ಗಾಲಿಬ್ ಸ್ಮೃತಿ
‘ಗಾಲಿಬ್ ಸ್ಮೃತಿ - ಗಜಲ್ ಗುಲ್ದಸ್ಥ’ ಇದು ಡಾ. ಮಲ್ಲಿನಾಥ ತಳವಾರರ ಪ್ರಥಮ ಗಜಲ್ ಸಂಕಲನ. ಕಲಬುರಗಿಯ ನೂತನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಇವರು ಈಗಾಗಲೇ 12 ಕೃತಿಗಳನ್ನು ಸಾಹಿತ್ಯ ಸರಸ್ವತಿಗೆ ಅರ್ಪಿಸುವ ಮೂಲಕ ಪರಿಚಿತರಾದವರು. ಆದರೆ ಆದಕ್ಕೂ ಹೆಚ್ಚಾಗಿ ಅವರು ಸಹೃದಯರನ್ನು ತಲುಪಿದ್ದು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು ಗಜಲ್ ಕಾರರಾಗಿ. ಅಧ್ಯಯನಪೂರ್ಣ ಬರೆವಣಿಗೆಯಲ್ಲಿ ತೊಡಗಿದ ಡಾ. ತಳವಾರರು ಸಾಕಷ್ಟು ಗಜಲ್ಗಳನ್ನು ರಚಿಸಿದ್ದರೂ ಗಜಲ್ ಸಂಕಲನ ಪ್ರಕಟಿಸಿದ್ದು 2020 ರಲ್ಲಿ ಪ್ರಕಟವಾದ ಗಾಲಿಬ್ ಸ್ಮೃತಿ . ಈ ಕೃತಿಯ ಪ್ರಕಾಶಕರು ಚಿರುಶ್ರೀ ಪ್ರಕಾಶನ ಗದಗ. ಒಟ್ಟು 151 ಪುಟಗಳಿರುವ ಕೃತಿಯ ಬೆಲೆ 90 ರೂಪಾಯಿಗಳು. ಕೃತಿಯ ತಲೆಬರಹಕ್ಕೆ ಒಪ್ಪುವ ರೀತಿಯಲ್ಲಿ ಗಜಲ್ ಸಾಮ್ರಾಟನಾದ ಗಾಲಿಬ್ ನ ಭಾವಚಿತ್ರದೊಂದಿಗೆ ಕವಿಗೋಷ್ಠಿಯನ್ನು ಪ್ರತಿನಿಧಿಸುವ ಚಿತ್ರ ಮತ್ತು ಲೇಖನಿಗರಿಯೊಂದಿಗೆ ಕೃತಿಯ ಮುಖಪುಟ ಅಂದವಾಗಿ ಮೂಡಿಬಂದಿದೆ.
ಗಾಲಿಬ್ ಸ್ಮೃತಿಯು ನೂರೊಂದು ಗಜಲ್ ಗಳನ್ನು ಒಳಗೊಂಡ ಗುಚ್ಛ. ‘ರತ್ನರಾಯಮಲ್ಲ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಡಾ. ತಳವಾರರು ಗಜಲ್ ನಲ್ಲಿ ಮಲ್ಲಿ ಎಂಬ ತಖಲ್ಲುಸ್ ನಾಮವನ್ನು ಬಹು ಅರ್ಥಪೂರ್ಣವಾಗಿ ಬಳಸಿ ಗಜಲ್ ರಚಿಸಿದ್ದಾರೆ. ಗಾಲಿಬ್ ಸ್ಮೃತಿಯು ಗಜಲ್ ಸಂಕಲನ ಆಗಿದ್ದರೂ ಇದರಲ್ಲಿ ಗಜಲ್ ಸಾಹಿತ್ಯದ ಬಗ್ಗೆ ಮಹತ್ವವಾದ ಸೈದ್ಧಾಂತಿಕ ಮಾಹಿತಿ ಯನ್ನು ನೀಡಿರುವುದು ಈ ಕೃತಿಯ ವೈಶಿಷ್ಟ್ಯ. ಈ ಕೃತಿಯನ್ನು ನಾವು ಎರಡು ಭಾಗಗಳಲ್ಲಿ ಓದಬಹುದು ಒಂದು ಗಜಲ್ ಸಾಹಿತ್ಯದ ಬಗೆಗಿನ ಮಾಹಿತಿ. ಎರಡನೆಯದು ತಳವಾರರ ನೂರೊಂದು ಗಜಲ್ ಗಳು.
