ಗಾಳಿಗೆ ತೊಟ್ಟಿಲ ಕಟ್ಟಿ

ಗಾಳಿಗೆ ತೊಟ್ಟಿಲ ಕಟ್ಟಿ

ಪುಸ್ತಕದ ಲೇಖಕ/ಕವಿಯ ಹೆಸರು
ದೇವು ಮಾಕೊಂಡ
ಪ್ರಕಾಶಕರು
ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ, ವಿಜಯಪುರ.
ಪುಸ್ತಕದ ಬೆಲೆ
ರೂ.90.00, ಮುದ್ರಣ: 2021

“ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು ನನ್ನ ಅಭಿಪ್ರಾಯ. ದೇವು ಮಾಕೊಂಡ ಅವರ ʻಗಾಳಿಗೆ ತೊಟ್ಟಿಲ ಕಟ್ಟಿʼ ಪುಸ್ತಕದ ಬಗ್ಗೆ ಬರೆದ ನಾ ಬರೆದ ವಿಮರ್ಶೆ ನಿಮ್ಮ ಓದಿಗಾಗಿ ಇಲ್ಲಿದೆ...

“ಗಾಳಿಗೆ ತೊಟ್ಟಿಲು ಕಟ್ಟಲು ಸಾಧ್ಯವೇ? ಅಸಾಧ್ಯವೇ? ಕಾವ್ಯ ನೇಯುವ ಸೃಜನಶೀಲತೆಯಿಂದ ಇವೆರಡನ್ನೂ ಮಾಡಬಹುದು ಎಂದಿದ್ದಾರೆ ʻಗಾಳಿಗೆ ತೊಟ್ಟಿಲು ಕಟ್ಟಿʼ ಎಂಬ ಅಭೂತಪೂರ್ವ ಶೀರ್ಷಿಕೆ ಹೊತ್ತ ಕವನಸಂಕಲನದ ಕರ್ತೃ ದೇವು ಮಾಕೊಂಡ. ಅಸಾಧ್ಯವಾದುದನ್ನು ಸಾದುವಾಗಿಸಿ ಮಾಗಿಸುವ ಪ್ರಕ್ರಿಯೆ ಇಲ್ಲಿನ ಎಲ್ಲ ಕವಿತೆಗಳಲ್ಲಿ ನಡೆದಿದೆ. ಇದುವೆ ಇಲ್ಲಿನ ಪದ್ಯಗಳ ಹೆಚ್ಚುಗಾರಿಕೆ. ಗಾಳಿಗೆ ತೊಟ್ಟಿಲು ಕಟ್ಟುವುದರೊಂದಿಗೆ, ಶವಗಳು ತೊಟ್ಟಿಲು ಕಟ್ಟಿವೆ ಎಂದುಸುರಿ ಅಚ್ಚರಿ ಪಡಿಸುತ್ತಾರೆ. "ನಿನ್ನ ಕಾಲ್ದೂಳಿಗೆ ಬೆಳಗು ಹೆಪ್ಪುಗಟ್ಟಿದ ಹಗಲು , ಬಿಕ್ಕಿ ಅಳುವ ಅಲೋಕ ದನಿ , ಮಲ್ಲಿಗೆಯ ಗೋರಿ ಮೇಲೆ , ಕೇದಿಗೆಯ ಹೆರಿಗೆ , ಅಲ್ಲಿ ಶವಗಳು ತೊಟ್ಟಿಲು ಕಟ್ಟಿವೆ, ಪ್ರೀತಿ ತುಂಬಿದ ಮನುಷ್ಯರನ್ನು ಹುಡುಕುತ್ತ ಜೋಗುಳ ಹಾಡಿತು ಎನ್ನುತ್ತಾರೆ. ಸತ್ತ ಶರೀರದ ಮೌಲ್ಯ ತಿಳಿದ ನಂತರ ನಮ್ಮಿಂದ ಏನು ಮಾಡಲು ಅಸಾಧ್ಯ. ಶವವು ನಮ್ಮ ಪ್ರೀತಿಯನ್ನು ಹುಡುಕುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸತ್ತ ಮೇಲೆ ನಮಗೂ ನಮ್ಮ ಹಿಂದಿರುವ ಯಾವುದೋ ಅಲೌಕಿಕ ಶಕ್ತಿಯ ಬಗ್ಗೆ ತಿಳಿಯುತ್ತದೆ ಎಂಬುದಾಗಿ ಹೇಳಿ ಅಚ್ಚರಿ ಹುಟ್ಟಿಸುತ್ತಾರೆ. ʻಗಾಳಿಗೆ ತೊಟ್ಟಿಲ ಕಟ್ಟಿʼ ಕವಿತೆಯಲ್ಲಿ ಸಮಾಜದ ವೈರುಧ್ಯಗಳ ವಿರುದ್ಧ ಸಿಡುಕನ್ನು ಹೊರಹಾಕುತ್ತಾರೆ. ಇಲ್ಲಿ ಭಾರ ಹೊತ್ತ ಕತ್ತೆಗಳಂತೆ ಚಲಿಸಬೇಕು ಕಿವಿಗಳನ್ನು ಮಾತ್ರ ಅಲ್ಲಾಡಿಸುವ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ . ನೋವಾದರೂ ಕಂಡ ಕಂಡಲ್ಲಿ ಅಳುವಂತಿಲ್ಲ. ಅತ್ತರು ಕಣ್ಣೀರು ಒರೆಸಲು ಕೈಗಳಿಲ್ಲ. ನಮ್ಮ ಅಳುವ ನೋಡಿ ಶೋಕಿಸಲು ಈ ನೆಲವೆಂಬ ತಾಯಿಯು ಈಗ ನಮ್ಮದಾಗಿ ಉಳಿದಿಲ್ಲ ಎಂಬ ವಿಷಾದ ಕವಿಗಿದೆ.

