ಗಿರಿಜನರ ನಾಡು ಕೋರಾಪುಟ್
ಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್‌ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.
ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ.
ಉದ್ದಿಮೆಗಳು
ದಾಮನ್‌ಜೋಡಿಯು ಇದೇ ಅರಣ್ಯ ಪರಿಸರದ ನಡುವೆ ಇರುವ ಒಂದು ಗಣಿಭೂಮಿ. ಪಂಚಪಟಮಲಿ ಬೆಟ್ಟಸಾಲಿನಲ್ಲಿ ಸಮುದ್ರಮಟ್ಟದಿಂದ ಸುಮಾರು ೧೨೫ಮೀಟರು ಮೇಲಿರುವ ಈ ಮಣ್ಣಿನಲ್ಲಿ ಅಪಾರವಾದ ಸಿಂಗಲ್ ಕ್ಯಾಪಿಂಗ್ ಬಾಕ್ಸೈಟ್ ಅಂದರೆ ಅಲ್ಯುಮಿಯಂ ಅದಿರು ದೊರೆಯುತ್ತದೆ. ಅಂದಾಜು ೩೧೭ ಮಿಲಿಯನ್ ಟನ್ನುಗಳಷ್ಟಿರುವ ಈ ನಿಧಿಯನ್ನು ಹಗಲೂ ರಾತ್ರಿ ತೆಗೆಯುತ್ತಾ ಹೋದರೂ ಇನ್ನೂ ಎಷ್ಟೋ ವರ್ಷಗಳ ಕಾಲ ಬಳಕೆಗೆ ಸಿಗುತ್ತದೆ. ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಎರಡು ಬೃಹತ್ ಬೆಟ್ಟಗಳು ಮಾಯವಾಗಿವೆ ಅಷ್ಟೆ. ಬಾಕ್ಸೈಟ್ ಸಾಂದ್ರತೆಯುಳ್ಳ ಮಣ್ಣನ್ನು ಹದಿನಾರು ಮೈಕ್ರಾನ್‌ಗಳಷ್ಟು ನುಣ್ಣಗೆ ಅರೆದು ಹತ್ತಿರದ ಇಂದ್ರಾವತಿ ನದೀ ನೀರನ್ನು ಸೇರಿಸಿ ಒಳ್ಳೆಯ ಕೆಸರು ಮಾಡಿ ರೈಲಿನ ಟ್ಯಾಂಕರುಗಳಿಗೆ ತುಂಬಲಾಗುತ್ತದೆ. ಟ್ಯಾಂಕರುಗಳು ಈ ಬಾಕ್ಸೈಟ್ ಕೆಸರನ್ನು ಹೊತ್ತೊಯ್ದು ಘಟ್ಟ ಪ್ರದೇಶದ ಸಮತಟ್ಟು ಜಾಗದಲ್ಲಿ ಚೆಲ್ಲುತ್ತವೆ. ಅಲ್ಲಿಂದ ಅದು ಬೃಹತ್ ಕೊಳವೆಗಳ ಮೂಲಕ ಹಾದು ವಿಶಾಖಪಟ್ಟಣ ಸಮುದ್ರತೀರದ ರಿಫೈನರಿಗೆ ಬಂದು ಬೀಳುತ್ತದೆ.
ದಾಮನ್‌ಜೋಡಿಗೆ ವಿಶಾಖಪಟ್ಟಣದಿಂದ ಎರಡು ಮಾರ್ಗಗಳಿವೆ. ವಿಜಯನಗರ, ಗಜಪತಿನಗರ, ರಾಮಭದ್ರಪುರ, ಸಾಲೂರು, ಸುಂಕಿ, ಪೊತಂಗಿ, ಸಿಮಿಲಿಗುಡದ ಮೂಲಕ ಒಂದು ದಾರಿಯಾದರೆ, ಶೃಂಗವರಪುಕೋಟ, ಸುಂಕರಮೆಟ್ಟ, ಅರಕು, ಪಡುವ, ಸಿಮಿಲಿಗುಡ ಮೂಲಕ ಮತ್ತೊಂದು ದಾರಿ. ಸಿಮಿಲಿಗುಡವು ನಾಲ್ಕು ರಸ್ತೆಗಳ ಸಂಧಿಸ್ಥಳವಾಗಿದ್ದು ರಾಷ್ಟ್ರೀಯ ಹೆದ್ದಾರಿ ೪೩ ಇಲ್ಲಿಂದ ಹಾದುಹೋಗುತ್ತದೆ. ಇಲ್ಲಿಂದ ದಾಮನ್‌ಜೋಡಿಯು ಹದಿನೆಂಟು ಕಿಲೋಮೀಟರು ದೂರದಲ್ಲಿದೆ.
