ಗಿಣಿ ಸಂಧಾನ

ಗಿಣಿ ಸಂಧಾನ

ಕವನ

ಮದುವೆಯ ಸಂಭ್ರಮ ಕಳೆಯುವ ಮೊದಲೇ

ಕಟ್ಟಳೆ ಮಾಡಿದೆ ಏಕಾಂಗಿ

ಬಣ್ಣವು ಮಾಸದೆ ಉಳಿದಿದೆ ಕರದಲಿ

ಮದುವೆಗೆ ಹಾಕಿದ ಮದರಂಗಿ

 

ಮೆಚ್ಚಿದ ಜೋಡಿಯ ಬೆರೆಯಲು ಬಿಡದಿಹ

ಮಾಸವು ಬಂದಿದೆ ಆಷಾಢ

ಇನಿಯನ ಭೇಟಿಗೆ ಗಿಳಿಯನು ಕಳುಹಿದ

ಮಡದಿಗೆ ಚಿಂತೆಯ ಕಾರ್ಮೋಡ

 

ಓಲೆಯ ಇನಿಯಗೆ ಇತ್ತೆಯ ಗಿಳಿಯೇ

ದೊರೆತನೆ ಹೇಳೆಯ ನನ್ನಿನಿಯ

ಕಾತರ ಹೆಚ್ಚಿದೆ ಆತುರ ತಾಳೆನು

ನುಡಿವುದು ಬೇಗನೆ ಆ ವಿಷಯ

 

ಓಲೆಯಲಿದ್ದುದ ಓದುತ ಖುಷಿಯಲಿ

ಏನವ ನೀಡಿದ ಉತ್ತರವಾ

ಬರಹದಲಿತ್ತನೆ ಮಾತಲಿ ನುಡಿದನೆ

ಅರುಹದ ಬೇಗನೆ ನೀ ನಿಜವಾ

 

ಅಗಲಿಕೆ ನೋವಲಿ ಬಳಲಿಹನೇನು

ಜೊತೆಯಲಿ ಇಲ್ಲದೆ ಮನದನ್ನೆ

ಮಡದಿಯ ನೆನಪಲಿ ಹಸಿವನು ಮರೆಯುತ

ವಿರಹದಿ ಪ್ರಿಯತಮ ನೊಂದಿಹನೆ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್