ಗಾಳಿಯ ಎದೆಸೀಳಿ ಹೊರಟ ಹಕ್ಕಿ

ಗಾಳಿಯ ಎದೆಸೀಳಿ ಹೊರಟ ಹಕ್ಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಕೆ ಮಂಜುನಾಥ್
ಪ್ರಕಾಶಕರು
ಲುಂಬಿನಿ ಪ್ರಕಾಶನ, ಚಳ್ಳಕೆರೆ, ಚಿತ್ರದುರ್ಗ-೫೭೭೫೨೨
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಎಸ್.ಕೆ. ಮಂಜುನಾಥ್ ಅವರ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎಂಬ ಈ ೭೬ ಪುಟಗಳ ಪುಟ್ಟ ಕವನ ಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಹಿರಿಯ ಲೇಖಕ ಮಹಾದೇವ ಶಂಕನಪುರ ಅವರು ಕವಿ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಗೆ ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ....

“ಕವಿ ಎಸ್.ಕೆ. ಮಂಜುನಾಥ್ ಈಗಾಗಲೇ 'ಎದೆಗಿಲಕಿ' ಸಂಕಲನದ ಮೂಲಕ ಕಾವ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು, ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವವರು. ಕನ್ನಡದ ಯುವಕವಿಗಳಲ್ಲಿ ಭರವಸೆಯ ಧ್ವನಿ, ದೀರ್ಘ ಸಮಯದ ನಂತರ ಮಂಜುನಾಥ್ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಕವಿತೆಗಳ ಮೂಲಕ ತಮ್ಮ ಕಾವ್ಯಯಾನವನ್ನು ತೆರೆದು ಹರಿಯ ತೊಡಗಿದ್ದಾರೆ. ಹಾಗೇ ತೆರೆದು ಹರಿಯುತ್ತಾ ಲೋಕದ ಎದೆಗೂ ಹೃದಯಕ್ಕೂ ಕನಸಿಗೂ ಕೊಳ್ಳಿ ಇಟ್ಟು ಕಾಡುವ ಹಾಡುವ ಹಣತೆ ಹಚ್ಚುತ್ತಾರೆ.

ತಮ್ಮ ಈ ಸಂಕಲನಕ್ಕೆ ಬರೆದುಕೊಂಡಿರುವ ಮಂಜುನಾಥ್ ಅವರ ಆರಂಭದ ಮಾತುಗಳು ಬೆರಗು ಹುಟ್ಟಿಸುತ್ತವೆ. ಅವರ ಗದ್ಯ ಕೂಡ ಆಕರ್ಷಕವೂ ಕಾವ್ಯಾತ್ಮಕವೂ ಆಗಿದೆ. ಕಾವ್ಯ ಬರಹದಲ್ಲಿ ಮಂಜುನಾಥ್ ಮಾಗುತ್ತ ಪಕ್ವವಾಗುತ್ತಾ ಅತ್ಯಂತ ತುಂಬು ತೊರೆಯಾಗುವತ್ತ ವಿಶಾಲವಾಗಿ ನೋಡುತ್ತ ಎಲ್ಲವನ್ನು ಎಲ್ಲರನ್ನು ಒಳಗೊಳ್ಳುತ್ತಾ ಹರಿಯುವ ಸಾಗುವ ಸೂಚನೆಗಳನ್ನು ಕೊಡುತ್ತಾರೆ. “ಇಲ್ಲೆ ಎಲ್ಲೋ ಕಳೆದು ಹೋಗಿರುವ ನನ್ನನ್ನು ನಾನೇ ಹುಡುಕುತ್ತ ಅಲೆವಾಗ ದಕ್ಕಿದ ಸಾಲುಗಳಿವು. ಬೀದಿಯಲಿ ಹೆಕ್ಕಿ ತಂದ ಅನಾಥ ಬಿಕ್ಕುಗಳಿವು” ಎಂಬುದಾಗಿ ತಮ್ಮ ಕಾವ್ಯ ಕುರಿತು ಬರೆದಿರುವ ಮಂಜುನಾಥರ ಮಾತು ಮೊದಲ ಓದಿಗೇ ಸೆಳೆಯುವ ಬಹು ಮುಖ್ಯವಾದ ಸಾಲುಗಳಿವು, ಇದು ಇಡೀ ಕಾವ್ಯಕ್ಕೆ ಕವಿ ಬರೆದುಕೊಳ್ಳುವ ತಲೆಬರಹವೂ, ಅಡಿಬರಹವೂ ಇದ್ದಂತೆ. ಹಾಗೇ ಇಲ್ಲಿನ ಇನ್ನೂ ಕೆಲವು ಸಾಲುಗಳಿವೆ.

'ನಮ್ಮ ಕನಸುಗಳು ಭಾರತದ ಕನಸುಗಳಾಗದೇ ಇರುವಾಗ, ಭಾರತವನ್ನು ನಮ್ಮ ದೇಶವೆಂದು ಹೇಗೆ ಕರೆಯಲಿ?' ಎಂಬ ಸಾಲು ಬಾಬಾಸಾಹೇಬರ ಮಾತನ್ನು ನೆನಪಿಸುತ್ತವೆ. ನಿಮ್ಮ ಹೃದಯಕ್ಕೆ ಅರ್ಥ ಮಾಡಿಸಬಹುದಾದ ಹೊಸ ಅಕ್ಷರಗಳ, ಹೊಸ ಭಾಷೆಯನ್ನು ಹುಡುಕುತ್ತಿದ್ದೇನೆ' ಎಂಬ ಮಂಜುನಾಥರ ಮಾತು ಕಾವ್ಯದ ಮೂಲಕ ಅದನ್ನು ಮಾಡುತ್ತಿರುವ ಸೂಚನೆಯನ್ನು ಕೊಡುತ್ತಿದೆ. 'ಬೀದಿಯಲ್ಲಿ ಧಿಕ್ಕಾರ ಕೂಗಿದ ಸೊಲ್ಲು ಈಗ ತನ್ನೊಳಗೆ ತನಗೆ ಕೇಳದ ಹಾಗೆ ಬಿಕ್ಕುತ್ತಿದೆ' ಎಂಬ ಮತ್ತೊಂದು ಸಾಲು ಅತ್ಯಂತ ಪ್ರತಿಮಾತ್ಮಕವಾದುದು. ಇಂದಿನ ವ್ಯವಸ್ಥೆಯಲ್ಲಿ ಪ್ರಗತಿಪರರು, ವಿಚಾರವಾದಿಗಳು ಅನುಭವಿಸುತ್ತಿರುವ ಎದುರಿಸುತ್ತಿರುವ ಸಮಸ್ಯೆ ಸವಾಲುಗಳನ್ನು ನೆನಪಿಸುತ್ತದೆ. ನಮ್ಮನ್ನು ಆಳುವ ಸರ್ಕಾರಗಳ ನಡವಳಿಕೆ, ಆಡಳಿತನೀತಿಗೆ ಕನ್ನಡಿ ಹಿಡಿದಂತಿವೆ.

“ನಾನು ಓದುತ್ತಿರುವ ಹಾಗೂ ಬರೆಯುತ್ತಿರುವ ನನ್ನದೇ ಕವಿತೆ, 'ಕವಿತೆಯಾಗಿದೆಯಾ?' ಎಂಬ ಅನುಮಾನವೊಂದನ್ನು ನನ್ನಲ್ಲಿರಿಸಿಕೊಂಡೇ ದಶಕದ ತರುವಾಯ ನಿಮ್ಮೆದುರು ಕವಿತೆಯಾಗಿ ನಿಂತಿದ್ದೇನೆ” ಎಂಬ ಕವಿಯ ವಿನಯ ಮತ್ತು ಸಂಕೋಚಗಳು ಕವಿಗೆ ಇರಬೇಕಾದ ಮುಗ್ಧತೆಯನ್ನು ಆತನ ವಿಕಾಸಕ್ಕೆ ಇರುವ ರಹದಾರಿಯನ್ನು ಸೂಚಿಸುತ್ತದೆ. 'ಅನ್ನಿಸಿದ್ದೆನ್ನೆಲ್ಲಾ ಹೇಳಲು ಸಾಧ್ಯವಿಲ್ಲದಾಗ ರೂಪಕ ಪ್ರತಿಮೆಗಳ ಮೂಲಕ ಹೇಳುವ ಪರಿಭಾಷೆಯ ಕಾವ್ಯ ಎಂಬ ಮಂಜುನಾಥರ ಮಾತುಗಳು ಕಾವ್ಯಕ್ಕೆ ನೀಡಿರುವ ವ್ಯಾಖ್ಯಾನದಂತಿದೆ. ಇಲ್ಲಿ ಕವಿಗೆ ತನ್ನನ್ನು ತಾನು ಕಂಡುಕೊಳ್ಳಲು ಕೈಹಿಡಿದು ನಡೆಸುವ ಮಾರ್ಗದಾತೆಯು ಹಾಗೂ ಜ್ಞಾನಜ್ಯೋತಿಯು ಕಾವ್ಯವೇ ಆಗಿದೆ.