ಹಲವು ಗಜಲ್ ಗ್ರಂಥಗಳನ್ನು ಅಧ್ಯಯನ ಮಾಡಿ, ಅಲ್ಲಿನ ವಿಷಯವನ್ನು ಕರಗತ ಮಾಡಿಕೊಂಡು, ಗಜಲ್ ಲೋಕದಲ್ಲಿ ಸಂಚರಿಸಿದ ಡಾ. ತಳವಾರರು ಗಜಲ್ ಲೋಕದಲ್ಲೊಂದು ಸುತ್ತು ಶೀರ್ಷಿಕೆಯ ಅಡಿಯಲ್ಲಿ ಗಜಲ್ ಸಾಹಿತ್ಯದ ಪರಿಚಯ, ಗಜಲ್ ಪ್ರಕಾರಗಳ ಬಗ್ಗೆ ನವೀನಯುತವಾದ ಮಾಹಿತಿಯನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ ಇದು ಗಜಲ್ ರಚನಾಕಾರರಿಗೆ ಮಾರ್ಗದರ್ಶಿಯಂತಿದೆ.
ಗಜಲ್ ಪದವು ಅರೇಬಿಕ್ ನ ಗಜಲುನ್, ಗಜಾಲ್,ಗಿಜಾಲ್ ಪದಗಳಿಂದ ಬಂದಿರಬಹುದು. ಗಜಲ್ ಎಂದರೆ ಮೋಹಕ ಸನ್ನೆಗಳಿಂದ ಹೆಂಗಸರೊಡನೆ ಮಾತಾನಾಡುವುದು ಎಂದು. ಇದು ಪರ್ಷಿಯನ್ ಭಾಷೆ ಯ ಪ್ರಕಾರ ಭಾವಗೀತೆ, ಪ್ರೇಮಗೀತೆ , ಹಾಡು ಎಂದಾಗುತ್ತದೆ, ಹೀಗೆ ಗಜಲ್ ಪದದ ನಿಷ್ಪತ್ತಿ, ಅದರ ಅರ್ಥ, ಅದರ ಮೂಲ, ಇತಿಹಾಸದ ಬಗ್ಗೆ ಹೇಳುತ್ತಾರೆ. ಸಾಹಿತ್ಯಲೋಕದ ಅಪರೂಪ ಕಾವ್ಯಪ್ರಕಾರ ಗಜಲ್ . ಇದು ಜಾಗತಿಕ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವಾಗಿದ್ದು, ಗಜಲ್ ಸಾಹಿತ್ಯದ ಆರಂಭ ಮತ್ತು ಅದರ ಸ್ವರೂಪ ದ ಬಗ್ಗೆ ವಿವರಿಸುತ್ತಾ, ಪ್ರಮುಖ ಜಾಗತಿಕ ಗಜಲ್ ಕಾರರು ಮತ್ತು ಕನ್ನಡದ ಗಜಲಕಾರರ ಹೆಸರನ್ನು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಗಜಲ್ ನ ಆಂತರಿಕ ಮತ್ತು ಬಾಹ್ಯ ಲಕ್ಷಣಗಳ ಬಗ್ಗೆಯೂ ವಿವರಣೆ ನೀಡಿರುವುದು ಹೊಸದಾಗಿ ಗಜಲ್ ಬರೆಯುವವರಿಗೆ ದಾರಿಯನ್ನು ತೋರಿಸುವಂತಿದೆ. ಗಜಲ್ ಗೋಯಿ ಎಂದರೆ ಗಜಲ್ ಬರೆಯುವ ಕ್ರಮ, ಒಂದು ಗಜಲ್ ಹೊಂದಿರಬಹುದಾದ ಶೇರ್ ಗಳು ಅಂದರೆ ದ್ವಿಪದಿಗಳು, ದ್ವಿಪದಿಯು ಗಜಲ್ ನ ಒಂದು ಅಂಗ. ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕ. ಪ್ರತಿ ಚರಣಕ್ಕೆ ಮಿಸ್ರಾ ಎಂದು ಚರಣಗಳಿಗೆ ಮಿಸರೈನ್ ಎಂದು ಕರೆಯುವುದು , ಪ್ರತಿ ಶೇರ್ ನ ಮೊದಲ ಮಿಸ್ರಾಗೆ ಮಿಸ್ರಾ ಎ ಊಲಾ ಎಂದು ಮತ್ತು ಶೇರ್ ನ ಎರಡನೆಯ ಸಾಲಿಗೆ ಮಿಸ್ರಾ ಎ ಸಾನಿ ಎಂದು ಕರೆಯುವುದು ಅವುಗಳ ಆರ್ಥವನ್ನು ಲೇಖಕರು ಇಲ್ಲಿ ಹೇಳಿದ್ದಾರೆ. ಮಾತ್ರೆಗಳ ಆಧಾರದಲ್ಲಿ ಗಜಲ್ ಬರೆದಾಗ ಸಂಗೀತಕ್ಕೆ ಆಳವಡಿಸಲು ಅನುಕೂಲ.ಹಾಗಾಗಿ ಇಲ್ಲಿ ಗಜಲ್ ಛಂದಸ್ಸಿನ ಲಾಮಾ,ಗಾಫ,ರುಕ್ನ,ಅರ್ಕಾನಗಳ ಬಗ್ಗೆ ಉದಾಹರಣೆ ಸಮೇತ ವಿವರಿಸಿದ್ದಾರೆ.
ಗಜಲ್ ರಚನೆಯ ಪ್ರಮುಖ ಫ್ರೇಮ್ ಎಂದರೆ ಮತ್ಲಾ,ಮಕ್ತಾ, ರಧೀಪ್ , ಕಾಫಿಯಾ, ರವಿ ಅಥವಾ ರವೀಶ್. ಮತ್ಲಾ ಎಂದರೆ ಗಜಲ್ ನ ಆರಂಭದ ಶೇರ್ , ಉದಯ ಪಲ್ಲವಿ ಎಂಬರ್ಥವಿದೆ. ಗಜಲನ ಕೊನೆಯ ಶೇರ್ ಮಕ್ತಾ ಎಂದರೆ ಅಸ್ತಂಗತ, ಕವಿಯ ನಿರ್ಗಮನ. ಇಲ್ಲಿ ಗಜಲಕಾರ ತನ್ನ ಕಾವ್ಯನಾಮ ಅಂದರೆ ತಖಲ್ಲುಸ್ ನಾಮವನ್ನು ಸುಂದರ ಶಾಬ್ದಿಕ ಅರ್ಥ ಬರುವಂತೆ ಬಳಸುವುದು. ರಧೀಫ್ ಎನ್ನುವುದು ಗಜಲ್ ನ ಉದ್ದಕ್ಕೂ ಬಳಕೆಯಾಗುವ ಕೊನೆಯ ಪದ. ಇದು ಒಂದು ಪದ ಅಥವಾ ಸಂಪೂರ್ಣ ಅರ್ಥ ನೀಡುವ ಕೆಲವು ಪದಗಳ ಗುಚ್ಛ ವಾಗಿರಬಹುದು ಇದು ಗಜಲ್ ಗೆ ರಮ್ಯತೆಯನ್ನು ತಂದುಕೊಡುತ್ತದೆ. ಕಾಫಿಯಾ ಇದು ಗಜಲನ ಜೀವಾಳ. ಗಜಲ್ ನ ಬೆನ್ನೆಲುಬು. ಕಾಫಿಯ ಎಂದರೆ ಹಿಂದೆ ಬರುವುದು ಎಂದರ್ಥ, ಕಾಫಿಯಾ ಇಲ್ಲದ ಗಜಲ್ ಗಳನ್ನು ಉಹಿಸಲು ಸಾಧ್ಯವಿಲ್ಲ. ಕಾಫಿಯಾದ ಕೊನೆಯ ಅಕ್ಷರವನ್ನು ರವಿ, ರವೀಶ್ ಅಥವಾ ರೌಫ್ ಎಂದು ಕರೆಯಲಾಗುತ್ತದೆ ಹೀಗೆ ಗಜಲ್ ಲಕ್ಷಣಗಳನ್ನು ಡಾ. ತಳವಾರರು ಮನ ಮುಟ್ಟುವಂತೆ ನಿರೂಪಿಸಿದ್ದಾರೆ.