ಮೌನದ ಭಾಷೆಯನ್ನು ಪರಿಭಾಷೆಯನ್ನಾಗಿಸಿದ ಇಲ್ಲಿನ ಕವಿತೆಯ ಸಾಲುಗಳು ಮೋಹಕವಾಗಿ ನಮ್ಮನ್ನು ತಟ್ಟುತ್ತವೆ. ಏಕೆಂದರೆ ಕವಿತೆಯ ಸಾಲುಗಳಲ್ಲಿ ಪ್ರೀತಿಯ ಕದ ತಟ್ಟಿದ ಕುರುಹುಗಳು ಮತ್ತು ಒಲವನ್ನು ಅವಗಾಹಿಸುವ ಕ್ಷಣಗಳನ್ನು ಹೊಸೆದದ್ದು ಎದ್ದು ಕಾಣುತ್ತದೆ. ಮೂಟೆ ಕಟ್ಟಿದ ಉದ್ವೇಗಗಳು ಗಂಟು ಬಿಚ್ಚುವ ಮುನ್ನ ಜಗಮಗಿಸುವ ರಾತ್ರಿಯಲ್ಲಿ ಕತ್ತಲನ್ನೇ ಹುಡುಕಬೇಕು ಎನ್ನುತ್ತಾರೆ. 'ದಾಹಗಳ ಸೆರಗು' ಕವಿತೆಯಲ್ಲಿ ಬಾ ಗೆಳತಿ ಒಬ್ಬಂಟಿಯಾಗಿರುವ ಹಾಳು ಬಿದ್ದ ಗೋಡೆಗಳ ನಡುವೆ ಕೂತು ಕಣ್ಣೀರು ಕುಡಿಯುತ್ತಲಿದ್ದೇನೆ. ಸಾಯಲಾರದ ಭಾವನೆಗಳ ಹೊತ್ತಿಗೆ ಬಿಚ್ಚಿಟ್ಟು ಒಂದೊಮ್ಮೆ ಬಂದು ಹೋಗು ಎನ್ನುತ್ತಲೆ ತನ್ನ ಮನಸ್ಸಿನ ದಾಹವನ್ನು ಹೀಗೆ ಪರಿಹರಿಸಿ ಕೊಳ್ಳುತ್ತಾರೆ. ತನ್ನ ಮನಸ್ಸಿನ ತುಮುಲಗಳನ್ನು ಹೊರಗೆಡಹುವ ಮಾರ್ಗಗಳನ್ನು ಕವಿತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆದರಬೇಡ ಅತ್ತು ಹಗುರಾಗು ಎನ್ನುತ ಎಲ್ಲವನ್ನೂ ಇಲ್ಲಿಯೇ ಬಗೆಹರಿಸಿಕೊಳ್ಳುವ ಮನಸ್ಸಿನ ತಾಕತ್ತು ಕವಿತೆಗಳಲ್ಲಿ ಒಡಮೂಡಿದೆ.

ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿದ ರೀತಿ ಇಲ್ಲಿನ ಎಲ್ಲ ಕವಿತೆಗಳಲ್ಲಿ ನಮಗೆ ಕಾಣಸಿಗುತ್ತದೆ. ಪದಗಳಿಗೆ ಪದ ಕಟ್ಟಿ ನೇಯ್ದು ಕವಿತೆಯ ಹೂರಣಕ್ಕೆ ನಾವು ತಡಕಾಡುವಂತಿದೆ. ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ. ಹೊಸ ಹೊಳಹುಗಳನ್ನು ನಮ್ಮಲ್ಲಿ ಹುಟ್ಟಿ ಹಾಕುತ್ತದೆ. ಮುಖ್ಯವಾಗಿ ಕಾವ್ಯ ಕಟ್ಟುವ ಕಲೆಯೊಂದಿಗೆ ಅದರ ಸಂಯೋಜನೆ ಮಾಡಿರುವುದು ಇಲ್ಲಿನ ಕವಿತೆಯ ಮುಖ್ಯ ಗುಣ. ʻಮಧುರ ಮರಣʼ ಕವಿತೆಯ ಸಾಲಲ್ಲಿ " ನನಗೆ ಗೊತ್ತೇ ಇಲ್ಲ, ಅಲ್ಲಿ ಏನಾಗುತ್ತದೆ ಎಂದು , ಅಲ್ಲಿ ಏನೋ ಆಗುತ್ತಲೇ ಇದೆ ಬಾಯಿ ಮುಚ್ಚಿ ಕೊಂಡವರಿಗೆ ... ಹೀಗೆ ಸಂಯೋಜನೆಗೊಂಡಿರುವ ಕಾವ್ಯದ ಬೆಸುಗೆ ನಮ್ಮನ್ನು ತಟ್ಟುತ್ತದೆ. ಸಮಾಜದಲ್ಲಿ ನಡೆಯುವ ತಣ್ಣನೆಯ ತಲ್ಲಣಗಳನ್ನು ಗಮನಿಸಿ ಅದಕ್ಕೆ ಜೀವಕೊಡುವ ಧಾತು ಶಕ್ತಿ ಇಲ್ಲಿನ ಕವಿತೆಗಳದ್ದು. ಭಾವನೆಗಳಿಗೆ ಬೆಲೆ ಕಟ್ಟುವ ಕೆಲಸ ಇಲ್ಲಿ ಸೂಕ್ಷ್ಮವಾಗಿ ನಡೆದಿದೆ. ಮನಸ್ಸಿನ ಅಭಿವ್ಯಕ್ತಿ ಸ್ವಚ್ಚವಾಗಿದೆ.

