪಿಲ ಮುನಿಗಳ ಅವತಾರ ತಾಳಿದರು ಎಂದು ಭಾಗವತದಲ್ಲಿ ಉಲ್ಲೇಖವಿದೆ. ಆಮೇಲೆ ಕರ್ದಮ ಮುನಿಗಳು ಸಂಸಾರವನ್ನು ತ್ಯಜಿಸಿ ಸಂನ್ಯಾಸ ದೀಕ್ಷೆ ಸ್ವೀಕರಿಸಿ ಕಾಡಿಗೆ ತೆರಳಿದರು.

ಒಂದು ದಿನ ದೇವಹೂತಿ ತನ್ನ ಮಗ ಭಗವಾನ್ ಕಪಿಲ ಮುನಿಯ ಹತ್ತಿರ ತನ್ನ ಅಂತರಾಳದ ಮನಸ್ಸಿನಲ್ಲಿ ಹುದುಗಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿ ತನ್ನ ಈ ಅಜ್ಞಾನ ಎಂಬ ಅಂಧಕಾರದಿಂದ ಮುಕ್ತಿ ಗೊಳಿಸು ಎಂದು ಬೇಡಿಕೊಂಡಳು. ಆಗ ಕಪಿಲ ಮಹಾ ಮುನಿಗಳು ತನ್ನ ತಾಯಿಯ  ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ, ಕೊನೆಯಲ್ಲಿ ಗರ್ಭಸ್ಥ ಜೀವಿಯ ಬೆಳವಣಿಗೆಯ ಬಗ್ಗೆಯೂ ಕೂಡಾ ಒಂದಿಷ್ಟು ಮಾಹಿತಿಗಳನ್ನು ತನ್ನ ತಾಯಿಗೆ ನೀಡುತ್ತಾರೆ. ಆ ಶ್ಲೋಕಗಳ  ಯಥಾವತ್  ತಾತ್ಪರ್ಯ ಹೀಗಿದೆ.

"ಅಮ್ಮಾ, ಜೀವಿಯು  ಮಾನವ ದೇಹವನ್ನು ಪಡೆಯಬೇಕಾದರೆ, ಅವನು ಭಗವಂತನ ಪ್ರೇರಣೆಯಿಂದ, ತನ್ನ ಹಿಂದಿನ ಜನ್ಮದ ಕರ್ಮನುಸಾರಕ್ಕೆ ಅನುಗುಣವಾಗಿ ಪುರುಷ ವೀರ್ಯಕಣದ ಮೂಲಕ ಸ್ತ್ರೀಯ ಗರ್ಭಾಶಯವನ್ನು ಪ್ರವೇಶಿಸುವನು.

"ಅಲ್ಲಿ ಒಂದು ರಾತ್ರಿಯಲ್ಲಿ ಸ್ತೀಯ ರಜಸ್ಸಿನಲ್ಲಿ ಕಲೆತು 'ಕಲಲ' ಎಂಬ ರೂಪ ತಾಳುತ್ತದೆ. ಐದು ರಾತ್ರಿಗಳಲ್ಲಿ ಬುದ್ದುದನಾಗಿ, ಹತ್ತು ದಿನಗಳಲ್ಲಿ ಬೋರೆಯ ಹಣ್ಣಿನಂತೆ ಸ್ವಲ್ಪ ಗಟ್ಟಿಯಾಗುತ್ತದೆ. ಅನಂತರ ಮಾಂಸದ ಮುದ್ದೆಯ ಅಥವಾ ಮೊಟ್ಟೆಯ ಆಕಾರ ತಳೆಯುತ್ತದೆ. "ಒಂದು ತಿಂಗಳಲ್ಲಿ ಅದರಲ್ಲೇ ಅದರ ತಲೆಯು ಏರ್ಪಡುವುದು. ಎರಡು ತಿಂಗಳುಗಳಲ್ಲಿ ಕೈ, ಕಾಲು ಮುಂತಾದ ಅವಯವಗಳ ಉತ್ಪತ್ತಿಯಾಗುವುದು. ಮೂರು ತಿಂಗಳಿನಲ್ಲಿ ಉಗುರು, ರೋಮ, ಮೂಳೆ, ಚರ್ಮ, ಹೆಣ್ಣು ಅಥವಾ ಗಂಡು ಎ೦ದು ಸೂಚಿಸುವ ಚಿಹ್ನೆ ಹಾಗೂ ಇತರ ದೈಹಿಕ ಭಾಗಗಳು ಉತ್ಪನ್ನವಾಗುತ್ತವೆ.