ಮುಂದುವರಿದು, ಗಜಲ್ ಪ್ರಕಾರಗಳ ಬಗ್ಗೆ ವಿವರಣೆ ಈ ಕೃತಿಯಲ್ಲಿದೆ. ಗಜಲ್ ಗಳನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು ಒಂದು ಗಜಲ ಬಾಹ್ಯರೂಪ ಅಂದರೆ ಛಂದೋ ಲಕ್ಷಣಗಳನ್ನು ಆಧರಿಸಿ ಮತ್ತೊಂದು ಗಜಲ ಅಂತರಂಗ ಅಂದರೆ ವಸ್ತು ವಿಷಯ ಭಾವವನ್ನು ಆಧರಿಸಿ ವಿಂಗಡಿಸಬಹುದು.
ಗಜಲ್ ನ ಬಾಹ್ಯ ಲಕ್ಷಣಗಳನ್ನು ಆಧರಿಸಿ ಇಲ್ಲಿ ಹತ್ತು ಪ್ರಕಾರದ ಗಜಲ್ ಪ್ರಕಾರಗಳ ಬಗ್ಗೆ ಲೇಖಕರು ಹೇಳಿದ್ದಾರೆ. ಅವುಗಳಲ್ಲಿ ಮುರದ್ದಫ್ ಗಜಲ್, ಗೈರ್ ಮುರದ್ಧಫ್ ಗಜಲ್, ಜುಲ್ ಕಾಫಿಯಾ ಗಜಲ್, ಹುಸ್ನ-ಎ-ಮತ್ಲಾ ಗಜಲ್, ಸಂಪೂರ್ಣ ಮತ್ಲಾ ಗಜಲ್, ಆಜಾದೀ ಗಜಲ್, ಸೆಹ್ ಗಜಲ್, ಸ್ವರ ಕಾಫಿಯಾ, ನಜರೀ ಗಜಲ್, ತರಹಿ ಗಜಲ್ ಗಳ ಬಗ್ಗೆ ಗಜಲ್ ಗಳ ಉದಾಹರಣೆಯ ಮೂಲಕ ವಿವರಿಸಿದ್ದಾರೆ. ಎರಡನೆಯ ರೀತಿಯಲ್ಲಿ ಗಜಲನ ಅಂತರಂಗ ಅಂದರೆ ವಸ್ತು ವಿಷಯ ಭಾವವನ್ನು ಆಧರಿಸಿ, ಮುಸಲ್ ಸಲ್ ಗಜಲ್, ಗೈರ್ ಮುಸಲ್ ಸಲ್ ಗಜಲ್, ಝೆನ್ ಗಜಲ್ , ಸಿಯಾಸಿ ಗಜಲ್,ಜಿನ್ ಸಿ ಗಜಲ್, ಸೂಫಿ ಗಜಲ್, ಆಂಟಿ ಗಜಲ್ ಗಳ ಬಗ್ಗೆ ನಿದರ್ಶನಗಳೊಂದಿಗೆ ಸೈದ್ಧಾಂತಿಕವಾದ ವಿವರಣೆ ನೀಡಿದ್ದಾರೆ. ಪ್ರತಿ ಗಜಲ್ ನ ಪ್ರಕಾರದ ಬಗ್ಗೆ ಹೇಳಿ, ಅದಕ್ಕೆ ತಮ್ಮದೆ ರಚನೆಯ ಗಜಲ್ ಗಳನ್ನು ದೃಷ್ಟಾಂತವಾಗಿ ನೀಡಿದ್ದನ್ನು ಗಮನಿಸಿದರೆ ಗಜಲಕಾರರು ಈ ಎಲ್ಲ ಪ್ರಕಾರಗಳ ಗಜಲಗಳನ್ನು ರಚಿಸಿರುವುದು ವಿಶೇಷವಾಗಿ ತಿಳಿದು ಬರುತ್ತದೆ.