ಅಪ್ಪನ ಕುರಿತಾದ ಕವಿತೆ ಬಡತನ, ಹಸಿವು ಮತ್ತು ದಲಿತ ಅಸ್ಮಿತೆ ಕುರಿತು. ಮಾತನಾಡುತ್ತದೆ. “ಶಾಲೆ ಬಿಟ್ಟಿದ್ದಕ್ಕೆ ಹಣೆಬರಹ ಜರಿದವನು! ಬಡತನದ ಬಟ್ಟೆಯನ್ನು ಒಗೆದೊಗೆದು ತೊಟ್ಟವನು ಹಸಿವಿನ ಹಾವ ಸಾಕಿಕೊಂಡವನು ಬಿದ್ದ ಬೀಳನು ಹೊತ್ತವನು” ಈ ಕವಿತೆಯ ಅಪ್ಪ ಅನುಭವಿಸುವ ನೋವು ಅಪಮಾನ ಎಲ್ಲ ಅಪ್ಪಂದಿರದೂ ಹೌದು. ಎಲ್ಲವನ್ನು ಸಹಿಸಲಿ ಎಂದು ಅವರಿಗೆ ಇರಿಯುವ ಈಟಿ ಕೂಡ ಪ್ರಾರ್ಥಿಸುತ್ತದೆಂಬುದು. ಪ್ರಾರ್ಥನೆ: ಎಂದೆಂದಿಗೂ ನೊಂದವರಿಗೇ ಇರುತ್ತದೆ ಎಂಬ ಧ್ವನಿ ಇಲ್ಲಿದೆ. ಎಷ್ಟೋ ಕೋಟಿ-ಕೋಟಿ ಹಸಿದವರ ಧ್ವನಿ ಹಸಿವನ್ನು ಹಾವಿನಂತೆ ಸಾಕಿಕೊಂಡಿದ್ದಾರೆಂಬುದು. ಇದು ಉಳ್ಳವರು ಮತ್ತು ಆಳುವ ಸರ್ಕಾರಗಳನ್ನು ಸುಸ್ತು- ದಿಗ್ಧಮೆಗೊಳಿಸುವಂತಿದೆ. ಒಂದು ಕಾಲದ ಅಸ್ಪಶ್ಯನ ಚಾಕರಿಯನ್ನು 'ಬಿದ್ದ ಬೀಳನು ಹೊತ್ತು' ಎಂಬ ಸಾಲು ನೆನಪಿಸುತ್ತದೆ. ಇದು ಸತ್ತ ಪಶುಗಳನ್ನು ಹೊತ್ತು ಹೊಟ್ಟೆ ಹೊರೆಯುತ್ತಿದ್ದ ಅಸ್ಪೃಶ್ಯರ ಬದುಕನ್ನು ಹೇಳುವ ಸಾಲು, ಆ ಬೀಳು ಒಂದು ಕಾಲದ ನಮ್ಮ ಬಾಳು, ಈ ಬಾಳ ಬದಲಿಸಲು ಅತ್ಯಂತ ಆಕ್ರೋಶದ ದೊಡ್ಡ ಕೂಗು ಹಾಕಿದ್ದುದು ಉಂಟು ಬಾಬಾಸಾಹೇಬರು.

