ಗಾಳಿಪಟ ಮತ್ತು ಆಲದ ಮರ

ಗಾಳಿಪಟ ಮತ್ತು ಆಲದ ಮರ

ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್ನು ಧರಿಸಿದ್ದ ಅಲಿ, ಮರದ ಮೇಲೆ ಸಿಕ್ಕಿಬಿದ್ದಿದ್ದ ಪಟವನ್ನು ಬಿಡಿಸಿಕೊಳ್ಳಲು ಹಲವು ಬಾರಿ ವಿಫಲಪ್ರಯತ್ನ ನಡೆಸಿ ಕೊನೆಗೊಮ್ಮೆ ಹತಾಶನಾಗಿ ಕೈಚೆಲ್ಲಿದ್ದ. ಅಲ್ಲಲ್ಲಿ ಉರುಟುಕಲ್ಲುಗಳೆದ್ದು ಕಾಣುತ್ತಿದ್ದ ಕಿರಿದಾದ ಓಣಿಯಲ್ಲಿ ಬರಿಗಾಲಿನಲ್ಲಿ ಓಡುತ್ತ ತನ್ನ ತಾತನತ್ತ ತೆರಳಿದ. ಮನೆಯ ಹಿತ್ತಲಿನಲ್ಲಿ ನೀರವ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಸಣ್ಣ ಮಂಪರಿನ ನಡುವೆ ಹಗಲುಗನಸು ಕಾಣುತ್ತ ಕುಳಿತಿದ್ದ ತಾತನನ್ನು ಕಾಣುತ್ತಲೇ, ‘ಅಜ್ಜಾ, ನನ್ನ ಗಾಳಿಪಟ ಕಳೆದುಹೋಯಿತು’ ಎಂದು ಜೋರಾಗಿ ಕಿರುಚಿದ. ಮೊಮ್ಮಗನ ಕೂಗಿನಿಂದ ಮಂಪರು ಹಾರಿಹೋದ ಮುದಿಯ ನಿಧಾನವಾಗಿ ತನ್ನ ತಲೆಯನ್ನೆತ್ತಿದ. ಮದರಂಗಿಯ ಬಣ್ಣದಿಂದಾಗಿ ಕೆಂಚಗಾಗಿದ್ದ ತನ್ನ ಮುಪ್ಪಿನ ಗಡ್ಡವನ್ನೊಮ್ಮೆ ಸಾವಕಾಶವಾಗಿ ನೀವುತ್ತ, ‘ಪಟದ ನೂಲು ಕಿತ್ತು ಹೋಗಿತ್ತಾ..’? ಎಂದು ಮೊಮ್ಮಗನನ್ನು ಪ್ರಶ್ನಿಸಿದ. ಕಳಪೆ ಗುಣಮಟ್ಟದ ದಾರದಿಂದ ಹಾರಿಸಲ್ಪಟ್ಟ ಪಟವಿದ್ದಿರಬಹುದು ಎಂಬ ಊಹೆ ಆತನದ್ದು. ‘ಇಲ್ಲಾ ಅಜ್ಜ, ನೂಲು ಹರಿದಿಲ್ಲ, ಅದು ಆಲದ ಮರದ ಕೊಂಬೆಗೆ ಸಿಕ್ಕಿಬಿದ್ದಿದೆ’ ಎಂದುತ್ತರಿಸಿದ ಮೊಮ್ಮಗ.
ತನ್ನ ಗಾಳಿಪಟ ಕಳೆದುಕೊಂಡು ಪೆಚ್ಚುಮೋರೆ ಹಾಕಿಕೊಂಡು ನಿಂತಿದ್ದ ಮೊಮ್ಮಗನತ್ತ ನೋಡಿ ನಸುನಕ್ಕ ವೃದ್ಧ, ‘ನೀನಿನ್ನು ಸರಿಯಾಗಿ ಗಾಳಿಪಟ ಹಾರಿಸುವುದನ್ನು ಕಲಿಯಬೇಕಿದೆ ಕಂದಾ, ಆದರೇನು ಮಾಡಲಿ..? ಕಲಿಸೋಣವೆಂದರೆ ಕಲಿಸುವ ಆಸಕ್ತಿ ನನಗಿದ್ದರೂ ಶಕ್ತಿ ನನ್ನ ವಯಸ್ಸಿಗಿಲ್ಲ. ಇರಲಿ ಬಿಡು ನಿನಗೆ ಇನ್ನೊಂದು ಗಾಳಿಪಟ ಕೊಡುತ್ತೇನೆ’ ಎಂದ ಮುದಿಯ. ಅಷ್ಟರಲ್ಲಾಗಲೇ ಆತ ಬಿದಿರಿನ ಹಾಳೆ ಮತ್ತು ರೇಷ್ಮೆಯ ನೂಲನ್ನು ಬಳಸಿ ಇನ್ನೊಂದು ಪತಂಗವನ್ನು ತಯಾರಿಸಿಟ್ಟಿದ್ದ. ನಸು ಗುಲಾಬಿ ಬಣ್ಣದ ಹಾಳೆಯಿಂದ ಮಾಡಲ್ಪಟ್ಟಿದ್ದ ಗಾಳಿಪಟಕ್ಕೆ ಸಣ್ಣದ್ದೊಂದು ಹಸಿರು ಬಾಲವನ್ನು ಅಂಟಿಸಿಟ್ಟಿದ್ದ ವೃದ್ಧ ತಯಾರಾಗಿದ್ದ ಹೊಸ ಪತಂಗವನ್ನು ಒಣಗಿಸುವುದಕ್ಕೆಂದು ಬಿಸಿಲಿಗಿಟ್ಟಿದ್ದ. ಚೆನ್ನಾಗಿ ಒಣಗಿಹೋಗಿದ್ದ ಗಾಳಿಪಟವನ್ನೆತ್ತಿ ಮೊಮ್ಮಗನ ಕೈಗಿಡುತ್ತಲೇ ಮೊಮ್ಮಗನ ಮನಸ ತುಂಬೆಲ್ಲ ಸಂತಸದ ಬುಗ್ಗೆ. ಖುಷಿಯಾಗಿ ಪಟವನ್ನೊಮ್ಮೆ ಹಿತವಾಗಿ ನಾಜೂಕಿನಿಂದ ತಬ್ಬಿಕೊಂಡ ಅಲಿ, ಪ್ರೀತಿಯಿಂದ ತಾತನ ಸುಕ್ಕುಗಟ್ಟಿದ ಕೆನ್ನೆಗೊಂದು ಹೂಮುತ್ತನ್ನಿಟ್ಟ. ‘ಈ ಪತಂಗವನ್ನು ಮಾತ್ರ ನಾನು ಕಳೆದುಕೊಳ್ಳುವುದಿಲ್ಲ ತಾತ, ಇದನ್ನು ಪಕ್ಷಿಯಂತೆ ಆಗಸದೆತ್ತರಕ್ಕೆ ಹಾರಿಸುತ್ತೇನೆ’ ಎನ್ನುತ್ತ ಪಟವನ್ನು ಮೇಲೆತ್ತಿ ಹಿಡಿದುಕೊಂಡು ಸಂತೋಷದಿಂದ ಮೈದಾನದತ್ತ ಓಡಿದ.