"ನಾಲ್ಕು ತಿಂಗಳುಗಳಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯಗಳೆಂಬ  ಸಪ್ತ  ಧಾತುಗಳೂ ಉಂಟಾಗುವವು. ಐದನೆಯ ತಿಂಗಳಲ್ಲಿ ಆ ಭ್ರೂಣಕ್ಕೆ ಹಸಿವು ಮತ್ತು ಬಾಯಾರಿಕೆಗಳ ಅನುಭವವೂ ಆಗ ತೊಡುಗುತ್ತವೆ. ಆರನೆಯ ತಿಂಗಳಿನಲ್ಲಿ ಅದು ಗರ್ಭದ ಚೀಲದಿಂದ ಆವರಿಸಲ್ಪಟ್ಟು ಗರ್ಭ ಕೋಶದ ಬಲಭಾಗದಲ್ಲಿ ತಿರುಗುವುದು.

"ಆಗ ತಾಯಿಯು ತಿಂದಿರುವ ಅನ್ನ ನೀರುಗಳಿಂದ ಎಲ್ಲಾ ಧಾತುಗಳು ಪುಷ್ಟವಾಗ ತೊಡಗುವುವು. ಹಾಗೆಯೇ ಅದು ಕ್ರಿಮಿ ಕೀಟ ಮುಂತಾದ ಜಂತುಗಳಿಗೆ ಉತ್ಪತ್ತಿ ಸ್ಥಾನವಾದ ಮಲ-ಮೂತ್ರಗಳ ಹಳ್ಳದಲ್ಲಿ ಬಿದ್ದುಕೊಂಡಿರುವುದು. "ಅದರ ದೇಹವು ತುಂಬಾ ಕೋಮಲ ಆಗಿರುವುದರಿಂದ ಅಲ್ಲಿಯ ಹಸಿದ ಕ್ರಿಮಿಗಳು ಅದರ ಅಂಗಾಂಗಗಳನ್ನು ಕಚ್ಚುವುವು. ಆ ನೋವನ್ನು ತಾಳಲಾರದೇ ಆಗಿಂದಾಗ್ಗೆ ಮೂರ್ಛೆ ಹೋಗುತ್ತಾ ಇರುವುದು. 

"ತಾಯಿಯು ತಿಂದಿರುವ ಕಹಿ, ಖಾರ, ಒಗರು, ಉಪ್ಪು, ಹುಳಿ ಮುಂತಾದ ತೀಕ್ಷ್ಣ ಪದಾರ್ಥಗಳ ಸ್ಪರ್ಶದಿಂದ ಅದರ ದೇಹಕ್ಕೆಲ್ಲಾ ಪೀಡೆಯುಂಟಾಗುವುದು.  "ಆ ಜೀವಿಯು  ತಾಯಿಯ ಗರ್ಭಾಶಯದಲ್ಲಿ ಗರ್ಭಚೀಲದಿಂದ ಮುಚ್ಚಲ್ಪಟ್ಟು ಕರುಳಬಳ್ಳಿಗಳಿಂದ ಸುತ್ತುವರಿಯಲ್ಪಡುತ್ತದೆ. ಅದು ಬೆನ್ನನ್ನೂ, ಕೊರಳನ್ನೂ ಕುಂಡಲಾಕಾರವಾಗಿ ಬಗ್ಗಿಸಿಕೊಂಡು ತಲೆಯು ಹೊಟ್ಟೆಯ ಕಡೆಗೆ ವಾಲಿರುತ್ತದೆ.