ಗಾಲಿಬ್ ಸ್ಮೃತಿ ಕೃತಿಯ ಎರಡನೆಯ ಭಾಗ ಡಾ. ತಳವಾರರ ಗಜಲ್ ಗಳು. ಇಲ್ಲಿಯ ಗಜಲ್ ಗಳು ಪ್ರೀತಿ ಪ್ರೇಮ, ವಿರಹಕ್ಕೆ ಮಾತ್ರ ಸೀಮಿತವಾಗಿರದೆ, ಗೆಳೆತನ, ಸಂಬಂಧಗಳು, ಆತ್ಮಾವಲೋಕನ, ಹೊಲ ರೈತ,ಹೆತ್ತವರು, ನೋವು, ನಲಿವು, ದೈನಂದಿನ ಜೀವನದ ಜಂಜಾಟಗಳು ಇವರ ಗಜಲ್ ಗಳಲ್ಲಿವೆ. ಸಾಮಾಜಿಕ ಕಳಕಳಿಯ, ಆಧ್ಯಾತ್ಮಿಕ, ವೈಚಾರಿಕ ಚಿಂತನೆಯ, ಭಾವೈಕ್ಯತೆಯ ಗಜಲ್ ಗಳು ಓದುಗರ ಗಮನ ಸೆಳೆಯುತ್ತವೆ.
"ನೀನು ಸೇವಿಸಿದರೆ ಗಂಗಾಜಲ ನಾನು ಬೊಗಸೆವೊಡ್ಡಿದರೆ ಅದು ದಾರು
"ಎಲ್ಲರೂ ಮೋಸಗಾರರೆ ಇಲ್ಲಿ ಹಗಲು-ರಾತ್ರಿ ಒಂದೇ' ಮಲ್ಲಿ'ಗೆ ಮಲಗಲು ಬಿಡಿ "
43 ನೆ ಗಜಲ್ ಈ ಮಕ್ತಾ ಸಮಾಜದ ಜನರ ತರತಮ ಮನೋಧೋರಣೆ ಯನ್ನು ಪ್ರತಿಬಿಂಬಿಸುತ್ತದೆ.
"ಸಾಯಲು ಇಲ್ಲದ ಭಯ ಬಾಳಲೇಕೆ ಈ ಬುದ್ಧಿವಂತರ ನಾಡಲ್ಲಿ
ಸ್ವಂತದ ಅಸ್ತಿತ್ವ ರೂಪಿಸಿಕೊಳ್ಳಲು ಹೋರಾಡಬೇಕಿದೆ ದೋಸ್ತ."
"ಬೆತ್ತಲೆ ಯಾಗಲು ನಾಚದ ಮನಸ್ಸು ಬಟ್ಟೆ ತೊಡಲೇಕೆ ಹಿಂಜರಿಕೆ 'ಮಲ್ಲಿ'
ಸುಳ್ಳಿನ ಸಮಾಧಿಯ ಮೇಲೆ ಸತ್ಯದ ಪರಿಮಳವನ್ನು ಪಸರಿಸಬೇಕಿದೆ ದೋಸ್ತ"
24 ನೆಯ ಗಜಲ ಈ ಶೇರ್ ಗಳು ಪ್ರಸ್ತುತ ಸಮಾಜದ ಜನರ ನಡೆಗಳಿಗೆ ಕನ್ನಡಿ ಹಿಡಿದಂತಿದೆ.
