ಗಾಳಿಗೆ ವಿಷ ಕಕ್ಕುವ ಹತ್ತು ದೇಶಗಳು (ಭಾಗ ೧)
ಇಂದು ಇಡೀ ಜಗತ್ತಿನಲ್ಲಿ ಕಾಣುತ್ತಿರುವುದು ಯಾಂತ್ರೀಕರಣ ಮತ್ತು ನಾಗರಿಕತೆಯ ನಾಗಾಲೋಟ. ಇದರ ಕೆಟ್ಟ ಫಲವೇ ಮಾಲಿನ್ಯದ ಸಮಸ್ಯೆ. ಇದಕ್ಕಂತೂ ಪರಿಹಾರವೇ ಸಾಧ್ಯವಿಲ್ಲವೆನೋ ಎಂಬ ಮಟ್ಟಕ್ಕೆ ಬೆಳೆದು ಬಿಟ್ಟಿದ್ದು, ವಿಶ್ವ ವಿನಾಶಕ್ಕೆ ನಾಂದಿ ಹಾಡಿದೆ. ಬೇಸರದ ಸಂಗತಿ ಎಂದರೆ, ಜಗತ್ತಿನ ಅತ್ಯಂತ ಮುಂದುವರಿದ ದೇಶಗಳು ಎನಿಸಿಕೊಂಡ ರಾಷ್ಟ್ರಗಳೇ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಹತ್ತು ಹಲವು ಮಾಲಿನ್ಯಗಳಲ್ಲಿ ಅತ್ಯಂತ ಭಯಾನಕವೆಂದರೆ ವಾಯು ಮಾಲಿನ್ಯ.
ಅಮೇರಿಕದ ‘ಎನರ್ಜಿ ಇನ್ ಫಾರ್ ಮೇಷನ್ ಏಜೆನ್ಸಿ' ನಡೆಸಿದ ಸರ್ವೇಕ್ಷಣೆಯಂತೆ ಈ ದೇಶಗಳು ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣ ಮಿತಿ ಮೀರಿದೆ. ಇವು ವಾತಾವರಣಕ್ಕೆ ಸೇರಿಸುವ ಇಂಗಾಲದ ಪ್ರಮಾಣವನ್ನು ಗಮನಿಸಿದರೆ , ನಿಜಕ್ಕೂ ಎದೆ ಡವಡವ ಎನ್ನುತ್ತದೆ. ಪ್ರಪಂಚದಲ್ಲಿ ಸಿಕ್ಕಾಬಟ್ಟೆ ವಾಯುಮಾಲಿನ್ಯ ಉಂಟುಮಾಡುವ ಮೊದಲ ೧೦ ದೇಶಗಳು ಯಾವುವು ಎಂದು ತಿಳಿಯೋಣ ಬನ್ನಿ.
೧. ಚೀನಾ: ಭೌಗೋಳಿಕವಾಗಿ ಬಹಳ ದೊಡ್ಡದಾಗಿರುವ ಚೀನಾ, ಪ್ರತೀ ವರ್ಷ ವಾತಾವರಣಕ್ಕೆ ಬಿಡುಗಡೆ ಮಾಡುತ್ತಿರುವ ಮಲಿನ ಅನಿಲದ ಪ್ರಮಾಣ ೬,೦೧೮ ದಶಲಕ್ಷ ಟನ್. ಇಂದು ಚೀನಾ ಪ್ರಪಂಚದ ಅತ್ಯಂತ ದೊಡ್ದ ಉತ್ಪಾದಕ ರಾಷ್ಟ್ರವಾಗಿದ್ದು, ಮೂಲೆ ಮೂಲೆಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದರಿಂದಾಗಿಯೇ ಈ ರಾಷ್ಟ್ರದಲ್ಲಿ ಇದಕ್ಕೆ ‘ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ' ಎನ್ನುವ ಅಪಖ್ಯಾತಿ ಬೇರೆ. ಇಲ್ಲಿಯ ಜನಸಂಖ್ಯೆ ೧೩೨ ಕೋಟಿಗೂ ಹೆಚ್ಚು, ಹೀಗಾಗಿ ಚೀನಾ ತನ್ನ ಕೈಗಾರಿಕೆಗಳಿಗೆ, ವಾಹನಗಳಿಗೆ, ಆಹಾರ ಉತ್ಪಾದನೆಗಳಿಗೆ ಅತ್ಯಂತ ಹೆಚ್ಚು ಪೆಟ್ರೋಲಿಯಂನಂತಹ ಇಂಧನಗಳನ್ನು ಬಳಸುತ್ತಿದೆ. ಇದರಿಂದಾಗಿಯೇ ಚೀನಾ ವಾಯುಮಾಲಿನ್ಯ ಮಾಡುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
