ಗಾಳಿಯೊಂದಿಗೆ ಬೆರೆತ ಕೀಟನಾಶಕದಿಂದ ದುರಂತ ಸಾವುಗಳು

ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಯವತ್ಮಲ್ (Yavatmal) ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಪ್ರೊಪೆಫೊನಸ್ (Profenofos) ಕೀಟನಾಶಕವನ್ನು ಸಿಂಪಡಿಸಿದ ಸುಮಾರು ೧೮ ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರು. ಸುಮಾರು ೪೬೭ ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಕೆಲವು ಮಂದಿ ನಿರ್ದಿಷ್ಟ ಕಾರಣ ಇಲ್ಲದೆ ಅಸ್ವಾಸ್ಥ್ಯಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿದ್ದಾರೆ. ಸರಕಾರ ಸತ್ತವರ ಪ್ರತೀ ಕುಟುಂಬಕ್ಕೆ ೨ ಲಕ್ಷ ಪರಿಹಾರ ಘೋಷಿಸಿತ್ತು. ರೈತ ಸಂಘಟನೆಗಳು ಪ್ರತೀ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಒದಗಿಸಬೇಕೆಂದು ಒತ್ತಾಯಮಾಡುತ್ತಿದ್ದವು. ಸತ್ತವರು ಸತ್ತರು. ಉಳಿದವರಿಗೆ ಪರಿಹಾರ ಕೊಟ್ಟ ನಂತರ ಸಮಸ್ಯೆ ಮುಗಿಯಿತೇ? ಖಂಡಿತಾ ಇಲ್ಲ. ಇಲ್ಲಿ ಒಂದು ವಿಚಾರ ಹೇಳಲು ಬಯಸುತ್ತೆನೆ.ಅಧಿಕೃತವಾಗಿ ಅವರಿಗೆ ಹೇಳಲಾಗದಿದ್ದರೂ ಒಬ್ಬ ತಜ್ಞ ವೈದ್ಯರ ಪ್ರಕಾರ ಇತೀಚಿನ ದಿನಗಳಲ್ಲಿ ರೈತರ ಆರೋಗ್ಯ ಸ್ಥಿತಿ ಹದಗೆಡುತ್ತಿದೆಯಂತೆ.
ತುಂಬಾ ಹಿಂದೆ ರೈತರು- ಅವರ ಜೊತೆಗೆ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಉಳಿದ ಕ್ಷೇತ್ರಗಳಲ್ಲಿ ಜೀವನ ನಡೆಸುವವರಿಗಿಂತ ಭಿನ್ನ. ತಾವೇ ಬೆಳೆಯುವ ಉತ್ತಮ ಗುಣಮಟ್ಟದ ಆಹಾರ, ಹಣ್ಣು ಹಂಪಲು, ಹಾಲು ಸೇವಿಸಿ, ಉತ್ತಮ ಪರಿಸರದಲ್ಲಿ ಜೀವನ ನಡೆಸಿ ದೈಹಿಕ ಶ್ರಮದಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಅನಾರೋಗ್ಯ ಕಡಿಮೆ. ಸಕ್ಕರೆ ಖಾಯಿಲೆ ಇಲ್ಲ. ರಕ್ತದೊತ್ತಡ ಇಲ್ಲ. ಹೃದಯ ಕಾಯಿಲೆ ಇಲ್ಲ. ಕ್ಯಾನ್ಸರ್ ಇಲ್ಲ. ಮಕ್ಕಳೂ ಸಹ ಆರೋಗ್ಯವಾಗಿರುತ್ತಾರೆ ಎಂಬ ಮಾತುಗಳಿತ್ತು. ಸುಮಾರು ೨೦- ೨೫ ವರ್ಷಕ್ಕೆ ಹಿಂದೆ ಈ ಮಾತು ಸರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಬದಲಾಗುತ್ತಾ ಬಂದಿದೆ.
ಕೆಲವೊಮ್ಮೆ ಉತ್ತರ ಕರ್ನಾಟಕದ ಕಡೆಗೆ ಪ್ರವಾಸ ಹೋಗಿ ರಾತ್ರಿ ಬಸ್ಸುಗಳಲ್ಲಿ ಬರುವಾಗ ಪಕ್ಕದವರೊಡನೆ ಹಾಳು ಹರಟೆ ಮಾತಾಡಿಸಿದಾಗ, ನಾನು ಹೆಚ್ಚಿನ ಸಂದರ್ಭಗಳಲ್ಲಿ ಮಾತಾಡಿಸಿದ್ದು, ಮಣಿಪಾಲ ಆಸ್ಪತ್ರೆಗೆ ಬರುವವರನ್ನು. ಮನೆಯ ಸದಸ್ಯರು ಕ್ಯಾನ್ಸರ್, ಹೃದ್ರೋಗ ಮುಂತಾದ ಅಸ್ವಾಸ್ಥ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾರೆ, ಅವರನ್ನು ನೋಡಲು ಹೋಗುವುದೆಂಬ ವಿವರಗಳನ್ನು ಕೇಳಿದ್ದೇನೆ. ಅವರೆಲ್ಲರೂ ಬಹುತೇಕ ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು.