"ಅದು ಪಂಜರದಲ್ಲಿ ಸೆರೆಸಿಕ್ಕಿದ ಹಕ್ಕಿಯಂತೆ ಪರಾಧೀನವಾಗಿ, ತನ್ನ ಅಂಗಾಂಗಗಳನ್ನು ಆಡಿಸುವುದಕ್ಕೂ ಅಸಮರ್ಥವಾಗಿರುತ್ತದೆ. ಆಗಲೇ ಅದೃಷ್ಟದ ಪ್ರೇರಣೆಯಿಂದ ಅದಕ್ಕೆ ಸ್ಮರಣ ಶಕ್ತಿಯು ಉಂಟಾಗುವುದು. ಆಗ ತನ್ನ ನೂರಾರು ಜನ್ಮಗಳ ಕರ್ಮಗಳು ನೆನಪಾಗಿ ಪಶ್ಚಾತ್ತಾಪದಿಂದ ನಿಟ್ಟುಸಿರು ಬಿಡುತ್ತದೆ ಆ ಜೀವ. ಅಂತಹ ಸ್ಥಿತಿಯಲ್ಲಿ ಅದಕ್ಕೆ ನೆಮ್ಮದಿಯಾದರೂ ಹೇಗೆ ತಾನೇ ದೊರೆಯಲು ಸಾಧ್ಯ? 

"ಏಳನೆಯ ತಿಂಗಳು ಪ್ರಾರಂಭವಾದಾಗಿನಿಂದ ಅದಕ್ಕೆ ಜ್ಞಾನ ಶಕ್ತಿಯೂ ಉಂಟಾಗುವುದು. ಆದರೆ ಪ್ರಸೂತಿ ವಾಯುವಿನಿಂದ ಅತ್ತ ಇತ್ತ ಕದಲಿಸ್ಪಡುತ್ತಾ, ಅದೇ ಹೊಟ್ಟೆಯಲ್ಲಿ ಹುಟ್ಟಿಕೊಂಡ ಮಲದ ಕ್ರಿಮಿಯಂತೆ ಒಂದೆಡೆಯಲ್ಲಿ ನಿಲ್ಲದೆ ಅಲ್ಲಿಯೇ ಚಲಿಸುತ್ತಿರುತ್ತದೆ. "ಆಗ ಸಪ್ತ ಧಾತುಗಳಿಂದ ಸ್ಥೂಲ ಶರೀರದಲ್ಲಿ ಬಂಧಿತನಾದ ಆ ದೇಹಾತ್ಮದರ್ಶಿ ಜೀವವು ಅತ್ಯಂತ ಭಯಭೀತನಾಗಿ ದೀನ ವಾಣಿಯಿಂದ ಪರಮಾತ್ಮನ ಕೃಪೆಯನ್ನು ಯಾಚಿಸುವುದು. 

ತನ್ನನ್ನು ಆ ತಾಯಿಯ ಗರ್ಭವಾಸಕ್ಕೆ ಸೇರಿಸಿದ ಆ ಪರಮಾತ್ಮನಿಗೆ ಕೈ ಜೋಡಿಸಿ "ಪ್ರಭುವೇ ನಾನು ತುಂಬಾ ಅಧಮನಾಗಿರುವೆನು. ನೀನು ಕೊಟ್ಟಿರುವ ಈ ಗತಿಯು ನನಗೆ ಯೋಗ್ಯವೇ ಆಗಿದೆ. ಅತ್ಯಂತ ದುಃಖದಿಂದ ತುಂಬಿರುವ ಈ ಗರ್ಭಾಶಯದಲ್ಲಿ ನಾನು ಬಹು ಕಷ್ಟದಿಂದ ಇದ್ದರೂ, ಇದರಿಂದ ಹೊರ ಬಂದು ಸಂಸಾರಮಯವಾದ ಕತ್ತಲೆಯ ಬಾವಿಯಲ್ಲಿ ಬೀಳಲು ನನಗೆ ಖಂಡಿತವಾಗಿ ಇಷ್ಟವಿಲ್ಲ. ಏಕೆಂದರೆ , ಅಲ್ಲಿಗೆ ಹೋಗುವ ಜೀವಿಯನ್ನು ನಿನ್ನ ಮಾಯೆಯು ಆವರಿಸಿಬಿಡುತ್ತದೆ. ಇದರಿಂದ ಅವನಿಗೆ ಶರೀರದಲ್ಲಿ ಅಹಂ ಬುದ್ಧಿಯು ಉಂಟಾಗುತ್ತದೆ ಹಾಗೂ ಅದರ ಪರಿಣಾಮದಿಂದ ಈ ಸಂಸಾರ ಚಕ್ರದಲ್ಲಿಯೇ ಬೀಳಬೇಕಾಗುತ್ತದೆ. ಆದ್ದರಿಂದ ಅನೇಕ ಪ್ರಕಾರದ ದೋಷಗಳಿಂದ ಕೂಡಿದ ಈ ಸಂಸಾರದ ದುಃಖವು ನನಗೆ ಪುನಃ ದೊರಕದಿರಲಿ "  ಎ೦ದು ಪ್ರಾರ್ಥಿಸುವುದು.