ಪ್ರೇಮದ ಪರಿಯನ್ನು ಅನನ್ಯವಾಗಿ ಬಣ್ಣಿಸುವ ಗಜಲಗಳ ಶೇರ್ ಹೀಗಿವೆ
"ನನ್ನವಳ ಗೌರವಕ್ಕಾಗಿ ಈ ಜೀವನ ಮುಡುಪಾಗಿ ಇಟ್ಟಿರುವೆನು
ಪ್ರತಿದಿನ ಆನಂದದ ಸಾಗರದಲ್ಲಿ ತೇಲಿಸುತ್ತೇನೆ ಬೇಗಂ ಸಾಹೇಬ"
ಗಜಲ್ 44 ರ ಶೇರ್ ಗಳು
"ಚಿತ್ತಾರದ ರವಿಕೆಯ ಚಿತ್ರ ಬಿಡಿಸಿದೆ ಮನಸಲ್ಲಿ
ಮೈಮಾಟವು ರಂಗೋಲಿ ಬಿಡಿಸುತ್ತಿದೆ ಕನಸಲ್ಲಿ"
"ಒನಪು ವೈಯ್ಯಾರ ಕಂಡು ಪುಳಕಿತನಾಗಿರುವೆ
ಬೆರಳುಗಳು ವಿಹರಿಸಲು ಹವಣಿಸುತಿವೆ ಎದೆಯಲ್ಲಿ"
90ನೆಯ ಗಜಲ್ ಸೆಹ್ ಗಜಲ್ ಆಗಿದ್ದು ತಳವಾರರು ತಮ್ಮ ತಂದೆಯನ್ನು ಕುರಿತು ಬರೆದ ಗಜಲ್ ಇದಾಗಿದೆ.
ಗಜಲ್ ಪಾರಿಭಾಷಿಕ ಪದಗಳಾದ ಮಿಸ್ರಾ, ಮತ್ಲಾ, ಊಲಾ,ಸಾನಿ ಮಿಸ್ರಾ,ಕಾಫಿಯಾ, ರೌಫ್, ಏಕ ಅಲಾಮತ,ಕೈದ್, ಮಕ್ತಾ, ತಖಲ್ಲುಸ್, ಪದಗಳನ್ನು ಬಹಳ ಅರ್ಥವತ್ತಾಗಿ ಬಳಸಿ ಗಜಲ್ ಕನ್ಯೆಯ ಚಿತ್ರ ಬಿಡಿಸಿದಂತೆ ವಿಶಿಷ್ಟ ರೀತಿಯಲ್ಲಿ 91ನೆಯ ಗಜಲ್ ಅನ್ನು ರಚಿಸಿದ್ದು, ಇದು ಸಹೃದಯರ ಮನ ಸೆಳೆಯುತ್ತದೆ. ಗಜಲ್ ಕಾರರು ಗಜಲ್ ಕಡಲಲ್ಲಿ ಮುಳುಗಿರುವುದಕ್ಕೆ ಈ ಗಜಲ್ ಸಾಕ್ಷಿಯಂತಿದೆ
ಆಡುಭಾಷೆಯ ಸೊಗಡನ್ನು 97ನೆಯ ಗಜಲಿನಲ್ಲಿ ನೋಡಬಹುದು ಅದರ ಶೇರ್ ಗಳು ಹೀಗಿವೆ.
"ಸುತ್ತಿ ಸುತ್ತಿ ಮಲಗಬೇಡ ದರಿದ್ರ ಬಡಿತೈತಿ
ಖಾಲಿ ಕೈಲಿ ಕೂಡ ಬ್ಯಾಡ ಹುಚ್ ಹಿಡಿತೈತಿ"
"ಜೀವನದಾಗ ಮುಂದ ನೋಡಿ ನಡಿಬೇಕ "ಮಲ್ಲಿ"
ಬದುಕೆ ಮರೀಲಾರದಂತಹ ಪಾಠ ಕಲಿಸತೈತಿ"