'ದೊರೆಗೊಂದು ಪತ್ರ' ಎನ್ನುವ ಕವಿತೆ ಜೀವನದ ಕಟು ವಾಸ್ತವವನ್ನು ಹೇಳುತ್ತದೆ. “ಚರಿತ್ರೆಯ ದೊರೆಗಳೆ ಬೇರೆ; ವರ್ತಮಾನದ ದೊರೆಗಳಿವರು. ಅನಾಮೇಧಯವಾಗಿ ಕೊಲ್ಲುವ ಸತ್ಯ ಸರಿಯೆನಿಸದು ಈ ನೆಲದ ಮೇಲೆ " ಎಂಬ ಸಶಕ್ತ ಸಾಲಿನೊಂದಿಗೆ ಹೇಳುವ ಸಮಾಜದ ವೈರುಧ್ಯಗಳು ನಮ್ಮನ್ನು ಕಾಡದೆ ಇರದು. ಬದಲಾವಣೆಯ ಆಸೆಯನ್ನು ಅರಹಿ ಕವಿತೆ ನಮ್ಮಂತಹ ಸಾಮಾನ್ಯ ನಾಗರಿಕರಂತೆ ತಣ್ಣಗೆ ಕುಳಿತುಕೊಳ್ಳುತ್ತದೆ. ಹಾಲಕ್ಕಿ ನುಡಿದಾವ , ಹೊಲಿಯುವವರು , ಗ್ಯಾರಿಬಾಲ್ಡಿ, ನೀ ಬಿಟ್ಟು ಹೋದ ದಾರಿಗಳ ಮೇಲೆ, ಖಾಲಿ ಬೆಂಚುಗಳ ಪ್ರಶ್ನೆ, ನಿರ್ಮೋಹಿ, ಹಗಲಿಗು ಕಣ್ಣು ಕಾಣದು ಎಂಬಿತ್ಯಾದಿ ಕವಿತೆಗಳು ಅತ್ಯುತ್ತಮವಾದ , ಗಹನವಾದ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ತನ್ನ ಅನುಭವದ ಸ್ಥಿತಿಗತಿಗಳು ಹೆಚ್ಚಿನ ಕವಿತೆಯಲ್ಲಿ ನಿರೂಪಿಸಲ್ಪಟ್ಟಿದೆ. “ಬೆಳಗಾದರೆ ಮತ್ತೆ ಅದೇ ಕೆಲಸ ಎಂಥದ್ದೋ ಹುಡುಕಾಟ” ಎನ್ನುತ್ತಾರೆ. ಭಾವನೆಗಳು ಕಡುಮೋಹಿಯಾದ ಕಾರಣ ಇಲ್ಲಿನ ಕವಿಗೆ ಕವಿತೆಯ ಹುಡುಕಾಟ ಸುಲಭವಾಗಿದೆ.

ಗಾಳಿಗೆ ತೊಟ್ಟಿಲ ಕಟ್ಟಿ ಸಂಕಲನದ ಎಲ್ಲವೂ ಉತ್ತಮ ಕವಿತೆಗಳೆ ಆಗಿವೆ . ಎಲ್ಲಿಯೂ ಸಮರ್ಥನೆಗಳಿಲ್ಲ. ನಾವಿರುವುದೇ ಹೀಗೆ, ಸತ್ಯಾಭಿವ್ಯಕ್ತಿಯ ಜೊತೆಗೆ ಗೆಳೆಯನಾಗಿ ಕೈ ಹಿಡಿದು ನಡೆಯುತ್ತೇನೆ ಎನ್ನುವಂತೆ ನಮಗೆ ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಕವಿತೆಗಳಿಗಿಟ್ಟ ಶೀರ್ಷಿಕೆಗಳು ಅರ್ಥಪೂರ್ಣವಾಗಿ ಕವಿತೆಯನ್ನು ಸ್ಪರ್ಷಿಸುತ್ತದೆ. ದೀರ್ಘ ಆಲಾಪಗಳಿಲ್ಲದ ಪದಗಳಲ್ಲಿಯೆ ಅರ್ಥವನ್ನು ಗ್ರಹಿಸಿಟ್ಟ ಸಾಲುಗಳು ಇಲ್ಲಿವೆ.”

-ಸಂಗೀತ ರವಿರಾಜ್, ಮಡಿಕೇರಿ