ಕಪಿಲ ಮುನಿಗಳು ತಾಯಿಗೆ ತನ್ನ ಮಾತುಗಳನ್ನು ಮುಂದುವರಿಸುತ್ತಾ ಮತ್ತೆ ಹೇಳುತ್ತಾರೆ. "ಅಮ್ಮಾ.....ಆ ಒಂಬತ್ತು ತಿಂಗಳ ಜೀವವು ಹೀಗೆ ಗರ್ಭದಲ್ಲಿಯೇ ವಿವೇಕ ಸಂಪನ್ನನಾಗಿ ಭಗವಂತನನ್ನು ಸ್ತುತಿಸಿರುತ್ತದೆ. ಆಗ ಕೆಳಮುಖವಾಗಿರುವ ಶಿಶುವನ್ನು ಪ್ರಸವ ಕಾಲದ ವಾಯುವು ಒಡನೆಯೇ ಹೊರಬರಲು ತಳ್ಳಿಬಿಡುತ್ತದೆ.  "ಹೀಗೆ ಇದ್ದಕ್ಕಿದ್ದಂತೆ ಆ ವಾಯು ಹೊರಗೆ ನೂಕಿದಾಗ ಆ ಮಗುವು ತುಂಬಾ ಕಳವಳಗೊಂಡು ತಲೆಕೆಳಗಾಗಿ ಅತೀ ಕಷ್ಟದಿಂದ  ಹೊರಗೆ ಬರುವುದು. ಆಗ ಅದರ ಶ್ವಾಸ ಗತಿಯು ತಡೆಯಲ್ಪಟ್ಟು ಹಿಂದಿನ ಸ್ಮೃತಿಯು ಕಳೆದು ಹೋಗುವುದು."

ಇದಿಷ್ಟು ಶ್ರೀ ಮದ್ಭಾಗವತದಲ್ಲಿ ಮಗುವಿನ ಜನ್ಮದ ಮೊದಲಿನ ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣದ ಬೆಳವಣಿಗೆಯ ಬಗ್ಗೆ ಸಾವಿರಾರು ವರುಷಗಳ ಹಿಂದೆ ಬರೆದ ಮಾಹಿತಿಗಳು. ಇದನ್ನು ಓದಿದರೆ ನಮಗೆ ನಿಜವಾಗಿಯೂ ವಿಸ್ಮಯ ಆಗುವುದಿಲ್ಲವೇ?

ನಮ್ಮ ಪುರಾಣ ಗ್ರಂಥಗಳಲ್ಲಿ ಇಂತಹ ಹಲವಾರು ವಿಸ್ಮಯಕಾರಿ ವಿಷಯಗಳನ್ನು ಓದಿದಾಗ ನಮ್ಮ ಋಷಿ ಮುನಿಗಳ ತ್ರಿಕಾಲ ಜ್ಞಾನ ಮತ್ತು ಅವರ ಸುಪ್ತ ಮನಸ್ಸಿನಲ್ಲಿ ಅಡಗಿರುವ  ದೈವಿಕ  ಅಥವಾ ಅತೀಂದ್ರಿಯ ಶಕ್ತಿಗಳ ಬಗ್ಗೆ ನಾವೆಲ್ಲರೂ ಒಮ್ಮೆ ಯೋಚಿಸಲೇ ಬೇಕು.

(ಭಾಗವತ ಪುರಾಣದಲ್ಲಿ ವೇದ ವ್ಯಾಸರು ಬರೆದ  ವಿಸ್ಮಯಕಾರಿ ಮಾಹಿತಿಗಳು)

(ಆಧಾರ) ಸತೀಶ್ ಶೆಟ್ಟಿ ಚೇರ್ಕಾಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