ಹಾಗೆ ಮೊಮ್ಮಗ ಮೈದಾನದತ್ತ ಸಾಗುತ್ತಲೇ, ಪುನ: ತನ್ನದೇ ಕಲ್ಪನಾ ಲೋಕದಲ್ಲಿ ಮುಳುಗಿಹೋದ ಮುದುಕ. ಅವನ ಪತಂಗದಂಗಡಿ ಮುಚ್ಚಿಹೋಗಿ ಅದ್ಯಾವ ಕಾಲವಾಗಿತ್ತೋ, ಅವನಿಗೆ ನೆನಪಿಲ್ಲ. ಅವನ ಅಂಗಡಿಯನ್ನು ರದ್ದಿ ವ್ಯಾಪಾರಿಯೊಬ್ಬ ಖರೀದಿಸಿದ್ದ. ಆದರೆ ವೃದ್ಧ ಈಗಲೂ ಪತಂಗಗಳನ್ನು ತಯಾರಿಸುತ್ತಿದ್ದ. ತನ್ನ ಮೊಮ್ಮಗ ‘ಅಲಿ’ಗಾಗಿ ತಾನು ಗಾಳಿಪಟಗಳನ್ನು ನಿರ್ಮಿಸುತ್ತೇನೆ ಎಂಬುವುದು ಅವನ ಭಾವವಾಗಿದ್ದರೂ ಪತಂಗಗಳ ತಯಾರಿಕೆಯೆನ್ನುವುದು ಆತನ ಮಾನಸಿಕ ಸಂತೃಪ್ತಿಯ ಏಕೈಕ ಮಾರ್ಗವಾಗಿತ್ತು. ಈಗಿನ ಜನಗಳಿಗೆ ಗಾಳಿಪಟಗಳೆಡಿಗಿನ ಆಸಕ್ತಿ ಮುಂಚಿನಂತಿಲ್ಲ. ಈಗ ಯುವಜನಾಂಗಕ್ಕೆ ಗಾಳಿಪಟಗಳೆಡೆಗೆ ಅಸಡ್ಡೆಯ ಭಾವ. ಚಿಕ್ಕಮಕ್ಕಳಿಗೆ ಸಿನಿಮಾ ವೀಕ್ಷಣೆಯಲ್ಲಿಯೇ ಹೆಚ್ಚು ಆಸಕ್ತಿ. ಇಷ್ಟಲ್ಲದೇ ಗಾಳಿಪಟಗಳನ್ನು ಹಾರಿಸುವುದಕ್ಕಾಗಿ ಸಾಕಾಗುವಷ್ಟು ದೊಡ್ಡ ಮೈದಾನಗಳೂ ಸಹ ಈಗ ಪಟ್ಟಣದಲ್ಲಿಲ್ಲ. ಪಟ್ಟಣದ ಕೋಟೆಯ ಗೋಡೆಯಿಂದ ನದಿಯವರೆಗೆ ಹರಡಿಕೊಂಡಿದ್ದ ವಿಶಾಲ ಮೈದಾನಗಳನ್ನು ಬೆಳೆಯುತ್ತಿರುವ ನಗರವೇ ಗಬಗಬನೇ ನುಂಗಿ ಹಾಕಿದೆ.
ಆದರೆ ಮುಂಚೆ ಹೀಗಿರಲಿಲ್ಲ. ಮೊದಲೆಲ್ಲ ಯುವಕರೂ ಸಹ ಉತ್ಸಾಹದಿಂದ ಪಟ ಹಾರಿಸುತ್ತಿದ್ದದ್ದು ವೃದ್ಡನಿಗಿನ್ನೂ ನೆನಪಿದೆ. ಗಾಳಿಪಟವನ್ನು ಬಾನೆತ್ತರಕ್ಕೆ ಹಾರಿಸುತ್ತ, ಗಾಳಿಯಲ್ಲಿಯೇ ತಿರುಗಿಸುತ್ತ, ಎದುರಾಳಿಗಳ ಪಟದ ನೂಲಿಗೆ ತಮ್ಮ ಪಟದ ನೂಲನ್ನು ಗಂಟು ಹಾಕಿ ಪರಸ್ಪರರ ಪತಂಗಗಳನ್ನು ಬಾನಿನಲ್ಲಿಯೇ ಕತ್ತರಿಸಿಕೊಳ್ಳುವ ಆಗಸ ಕದನವನ್ನು ಮುದಿಯ ಮರೆತಿಲ್ಲ. ಆಕಾಶದ ಜಗಳದಲ್ಲಿ ಸೋತು ಕತ್ತರಿಸಲ್ಪಟ್ಟ ಪತಂಗ ತನ್ನನ್ನು ಹಿಡಿದಿಟ್ಟಿದ್ದ ನೂಲಿನಿಂದ ಸ್ವತಂತ್ರವಾಗಿ ದೂರದಲ್ಲೆಲ್ಲೋ ಆಗಸದಲ್ಲಿ ಲೀನವಾಗುತ್ತಿದ್ದ ದೃಶ್ಯವಿನ್ನೂ ಅವನ ಕಣ್ಣಿಗೆ ಕಟ್ಟಿದಂತಿತ್ತು. ಅಂತಹ ಜಗಳಗಳ ಬಾಜಿಯಲ್ಲಿ ಸಾಕಷ್ಟು ಹಣದ ವಿನಿಮಯವೂ ನಡೆಯುತ್ತಿತ್ತು. ಆಗೆಲ್ಲ ಪತಂಗದಾಟವೆನ್ನುವುದು ರಾಜಕ್ರೀಡೆಯಂತಿತ್ತು. ಸ್ವತಃ ನವಾಬನೇ ತನ್ನ ಪರಿವಾರದೊಂದಿಗೆ ನದಿಯ ಮೈದಾನಕ್ಕಿಳಿದು ಗಾಳಿಪಟವನ್ನು ಹಾರಿಸುತ್ತಿದ್ದ ನೆನಪು ಮುದಿಯನ ಸ್ಮೃತಿಪಟದಲ್ಲಿ ಇಂದಿಗೂ ಹಸಿರಾಗಿತ್ತು. ಗಾಳಿಯಲ್ಲಿ ಬಣ್ಣಬಣ್ಣದ ಕಾಗದಗಳ ನೃತ್ಯವನ್ನು ಮನದುಂಬಿ ಆನಂದಿಸುತ್ತಿದ್ದ ಕಾಲವದು. ಆದರೆ ಗಡಿಬಿಡಿಯ ಬದುಕೆನ್ನುವ ಅಸಹನೆಯ ಕಾಲಿನಡಿ ಸಿಕ್ಕು ನುಜ್ಜುಗುಜ್ಜಾಗಿರುವ ಇಂದಿನ ಜನರ ಮನಸುಗಳಿಗೆ ಗಾಳಿಪಟಗಳೆನ್ನುವ ಸೂಕ್ಷ್ಮ ಸಂತೋಷಿ ಸಂವೇದನೆಗಳನ್ನು ಅರ್ಥೈಸಿಕೊಳ್ಳುವ ಸಹನೆಯಿಲ್ಲ.
