ಗಿಡದಲ್ಲಿ ಬೆಳೆದ ಸಿಹಿಕುಂಬಳ
ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ ಕೃಷಿ ಮಾಡುವವರು ಯೋಚನೆ ಮಾಡುತ್ತಾರೆ. ಸೋರೆಕಾಯಿ, ಕುಂಬಳಕಾಯಿ, ಸಿಹಿ ಕುಂಬಳ (ಚೀನಿ ಕಾಯಿ), ಪಡುವಲಕಾಯಿ ಹೀಗೆ ಬಳ್ಳಿಯಲ್ಲಿ ಕಾಯಿ ಬಿಡುವ ತರಕಾರಿಗಳದ್ದು ಇದೇ ಕಥೆ. ಬಳ್ಳಿಯನ್ನು ಬೆಳೆಯಲು ಬಿಡುವಷ್ಟು ವಿಸ್ತಾರವಾದ ಜಾಗ ನಮ್ಮ ಮನೆಯಲ್ಲಿ ಇಲ್ಲ ಎನ್ನುವವರಿಗೊಂದು ಸಿಹಿ ಸುದ್ದಿ. ಅದೂ ಸಿಹಿ ಕುಂಬಳವನ್ನು ಇಷ್ಟ ಪಡುವವರಿಗೆ.
ಬೆಂಗಳೂರಿನ ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (Indian Institute of Horticulture Research - IIHR)ದ ವಿಜ್ಞಾನಿಗಳು ತರಕಾರಿ ಬೆಳೆಯುವವರಿಗೆ ಈ ವರ್ಷ ಒಂದು ಸಂತಸದ ಸುದ್ದಿ ತಂದಿದ್ದಾರೆ. ನೀವು ಮೇಲಿನ ಚಿತ್ರದಲ್ಲಿ ಗಮನಿಸಿದರೆ ಅಲ್ಲಿ ಬೆಳೆದ ಸಿಹಿಕುಂಬಳ ಅಥವಾ ಚೀನಿ ಕಾಯಿ ಗಿಡದಲ್ಲಿ ಬೆಳೆದಿದೆ. ಆಕಾರದಲ್ಲಿ ಸ್ವಲ್ಪ ಸಣ್ಣ ಗಾತ್ರ ಹಾಗೂ ಬಣ್ಣದಲ್ಲಿ ಸ್ವಲ್ಪ ಬದಲಾವಣೆಯಿದ್ದರೂ ರುಚಿಯಲ್ಲಿ ವ್ಯತ್ಯಾಸವಿಲ್ಲವಂತೆ. ಫೆಬ್ರವರಿ ೮ರಿಂದ ೧೨ರವರೆಗೆ ಇಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯುತ್ತಿದೆ. ಇಲ್ಲಿ ಬಂದ ಕೃಷಿಕರಿಗೆ, ಕೃಷಿ ಆಸಕ್ತರಿಗೆ ಈ ಹೊಸ ಸಿಹಿಕುಂಬಳದ ತಳಿಯನ್ನು ಕಂಡು ಅಚ್ಚರಿಯಾಗಿದೆ. ಗಿಡದ ಬುಡದಲ್ಲಿ ಹುಲುಸಾಗಿ ಫಲ ಬಿಟ್ಟ ಗಿಡವನ್ನು ನೋಡಲು ಖುಷಿ ಆಗುತ್ತದೆ ಎಂಬುದು ಈ ಮೇಳಕ್ಕೆ ಭೇಟಿ ನೀಡಿದವರ ಅಭಿಮತ.
ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಈ ವರ್ಷ ಕೋವಿಡ್ ೧೯ರ ಕಾರಣದಿಂದ ಭೇಟಿ ನೀಡುವವರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ತಿಳಿಸಲಾಗಿತ್ತು. ಆಸಕ್ತ ಜನರು ಭೇಟಿ ನೀಡಿ ತಮಗೆ ಬೇಕಾದ ಬೀಜಗಳು ಹಾಗೂ ಗಿಡಗಳನ್ನು ಕೊಂಡುಕೊಳ್ಳುತ್ತಿದ್ದರು. ಕೃಷಿಯಲ್ಲಿ ಆದ ಬೆಳವಣಿಗೆಗಳನ್ನು ತಿಳಿಸುವ ಹಲವಾರು ಮಳಿಗೆಗಳನ್ನು ತೆರೆಯಲಾಗಿತ್ತು.
ಈ ವರ್ಷದ ಆಕರ್ಷಣೆಯೆಂದರೆ ಮೇಲೆ ಹೇಳಿರುವ ಗಿಡದಲ್ಲಿ ಬೆಳೆಯುವ ಸಿಹಿಕುಂಬಳ. ಇದು ಕುಬ್ಜ ತಳಿಯಾಗಿದ್ದು, ತಾರಸಿ ತೋಟ ಮಾಡುವವರಿಗೂ ಅನುಕೂಲವಾದ ತಳಿ. ಬಳ್ಳಿ ಹಬ್ಬಲು ವಿಶಾಲವಾದ ಸ್ಥಳಾವಕಾಶ ಬೇಕು, ಆದರೆ ಈ ತಳಿಯನ್ನು ಕುಂಡದಲ್ಲೂ ಬೆಳೆಸಬಹುದು. ಬೀಜ ಹಾಕಿದ ೪೦ನೇ ದಿನಕ್ಕೆ ಹೂವು ಬರಲು ಪ್ರಾರಂಭವಾಗುತ್ತದೆ. ೯೦-೯೫ನೇ ದಿನಕ್ಕೆ ಕಾಯಿಯನ್ನು ಕಟಾವು ಮಾಡಬಹುದು. ಬಳ್ಳಿಯಲ್ಲಿ ಬೆಳೆಯುವ ಕಾಯಿಗಳಂತೆ ದೊಡ್ದ ಗಾತ್ರದಲ್ಲಿ ಬೆಳೆಯುವುದಿಲ್ಲವಾದುದರಿಂದ ಸಣ್ಣ ಕುಟುಂಬದವರಿಗೆ ಅನುಕೂಲ. ಕತ್ತರಿಸಿ ಇಡಬೇಕಾಗಿಯೂ ಇಲ್ಲ.