ಅರ್ಥವತ್ತಾದ ಪದಪುಂಜಗಳು ತಳವಾರರ ಗಜಲ್ ಗಳಲ್ಲಿವೆ. ಪದಗಳ ಅರ್ಥ ಹುಡುಕಲು ನಿಘಂಟು ಬಳಸಬೇಕಿಲ್ಲ, ಸಾಮಾನ್ಯರಿಗೂ ಅರ್ಥವಾಗುವಂತೆ, ಮನ ಮುಟ್ಟುವಂತಹ ಗಜಲ್ಗಳು ಇಲ್ಲಿವೆ. ಕೆಲವು ಗಜಲ್ ಗಳಲ್ಲಿ ಹಿಂದಿ, ಉರ್ದು ಪದಗಳ ಬಳಕೆಯನ್ನು ಕಾಣಬಹುದು ಕಫನ್, ದಫನ್, ತಾಲೀಮು, ಷಾಗಿರ್ದಾ, ಜಮಾನ, ಜಿಂದಗಿ, ದೂಧ್, ಮುಬಾರಕ್, ಮಹೀನಾ, ಬಾಜರ್, ಬಿಕರಿ, ಬಿರಿಯಾನಿ ಮುಂತಾಧವು. ಗಜಲ್ ರಚನೆಯಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ. ಕೆಲವೊಮ್ಮ ಆ ಪದಗಳೇ ಗಜಲಿನ ಮೆರಗನ್ನು ಹೆಚ್ಚಿಸುತ್ತವೆ. ಆಂಗ್ಲ ಭಾಷೆಯ ಪ್ರಭಾವ ಇಂದು ಎಲ್ಲರಿಗೂ ಅಧಿಕವಾಗಿಯೆ ಆಗಿದೆ ಆಂಗ್ಲಪದಗಳನ್ನು ಬಳಸಿದರೆ ಪರಿಣಾಮಕಾರಿ ಎಂಬ ಮನಸ್ಥಿತಿಯೂ ಇದೆ ಅದಕ್ಕೆಂದೇ ಇಲ್ಲಿ ಗಜಲಕಾರರು ಸಿಸಿ ಕ್ಯಾಮರಾ, ಸ್ಟೇಟಸ್, ಪೋಸ್ಟ್ ಎಂಬ ಆಂಗ್ಲ ಭಾಷೆಯ ಪದಗಳನ್ನು ಬಳಸಿದ್ದಾರೆ. ಗಜಲಗಳಲ್ಲಿ ರಧೀಫ್ ಪುನರಾವರ್ತನೆಯಾಗದೇ ಭಿನ್ನವಾದ ರಧೀಫ್ ಗಳನ್ನು ಬಳಸಿದ್ದಾರೆ.
ಇಲ್ಲಿನ ಗಜಲ್ ಗಳು ಕೋಮಲ ಭಾಷೆಯಲ್ಲಿ, ಸರಳ, ಸುಂದರವಾಗಿ ಅರ್ಥಪೂರ್ಣವಾದ ರೂಪಕ, ಪ್ರತಿಮೆಗಳಲ್ಲಿ ಮೂಡಿಬಂದಿವೆ. ಡಾ. ತಳವಾರರು ತಮ್ಮ ಮಾತಿನ ಮಂಟಪದಲ್ಲಿ ಸಮಾಜದ ಮುಖವನ್ನು ತಮ್ಮೊಳಗಿನ ಮುಖವನ್ನು ಕನ್ನಡಿ ಹಿಡಿದು ನೋಡಿಕೊಂಡಿದ್ದಾರೆ ಹಸಿವು ಸಾವುನೋವು ಪ್ರೀತಿ ನಿವೇದನೆ ಸಾಮಾಜಿಕ ವ್ಯವಸ್ಥೆಯಲ್ಲಿನ ಉಸರವಳ್ಳಿ ದೋಸ್ತ ಸಂಕೇತ ಮಾಡಿಕೊಂಡು ರಚನೆಯಲ್ಲಿ ತೊಡಗಿದ್ದಾರೆ ಪ್ರೀತಿ-ಪ್ರೇಮ ಹೇಗೆ ಮಾಡಬೇಕು ಜೀವನದಲ್ಲಿ ಪ್ರೇಮವೇ ಪ್ರೇಮವೇ ಸರ್ವಸ್ವ ಆದರೆ ಅದನ್ನು ಪ್ರಚಾರ ಮಾಡಲಾರೆ ತಾಜ್ ಮಹಲ್ ಕಟ್ಟಲಾರೆ ಇತಿಹಾಸ ಪುಟ ಸೇರಬೇಕು ಹುಚ್ಚು ಇಲ್ಲ, ಪ್ರೀತಿಯ ಬಂಧ ಹೃದಯದಲ್ಲಿ ಬೆಚ್ಚಗಿರಬೇಕು ಎನ್ನುವ ಆಶಯವನ್ನು ಡಾ. ಮಲ್ಲಿನಾಥರ ಗಜಲ್ ಗಳು ಧ್ವನಿಸುತ್ತವೆ.