ವೃದ್ಧ ಪತಂಗ ವ್ಯಾಪಾರಿಯ ಬದುಕಿನ ಉತ್ತುಂಗದ ದಿನಗಳಲ್ಲಿ ಮೆಹಮೂದನೆನ್ನುವ ಆತನ ಹೆಸರು ಅವನ ಊರ ತುಂಬೆಲ್ಲ ಪ್ರಸಿದ್ಧಿಯನ್ನು ಪಡೆದಿತ್ತು. ಅವನ ಕೆಲವು ಸುಂದರ ಪಟಗಳು ಮೂರು ನಾಲ್ಕು ರೂಪಾಯಿಗಳ ದುಬಾರಿ ಬೆಲೆಗೂ ಮಾರಾಟವಾಗುತ್ತಿದ್ದವು. ಅದೊಮ್ಮೆ ನವಾಬರು ಕೇಳಿಕೊಂಡರೆನ್ನುವ ಕಾರಣಕ್ಕೆ, ತನ್ನಿಡಿ ಜಿಲ್ಲೆಯಲ್ಲಿಯೇ ಯಾರೂ ಕಂಡಿರದಂತಹ ಅದ್ಭುತ ಗಾಳಿಪಟವೊಂದನ್ನು ಆತ ನಿರ್ಮಿಸಿದ್ದ. ತೆಳ್ಳಗಿನ ಬಿದಿರಿನ ಹಾಳೆಯ ಚೌಕಟ್ಟಿನಿಂದ ನಿರ್ಮಿಸಲ್ಪಟ್ಟಿದ್ದ ಆ ಪತಂಗಕ್ಕೆ ಆತ ಹಗುರವಾದ ಕಾಗದಗಳಿಂದ ತಯಾರಿಸಲ್ಪಟ್ಟಿದ ತಟ್ಟೆಗಳಂಥಹ ಅನೇಕ ರಚನೆಗಳನ್ನು ಅಂಟಿಸಿದ್ದ. ಪ್ರತಿಯೊಂದು ತಟ್ಟೆಯ ತುದಿಯನ್ನು ಹುಲ್ಲಿನ ಕುಡಿಗಳಿಂದ ಅಲಂಕರಿಸಿದ್ದ. ಪಟದ ಮೇಲ್ತುದಿಯಲ್ಲಿದ್ದ ಮೊದಲ ಕಾಗದದ ತಟ್ಟೆಯನ್ನು ಕೊಂಚ ಬಾಗಿದಂತೆ ರಚಿಸಿದ್ದ ಆತ ಅದರ ಮೇಲೊಂದು ಸುಂದರವಾದ ಮುಖವನ್ನು ಚಿತ್ರಿಸಿ, ಎರಡು ಚಿಕ್ಕ ಗಾಜಿನ ತುಣುಕುಗಳನ್ನು ಕಣ್ಣುಗಳಂತೆ ಅಂಟಿಸಿದ್ದ. ಕಾಗದದ ತಟ್ಟೆಗಳು ಪತಂಗದ ಶಿರದಿಂದ ಮುಡಿಯವರೆಗೆ ಅವರೋಹಣ ಕ್ರಮದಲ್ಲಿ ಸಾಗುತ್ತಿದ್ದವೆನ್ನುವ ಕಾರಣಕ್ಕೋ ಏನೋ, ಪಟವೆನ್ನುವುದು ತರಂಗದಂತೆ ಗೋಚರಿಸುತ್ತಿತ್ತು. ದೂರದಿಂದ ಕಂಡವರಿಗಂತೂ ಅದು ಅಕ್ಷರಶಃ ತೆವಳುವ ನಾಗರಹಾವಿನಂತೆ ಭಾಸವಾಗುತ್ತಿತ್ತು. ಅಂಥದ್ದೊಂದು ಜಟಿಲರೂಪಿ ಗಾಳಿಪಟದ ಹಾರಾಟಕ್ಕೆ ನುರಿತ ಕೈಗಳ ಅವಶ್ಯಕತೆಯಿತ್ತು. ಬಹುಶಃ ಸ್ವತಃ ಮೆಹಮೂದನ ಹೊರತಾಗಿ ಇನ್ಯಾರಿಗೂ ಅದನ್ನು ಹಾರಿಸುವ ಸಾಮರ್ಥ್ಯವಿರಲಿಲ್ಲ.
