ಗಾಂಧಿ-ವಾದ
ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ
ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ
ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು
ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತು
ಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದೆ
ಬೆನ್ನು ಬಗ್ಗಿ ಹೋದರೂ ಹೊಡೆತ ನಿಲ್ಲಲಿಲ್ಲ
ಭಂಡ ಜನರ ಮುಂದೆ ಷಂಡರಾದೆವು ನಾವು
ಗಾಯ ಮಾದಿಲ್ಲ ಇನ್ನೂ ಕಟ್ಟಿದೆ ಕೀವು
ಸಗ್ಗವಿದೆ ಕೊನೆಯಲ್ಲಿ ಎಂದು ನೀನೇನೋ ಹೇಳಿದೆ
ಅಗ್ಗವಾಯಿತೇನೋ ಬದುಕು ನಿನ್ನವರದು ನಿನಗೆ?
ಕಂಡವರು ಯಾರು ನಿನ್ನ ಅ-ಹಿಂಸೆಯ ನಾಕ?
ನಮ್ಮ ನೆತ್ತರು ಬಸಿದೇ ತಲುಪಬೇಕೆ ಆ ಸತ್ಯಲೋಕ
ಬಕ್ಕ ತಲೆಯ ನೀನು ಟೋಪಿ ಹಾಕಿದ್ದು ಕಾಣೆ
ರೊಕ್ಕ ತಿಂದುಂಡರು ನಿನ್ನ ಟೋಪಿ ಹಾಕಿದ ಜನ
ತಂತಮ್ಮ ಟೋಪಿಗಳ ನಮ್ಮ ತಲೆಗೇರಿಸಿದರು
ನಿನ್ನದಲ್ಲವೇ ಟೋಪಿ ಎಂದು ಒಪ್ಪಿದೆವು ನಾವು
ನೂಲು ನೂತು ನೂತು ಹೂತುಹೋಯಿತು ಜೀವ
ಚರಕವಾಯಿತು ಗಾಣ ನರಕವಾಯಿತು ಬದುಕು
ನಮ್ಮ ನೂಲಿನ ಬಟ್ಟೆಯುಟ್ಟು ಆಳಿದವರೇ ಎಲ್ಲ
ನಿನ್ನ ಹೆಸರಿನ ನೂಲು,ನಿನ್ನ ಶಿಷ್ಯರದೇ ರೂಲು
ಆತ್ಮ ಪರಮಾತ್ಮರು ಕಮ್ಮಿಯಿದ್ದರೇ ನಮ್ಮ ನಾಡಿನಲಿ
ಮಹಾತ್ಮ ನೀನೊಬ್ಬ ಬೇರೆ ಸೇರಿಕೊಂಡು
ಬಿಳಿಯರು ಇನ್ನೆರಡು ದಿನವಿದ್ದರೂ ಸರಿಯಿತ್ತು
ತೊಳೆದು ಹೋದೆವು ನಿನ್ನ ಹೇರಿಕೊಂಡು
(ಈ ಕವನದ ವಸ್ತು ವಿವಾದಕ್ಕೆ ಕಾರಣವಾಗುವುದು ಸಹಜ. ವಸ್ತು ಮತ್ತು ಶೈಲಿಯನ್ನು ಪ್ರತ್ಯೇಕಿಸಿ ವಿಮರ್ಶಿಸಬೇಕಾಗಿ ವಿನಂತಿ.ಸದ್ಯಕ್ಕೆ ಗಾಂಧಿವಾದದ ಬಗ್ಗೆ ಜುಗುಪ್ಸೆ ಕಂಡರೂ ಗಾಂಧಿಯ ಬಗ್ಗೆ ನನ್ನ ಹುಡುಕಾಟ ಇನ್ನೂ ನಿಂತಿಲ್ಲ.)