ಗಜಲ್ ಸಾಹಿತ್ಯದ ಬಗೆಗೆ ಸ್ಪಷ್ಟ ಮಾಹಿತಿ ಹೊಂದಿರುವ ತಳವಾರರು ಸ್ವರ ಕಾಫಿಯಾ, ಜುಲ್ ಕಾಫಿಯಾ, ತರಹಿ ಗಜಲ್ ಗಳ ಜೊತೆಗೆ ಮಾತ್ರೆಗಳ ಆಧಾರಿತ ಗಜಲ್ ರಚನೆಯಲ್ಲಿ ತೊಡಗಿದ್ದಾರೆ ಸಮಕಾಲೀನ ಸಾಹಿತ್ಯದ ಓಟ-ನೋಟಗಳ ವಿದ್ಯಾರ್ಥಿಯಾಗಿಯೇ ಸಾಗಿ ತಮ್ಮತನದ ಛಾಪನ್ನು ಒತ್ತಿದ್ದಾರೆ ಅನುಭವಗಳ ನವೀನ ಸೃಷ್ಟಿಯ ಕಡೆ ಶಕ್ತಿಯುತವಾದ ಹೆಜ್ಜೆಯಿಟ್ಟಿದ್ದಾರೆ ರದೀಪ್ , ಶೇರುಗಳನ್ನು ಬೆನ್ನಿಗಂಟಿಸಿಕೊಂಡು ನಾದ ,ಸ್ವಾದವನ್ನು ಅಕ್ಕಸಾಲಿಗ ಪೆಟ್ಟಿನ ಅರಿವಿನಿಂದಲೇ ಸಾಗಿದ್ದಾರೆ ಎಂದು ಮುನ್ನುಡಿಯಲ್ಲಿ ಸಾಹಿತಿ, ಪರ್ತಕರ್ತ ಜಿ. ಸುಬ್ರಾಯ್ ಬಕ್ಕಳ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಜಲ್ ಗಳ ರಚನೆಯನ್ನು ಗಂಭೀರವಾಗಿ ಪರಿಗಣಿಸಿ ಆ ಕ್ಷೇತ್ರದಲ್ಲಿ ದುಡಿಯುತ್ತಿರುವವರಲ್ಲಿ ಡಾ. ತಳವಾರರು ಪ್ರಮುಖರಾಗಿದ್ದಾರೆ ದಿನನಿತ್ಯ ಕಾಣುವ ಸುತ್ತಮುತ್ತಲ ಘಟನೆಗಳನ್ನು ಸೂಕ್ಷ್ಮ ಕಣ್ಣಿನಿಂದ ಕಂಡು ಅದನ್ನು ಗಜಲ್ ರೂಪದಲ್ಲಿ ನೀಡುವ ಕಲೆಯಲ್ಲಿ ಡಾ. ಮಲ್ಲಿನಾಥ ರು ಸಾಮಾಜಿಕ ತಾಣಗಳ ಮೂಲಕ ರತ್ನರಾಯಮಲ್ಲ ಎಂಬ ಅಂಕಿತದಿಂದ ಪ್ರೇಮಿಗಳಿಗೆ ಚಿರಪರಿಚಿತರಾಗಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಡಿ.ವಿ.ಪರಶಿವಮೂರ್ತಿಯವರು ಹೇಳಿದ್ದಾರೆ.
ಒಟ್ಟಾರೆಯಾಗಿ ಗಾಲಿಬ್ ಸ್ಮೃತಿ ಕೃತಿಯು ಇತರೆ ಗಜಲ್ ಸಂಕಲನಗಳಿಗಿಂತ ಭಿನ್ನವಾಗಿದ್ದು, ಓದುಗರ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಇಂತಹ ಮತ್ತಷ್ಟು ಕೃತಿಗಳು ಡಾ ಮಲ್ಲಿನಾಥರಿಂದ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಲಿ.
-- ಶ್ರೀಮತಿ ಭಾಗ್ಯವತಿ, ಕೆಂಭಾವಿ, ಯಾದಗಿರಿ