ಮೆಹಮೂದ್ ಅಂಥದ್ದೊಂದು ಅಪೂರ್ವವೆನ್ನಿಸುವ ಗಾಳಿಪಟವನ್ನು ತಯಾರಿಸುತ್ತಲೇ ಪಟ್ಟಣದ ತುಂಬೆಲ್ಲ ಅದರ ಖ್ಯಾತಿ ಹರಡಿತ್ತು. ‘ಡ್ರಾಗನ್ ಪಟ’ ಎಂದೇ ಹೆಸರುವಾಸಿಯಾಗಿದ್ದ ಪತಂಗದ ಬಗ್ಗೆ ಎಲ್ಲರಿಗೂ ವಿಚಿತ್ರ ಕುತೂಹಲ. ಕೆಲವರಂತೂ ಆ ಗಾಳಿಪಟಕ್ಕೆ ಅತಿಂದ್ರೀಯ ಶಕ್ತಿಗಳಿವೆ ಎಂಬುದಾಗಿ ನಂಬಿದ್ದರು. ನವಾಬರ ಸಮ್ಮುಖದಲ್ಲಿ ಮೊದಲ ಬಾರಿಗೆ ಡ್ರಾಗನ್ ಪಟವನ್ನು ಹಾರಿಸಲು ಮೆಹಮೂದ್ ತಯಾರಾದಾಗ ಅಗಾಧವಾದ ಜನಸ್ತೋಮ ನದಿಯ ದಂಡೆಯ ಮೈದಾನದಲ್ಲಿ ಜಮಾಯಿಸಿತ್ತು. ಮೊದಮೊದಲು ತನ್ನ ಭಾರದಿಂದಾಗಿ ಡ್ರಾಗನ್ ನೆಲವನ್ನು ಬಿಟ್ಟು ಮೇಲೆಳಲೇ ಇಲ್ಲ. ಪಟದ ಮೈಮೇಲಿದ್ದ ಕಾಗದದ ತಟ್ಟೆಗಳು ಮೇಲೆಳುವುದಿಲ್ಲವೆನ್ನುವಂತೆ ಹಟವಿಡಿದು ಕುಳಿತಿವೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಪಟಕ್ಕೆ ಅಂಟಿಕೊಂಡಿದ್ದ ಕಣ್ಣಿನಂಥಹ ಗಾಜಿನ ರಚನೆಗಳಲ್ಲಿ ಮಿನುಗುತ್ತಿದ್ದ ನೆತ್ತಿಯ ಮೇಲಿನ ಸೂರ್ಯನಿಂದಾಗಿ, ಮೆಹಮೂದ್ ಬಿಡಿಸಿದ್ದ ಮುಖದ ಚಿತ್ರ ಸಹ ಕೋಪವನ್ನು ಹೊರಹೊಮ್ಮುವ ರಾಕ್ಷಸನ ಮುಖಭಾವವನ್ನೇ ಸೂಚಿಸುತ್ತಿತ್ತು. ಅಂಥದ್ದೊಂದು ಮುಜುಗರದ ಕ್ಷಣಗಳಲ್ಲಿ ಅನಿರೀಕ್ಷಿತವಾಗಿ ಬೀಸಿದ ತಂಗಾಳಿ ಮೆಹಮೂದನಿಗೆ ಕೊಂಚ ಸಮಾಧಾನ ನೀಡಿತ್ತು. ಗಾಳಿಯ ಹಿತವಾದ ವೇಗಕ್ಕೆ ಒಮ್ಮೇಲೇ ಮೇಲೆದ್ದ ಡ್ರಾಗನ್ ಪತಂಗ, ತನ್ನ ದೇಹವನ್ನು ಗಾಳಿಯ ಅಲೆಯೊಂದಿಗೆ ಹೊರಳಾಡಿಸುತ್ತ, ತೂರಾಡುತ್ತ ನಿಧಾನವಾಗಿ ಗಗನಕ್ಕೆ ಏರತೊಡಗಿತು. ಪತಂಗಕ್ಕಂಟಿದ್ದ ಗಾಜಿನ ಕಣ್ಣುಗಳಲ್ಲಿನ್ನೂ ಸೂರ್ಯಬಿಂಬ ಕೋರೈಸುತ್ತಿತ್ತು. ಗಾಳಿಪಟ ತುಂಬ ಎತ್ತರಕ್ಕೆ ಏರುತ್ತ ಕೈ ಹಿಡಿತ ತಪ್ಪುವಂತಾದಾಗ ಅದಕ್ಕೆ ಇನ್ನಷ್ಟು ನೂಲನ್ನು ಕಟ್ಟಿದ್ದ ಮೆಹಮೂದನ ಕಿರಿಯ ಮಗ. ಆದರೀಗ ಪಟ, ನೂಲಿನಿಂದ ತನ್ನನ್ನು ತಾನು ಬಿಡಿಸಿಕೊಳ್ಳುವ ಹವಣಿಕೆಯಲ್ಲಿತ್ತು. ನೂಲಿನ ಬಂಧನದಿಂದ ಹರಿದುಕೊಂಡು ಸ್ವತಂತ್ರ್ಯವಾಗಿ ಗಾಳಿಯಲ್ಲಿ ಹಾರಾಡುವ ಆಸೆ ಅದರದ್ದು. ಕೊಂಚ ಹೊತ್ತಿನ ಪ್ರತಿರೋಧದ ನಂತರ ತನ್ನನ್ನು ಹಿಡಿದಿಟ್ಟಿದ್ದ ನೂಲಿನ ಬಂಧನದಿಂದ ಕಳಚಿಕೊಳ್ಳುವಲ್ಲಿ ಅದು ಯಶಸ್ವಿಯಾಯಿತು. ನೂಲಿನಿಂದ ಛಟ್ಟನೇ ಹರಿದುಕೊಂಡ ಡ್ರಾಗನ್ ಪಟ, ಅನಂತ ಆಗಸದಲ್ಲಿ ತುಯ್ದಾಡುತ್ತ, ಗಾಳಿಯ ದಿಕ್ಕಿನೆದಡೆಗೆ ನರ್ತಿಸುತ್ತ ಕೆಲಕಾಲ ಆಗಸದಲ್ಲಿನ ಸೂರ್ಯನೆಡೆಗೆ ಸಾಗುತ್ತ, ಗಾಳಿಯಲ್ಲಿಯೇ ಈಜುತ್ತ, ಕಣ್ಣಿಗೆ ಕಾಣದಂತೆ ಲೀನವಾಯಿತು. ಪುನಃ ಅದು ಯಾರ ಕೈಗೂ ಸಿಕ್ಕ ಸುದ್ದಿಯಿರಲಿಲ್ಲ. ಅದರಲ್ಲೊಂದು ನಿಗೂಢತೆಯನ್ನು ಗಮನಿಸಿದ್ದ ಮೆಹಮೂದನಿಗೂ, ಡ್ರಾಗನ್ ಪಟವೆನ್ನುವುದು ನಿಜಕ್ಕೂ ಮಾಂತ್ರಿಕ ಪಟವಾಗಿತ್ತಾ ಎನ್ನುವ ವಿಲಕ್ಷಣ ಭಾವ, ತಾತ್ಕಾಲಿಕವಾಗಿ ಕಾಡಿದ್ದು ಸುಳ್ಳಲ್ಲ. ಆತ ಮುಂದೆಂದೂ ಅಂಥಹ ಪಟ ತಯಾರಿಸಲಿಲ್ಲ. ಅದರ ಬದಲಾಗಿ ಬಾನಿಗೇರುತ್ತಿದ್ದಂತೆಯೇ ಪಿಟೀಲಿನ ಸಂಗೀತದಂತಹ ಸುಶ್ರಾವ್ಯ ಶಬ್ದವನ್ನು ಹೊರಡಿಸುತ್ತಿದ್ದ ‘ಸಂಗೀತ ಪಟ’ವನ್ನು ಆತ ತನ್ನೂರಿನ ನವಾಬರಿಗಾಗಿ ಮಾಡಿಕೊಟ್ಟಿದ್ದ. ತುಂಬ ಆರಾಮಾದಾಯಕವಾಗಿದ್ದ, ಸಾವಕಾಶವಾಗಿ ನೆಮ್ಮದಿಯಿಂದ ಸಾಗುತ್ತಿದ್ದ ದಿನಗಳವು. ಆದರೆ ಪಟ್ಟಣದ ನವಾಬ ತೀರಿಕೊಂಡು ವರ್ಷಗಳೇ ಕಳೆದಿದ್ದವು. ಈ ನಡುವೆ ತಮ್ಮ ಪೂರ್ವೀಕರ ಆಸ್ತಿಯನ್ನೆಲ್ಲ ಕಳೆದುಕೊಂಡಿದ್ದ ನವಾಬನ ವಂಶಸ್ತರು ಸಹ ಮೆಹಮೂದನಷ್ಟೇ ಬಡವರಾಗಿ ಹೋಗಿದ್ದರು. ಮೊದಲೆಲ್ಲ ಕವಿಗಳಿಗೆ, ಪತಂಗ ತಯಾರಕರಿಗೆ ಆಶ್ರಯದಾತರಾಗಿದ್ದ ನವಾಬರು ಕಾಲವಾದ ನಂತರ ಮೆಹಮೂದನಂತಹ ವ್ಯಕ್ತಿಗಳನ್ನು ಗುರುತಿಸುವವರು ಕೂಡ ಇರಲಿಲ್ಲ, ಈಗಂತೂ ತೀರ ಮೆಹಮೂದನ ನೆರೆಹೊರೆಯವರಿಗೂ ಅವನ ಹೆಸರಾಗಲಿ, ಅವನ ಕಲೆಯ ಕುರಿತಾಗಿಯಾಗಲಿ ಸ್ಪಷ್ಟತೆಯಿರಲಿಲ್ಲ. ಹಿಂದೊಮ್ಮೆ ತನ್ನ ಬಾಲ್ಯಾವಸ್ಥೆಯಲ್ಲಿ ಮೆಹಮೂದ್ ತೀವ್ರ ಜ್ವರದಿಂದ ಬಳಲುತ್ತಿದ್ದಾಗ, ಅವನ ಗಲ್ಲಿಯ ಪ್ರತಿಯೊಂದು ನೆರೆಹೊರೆಯ ಮನೆಯವರು ಅವನ ಆರೋಗ್ಯದ ಬಗ್ಗೆ ಕಾಳಜಿಯಿಂದ ವಿಚಾರಿಸಿಕೊಂಡು ಹೋಗಿದ್ದ ಅಸ್ಪಷ್ಟ ಚಿತ್ರವಿನ್ನೂ ಅವನ ಕಣ್ಣಲ್ಲಿದೆ. ಆದರೆ ಬದುಕಿನ ಮುಸ್ಸಂಜೆಯ ಕಾಲದಲ್ಲಿರುವ ಮುದಿಯ ಮೆಹಮೂದನ ಕುಶಲೋಪರಿಯನ್ನು ವಿಚಾರಿಸುವವತು ಸಹ ಯಾರೂ ಇಲ್ಲದಂತಾಗಿತ್ತು. ಮೆಹಮೂದನ ಬಹುತೇಕ ಸ್ನೇಹಿತರು ಅದಾಗಲೇ ಮೃತಪಟ್ಟಿದ್ದರು. ಅವನ ಮಕ್ಕಳಲ್ಲಿ ಒಬ್ಬನು ಸ್ಥಳೀಯ ಗ್ಯಾರೆಜೊಂದರಲ್ಲಿ ಯಂತ್ರಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ದೇಶವಿಭಜನೆಯ ಕಾಲದಲ್ಲಿ ಪಾಕಿಸ್ತಾನದ ಸೋದರಿಯ ಮನೆಯಲ್ಲಿದ್ದ ಮತ್ತೊಬ್ಬ ಮಗನನ್ನು ಸಂಧಿಸುವುದು ಮೆಹಮೂದನಿಗಿನ್ನೂ ಸಾಧ್ಯವಾಗಿರಲಿಲ್ಲ.
ಸರಿಸುಮಾರು ಹತ್ತು ವರ್ಷಗಳ ಹಿಂದೆ ಅವನಿಂದ ಗಾಳಿಪಟಗಳನ್ನು ಖರೀದಿಸುತ್ತಿದ್ದ ಎಳೆಯ ಮಕ್ಕಳೆಲ್ಲ ಈಗ ಯುವಕರಾಗಿದ್ದರು. ಅನೇಕರು ಮಕ್ಕಳು ಮರಿಗಳೊಂದಿಗೆ ನೆಮ್ಮದಿಯಿಂದಿದ್ದರೆ, ಹಲವರು ಬದುಕಿನ ವಾಸ್ತವಗಳೊಂದಿಗೆ ಹೋರಾಡುತ್ತ, ಸುಂದರವಾದ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ಹೆಣಗುತ್ತಿದ್ದರು. ಗಾಳಿಪಟಗಳನ್ನು ಖರೀದಿಸುವುದು ಹಾಗಿರಲಿ, ಕನಿಷ್ಟ ಮೆಹಮೂದನೆಂಬ ವ್ಯಕ್ತಿಯೊಬ್ಬ ಅಸ್ತಿತ್ವದಲ್ಲಿದ್ದ ಎನ್ನುವುದನ್ನೂ ಸಹ ಅವರು ಮರೆತುಹೋಗಿದ್ದರು. ಕಾಲಕ್ಕೆ ತಕ್ಕಂತೆ ಬದಲಾದ, ಬದಲಾಗುತ್ತಿರುವ ಈ ಸ್ಪರ್ಧಾತ್ಮಕ ಜಗದಲ್ಲಿ ನೆಮ್ಮದಿಯ ಭವಿಷ್ಯವನ್ನು ಕಂಡುಕೊಳ್ಳುವುದೇ ಬಹುದೊಡ್ಡ ಸಾಧನೆಯಂತಾಗಿಹೋಗಿದೆ. ಹಾಗಾಗಿ ಮೆಹಮೂದನ ಬೀದಿಯಲ್ಲಿಯೇ ಹತ್ತು ಹಲವು ಬಾರಿ ನಡೆದಾಡಿದ್ದರೂ, ತಮ್ಮ ಬಾಲ್ಯವನ್ನು ಸುಂದರವಾಗಿಸಿದ್ದ ಮೆಹಮೂದನೆನ್ನುವ ವೃದ್ಧನನ್ನು ಮಾತನಾಡಿಸುವಷ್ಟು ವ್ಯವಧಾನ ಆ ಜನಕ್ಕಿರಲಿಲ್ಲ. ಪಾಳು ಬಿದ್ದ ಮಸೀದಿಯಲ್ಲಿ ಬೆಳೆದುಕೊಂಡಿದ್ದ ಆಲದ ಮರದ ಕತೆಯೂ ಮೆಹಮೂದನ ಕತೆಗಿಂತ ತೀರ ಭಿನ್ನವೇನಲ್ಲ. ಜೀವನೋಪಾಯಕ್ಕಾಗಿ ಸಳಸಳನೇ ಬೆವರುತ್ತ, ಓಡಾಡುವ ಜನಜಂಗುಳಿಗೆ ಆಲದ ಮರವನ್ನು ಕಣ್ಣೆತ್ತಿ ನೋಡುವುದು ಸಹ ಅಸಾಧ್ಯದ ಮಾತು. ಹತ್ತಾರು ಮನೆಗಳ ಸಮಸ್ಯೆಗಳು, ಹಲವು ಕಿರಿಯರ ಕನಸುಗಳು ಚರ್ಚಿಸಲ್ಪಟ್ಟಿದ್ದ ಆಲದ ಮರದ ಕೆಳಗೆ ಕ್ಷಣಕಾಲ ಕುಳಿತುಕೊಳ್ಳುವಷ್ಟು ಪುರುಸೊತ್ತು ಇಂದು ಯಾರಿಗೂ ಇಲ್ಲ. ಬೇಸಗೆಯ ಬಿರುಬಿಸಿಲು ತಾಳಲಾಗದೆ ಆಗಂತುಕರು ಮಾತ್ರ ಆಗಾಗ ಅಲ್ಲಿ ವಿರಮಿಸುತ್ತಿದ್ದರಷ್ಟೇ.
