ಗಿಡ ಮರಗಳನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿರಲಿ...
ಕಳೆದ ಕೆಲವು ವಾರಗಳ ಹಿಂದೆ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಮಂಗಳೂರಿನ ನಂತೂರು-ಕೆಪಿಟಿ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಫ್ಲೈ ಓವರ್ ಬಗ್ಗೆ. ಹಲವಾರು ಸಮಯದಿಂದ ವಾಹನ ದಟ್ಟಣೆಗೆ ಕಾರಣವಾಗಿರುವ ನಂತೂರು ಹಾಗೂ ಕದ್ರಿ ಹಿಲ್ಸ್ (ಕೆಪಿಟಿ- ಕರ್ನಾಟಕ ಪೊಲಿಟೆಕ್ನಿಕ್) ನಡುವಿನ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವ ಕಡತದಲ್ಲೇ ಬಾಕಿಯಾಗಿತ್ತು. ಮಂಗಳೂರಿನ ಹಲವೆಡೆ ಫ್ಲೈ ಓವರ್ ಗಳು (ಅನಗತ್ಯವಾಗಿದ್ದ ಕಡೆಯೂ) ನಿರ್ಮಾಣವಾಗಿದ್ದರೂ ಅತ್ಯಂತ ಅಗತ್ಯವಾಗಿದ್ದ ನಂತೂರು-ಕೆಪಿಟಿ ರಸ್ತೆಯಲ್ಲಿ ನಿರ್ಮಾಣವಾಗಿರಲಿಲ್ಲ. ಇದಕ್ಕೆ ನಮ್ಮ ಜನಪ್ರನಿಧಿಗಳ ಅಸಡ್ಡೆಯೂ ಕಾರಣ ಎನ್ನಬಹುದಾಗಿದೆ.
ಈಗ ಪ್ರಸ್ತಾವಿಸಲಾಗಿರುವ ನೀಲನಕ್ಷೆಯಂತೆ ಸುಮಾರು ಐದು ನೂರಕ್ಕೂ ಅಧಿಕ ಮರಗಳನ್ನು ಕಡಿಯಬೇಕಾಗುತ್ತದೆ ಅಥವಾ ಸ್ಥಳಾಂತರಿಸಬೇಕಾಗುತ್ತದೆ ಎನ್ನುವ ಅಂದಾಜು ಇದೆ. ನಮ್ಮಲ್ಲಿ ಮರ ಕಡಿಯುವುದೆಂದರೆ ಆಡಳಿತಕ್ಕೆ ಬಹಳ ಇಷ್ಟವಾದ ಕೆಲಸ. ಒಬ್ಬ ವ್ಯಕ್ತಿಯ ಮನೆಯ ಬದಿಯಲ್ಲಿ ಬೆಳೆದ, ಆತನ ಮನೆಗೆ ತೊಂದರೆ ಕೊಡುವ, ಜೋರಾದ ಗಾಳಿ ಬಂದರೆ ಮನೆಯ ಮೇಲೆ ಬಿದ್ದು ಪ್ರಾಣ ಹಾನಿ ಮಾಡಬಲ್ಲ ಮರವನ್ನು ಕಡಿಯಲು ಸಂಬಂಧಿತ ಅರಣ್ಯ ಇಲಾಖೆ ವರ್ಷಾನುಗಟ್ಟಲೆ ಅನುಮತಿ ನೀಡದೆ ಸತಾಯಿಸುತ್ತದೆ. ಆದರೆ ನೂರಾರು