ಗಿಡದಲ್ಲಿ ಬೆಳೆಯುವ ಈ ಕಾಯಿಗಳು ೫೦೦ ಗ್ರಾಂ ನಿಂದ ೧ ಕೆ ಜಿಯವರೆಗೆ ತೂಕವನ್ನು ಹೊಂದಿರುತ್ತವೆ. ಪ್ರತೀ ಗಿಡ ೬-೭ ಕೆ.ಜಿ. ಇಳುವರಿ ಕೊಡುತ್ತದೆ. ಇದನ್ನು ಬೆಳೆಯುವ ರೈತರು ಕಡಿಮೆ ಜಾಗದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು. ಒಂದು ಎಕರೆಗೆ ಒಂದುವರೆ ಕೆ.ಜಿಯಷ್ಟು ಬೀಜಗಳು ಬೇಕಾಗುತ್ತವೆ ಎಂಬುವುದು ವಿಜ್ಞಾನಿಗಳ ಅಂದಾಜು. ಹೀಗೆ ಬಿತ್ತನೆ ಮಾಡಿದಲ್ಲಿ ೬೦-೬೫ ಟನ್ ಇಳುವರಿಯನ್ನು ಪಡೆಯಬಹುದು. ಸಾಗಾಟವೂ ಸುಲಭ, ಮಾರಾಟವೂ ಸುಲಭ.
ಈ ಸಿಹಿ ಕುಂಬಳ ಕಾಯಿಯಲ್ಲಿ ತಿರುಳು ಅಧಿಕ. ಬೀಜ ಕಮ್ಮಿ. ಅದಕ್ಕಾಗಿ ವಿವಿಧ ತಳಿಗಳನ್ನು ಆಯ್ಕೆ ಮಾಡಿದ್ದಾರೆ. ಕೆಲವು ತಳಿಗಳಲ್ಲಿ ೨೫% ಬೀಜ ೭೫ % ತಿರುಳು ಇದೆ. ಬಟರ್ ನಟ್ ಎಂಬ ತಳಿಯಲ್ಲಿ ೯೦% ತಿರುಳು ಇದೆ. ಅರ್ಕಾ ಚಂದನ, ಅರ್ಕಾ ಸೂರ್ಯಮುಖಿ ಎಂಬ ತಳಿಗಳನ್ನೂ ಐಐಹೆಚ್ ಆರ್ ಪರಿಚಯಿಸಿದೆ. ಈ ತಳಿಗಳಿಗೆ ರೋಗ ನಿರೋಧಕ ಶಕ್ತಿಯೂ ಅಧಿಕ. ಈ ಕಾರಣದಿಂದ ಇಳುವರಿಯೂ ಹೆಚ್ಚು ಬರುತ್ತದೆ. ಮುಂದಿನ ವರ್ಷಗಳಲ್ಲಿ ಇವುಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬುದು ಇಲ್ಲಿಗೆ ಭೇಟಿ ಕೊಟ್ಟ ಸಂದರ್ಶಕರ ಮಾತು.
ಪ್ಯಾಟಿ ಪ್ಯಾನ್ ಎಂಬ ವಿದೇಶೀ ಕುಂಬಳಕಾಯಿಯ ತಳಿಯನ್ನೂ ಇಲ್ಲಿ ಪರಿಚಯಿಸಲಾಗಿದೆ. ಬಿಳಿ ವರ್ಣದ ಈ ಕಾಯಿ ನೋಡಲು ಆಕರ್ಷಕವಾಗಿದೆ. ಗಿಡದಲ್ಲಿ ಹುಲುಸಾಗಿ ಬೆಳೆಯುತ್ತದೆ. ಹೀಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರವು ಹಲವಾರು ಪ್ರಯೋಗಗಳ ಮುಖಾಂತರ ಹೊಸ ಹೊಸ ತಳಿಗಳನ್ನು ಕೃಷಿಕರಿಗೆ ಪರಿಚಯಿಸುತ್ತಿದೆ. ಆಸಕ್ತರು ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ಈ ಬಗ್ಗೆ ಅಧಿಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಚಿತ್ರ ೧. ಗಿಡದಲ್ಲಿ ಬೆಳೆದ ಸಿಹಿಕುಂಬಳ
ಚಿತ್ರ ೨. ಪ್ಯಾಟಿ ಪ್ಯಾನ್ ಕುಂಬಳ
ಚಿತ್ರ ಮತ್ತು ಪೂರಕ ಮಾಹಿತಿ: ಗಣೇಶ್ ಎನ್. ನರಿಕೊಂಬು, ಬಂಟ್ವಾಳ