ಈಗ ಮೆಹಮೂದನ ಪ್ರೀತಿಯ ಗಿರಾಕಿಯೆಂದರೆ ಆತನ ಮೊಮ್ಮಗ ಅಲಿ. ಮನೆಯ ಸಮೀಪದಲ್ಲಿಯೇ ಕೆಲಸ ಮಾಡುತ್ತಿದ್ದ ಮೆಹಮೂದನ ಮಗ, ಅಪ್ಪನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಚಳಿಗೆ ನಡುಗದೆ, ಬಿರುಬಿಸಿಲಿಗೆ ಲೆಕ್ಕಿಸದೆ ಆಟ ಆಡಿಕೊಂಡು ಓಡಿಕೊಂಡಿರುತ್ತಿದ್ದ ಮೊಮ್ಮಗನನ್ನು ನೋಡುವುದೇ ಮೆಹಮೂದನಿಗೊಂದು ಹಬ್ಬ. ತುಂಬ ಕಾಳಜಿಯಿಂದ ಮನೆಯೆದುರು ನೆಟ್ಟ ಪುಟ್ಟ ಸಸಿಯೊಂದು ದಿನದಿಂದ ದಿನಕ್ಕೆ ಬೆಳೆಯುತ್ತ, ಸಣ್ಣಸಣ್ಣ ಎಲೆಗಳನ್ನು ಚಿಗುರಿಸುವುದನ್ನು ನೋಡಿದಾಗ ಮನದಲ್ಲುಂಟಾಗುವ ಧನ್ಯ ಭಾವ ಮೊಮ್ಮಗನನ್ನು ಕಂಡಾಗ ಮೆಹಮೂದನಿಗಾಗುತ್ತಿತ್ತು. ಸಸ್ಯಗಳಿಗೂ ಮನುಷ್ಯರಿಗೂ ಅದ್ಭುತ ಸಾಮ್ಯತೆಯಿರುವುದಂತೂ ನಿಜ. ಮನುಷ್ಯ ಹಸಿವೆಯಿಂದ ಬಳಲದಿದ್ದರೆ, ವಿಕಲನಾಗದಿದ್ದರೆ ಮತ್ತು ಗಿಡಗಳನ್ನು ಅನಾವಶ್ಯಕವಾಗಿ ಕತ್ತರಿಸದಿದ್ದರೆ ಮನುಷ್ಯ ಮತ್ತು ಸಸ್ಯಗಳ ಬೆಳವಣಿಗೆಯ ವೇಗ ಹೆಚ್ಚು ಕಡಿಮೆ ಒಂದೇ ರೀತಿಯದ್ದು. ಯೌವನಾವಸ್ಥೆಯಲ್ಲಿ ಮನುಷ್ಯ ಮತ್ತು ಮರ ಇಬ್ಬರೂ ಭಯಂಕರ ಬಲಾಡ್ಯರೇ. ಆದರೆ ಯೌವನಾವಸ್ಥೆಯ ಪರ್ವ ಮುಗಿದು, ಮುಪ್ಪಿನೆಡೆಗೆ ಬದುಕಿನ ಪಯಣ ಸಾಗುತ್ತಿರುವಂತೆಯೇ ಇಬ್ಬರೂ ಬಾಗಲಾರಂಭಿಸುತ್ತಾರೆ. ಸುಕ್ಕುಗಟ್ಟಿದ್ದ ವೃದ್ಧ ಅವಯವಗಳನ್ನು ಬಿಸಿಲಿಗೆ ಚಾಚಿ ನೆಮ್ಮದಿ ಕಾಣುವ ಅಭ್ಯಾಸ ಇಬ್ಬರಿಗೂ ಇದೆ. ಕೊನೆಗೊಮ್ಮೆ ದೊಡ್ಡ ನಿಟ್ಟುಸಿರಿನೊಂದಿಗೆ ತಮ್ಮ ಬದುಕಿನ ಕೊನೆಯ ಎಲೆಯನ್ನುದಿರಿಕೊಂಡು ಅಸ್ತಿತ್ವದಿಂದ ಇಲ್ಲವಾಗುವ ಪ್ರಕ್ರಿಯೆಯೂ ಮನುಷ್ಯ ಮತ್ತು ಗಿಡಗಳಲ್ಲಿ ಬಹುತೇಕ ಒಂದೇ ಬಗೆಯದ್ದು.
ಈಗ ಮೆಹಮೂದ ಸಹ ವೃದ್ಧ ಆಲದ ಮರದಂತಾಗಿಹೋಗಿದ್ದ. ವಯೋಸಹಜವೆಂಬಂತೆ ಗಂಟುಗಂಟಾಗಿ ಹೋಗಿದ್ದ ಅವನ ಕೈಕಾಲುಗಳು, ಶಿತಿಲಗೊಳ್ಳುತ್ತಿರುವ ಆಲದ ಮರದ ಬಿಳಲುಗಳಂತೆ ಭಾಸವಾಗುತ್ತಿದ್ದವು. ಅವನ ಮೊಮ್ಮಗ ಅಲಿಯದ್ದು ಅಂಗಳದ ಕೊನೆಯಲ್ಲಿ ಬೆಳೆದುಕೊಂಡಿರುವ ಮುಟ್ಟಿದರೆ ಮುನಿಯ ಸಸ್ಯದಂತಹ ಮನೋಭಾವ. ಆದರೆ ಕೆಲವು ವರ್ಷಗಳಲ್ಲಿ ಅವನ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗುತ್ತದೆ. ಪ್ರಾಯಕ್ಕೆ ಬರುವ ಅಲಿಯಲ್ಲಿ ವಯೋಸಹಜ ತಾಕತ್ತು ಮಿರಿಗುಟ್ಟುತ್ತದೆ. ನವಯೌವನದಲ್ಲಿರುವ ಆಲದ ಮರದಂತೆ ಅವನೂ ಸಹ ಅದ್ಭುತ ಸೌಂದರ್ಯದಿಂದ, ಅಪ್ರತಿಮ ಆತ್ಮವಿಶ್ವಾಸದಿಂದ ನಳನಳಿಸುತ್ತಾನೆ ಎಂದು ಕಲ್ಪಿಸಿಕೊಂಡ ಮೆಹಮೂದ್ ತನ್ನ ವೃದ್ಧ ಮೀಸೆಯಡಿ ಒಮ್ಮೆ ಮುಗುಳ್ನಕ್ಕ.