ವರ್ಷಗಳಿಂದ ನೆರಳು ನೀಡುತ್ತಿರುವ, ನೂರಾರು ಹಕ್ಕಿಗಳಿಗೆ ಆಶ್ರಯ ತಾಣವಾಗಿರುವ ಮರಗಳನ್ನು ಕಡಿಯಲು ಕ್ಷಣ ಮಾತ್ರದಲ್ಲಿ ಅನುಮತಿ ನೀಡುತ್ತದೆ. ಕನಿಷ್ಟ ಮರಗಳನ್ನು ಕಡಿದು ರಸ್ತೆಯ ದಾರಿಯನ್ನು ಅಲ್ಪ ಸ್ವಲ್ಪ ಬದಲಾಯಿಸಿಕೊಂಡು ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಯಾರೂ ಆಲೋಚನೆ ಮಾಡುತ್ತಿಲ್ಲ. ಮರಗಳನ್ನು ಕಡಿಯುವ ಇವರ ಉದ್ದೇಶವನ್ನು ವಿರೋಧಿಸುವವರ ಸಂಖ್ಯೆ ಬಹಳ ಕಡಿಮೆ. ಮರಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಗೊಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆ ಮರದ ಬೇರುಗಳಿಗೆ ಹಾನಿಯಾಗದಂತೆ, ಅದನ್ನು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸುವುದು ಸುಲಭವಲ್ಲ. ಹೀಗೆ ವರ್ಗಾಯಿಸಿದ ಮರ ನಂತರ ಬದುಕಿದೆಯೋ ಇಲ್ಲವೋ ಎಂದು ಅದನ್ನು ನೋಡಲು ಹೋಗುವವರಿಲ್ಲ. ಸಾವಿರಾರು ರೂಪಾಯಿಗಳನ್ನು ಈ ಸ್ಥಳಾಂತರದ ಕೆಲಸಕ್ಕೆ ವ್ಯಯಿಸುತ್ತಾರೆ. ಈಗಾಗಲೇ ಈ ವರ್ಷ ಮಳೆಯ ಪ್ರಮಾಣ ರಾಜ್ಯಾದ್ಯಂತ ಕಡಿಮೆಯಾಗಿದೆ. ಪ್ರತೀ ವರ್ಷ ವಾಡಿಕೆಯಂತೆ ತುಸು ಹೆಚ್ಚೇ ಮಳೆ ಆಗುತ್ತಿದ್ದ ಕರಾವಳಿ, ಮಲೆನಾಡಿನಲ್ಲೂ ಮಳೆಯ ಕೊರತೆ ಕಾಣಿಸುತ್ತಿದೆ. ಅತೀ ಹೆಚ್ಚು ಮಳೆಯಾಗುವ ತಿಂಗಳುಗಳಾದ ಜೂನ್-ಜುಲೈ-ಆಗಸ್ಟ್ ನಲ್ಲಿ ಮಳೆಯಾಗಿಲ್ಲ. ಜುಲೈ ತಿಂಗಳ ಒಂದೆರಡು ವಾರಗಳಲ್ಲಿ ಬಿರುಸಿನ ಮಳೆಯಾದದ್ದು ಹೊರತುಪಡಿಸಿದರೆ ಮಳೆಯ ತೀವ್ರ ಕೊರತೆಯಾಗುವ ಲಕ್ಷಣ ಕಂಡು ಬರುತ್ತಿದೆ.
ನೀರನ್ನು ಉಳಿಸುವ ಅಥವಾ ನೀರನ್ನು ಗಳಿಸುವ ಯಾವುದೇ ಉತ್ತಮ ಯೋಜನೆಗಳು ನಮ್ಮ ಆಡಳಿತಕ್ಕೆ ಗೊತ್ತಿಲ್ಲ. ಜಗತ್ತಿನ ಹಲವಾರು ದೇಶಗಳಲ್ಲಿ ಸಮುದ್ರದ ನೀರನ್ನೇ ಬಳಸಿ, ಭಟ್ಟಿ ಇಳಿಸಿ ಶುದ್ಧ ನೀರನ್ನು ಪಡೆಯುತ್ತಾರೆ. ನಮ್ಮಲ್ಲಿ ಈ ತಂತ್ರಜ್ಞಾನ ಸರಿಯಾಗಿ ಅನುಷ್ಟಾನವೇ ಆಗಿಲ್ಲ. ನಮ್ಮ ದೇಶದ ಹಲವು ರಾಜ್ಯಗಳು ಸಮುದ್ರದ ದಡದಲ್ಲಿವೆ. ಕುಡಿಯುವ ನೀರನ್ನು ಹೊರತು ಪಡಿಸಿ ಉಳಿದ ಎಲ್ಲಾ ಅವಶ್ಯಕತೆಗಳಿಗೆ ಸಮುದ್ರದ ನೀರನ್ನು ಭಟ್ಟಿ ಇಳಿಸಿಕೊಂಡು ಬಳಸಬಹುದಾಗಿದೆ. ತಂತ್ರಜ್ಞಾನ ಎಷ್ಟೇ ದುಬಾರಿಯಾದರೂ ಅಗತ್ಯ ಇದೆ ಎಂದ ಬಳಿಕ ಅದನ್ನು ಜಾರಿಗೆ ತರುವುದು ಬುದ್ಧಿವಂತಿಕೆ. ನಾವು ಕೆಲವು ದಿನಗಳ ಹಿಂದೆ ನಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಚಂದ್ರನ ಅಂಗಳದಲ್ಲಿ ಇಳಿದಿದ್ದೇವೆ ಎಂದ ಬಳಿಕ ಭೂಮಿಯಲ್ಲೇ ಇರುವ ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿಸುವ ತಂತ್ರಜ್ಞಾನ ಬ್ರಹ್ಮ ವಿದ್ಯೆಯೇನಲ್ಲ. ಅಲ್ಲವೇ?
ಅನಾವಶ್ಯಕವಾಗಿ ಮರ ಕಡಿಯುವ ಚಾಳಿ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲ. ರಾಜ್ಯಾದ್ಯಂತ ಇದೆ. ಒಂದು ಗಿಡ ಬೆಳೆದು ದೊಡ್ಡ ಮರವಾಗಲು ಕನಿಷ್ಟ ಐವತ್ತು ವರ್ಷಗಳಾದರೂ ಬೇಕು. ಈ ಮರಗಳನ್ನು ಕಡಿದರೆ ಈಗಾಗಲೇ ಏರುತ್ತಿರುವ ಉಷ್ಣತೆ, ಮತ್ತಷ್ಟು ಹೆಚ್ಚಾಗುತ್ತದೆ. ಜಾಗತಿಕವಾಗಿಯೂ ತಾಪಮಾನ ಹೆಚ್ಚಾಗುತ್ತಿದೆ ಎನ್ನುವ ಕೂಗು ಈಗಾಗಲೇ ಹಲವೆಡೆ ಕೇಳಿ ಬರುತ್ತಿದೆ. ಕರ್ನಾಟಕದಂತಹ ರಾಜ್ಯದಲ್ಲೂ ಮಳೆಯ ಕೊರತೆ ಕಂಡು ಬರಲು ಪ್ರಾರಂಭವಾದರೆ ಭವಿಷ್ಯದಲ್ಲಿ ನೀರಿಗೆ ಬಹಳ ಕಷ್ಟವಿದೆ ಎಂದು ಅರ್ಥ.
ಕರ್ನಾಟಕದ ಪರಿಸ್ಥಿತಿ ಹೀಗಾದರೆ ವಿದೇಶಗಳಲ್ಲಿ ಒಂದು ಮರದ ಗೆಲ್ಲನ್ನು ಕಡಿದರೂ (ಕಡಿಯುವುದಕ್ಕೆ ಪೂರ್ವಾನುಮತಿ ಬೇಕೇ ಬೇಕು) ನಿಮಗೆ ಜೈಲು ವಾಸ ಅಥವಾ ಗರಿಷ್ಟ ಮಟ್ಟದ ದಂಡ ಗ್ಯಾರಂಟಿಯಾಗಿ ಸಿಗುತ್ತದೆ. ಕೆಲವು ದಿನಗಳ ಹಿಂದೆ ಸಿಂಗಾಪುರದ ‘ದಿ ಸ್ಟೇಟ್ಸ್ ಟೈಮ್ಸ್' ಪತ್ರಿಕೆಯ ಒಂದು ಸುದ್ದಿ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದೆ. ಅದು ಜುಲೈ ೭, ೨೦೦೯ರ ಸಂಚಿಕೆಯದ್ದು. ಈ ಸಂಚಿಕೆ ಹೊರಬಂದು ಸುಮಾರು ೧೪ ವರ್ಷಗಳೇ ಕಳೆದಿವೆ. ಆದರೆ ಇದನ್ನು ಓದಿದಾಗ ನಮ್ಮ ಮರ ಕಡಿಯುವ ಮೋಹ ಹಾಗೂ ಸಿಂಗಾಪುರದವರ ಮರ ಉಳಿಸುವ ಮೋಹದ ವ್ಯತ್ಯಾಸ ಅರಿವಾಗುತ್ತದೆ.