ಅಷ್ಟೇ ಅಲ್ಲ ನೀವು ಎಂದಾದರೂ ಸೋನಾ ಮಸೂರಿ ಬೆಳೆಯುವ ರಾಯಚೂರು, ಬಳ್ಳಾರಿಯ ಗಡಿಯಲ್ಲಿ ಪ್ರಯಾಣಿಸಿದರೆ ನಿಮ್ಮ ಮೂಗಿಗೆ ಕೀಟನಾಶಕದ ವಾಸನೆಯೇ ಬಡಿಯುತ್ತದೆ. ಭತ್ತದ ಪೈರಿಗೆ ಯಾವುದೇ ಕೀಟಗಳು ಬಾರದಿರಲಿ ಎಂದು ಥಿಮೆಟ್ ಎರಚುತ್ತಾರೆ. ಇದರ ವಾಸನೆ ಹೊಟ್ಟೆ ಹಳಸು ಬರುವಷ್ಟು ಹಿಂಸೆ ಕೊಡುತ್ತದೆ. ಹತ್ತಿ ಬೆಳೆಯುವ ಪ್ರದೇಶದಲ್ಲೂ ಹಾಗೆಯೇ. ಹೊಲದ ಪಕ್ಕದ ಮನೆಯವರು ವಾರದಲ್ಲಿ ಒಂದು ದಿನ ಕೀಟನಾಶಕದ ವಾಸನೆಯನ್ನೇ ಉಸಿರಾಡುವುದು. ಮಹಾರಾಷ್ಟ್ರದ ದುರಂತದ ಸುದ್ದಿ ಕೇಳಿದಾಗ ಇವೆಲ್ಲಾ ನೆನಪಾಗುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಿಕೊಂಡರೆ ಮಾತ್ರ ಅದಕ್ಕೆ ಹೂಡಿದ ಬಂಡವಾಳ ಮರಳಿ ಪಡೆಯಲು ಸಾಧ್ಯ. ಎಲ್ಲಾ ವೃತ್ತಿಯಲ್ಲಿರುವಂತೆ ಗರಿಷ್ಟ ಉತ್ಪಾದನೆ ಪಡೆದು ಏನಾದರೂ ಹೆಚ್ಚುವರಿ ಆದಾಯ ಗಳಿಸಬೇಕೆಂಬ ಕೃಷಿಕನ ಆಸೆಯೂ ಸರಿಯೇ. ಇದಕ್ಕಾಗಿ ರೈತರು ಕೀಟ ಬಾರದಂತೆ, ರೋಗ ಬಾರದಂತೆ ಅಗತ್ಯವಿದ್ದೋ ಇಲ್ಲದೆಯೋ ಮುಂಜಾಗ್ರತಾ ಕ್ರಮವಾಗಿ ರಾಸಾಯನಿಕ ಔಷಧಿ ಸಿಂಪಡಿಸುತ್ತಾರೆ. ಅಧಿಕ ಇಳುವರಿ ಕೊಡುವ ತಳಿಗಳು, ಅದಕ್ಕೆ ಬರುವ ಹೊಸ ಹೊಸ ರೋಗ ಕೀಟ ಸಮಸ್ಯೆಗಳು ಯಾವಾಗಲೂ ಕೀಟ- ರೋಗನಾಶಕಗಳನ್ನು ಬಯಸುತ್ತವೆ. ಬಳಕೆ ಮಾಡದೇ ಇದ್ದಲ್ಲಿ ರೈತ ಬೆಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಬೆಳೆಸಂರಕ್ಷಣೆ ಎಂಬುದು ಕೃಷಿಯ ಒಂದು ಅಗತ್ಯ ಉತ್ಪಾದನಾ ಕ್ರಮ. ಅವಶ್ಯವಿದ್ದಾಗ ಅದನ್ನು ಅನುಸರಿಸಲೇ ಬೇಕು. ಸೂಕ್ತ ಕೀಟ- ರೋಗ ನಿಯಂತ್ರಣ ಕ್ರಮ ಕೈಗೊಂಡಲ್ಲಿ ಬೆಳೆಯಲ್ಲಿ ೨೫ % ಕ್ಕೂ ಹೆಚ್ಚು ಇಳುವರಿ ಪಡೆಯಬಹುದು. ಹಾಗೆಂದು ಇದನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ. ಅದನ್ನು ಯಾವ ರೀತಿ, ಯಾವ ಸಮಯದಲ್ಲಿ ಪ್ರಯೋಗಿಸಬೇಕು ಎಂದು ಸರಿಯಾಗಿ ತಿಳಿದೇ ಬಳಕೆ ಮಾಡಬೇಕು. ದುರದೃಷ್ಟವಷಾತ್ ನಮ್ಮ ದೇಶದಲ್ಲಿ ರೈತರಿಗೆ ಸಸ್ಯ ಸಂರಕ್ಷಣೆ ಹೇಗೆ ಮಾಡಬೇಕು ಎಂಬುದರ ಶಿಕ್ಷಣ ಕೊಡುವ ವ್ಯವಸ್ಥೆಗಳು ಇಲ್ಲ. ಇದ್ದರೂ ಅದು ಬಹುತೇಕ ರೈತರಿಗೆ ತಲುಪಿಲ್ಲ. ೨೦೧೭ರಲ್ಲಿ ಕೇಂದ್ರ ಸರಕಾರ ರಸಗೊಬ್ಬರ- ಕೀಟನಾಶಕ ಮಾರಾಟ ಪರವಾನಿಗೆಯ ಬಗ್ಗೆ ಹೊಸ ನೀತಿಯನ್ನು ಜ್ಯಾರಿಗೆ ತಂದುದು ನಮಗೆಲ್ಲಾ ಗೊತ್ತಿದೆ. ಆದರೆ ಅಲ್ಲಿಯೂ ಮತ್ತೆ ತಪ್ಪನ್ನೇ ಮಾಡಲಾಗಿದೆ. ಹಾಲೀ ಇರುವ ಮಾರಾಟಗಾರರನ್ನೂ ಉಳಿಸಿಕೊಳ್ಳಬೇಕು. ಕಾನೂನಿನ ಚೌಕಟ್ಟೂ ನೆರವೇರಬೇಕು ಎಂಬ ಇಬ್ಬಗೆಯನ್ನು ನೀತಿಯ ಅನುಸರಿಸಲಾಗಿದೆ ಎಂದೆನಿಸುತ್ತದೆ. ಅದೇ ಮದ್ಯ ಹೊಸ ಶೀಷೆಯಲ್ಲಿ ಲಭ್ಯವಾದಂತಾಗಿದೆ.ಇಷ್ಟು ಮಾಡುವಾಗ ಯಾವುದೇ ರೋಗ- ಕೀಟ- ಪೋಷಕಾಂಶ ಇರಲಿ ಅದಕ್ಕೆ ಇಂತದ್ದೇ, ಇಂತಿಷ್ಟೇ ಬಳಕೆ ಮಾಡಬೇಕು ಎಂಬ ಪ್ರಿಶ್ಕಿಪ್ಷನ್ ಆಧಾರದಲ್ಲಿ ಮಾತ್ರ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಸ್ಥಳೀಯವಾಗಿ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಕೃಷಿ ಸಹಾಯಕರಿದ್ದಾರೆ, ಕೃಷಿ ಸಂಶೋಧನಾ ಕೇಂದ್ರಗಳಿವೆ, ಕೃಷಿ ವಿಜ್ಞಾನ ಕೇಂದ್ರಗಳಿವೆ, ಇವರ ಶಿಫಾರಸಿನ ಮೇಲೆಯೇ ಕೀಟ- ರೋಗ- ಕಳೆನಾಶಕ, ಪೋಷಕಾಂಶ ರೈತರ ಕೈಗೆ ದೊರೆಯುವಂತಾಗಿದ್ದರೆ ಅದರ ವೈಜ್ಞಾನಿಕ ಬಳಕೆಗೆ ಸಹಾಯಕವಾಗುತ್ತಿತ್ತು.
