ಗಾಳಿಗೆ ವಿಷ ಕಕ್ಕುವ ಹತ್ತು ದೇಶಗಳು (ಭಾಗ ೨)

ಗಾಳಿಗೆ ವಿಷ ಕಕ್ಕುವ ಹತ್ತು ದೇಶಗಳು (ಭಾಗ ೨)

೬. ಜರ್ಮನಿ: ಈ ದೇಶ ೮೫೮ ದಶಲಕ್ಷ ಟನ್ ಮಾಲಿನ್ಯಕಾರಿ ಅನಿಲಗಳನ್ನು ಪ್ರತೀ ವರ್ಷ ವಾತಾವರಣಕ್ಕೆ ಬಿಡುಗಡೆ ಮಾಡುತ್ತಲಿದೆ. ಆದರೆ ಇದು ಪ್ರತಿ ವರ್ಷ ಶೇಕಡ ೩ ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುವ ಸಂಕಲ್ಪ ತೊಟ್ಟಿದೆ. ಇದಲ್ಲದೆ ೨೦೨೦ರ ಹೊತ್ತಿಗೆ ತನ್ನ ಪ್ರಜೆಗಳು ವಿದ್ಯುತ್ ಬಳಕೆಯ ಶೇಕಡ ೧೩ರಷ್ಟು ಕಡಿಮೆ ಮಾಡಲು ಸೂಚಿಸಿದೆ. ಜರ್ಮನಿಯ ಜನಸಂಖ್ಯೆ ೮ ಕೋಟಿಗಿಂತಲೂ ಹೆಚ್ಚು. ಆದರೆ ಜರ್ಮನಿ ಹೆಚ್ಚು ಹೆಚ್ಚು ಸುಧಾರಣಾ ವ್ಯವಸ್ಥೆಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಒಂದು ಸಂತಸದ ಸಂಗತಿ.

೭. ಕೆನಡಾ: ಇಂದು ಕೆನಡಾ ೬೧೪ ದಶಲಕ್ಷ ಟನ್ ಗಳಷ್ಟು  ಮಾಲಿನ್ಯಕಾರಕಗಳನ್ನು ಹೊರಹಾಕುತ್ತಿದೆ. ಇಲ್ಲಿನ ಜನಸಂಖ್ಯೆ ೩.೪೧ ಕೋಟಿ. ಇತ್ತೀಚೆಗೆ ಹೆಚ್ಚುತ್ತಿರುವ ನಾಗರಿಕತೆ ಜನರ ಜೀವನಶೈಲಿಯಲ್ಲಿನ ವಿವೇಚನೆ ಇಲ್ಲದ ರೂಢಿಗಳು, ಯದ್ವಾತದ್ವಾ ನಡೆಯುತ್ತಿರುವ ಗಣಿಗಾರಿಕೆ, ಹೆಚ್ಚುತ್ತಿರುವ ಸಾರಿಗೆ ವ್ಯವಸ್ಥೆ ಮತ್ತು ರಾಸಾಯನಿಕ ಕೈಗಾರಿಕೆಗಳು ಇಲ್ಲಿ ಹೆಚ್ಚು ಹೆಚ್ಚು ಮಾಲಿನ್ಯವನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತಿವೆ.