೨೦೦೩ರಲ್ಲಿ ಸಿಂಗಾಪುರ ದೇಶದ “ಡಿಟಿಝಡ್ ಡೆಬೆನಮ್ ಟೈ ಲಿಂಗ್" ಎಂಬ ಕಟ್ಟಡ ನಿರ್ಮಾಣ ಕಂಪೆನಿಗೆ ಒಂದು ಮರದ ಮಹತ್ವ ಹಾಗೂ ಅದರ ಬೆಲೆಯ ಬಗ್ಗೆ ಅರಿವಾಯಿತಂತೆ. ಅದು ಹೇಗೆ ಅಂತೀರಾ? ಇಲ್ಲಿದೆ ಕಥೆ ನೋಡಿ...೨೦೦೨ರಲ್ಲಿ ಆ ಕಂಪೆನಿ ನಿರ್ಮಾಣ ಮಾಡಿದ ಬಹುಮಹಡಿ ಕಟ್ಟಡದ ಸಮೀಪ ಬೆಳೆದ ಮರವೊಂದು ಅಲ್ಲಿಯ ನಿವಾಸಿಯೊಬ್ಬರಿಗೆ ತೊಂದರೆ ನೀಡುತ್ತಿದೆ ಎಂಬ ದೂರು ಬಂತು. ಆ ಮರ ಸುಮಾರು ಮೂರುವರೆ ಮೀಟರ್ ಸುತ್ತಳತೆಯನ್ನು ಹೊಂದಿತ್ತು. ಈ ಮರದ ಬೃಹತ್ ಗಾತ್ರದ ಕಾರಣದಿಂದ ಆ ನಿವಾಸದ ಮಾಲಿಕ ತನಗೆ ಬಹಳ ತೊಂದರೆಯಾಗುತ್ತಿದೆ ಎಂದು ಕಟ್ಟಡದ ಸುಪರ್ ವೈಸರ್ ಜೊತೆ ಸದಾ ದೂರಿಕೊಳ್ಳುತ್ತಿದ್ದ. ಸೂಪರ್ ವೈಸರ್ ಸಹ ಆ ಬಹುಮಹಡಿ ಕಟ್ಟಡದ ನಿವಾಸಿಗಳ ಹಿತ ಕಾಪಾಡಲು ಆ ಮರವನ್ನು ಕಡಿಯುವುದು ಒಳ್ಳೆಯದು ಎಂಬ ಸಲಹೆಯನ್ನು ತನ್ನ ಸಂಸ್ಥೆಗೆ ನೀಡಿದ್ದ. ಅದರಂತೆ ಆ ಸಂಸ್ಥೆ ಈ ಬೃಹತ್ ಮರವನ್ನು ಕಡಿದು ಹಾಕಿತು.