೨. ಅಮೇರಿಕಾ: ೨೦೦೭ಕ್ಕೂ ಮುಂಚೆ ಮಾಲಿನ್ಯಕಾರಿ ರಾಷ್ಟ್ರಗಳಲ್ಲಿ ಅಮೇರಿಕ ಮೊದಲ ಸ್ಥಾನದಲ್ಲಿತ್ತು. ಈ ದೇಶ ವರ್ಷಕ್ಕೆ ೫,೮೩೩ ದಶಲಕ್ಷ ಟನ್ ಮಾಲಿನ್ಯಕಾರಿ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತಿದೆ. ಇದು ಅಮೇರಿಕ ಮಾಂಸೋತ್ಪನ್ನ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ಇಲ್ಲಿ ಅತ್ಯಂತ ಹೆಚ್ಚು ತೈಲೋತ್ಪನ್ನ ಕೈಗಾರಿಕೆಗಳಿವೆ. ಅಮೇರಿಕ ದಿನವೊಂದಕ್ಕೆ ೧.೮೬ ಕೋಟಿಗೂ ಹೆಚ್ಚು ಬ್ಯಾರೆಲ್ ತೈಲವನ್ನು ಕಬಳಿಸುತ್ತದೆ. ಇಲ್ಲಿಯ ಜನಸಂಖ್ಯೆ ೩೧ ಕೋಟಿಗೂ ಹೆಚ್ಚು. ಇವರ ಸಾರಿಗೆ ವ್ಯವಸ್ಥೆ, ಆಹಾರೋತ್ಪನ್ನ ಕೈಗಾರಿಕೆ, ಮಿಲಿಟರಿ ಸಾಧನದ ಉತ್ಪನ್ನ, ಕಾರ್ಖಾನೆಗಳು, ವೈಭೋಗದ ಜೀವನಶೈಲಿ ಅತ್ಯಂತ ಹೆಚ್ಚು ಇಂಧನವನ್ನು ಕಬಳಿಸುತ್ತಿವೆ. ಇವೆಲ್ಲವೂ ಮಾಲಿನ್ಯಕ್ಕೆ ತಮ್ಮ ಕೊಡುಗೆ ಕೊಡುತ್ತಿವೆ.
೩. ರಷ್ಯಾ: ಈ ದೇಶದ ಜನಸಂಖ್ಯೆ ೧೪ ಕೋಟಿಗಿಂತ ಸ್ವಲ್ಪ ಜಾಸ್ತಿ. ಚೀನಾ ಮತ್ತು ಅಮೇರಿಕಕ್ಕೆ ಹೋಲಿಸಿದರೆ ಇದು ತುಂಬಾ ಕಮ್ಮಿ. ರಷ್ಯಾ ಇಂದು ಪ್ರತಿ ವರ್ಷ ವಾತಾವರಣಕ್ಕೆ ಕಕ್ಕುತ್ತಿರುವ ಮಾಲಿನ್ಯಕಾರಿ ಅನಿಲ ಪ್ರಮಾಣ ೧,೭೪೦ ದಶಲಕ್ಷ ಟನ್ ಗಳು. ಆದರೆ ರಷ್ಯಾ ತನ್ನ ಇಂಧನ ಬಳಕೆಯಲ್ಲಿ ಶೇಕಡಾ ೨೫ರಷ್ಟನ್ನು ಕಡಿತ ಮಾಡಲು ಸಿದ್ಧವಿದೆ. ಆದರೆ ಬೇರೆ ರಾಷ್ಟ್ರಗಳೂ ಈ ನಿಬಂಧನೆಗೆ ಒಳಪಡಬೇಕು ಎನ್ನುವುದು ಅದರ ಷರತ್ತು. ಆದರೆ ರಷ್ಯಾ ಇಂದು ಅಂಟಾರ್ಟಿಕಾ ವಲಯಗಳಲ್ಲಿ ಹೆಚ್ಚು ಹೆಚ್ಚು ತೈಲ ಸಂಗ್ರಾಹಕಗಳನ್ನು ನಿರ್ಮಿಸುತ್ತಿರುವುದು ನೋಡಿದರೆ ರಷ್ಯಾದ ಈ ಮಾತನ್ನು ನಂಬುವುದು ಕಷ್ಟ.