ನಮ್ಮ ದೇಶದಲ್ಲಿ ೯೦% ಕ್ಕೂ ಹೆಚ್ಚಿನ ರೈತರು- ಕೃಷಿ ಕೂಲಿ ಕಾರ್ಮಿಕರು ಬೆಳೆ ಸಂರಕ್ಷಕ- ಪೋಷಕಾಂಶಗಳನ್ನು ಉಪಯೋಗಿಸುವಾಗ ಕೈಗೊಳಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ. ರಾಸಾಯನಿಕ ಮೂಲದ ಮೇಲಿನ ಯಾವುದೇ ಒಳಸುರಿಗಳನ್ನು ಬಳಕೆ ಮಾಡುವಾಗ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ. ಇದನ್ನು ಅನುಸರಿಸದ ಕಾರಣ ಬೆಳೆ ಉಳಿಸಲು ಹೋಗಿ ಆರೋಗ್ಯ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಯಾವುದೇ ಮೈ ಕೈ ಮುಚ್ಚಿಕೊಳ್ಳದೆ, ರಾಸಾಯನಿಕ ಬೆಳೆ ಒಳಸುರಿಗಳನ್ನು ಬಳಕೆ ಮಾಡುವುದರಿಂದ ಅದು ನಮ್ಮ ದೇಹದ ರೋಮ ನಾಳಗಳ ಮೂಲಕ, ಕಣ್ಣು, ಮೂಗು, ಬಾಯಿ ಕಿವಿ ಗಾಯಗಳ ಮೂಲಕ ಶರೀರದ ಒಳಗೆ ಸೇರಿ ಅದರ ಪ್ರತಿಕೂಲ ಪರಿಣಾಮವನ್ನು ದೇಹದ ಮೇಲೆ ಉಂಟು ಮಾಡುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಲಾಂಬ್ಡಾ ಸೈಕ್ಲಿನ್ ಕೀಟನಾಶಕವನ್ನು ಸಿಂಪಡಿಸುವಾಗ ಮೈ ಕೈಗೆ ತಾಗಿತೆಂದರೆ ಅದರ ಉರಿ ಸಿಂಪಡಿಸಿದ ೧ ಗಂಟೆ ತರುವಾಯ ಪ್ರಾರಂಭವಾಗಿ ೧ ಗಂಟೆ ತನಕ ಇರುತ್ತದೆ. ಅದು ಜೀವ ಹಿಂಡುವ ಉರಿಯಾಗಿರುತ್ತದೆ. ಇಂತದ್ದು ಬೇರೆ ಬೇರೆ ಕೀಟನಾಶಕಗಳಲ್ಲೂ ಇರಬಹುದು. ಉರಿ ಬಾರದೇ ಇದ್ದರೂ ಅದು ಶರೀರದ ಒಳಗೆ ಹೋಗದೆ ಇರಲಾರದು. ಕಳೆ ನಾಶಕಗಳನ್ನು ಯಾವುದೇ ಸುರಕ್ಷಾ ಉಡುಗೆ ಬಳಸದೆ ಸಿಂಪಡಿಸಿದರೆ ಅದು ಮನುಷ್ಯನ ಜೀವ ಕೋಶಗಳನ್ನೂ ಕೊಲ್ಲುತ್ತದೆ.
ರೈತರಿಗೆ ಉಳಿದ ಎಲ್ಲಾ ಶಿಕ್ಷಣ ಕೊಡುವ ಮುನ್ನ ಬೆಳೆ ಒಳ ಸುರಿಗಳ ಸುರಕ್ಷಿತ ಬಳಕೆ ಬಗ್ಗೆ ತರಬೇತಿ ನೀಡುವುದು ಅಗತ್ಯ. ಹೆಚ್ಚಿನ ರೈತರಿಗೆ ಸಸ್ಯಗಳಿಗೆ ಬಳಕೆ ಮಾಡುವ ವಸ್ತುಗಳು ಮಾನವನ ದೇಹದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಬಗ್ಗೆ ತಿಳುವಳಿಕೆ ಇಲ್ಲ. ಅದನ್ನು ಅಧ್ಯಯನ ಮಾಡಿಯಾದರೂ ತಿಳಿ ಹೇಳಬೇಕಾದ ತುರ್ತು ಅಗತ್ಯವಿದೆ. ಪ್ರತೀಯೊಬ್ಬ ರೈತನೂ ಸುರಕ್ಷಾ ಉಡುಗೆ ಧರಿಸಿಯೇ ಬೆಳೆ ಸಂರಕ್ಷಕಗಳನ್ನು ಬಳಕೆ ಮಾಡಬೇಕು. ಸುಮಾರು ೧೦- ೨೦ ವರ್ಷಗಳಿಂದ ಅನುಸರಿಸಿದ ಅಸುರಕ್ಷಿತ ವಿಧಾನಗಳ ಫಲದಿಂದಾಗಿ ಸಮಾಜದಲ್ಲಿ ಆರೋಗ್ಯವಂತರೆಂಬ ಹೆಸರು ಪಡೆದಿದ್ದ ಕೃಷಿಕರು- ಕೃಷಿ ಕಾರ್ಮಿಕರು ಅದನ್ನು ಕಳೆದುಕೊಳ್ಳುವಂತಾಗಿದೆ. ಇದು ಬರೇ ಸಮಾಜದ ಒಂದು ವರ್ಗಕ್ಕೆ ಸಂಬಂಧಿಸಿದ್ದಲ್ಲ. ಸಮಸ್ತ ಸಮುದಾಯಕ್ಕೆ ಸಂಬಂಧಿಸಿದ್ದು. ಆದುದರಿಂದ ರಾಸಾಯನಿಕ ಬೆಳೆ ಒಳಸುರಿಗಳ ಬಳಕೆಯ ಬಗ್ಗೆ ತಿಳುವಳಿಕೆ ನೀಡಬೇಕಾದ್ದು ಅತ್ಯಗತ್ಯ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