ಮರ ಕಡಿದು ಹಾಕುವ ಮೊದಲು ಆ ಸಂಸ್ಥೆ ಸಂಬಂಧಿತ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಡಿರಲಿಲ್ಲ. ಅದರ ಜೊತೆಗೆ ಆ ಮರ ಅಪರೂಪದ ‘ಹೊಪೆಯೇ ಸಂಗಲ್' ಎನ್ನುವ ತಳಿಯದ್ದಾಗಿತ್ತು. ಆ ಮರ ‘ವೃಕ್ಷ ಸಂರಕ್ಷಿತ' ವಲಯದಲ್ಲಿತ್ತು. ಸುಮಾರು ನೂರು ವರ್ಷಕ್ಕಿಂತ ಅಧಿಕ ವಯಸ್ಸಾಗಿತ್ತು. ಸಿಂಗಾಪುರದ ಕಾನೂನಿನ ಪ್ರಕಾರ ಆ ಮರ ಬಿಡಿ, ಅದರ ಒಂದು ಸಣ್ಣ ಕೊಂಬೆಯನ್ನು ಕಡಿಯಲೂ ಅನುಮತಿ ಅಗತ್ಯವಿತ್ತು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಆ ತಳಿಯ ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತಿತ್ತು. ಆ ಮರವನ್ನು ಪೂರ್ತಿಯಾಗಿ ಕಡಿಯುವ ಬದಲು ಅದರ ಗೆಲ್ಲನ್ನು ಕಡಿಯುವುದು ಅಥವಾ ಆ ಮರವನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವುದು ಮೊದಲಾದ ಆಯ್ಕೆಗಳನ್ನು ಬಳಸಬೇಕಿತ್ತು. ಕೆಲವು ಬಾರಿ ಆ ಮರಕ್ಕೆ ವಿಮೆ ಮಾಡಿಸುವುದೂ ಅಗತ್ಯವಾಗಿರುತ್ತದೆ. ಅಂತಹ ಮರವನ್ನು ಯಾವುದೇ ಪೂರ್ವಾನುಮತಿಯನ್ನು ಪಡೆದುಕೊಳ್ಳದೇ ಕಡಿದು ಹಾಕಿದ್ದು ಸಿಂಗಾಪುರ ಸರಕಾರಕ್ಕೆ ಕೋಪ ತಂದಿತ್ತು. ಏಕೆಂದರೆ ಮರವೊಂದನ್ನು ಕಡಿದರೆ ಅದಕ್ಕಿಂತ ದೊಡ್ದ ಅಪರಾಧ ಯಾವುದೂ ಇಲ್ಲ ಎಂಬುವುದು ಅಲ್ಲಿಯ ನಂಬಿಕೆ.
ಮರವನ್ನೇನೋ ಕಡಿದು ಹಾಕಲಾಯಿತು. ಆದರೆ ಸಿಂಗಾಪುರದ ಬಹುತೇಕ ಮರಗಳಿಗೆ ಚಿಪ್ ಅಥವಾ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಮರವನ್ನು ಕಡಿದು ಹಾಕಲಾದ ಸಂಗತಿ ಪೋಲೀಸ್ ಇಲಾಖೆಗೆ ಗೊತ್ತಾಯಿತು. ಅವರು ಸ್ಥಳಕ್ಕೆ ಆಗಮಿಸಿ, ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಿ, ಸರಕಾರಕ್ಕೆ ವರದಿಯನ್ನು ಸಲ್ಲಿಸಿದರು. ಸರಕಾರ ಯಾವುದೇ ಮುಲಾಜು ಇಲ್ಲದೇ ಆ ಸಂಸ್ಥೆಗೆ ಎಂಟು ಸಾವಿರ ಸಿಂಗಾಪುರ ಡಾಲರ್ ದಂಡ ವಿಧಿಸಿತು.