೪. ಭಾರತ: ನಮ್ಮ ಭಾರತ ಮಾಲಿನ್ಯಕಾರಿ ದೇಶಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ವಾಹನಗಳು ಹಾಗೂ ಕೈಗಾರಿಕೆಗಳನ್ನು ಗಮನಿಸಿದರೆ ಇದೇನೂ ಆಶ್ಚರ್ಯದ ಸಂಗತಿಯಲ್ಲ ಬಿಡಿ. ಇಂದು ಭಾರತದ ಜನಸಂಖ್ಯೆ ನೂರಾ ನಲವತ್ತು ಕೋಟಿಗೂ ಮೀರಿದೆ. ನಮ್ಮ ದೇಶ ಹೊರ ಹಾಕುತ್ತಿರುವ ಮಾಲಿನ್ಯಕಾರಿ ಅನಿಲದ ಪ್ರಮಾಣ ೧,೨೯೩ ದಶಲಕ್ಷ ಟನ್ ಗಳಿಗೂ ಅಧಿಕ. ಇದಕ್ಕೆ ಕಾರಣ ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ಅದಕ್ಕಿಂತ ಹೆಚ್ಚಾಗಿ ವಾಹನಗಳ ಸಂಖ್ಯೆ.
೫. ಜಪಾನ್: ನೋಡಲು ಇದೊಂದು ಪುಟ್ಟ ದೇಶ. ಇಲ್ಲಿಯ ಜನಸಂಖ್ಯೆ ೧೩ ಕೋಟಿಯ ಹತ್ತಿರ ಇದೆ. ಆದರೆ ಇದು ವರ್ಷಕ್ಕೆ ೧,೨೪೭ ದಶಲಕ್ಷ ಟನ್ ಮಾಲಿನ್ಯವನ್ನು ಹೊರಹಾಕುತ್ತಿದೆ. ಜಪಾನ್ ಕೂಡಾ ರಷ್ಯಾದಂತೆಯೇ ತನ್ನ ಇಂಧನದ ಬಳಕೆಯನ್ನು ನಿರ್ಬಂಧಿಸಿ ಶೇಕಡಾ ೨೫ರಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇಲ್ಲಿಯೂ ಕಾರ್ಖಾನೆಗಳು, ಸಾರಿಗೆ ವ್ಯವಸ್ಥೆ, ಹೆಚ್ಚಿದ ಜೀವನ ವ್ಯವಸ್ಥೆಗಳು ಇಂಧನವನ್ನು ಅತಿಯಾಗಿ ಬಳಸುವಂತೆ ಮಾಡಿವೆ. ಸಮಾಧಾನ ತರುವ ಸಂಗತಿಯೆಂದರೆ, ಜಪಾನ ತನ್ನ ಕಾನೂನುಗಳನ್ನು ಬಿಗಿಗೊಳಿಸಿ ಮಾಲಿನ್ಯಕಾರಕಗಳ ಮೇಲೆ ನಿಯಂತ್ರಣ ಹೇರುವಲ್ಲಿ ಯಶಸ್ವಿಯಾಗಿದೆ.
(ಇನ್ನೂ ಇದೆ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