ಮೆಹಮೂದ್ ಪುನಃ ತನ್ನ ಹಗಲುಗನಸುಗಳಲ್ಲಿ ಮುಳುಗಿಹೋದ. ಅವನಿಗೆ ರಸ್ತೆಯಲ್ಲಿನ ಗದ್ದಲಗಳು ತೀರ ಕ್ಷೀಣಿಸುತ್ತಿರುವಂತೆ ಭಾಸವಾಗತೊಡಗಿತು. ಎಂದಿನಂತೆ ಕುಳಿತಲ್ಲಿಯೇ ತನಗೀಗ ನಿದ್ದೆ ಬರಲಿದೆ, ನಿದ್ರೆಯಲ್ಲಿ ತಾನು ಅತ್ಯದ್ಭುತವಾದ, ಸುಂದರವಾದ, ಹಿಂದೂ ದೇವರಾದ ವಿಷ್ಣುವಿನ ವಾಹನವಾಗಿರುವ ಗರುಡನ ವೇಗದಲ್ಲಿ ಹಾರಾಡುವ ಗಾಳಿಪಟದ ಕನಸನ್ನು ಮತ್ತೊಮ್ಮೆ ಕಾಣಲಿದ್ದೇನೆ ಎಂದುಕೊಂಡ. ನಿದ್ರೆಯ ಮಂಪರಿನ ನಡುವೆಯೇ ಮೊಮ್ಮಗ ಅಲಿಗಾಗಿ ಇನ್ನೊಂದು ಅದ್ಭುತ ಗಾಳಿಪಟವನ್ನು ತಯಾರಿಸಿಕೊಡಬೇಕೆನ್ನುವ ಹೊಸ ಹುಮ್ಮಸ್ಸು ಅವನಲ್ಲಿ ಹುಟ್ಟಿಕೊಂಡಿತ್ತು. ಪತಂಗದ ಹೊರತಾಗಿ ಇನ್ನೇನನ್ನೂ ಸಹ ತಾನು ಮೊಮ್ಮಗನಿಗೆ ನೀಡಲಾರೆನೆನ್ನುವ ವಾಸ್ತವದರಿವು ಅವನಿಗಿತ್ತು. ಅವನೀಗೀಗ ಮೊಮ್ಮಗನ ದನಿ ಕೇಳುತ್ತಿತ್ತಾದರೂ ಮೊಮ್ಮಗ ತನ್ನನ್ನೇ ಕರೆಯುತ್ತಿದ್ದಾನೆಯೋ ಇಲ್ಲವೋ ಎನ್ನುವುದರ ಸ್ಪಷ್ಟತೆಯಿರಲಿಲ್ಲ. ಸಮೀಪದಲ್ಲಿಯೇ ಇದ್ದ ಮೊಮ್ಮಗನ ಕೂಗು ಆತನಿಗೆ ತುಂಬ ದೂರದಿಂದ ಕೇಳಿ ಬರುತ್ತಿರುವಂತೆ ಭಾಸವಾಗಲಾರಂಭಿಸಿತ್ತು. ಮನೆಯೆದುರಿಗಿನ ಬೀದಿಯಲ್ಲಿ ನಿಂತಿದ್ದ ಅಲಿ, ಪೇಟೆಗೆ ತೆರಳಿದ್ದ ಅಮ್ಮ ಮರಳಿ ಮನೆಗೆ ಬಂದಳಾ ಎಂದು ಅಜ್ಜನನ್ನು ವಿಚಾರಿಸುತ್ತಿದ್ದ. ಮೂರು ಬಾರಿ ಪ್ರಶ್ನಿಸಿದ ನಂತರವೂ ಮೆಹಮೂದ್ ಉತ್ತರಿಸದಿದ್ದಾಗ ಹುಡುಗನಿಗೇನೋ ಅನುಮಾನ. ವೃದ್ಧನ ನೆತ್ತಿಯ ಮೇಲೆ ಬಿರುಬಿಸಿಲು ಓರೆಯಾಗಿ ಬೀಳುತ್ತಿತ್ತು. ಚಿಕ್ಕ ಶ್ವೇತವರ್ಣದ ಪಾತರಗಿತ್ತಿಯೊಂದು ಮುದಿಯನ ಮಿಂಚುವ ಗಡ್ಡದ ಮೇಲೆ ವಿರಮಿಸುತ್ತಿತ್ತು. ಮೆಹಮೂದನದ್ದು ದಿವ್ಯ ಮೌನ. ಅಳುಕುತ್ತಲೇ ತನ್ನ ಪುಟ್ಟ ಗೋಧಿಬಣ್ಣದ ಕೈಗಳಿಂದ ಅಜ್ಜನ ಭುಜದ ಮೇಲೆ ತಟ್ಟಿದ ಮೊಮ್ಮಗನಿಗೆ ಅಜ್ಜನ ಮೌನವೇ ಉತ್ತರವಾಯ್ತು. ಕ್ಷಣಮಾತ್ರಕ್ಕೆ ಕೇಳಿಯೂ ಕೇಳಿಸದಂತಹ ಸಣ್ಣದ್ದೊಂದು ನರಳಿಕೆ. ಮರುಕ್ಷಣ ಮತ್ತದೇ ಮೌನ. ಇಂಥದ್ದೊಂದು ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ಅಲಿ ಮನೆಯ ಜಗುಲಿಯಿಂದ ಹೊರಗೆ ಜಿಗಿದವನೇ ತನ್ನ ತಾಯಿಯ ಹೆಸರನ್ನು ಕರೆಯುತ್ತ ಪೇಟೆಯಲ್ಲಿ ಓಡಲಾರಂಭಿಸಿದ್ದ. ಮೆಹಮೂದನ ಕೆಂಚು ಗಡ್ಡ ಮೇಲೆ ವಿರಮಿಸುತ್ತಿದ್ದ ಪಾತರಗಿತ್ತಿ ಅಲ್ಲಿಂದ ಹಾರುತ್ತ ನಾಚಿಕೆ ಮುಳ್ಳಿನ ಗಿಡದ ಹೂವಿನ ಮೇಲೆರಗಿತ್ತು. ಜೋರಾಗಿ ಬೀಸಿದ ತಂಗಾಳಿಯ ಅಲೆಯೊಂದು ಆಲದ ಮರದ ಟೊಂಗೆಗೆ ಸಿಲುಕಿಕೊಂಡಿದ್ದ ಗಾಳಿಪಟವನ್ನು ಈಗ ಬಂಧನಮುಕ್ತವಾಗಿಸಿತ್ತು. ಗಾಳಿಯ ರಭಸಕ್ಕೆ ಕೊಂಚ ಕಾಲ ಅವಿಶ್ರಾಂತ ಪಟ್ಟಣದ ಬಾನಿನಲ್ಲಿ ಹಾರಿದ ಪತಂಗ, ಕೊನೆಗೊಮ್ಮೆ ಕಾಣದಂತೆ ಮಾಯವಾಯಿತು.