ಈ ದಂಡ ಪ್ರಕರಣವನ್ನು ಆ ಸಂಸ್ಥೆ ಕೋರ್ಟಿಗೆ ತೆಗೆದುಕೊಂಡು ಹೋಯಿತು. ಆದರೆ ವಿಚಾರಣೆ ನಡೆದಾಗ ತೀರ್ಪು ಸರಕಾರದ ಪಾಲಿಗೇ ಬಂತು. ಆದರೆ ದಂಡದ ಮೊತ್ತ ಹೆಚ್ಚಾಗಿತ್ತು. ನ್ಯಾಯಾಲಯ ದಂಡದ ಮೊತ್ತವನ್ನು ೮ ಸಾವಿರದಿಂದ ೭೬,೦೩೫ ಸಿಂಗಾಪುರ ಡಾಲರ್ ಗಳಿಗೆ ಏರಿಸಿತು. ಇದರ ಜೊತೆಗೆ ಈ ತೀರ್ಪಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನೂ ನಿರಾಕರಿಸಿತು. ಇದರಿಂದಾಗಿ ಆ ಕಂಪೆನಿ ಸರಕಾರಕ್ಕೆ ಸುಮಾರು ೫೩,೩೨,೦೦೦ ರೂಪಾಯಿಯಷ್ಟು ದಂಡ ಕಟ್ಟಬೇಕಾಗಿ ಬಂತು. ಇದರ ಜೊತೆಗೆ ಮರ ವಿರೋಧಿ, ಹಸಿರು ವಿರೋಧಿ, ಪರಿಸರ ವಿರೋಧಿ ಎಂಬ ಪಟ್ಟಿಗಳಿಗೆ ಆ ಕಂಪೆನಿಯನ್ನು ಸೇರಿಸಲಾಯಿತು. ಭವಿಷ್ಯದಲ್ಲಿ ಆ ಕಂಪೆನಿಗೆ ಯಾವುದೇ ಹೊಸ ಕೆಲಸಗಳನ್ನು ನೀಡುವುದನ್ನು ನಿರ್ಬಂಧಿಸಲಾಯಿತು. ಒಂದು ಮರವನ್ನು ಕಡಿದ ಕಾರಣದಿಂದ ಆ ಕಂಪೆನಿ ತನ್ನ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಗಿ ಬಂತು. ಒಂದು ಮರದ ಬೆಲೆ ಎಷ್ಟು ದುಬಾರಿ ಎನ್ನುವ ಅರಿವು ಆ ಕಂಪೆನಿಗೆ ಜೀವನ ಪರ್ಯಂತ ನೆನಪಿರುತ್ತದೆ. ನ್ಯಾಯಾಲಯದ ಆ ತೀರ್ಪು ಸಂಬಂಧ ಪಟ್ಟ ಕಂಪೆನಿಯ ಜೊತೆ ಉಳಿದ ಪರಿಸರ ವಿರೋಧಿಗಳಿಗೂ ಪಾಠವನ್ನು ಕಲಿಸಿತು.
ಇದು ಸಿಂಗಾಪುರದ ಕಥೆ, ನಮ್ಮಲ್ಲಾದರೆ ಮರ ಕಡಿದಷ್ಟು ಸರಕಾರಕ್ಕೆ ಖುಷಿ. “ಶೀತವಾದರೆ ಮೂಗನ್ನೇ ಕತ್ತರಿಸುವ ಚಾಳಿ" ನಮ್ಮ ಸರ್ಕಾರಗಳಿಗೆ. ಇವರಿಗೆಲ್ಲಾ ಮರ ಕಡಿಯಲು ಇರುವ ಉತ್ಸಾಹ ಒಂದು ಹತ್ತು ಗಿಡ ನೆಡಲು ಇರುವುದಿಲ್ಲ. ಪ್ರತೀ ವರ್ಷ ಅರಣ್ಯ ಇಲಾಖೆ ನೆಡುವ ಸಾವಿರಾರು ಗಿಡಗಳ ಪೈಕಿ ಉಳಿದುಕೊಂಡಿರುವುದು ಎಷ್ಟು? ಭಗವಂತನಿಗೇ ಗೊತ್ತು. ಇನ್ನಾದರೂ ನಾವು ಎಚ್ಚರ ವಹಿಸಿಕೊಂಡು ಮರಗಳನ್ನು ವೃಥಾ ಕಡಿಯದೇ, ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಆಲೋಚನೆ ಮಾಡಬೇಕು. ಮರ ಉಳಿದರೆ ನಾವೂ ಬದುಕಿ ಉಳಿಯುವ ಪರಿಸರ ನಿರ್ಮಾಣವಾಗುತ್ತದೆ ಅಲ್ಲವೇ?
ಚಿತ್ರ ಕೃಪೆ : ಅಂತರ್ಜಾಲ ತಾಣ