೮. ಬ್ರಿಟನ್: ಇದೊಂದು ಪುಟ್ಟ ದೇಶ. ಇಲ್ಲಿನ ಜನ ಸಂಖ್ಯೆ ೬ ಕೋಟಿಗಿಂತಲೂ ತುಸು ಹೆಚ್ಚು. ಅಂದರೆ, ನಮ್ಮ ಕರ್ನಾಟಕದ ಜನಸಂಖ್ಯೆಗೆ ಸಮ. ಆದರೆ ಈ ಪುಟ್ಟ ದೇಶ ಸದ್ಯಕ್ಕೆ ೫೮೬ ದಶಲಕ್ಷ ಟನ್ ಮಾಲಿನ್ಯವನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತಿದೆ. ಬ್ರಿಟನ್ ನಲ್ಲಿ ಸಾರಿಗೆ ವ್ಯವಸ್ಥೆಯೇ ಹೆಚ್ಚು ಹೆಚ್ಚು ಇಂಧನವನ್ನು ಕಬಳಿಸುತ್ತಿದ್ದು ಪರಿಸರ ಮಾಲಿನ್ಯದಲ್ಲಿ ಸಿಂಹಪಾಲನ್ನು ಹೊಂದಿದೆ. ಬ್ರಿಟನ್ ಹೆಚ್ಚು ಪೆಟ್ರೋಲಿಯಂ ಹಾಗೂ ಕಲ್ಲಿದ್ದಲನ್ನು ಇಂಧನವಾಗಿ ಬಳಸುತ್ತಿದೆ. ಒಂದು ಸಂತಸದ ಸಂಗತಿಯೆಂದರೆ ಈ ದೇಶವು ನವೀಕರಿಸಬಹುದಾದ ಇಂಧನಗಳಿಗೆ ಪ್ರಾಶಸ್ತ್ಯವನ್ನು ನೀಡುತ್ತಿದೆ. ಬ್ರಿಟನ್ ಇಂದು ಹೆಚ್ಚು ಹೆಚ್ಚು ಗಾಳಿಯಂತ್ರಗಳನ್ನು ಬಳಸಿ ವಿದ್ಯುತ್ತನ್ನು ಉತ್ಪಾದಿಸುವ ರಾಷ್ಟ್ರವಾಗಿದೆ.

೯. ದಕ್ಷಿಣ ಕೊರಿಯಾ: ವರ್ಷಕ್ಕೆ ೫೧೪ ದಶಲಕ್ಷ ಟನ್ ಮಾಲಿನ್ಯಕಾರಿ ಅನಿಲ ಹೊರಹಾಕುತ್ತಿರುವ ಮಾಲಿನ್ಯಕಾರಿ ದೇಶಗಳ ಪಟ್ಟಿಯಲ್ಲಿ ೯ ನೇ ಸ್ಥಾನದಲ್ಲಿದೆ. ಈ ದೇಶದ ಜನಸಂಖ್ಯೆ ೫ ಕೋಟಿಗಿಂತಲೂ ಕಮ್ಮಿ ಇದೆ. ಆದರೆ ೧೯೬೦ರಿಂದ ಇತ್ತೀಚೆಗೆ ನಡೆದ ಅಗಾಧ ಕೈಗಾರೀಕರಣ ಮತ್ತು ತಂತ್ರಜ್ಞಾನ ಅಪಾರ ಇಂಧನವನ್ನು ಕಬಳಿಸುತ್ತಿದೆ. ಇಂದು ದಕ್ಷಿಣ ಕೊರಿಯಾ ಅತ್ಯಂತ ಹೆಚ್ಚು ಸಲ್ಫರ್ ಡೈಆಕ್ಸೈಡ್ ಹೊರಹಾಕುವ ರಾಷ್ಟ್ರವಾಗಿದ್ದು ಇದು ಆಮ್ಲ ಮಳೆಗೆ (Acid Rain) ನಾಂದಿ ಹಾಡಿದೆ.

೧೦. ಇರಾನ್: ಇಂದು ಇರಾನ್ ೪೭೧ ದಶಲಕ್ಷ ಟನ್ ಮಾಲಿನ್ಯಕಾರಕಗಳನ್ನು ಹೊರಹಾಕುತ್ತಿದೆ. ೭ ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇರಾನ್ ವಾಯುಮಾಲಿನ್ಯ ಹಾಗೂ ಜಲ ಮಾಲಿನ್ಯಗಳಿಗೆ ತನ್ನದೇ ಆದ ಕಾಣಿಕೆ ನೀಡುತ್ತಿದೆ. ಕ್ಯಾಸ್ಪಿಯನ್ ಸಮುದ್ರ ಇವತ್ತು ತುಂಬಾ ಹಾಳಾಗಿರುವುದಕ್ಕೆ ಈ ದೇಶವೇ ಕಾರಣ. ಇರಾನ್ ನ ರಾಜಧಾನಿ ಟೆಹ್ರಾನ್ ಅಂತೂ ಅತ್ಯಂತ ಹೆಚ್ಚು ಮಾಲಿನ್ಯದ ನಗರವಾಗಿದೆ.

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