ರಸ್ಕಿನ್ ಬಾಂಡ್ ಬರೆದ ‘The Kite maker’ ಎನ್ನುವ ಆಂಗ್ಲ ಕತೆಯೊಂದರ ಭಾವಾನುವಾದವಿದು. ಭಾರತೀಯ ವಾತಾವರಣದ ರಣಗಂಭೀರ ಸಮಸ್ಯೆಗಳಾದ ಅಸ್ಪೃಶ್ಯತೆ, ಜಾತಿಯತೆಯಂಥಹ ವಸ್ತುಗಳನ್ನಿಟ್ಟುಕೊಂಡು ಕತೆಗಳನ್ನು ಬರೆದವರ ಪೈಕಿ ಮುಲ್ಕ್ ರಾಜ್ ಆನಂದ್ ಅಗ್ರಗಣ್ಯರು. ಸಾಹಿತ್ಯವೆಂದರೆ ಗಂಭೀರ ಬರಹ ಮಾತ್ರವಲ್ಲ ಎನ್ನುವುದನ್ನು ತೋರಿಸಿಕೊಟ್ಟವರು ಆರ್ ಕೆ ನಾರಾಯಣ್. ಮಾಲ್ಗುಡಿ ಡೇಸ್ ನಂತಹ ನವಿರಾದ ಕತೆಗಳನ್ನು ರಚಿಸಿ ಓದುಗರಿಗೊಂದು ಕಚಗುಳಿಯಿಟ್ಟವರು ನಾರಾಯಣ್ ಎಂದರೆ ತಪ್ಪಿಲ್ಲ. ಆದರೆ ರಸ್ಕಿನ್ ಬಾಂಡ್ ಇವರೀರ್ವರಿಗಿಂತ ಕೊಂಚ ಭಿನ್ನ. ಭಾರತೀಯ ಪರಿಸರದ ತೀರ ಸಣ್ಣ ಪುಟ್ಟ ಸಂಗತಿಗಳನ್ನೇ ಕಥಾವಸ್ತುವಾಗಿ ಬಳಸಿಕೊಂಡವರು ರಸ್ಕಿನ್. ಅವರ ಬಹುತೇಕ ಕತೆಗಳು, ನಮ್ಮ ನಿಮ್ಮ ನಡುವಣ ಸಂದರ್ಭಗಳನ್ನೇ ಅವಲಂಬಿಸಿರುತ್ತವೆನ್ನುವುದು ಓದುಗರಿಗೆ ತಿಳಿದಿರುವ ವಿಷಯ. ರಸ್ಕಿನ್ ಮಕ್ಕಳಿಗೂ ಅಚ್ಚುಮೆಚ್ಚು. ಒಂದು ಕತೆ ಓದುಗನಲ್ಲಿ ಅದೆಷ್ಟು ಭಾವಗಳನ್ನು ಮೀಟಬಲ್ಲದು ಎನ್ನುವುದಕ್ಕೆ ಮೇಲಿನ ಕತೆಯೇ ಸಾಕ್ಷಿ. ಓದುತ್ತ ಹೋದಂತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುವ, ನಾವು ಕಳೆದುಕೊಂಡ ದಿನಗಳ ಲೋಕಕ್ಕೆ ಮತ್ತೊಮ್ಮೆ ಕರೆದುಕೊಂಡು ಹೋಗುವ ಈ ಕತೆಯಲ್ಲಿ ಗತಿಸಿ ಹೋಗಿರುವ ಕಾಲದಲ್ಲಿದ್ದಿರಬಹುದಾದ ಸಂತೃಪ್ತಿಯ ಕುರುಹುಗಳಿವೆ. ಕಾಲ ಬದಲಾದಂತೆ ಬದಲಾಗುವ ಮನುಷ್ಯನ ಆದ್ಯತೆಗಳ ಚಿತ್ರಣವಿದೆ. ಗಡಿಬಿಡಿಯ ಬದುಕು ಕಳೆದುಕೊಂಡಿರುವ ಮಧುರ ಸಂತಸಗಳ ನಿಟ್ಟುಸಿರಿದೆ. ಹತ್ತು ಹಲವು ಭಾವಸ್ಪುರಣೆಯಿರುವ ಇಂಥಹ ಕತೆಗಳು ಕತೆಗಾರನ ಕಥಾಶಕ್ತಿಯ ನೈಜ ಋಜುವಾತು ಎಂದರೆ ಸುಳ್ಳಲ್ಲ.
ಓದಿದಾಕ್ಷಣ ಮತ್ತೊಬ್ಬರಿಗೆ ಓದಿಸುವ ನನ್ನ ಚಾಳಿ ನಿಮಗೇನೂ ಹೊಸದಲ್ಲ. ನಿಮಗಾಗಿ ಅನುವಾದಿಸಿದ್ದೇನೆ. ಪ್ರೀತಿಯಿಂದ ಓದಿಕೊಳ್ಳಿ. ಓದಿದಾಕ್ಷಣ ನಿಮ್ಮಲ್ಲೊಂದು ಅವ್ಯಕ್ತ ಸಂತಸ ಹುಟ್ಟಿಕೊಂಡರೆ ಅಷ್ಟರಮಟ್ಟಿಗೆ ನನ್ನ ಪರಿಶ್ರಮ ಧನ್ಯ.

Comments

Submitted by abdul Thu, 11/10/2016 - 15:44

"ಓದಿದಾಕ್ಷಣ ಮತ್ತೊಬ್ಬರಿಗೆ ಓದಿಸುವ ನನ್ನ ಚಾಳಿ" ಎಲ್ಲರಿಗೂ ಬರಲಿ.
ಭಾವಾನುವಾದ ತುಂಬಾ ಸೊಗಸಾಗಿ ಮೂಡಿ ಬಂದಿದೆ, ಧನ್ಯವಾದಗಳು.