ಗರ್ಭಿಣಿಯರ ಆರೋಗ್ಯಕ್ಕೆ ಬೆಣ್ಣೆ ಹಣ್ಣು ಉತ್ತಮ !

ಗರ್ಭಿಣಿಯರ ಆರೋಗ್ಯಕ್ಕೆ ಬೆಣ್ಣೆ ಹಣ್ಣು ಉತ್ತಮ !

ಬೆಣ್ಣೆ ಹಣ್ಣು (ಬಟರ್ ಫ್ರುಟ್) ಅಥವಾ ಅವೊಕಾಡೋ ಆರೋಗ್ಯಕರ ಹಣ್ಣಾಗಿದ್ದು, ಇದು ಎಲ್ಲಾ ವಯೋಮಾನದವರಿಗೆ ಅದರಲ್ಲೂ ಮಧುಮೇಹಿ ಹಾಗೂ ಗರ್ಭಿಣಿಯರಿಗೆ ಅನೇಕ ಪೌಷ್ಟಿಕ ಪ್ರಯೋಜನಗಳನ್ನು ಒದಗಿಸುತ್ತದೆ. ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್‌ಗಳು ಸಮೃದ್ಧವಾಗಿದ್ದು, ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಗರ್ಭಿಣಿಯರಿಗೆ ಅವೊಕಾಡೋ ತಿನ್ನುವುದರಿಂದ ಆಗುವ ಪ್ರಮುಖ ಪ್ರಯೋಜನೆಗಳನ್ನು ಇಲ್ಲಿ ತಿಳಿಸಲಾಗಿದೆ.

* ಪೌಷ್ಟಿಕತೆಯ ಶಕ್ತಿ:  ಅವೊಕಾಡೋ ವಿಟಮಿನ್‌ಗಳಾದ ಅ, ಇ. ಏ. ಮತ್ತು ೧ ಕಾಂಪ್ಲೆಕ್ಸ್ (ವಿಶೇಷವಾಗಿ ಫೋಲಿಕ್ ಆಮ್ಲ), ಜೊತೆಗೆ ಪೊಟ್ಯಾಸಿಯಮ್, ಮೆನ್ನೀಸಿಯಮ್ ಮತ್ತು ಫೈಬರ್‌ನಂತಹ ಖನಿಜಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಗರ್ಭಿಣಿಯರಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುವುದರ ಜೊತೆಗೆ, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತವೆ.

* ಫೋಲಿಕ್ ಆಮ್ಲದ ಉತ್ತಮ ಮೂಲ: ಅವೊಕಾಡೋದಲ್ಲಿ ಫೋಲಿಕ್ ಆಮ್ಲ (ವಿಟಮಿನ್ B9) ಸಮೃದ್ಧವಾಗಿದೆ. ಇದು ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಮಗುವಿನ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ. ಪೋಲಿಕ್ ಆಮ್ಲವು ನರಕವಾಟದ ಕೊರತೆಗಳ (neural tube defects) ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಅವೊಕಾಡೋ ಸುಮಾರು ೨೫ ಶೇಕಡಾ ದೈನಂದಿನ ಶಿಫಾರಸು ಮಾಡಲಾದ ಫೋಲಿಕ್ ಆಮ್ಲವನ್ನು ಒದಗಿಸುತ್ತದೆ.

* ಆರೋಗ್ಯಕರ ಕೊಬ್ಬುಗಳ ಮೂಲ: ಅವೊಕಾಡೋದಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬುಗಳು (monounsaturated fats) ಇವೆ, ಇವು ಗರ್ಭಿಣಿಯರಿಗೆ ಶಕ್ತಿಯನ್ನು ಒದಗಿಸುವುದರ ಜೊತೆಗೆ ಮಗುವಿನ ಚರ್ಮ, ಮೆದುಳು ಮತ್ತು ಇತರ ಅಂಗಾಂಗಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಈ ಕೊಬ್ಬುಗಳು ತಾಯಿಯ ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ.

* ಮಲಬದ್ಧತೆಯನ್ನು ತಡೆಗಟ್ಟುತ್ತದೆ: ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಅವೊಕಾಡೋದಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಇದರಿಂದ ಗರ್ಭಿಣೆಯರು ಆರಾಮದಾಯಕವಾಗಿರಲು ಸಹಾಯವಾಗುತ್ತದೆ.

* ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ: ಬೆಣ್ಣೆ ಹಣ್ಣಿನಲ್ಲಿ ಕಡಿಮೆ ಕಾರ್ಬೋ ಹೈಡ್ರೆಟ್ ಮತ್ತು ಹೆಚ್ಚಿನ ಫೈಬರ್ ಇರುವುದರಿಂದ ರಕ್ತದ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ಗರ್ಭಾವಸ್ಥೆಯ ಸಕ್ಕರೆ ಕಾಯಿಲೆ (gestational diabete) ಅಪಾಯವನ್ನು ಕಡಿಮೆ ಮಾಡುತ್ತದೆ.

* ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕ ಗುಣಗಳು: ಅವೊಕಾಡೋದಲ್ಲಿ ಇರುವ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು (antioxidants) ಗರ್ಭಿಣಿಯರ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಒತ್ತಡದಿಂದ ಉಂಟಾಗುವ ಜೀವಕೋಶದ ಹಾನಿಯನ್ನು ತಡೆಗಟ್ಟುತ್ತವೆ. ಇದು ಗರ್ಭಾವಸ್ಥೆಯಲ್ಲಿ ಚರ್ಮದ ಸ್ಥಿತಿಗತಿಯನ್ನು (elasticity) ಸುಧಾರಿಸಲು ಸಹಾಯಕವಾಗಿದೆ.

* ಪೊಟ್ಯಾಸಿಯಮ್‌ ನಿಂದ ಕಾಲಿನ ಸೆಳೆತವನ್ನು ಕಡಿಮೆ ಮಾಡುತ್ತದೆ: ಗರ್ಭಾವಸ್ಥೆಯ ಸಮಯದಲ್ಲಿ ಕಾಲಿನ ಸೆಳೆತ (leg cramp) ಸಾಮಾನ್ಯವಾಗಿದೆ. ಅವೊಕಾಡೋದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಕಾಲಿನ ಸೆಳೆತವನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

* ತೂಕವನ್ನು ನಿಯಂತ್ರಿಸುತ್ತದೆ. ಗರ್ಭಾವಸ್ಥೆಯಲ್ಲಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯ. ಆವೊಕಾಡೋದಲ್ಲಿ ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್ ಇರುವುದರಿಂದ, ಇದು ತೃಪ್ತಿಯ ಭಾವನೆಯನ್ನು ಒದಗಿಸುತ್ತದೆ. ಇದರಿಂದ ಅತಿಯಾದ ಆಹಾರ ಸೇವನೆಯನ್ನು ತಡೆಗಟ್ಟಬಹುದು.

ಅವೊಕಾಡೋವನ್ನು ಆಹಾರದಲ್ಲಿ ಸೇರಿಸುವ ವಿಧಾನ

ಅವೊಕಾಡೋವನ್ನು ತರಕಾರಿಗಳೊಂದಿಗೆ ಸಲಾಡ್‌ ನಲ್ಲಿ ಸೇರಿಸಿ ತಿಂದರೆ ಬಹಳ ರುಚಿಕರವಾಗಿರುತ್ತದೆ. ಬೆಣ್ಣೆ ಹಣ್ಣಿನ್ನು ಇತರ ಹಣ್ಣುಗಳೊಂದಿಗೆ ಬೆರೆಸಿ ರುಚಿಕರವಾದ ಸ್ಮೂತಿಯನ್ನು ತಯಾರಿಸಬಹುದು. ಬ್ರೆಡ್‌ನ ಮೇಲೆ ಅವೊಕಾಡೋವನ್ನು ಹರಡಿ, ರುಚಿಗಾಗಿ ಮೆಣಸಿನಕಾಯಿ ಅಥವಾ ಉಪ್ಪು ಸೇರಿಸಿ ಟೋಸ್ಟ್ ತಯಾರಿಸಿ.

ಬೆಣ್ಣೆ ಹಣ್ಣು ಬಹಳ ಉತ್ತಮ ಪೋಷಕಾಂಶಗಳ ಆಗರವೇ ಆದರೂ ಕೆಲವು ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಅವೊಕಾಡೋವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ, ಏಕೆಂದರೆ ಇದರಲ್ಲಿ ಕ್ಯಾಲೊರಿಗಳು ಹೆಚ್ಚಿರುತ್ತವೆ. ವಿಶೇಷವಾಗಿ ಒಂದು ವೇಳೆ ಅಲರ್ಜಿಗಳ ಸಾಧ್ಯತೆಗಳಿದ್ದರೆ ಆಹಾರಕ್ಕೆ ಯಾವುದೇ ಹೊಸ ವಸ್ತುವನ್ನು ಸೇರಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ. 

ಬೆಣ್ಣೆ ಹಣ್ಣು ಗರ್ಭಿಣಿಯರಿಗೆ ಒಂದು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಪೋಲಿಕ್ ಆಸಿಡ್, ಆರೋಗ್ಯಕರ ಕೊಬ್ಬುಗಳು, ಫೈಬ‌ರ್ ಮತ್ತು ಇತರ ಪೋಷಕಾಂಶಗಳು ಗರ್ಭಾವಸ್ಥೆಯ ಸಮಯದಲ್ಲಿ ವಿವಿಧ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಆರೋಗ್ಯವನ್ನು ಕಾಪಾಡಲು ಸಹಾಯ ಯ ಮಾಡುತ್ತವೆ. ಸರಿಯಾದ ಪ್ರಮಾಣದಲ್ಲಿ ಅವೊಕಾಡೋವನ್ನು ಆಹಾರದಲ್ಲಿ ಸೇರಿಸುವುದರಿಂದ ಗರ್ಭಿಣಿಯರು ತಮ್ಮ ಮತ್ತು ಮಗುವಿನ ಆರೋಗ್ಯವನ್ನು ಉತ್ತಮಗೊಳಿಸಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