'ರಕ್ತ ಮುಕ್ಕಳಿಸುತ ಬಂದ' ಕವಿತೆ ಕೂಡ ಮತ್ತೊಂದು ಅದ್ಭುತ ಮಿಲನ ಮೈಥುನ ಪ್ರಣಯಗೀತೆ, ಅತ್ಯಂತ ಸಭ್ಯತೆಯ ಹೊಸ-ಹೊಸ ರೂಪಕ ಪ್ರತಿಮೆಗಳ ಬಳಸಿ ಕಟ್ಟಿ ಕಡೆದ ಶೃಂಗಾರ ಕಾವ್ಯ, ಗಂಡು-ಹೆಣ್ಣು, ಗಂಡ-ಹೆಂಡತಿ ಅತ್ಯಂತ ಗಾಢ, ರತಿಕಾಮ ದಾಹದ(ತುಡಿತ ತಣಿಸಲು) ನದಿಯಲ್ಲಿ ಮುಳುಗಿ ಈಜಿ ಮಿಂದು ಎದ್ದು ಹಾಯಾಗಿ ಹಗುರಾಗುವ ಭಾವನದಿ ಈ ಕವಿತೆ, “ನೀರಮನೆ ಕೋಣೆಯಲಿ ನವಿಲ ಕಣ್ಣಿಗೆ ಕೊಳ್ಳಿಯಿಟ್ಟು ಪಿಸುಗುಟ್ಟಿದಳು ತಳಮುಟ್ಟಿ ಎದೆಯ ಪದವು ಅವಳ ಮೈಯಲಿ ಬೆವರಾಗಿ ನನ್ನ ಕಣ್ಣಲಿ ನದಿಯಾಗಿ ಮುಟ್ಟದ ಜಾಗಗಳ ತಳಮಟ್ಟ ಮುಟ್ಟಿ ಬಾಯಾರಿದ ತುಟಿಗೆ ಹನಿಯೊಡೆದ ಬೆವರು ಬಯಲನಾಯಿ ನೆತ್ತರ ನೆಕ್ಕಿ ಕರಿನೆರಳ ಮೈಯಿಂದ ಮಂಜು ತೊಟ್ಟಿಕ್ಕಿ” ಈ ಸಾಲುಗಳು ಉತ್ಕೃಷ್ಟ ಜೀವ ಪ್ರೀತಿಯ ಆನಂದಲಹರಿ. ಹೆಣ್ಣು-ಗಂಡಿನ ಆತ್ಮಗಳ ಐಕ್ಯತೆಯ ಶ್ರೇಷ್ಠ ಕ್ಷಣ. 'ಬಯಲನಾಯಿ ನೆತ್ತರ ನೆಕ್ಕಿ' ಎಂಬುದು ತುಂಬಾ ಗೂಢ ಪ್ರತಿಮಾತ್ಮಕ ಶ್ರೇಷ್ಠ ಮುಕ್ತ ಮಿಲನದ ರೂಪಕ. 'ಬಯಲನಾಯಿ' ಎಂಬುದು ಏಕಪತ್ನಿ ವ್ರತಸ್ಥನೂ ಆಗಿರಬಹುದು, ಕಟ್ಟುಪಾಡುಗಳನ್ನೆಲ್ಲಾ ದಾಟಿದ ಪುರುಷ-ಸ್ತ್ರೀ ಪ್ರೇಮಿಯೂ ಆಗಿರಬಹುದು.

“ಯಾರೊಬ್ಬರ ಹಾಡು ಹಾಡುವುದಿಲ್ಲ. ನನ್ನೊಳಗೆ ಆಡದ ನೂರಾರು ಹಾಡುಗಳಿರುವಾಗ ಜಗದ ಕ್ರೌರ್ಯಕ್ಕೆ ಅಳುವುದಿಲ್ಲ. ನನ್ನೊಳಗೆ ಯಾರೋ ಬಿಕ್ಕುತ್ತಿರುವಾಗ ಯಾರೊಬ್ಬರ ಕುರಿತು ಕವಿತೆ ಬರೆಯುವುದಿಲ್ಲ ಯಾರೂ ಓದಿರದ ನನ್ನಂಥವರ ಬದುಕೆ ಬರೆಯದ ಕವಿತೆಗಳಾಗಿರುವಾಗ" ಇವು 'ನದಿಯಾಗಿ ಹರಿವಾಗ' ಎಂಬ ಕವಿತೆಯ ಸಾಲುಗಳು. ನನ್ನ ದುಃಖ, ನೋವು, ಅಪಮಾನಗಳು ಜಗದ ಜನರ ಪರಿಗಣನೆಗೆ ಇಲ್ಲ ಎಂದಾದರೆ ಅನ್ಯರ ಗೊಡವೆಯಾದರು ನನಗೇಕೆ ಎಂಬುದು ಕವಿಯ ಪ್ರಶ್ನೆಯಾಗಿದೆ. ನನ್ನೊಳಗೆ ಲೋಕದ ನೋವು-ದುಃಖಕ್ಕೂ ಮಿಗಿಲಾದುದು ಇರುವಾಗ, ಬರೆಯಬೇಕಾದುದು ಇರುವಾಗ ಇತರರದು ನನಗೆ ಹೇಗೆ ತಾಕುತ್ತದೆ ಎಂಬುದು ಸಹಜವಾದುದೆ. ಆದರೆ ನನ್ನದೇನಿದೆ ಅದು ಮತ್ತು ಇತರದೇನಿದು ಅದು ಎರಡೂ ಒಂದೇ ಸಮಾನ ದುಃಖವೆಂಬುದು ನಮ್ಮ ಕಾಣೆ ಆಗಬೇಕು. ಹಾಗಾಗಿ ಮತ್ತೊಬ್ಬರ ಹಾಡನ್ನು ಕವಿತೆಯನ್ನು ಒಬ್ಬ ಸಮಾನ ದುಃಖ ನನ್ನದೆಂದೇ ಪರಿಗಣಿಸಬೇಕು.”