ಸಿಮಿಲಿಗುಡದಿಂದ ರಾಷ್ಟ್ರೀಯ ಹೆದ್ದಾರಿಗುಂಟ ಸಾಗಿದರೆ ಐದು ಕಿಲೋಮೀಟರುಗಳ ದೂರದಲ್ಲಿ ಸುನಾಬೆಡ ಎಂಬ ಸ್ಥಳವಿದೆ. ಈ ಸ್ಥಳದಲ್ಲಿ ಇಂಡಿಯಾ ಸರ್ಕಾರವು ರಷ್ಯಾ ಸಹಯೋಗದೊಂದಿಗೆ ಮಿಗ್ ವಿಮಾನಗಳ ಯಂತ್ರ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಿದೆ. ಇಲ್ಲಿನ ನಾಗರಿಕ ವಸತಿ ಸಮುಚ್ಚಯದಲ್ಲಿ ಆದಿವಾಸಿಗಳು ತಮ್ಮ ಅರಣ್ಯ ಉತ್ಪನ್ನಗಳನ್ನು ತಂದು ದಯನೀಯ ಸ್ಥಿತಿಯಲ್ಲಿ ಮಾರುವ ಹಾಗೂ ನಾಗರಿಕರು ಅವರನ್ನು ನಿಕೃಷ್ಟವಾಗಿ ಕಾಣುವ ದೃಶ್ಯಗಳು ಮನಕರಗಿಸುತ್ತವೆ.
ಕೋರಾಪುಟ್ ನಿಂದ ಉತ್ತರಕ್ಕೆ ೨೦ ಕಿಲೋಮೀಟರು ಸಾಗಿದರೆ ಜಯಪುರ ಎಂಬ ಊರಿದೆ. ಹಿಂದೊಮ್ಮೆ ಜಯಪುರ ಸಂಸ್ಥಾನದ ರಾಜಧಾನಿಯಾಗಿದ್ದ ಇದು ಇಂದಿಗೂ ಒಳ್ಳೆಯ ವಾಣಿಜ್ಯಕೇಂದ್ರವಾಗಿದೆ. ಪುರಾತನ ಅರಮನೆ, ಗುಡಿಗಳು, ಮಾರುಕಟ್ಟೆ, ನ್ಯಾಯಾಲಯ, ಸದಾ ನೀರು ತುಂಬಿದ ಕೆರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗರಿರುವ ಈ ಊರು ಜವಳಿ ಉತ್ಪನ್ನಕ್ಕೆ ಹೆಸರಾಗಿದೆ.
ಇವೆಲ್ಲವೂ ಒರಿಸ್ಸಾ ರಾಜ್ಯದ ಕೋರಾಪುಟ್ ಎಂಬ ಜಿಲ್ಲೆಗೆ ಸೇರುತ್ತವೆಯಾದರೂ ಕೋರಾಪುಟ್ ಜಿಲ್ಲಾಕೇಂದ್ರಕ್ಕಿಂತಲೂ ಈ ಔದ್ಯಮಿಕ ಕೇಂದ್ರಗಳೇ ವಾಣಿಜ್ಯಕೇಂದ್ರಗಳಾಗಿವೆ ಎನ್ನಬಹುದು.
ಜಯಪುರದ ಬಳಿ ಕೊಲಾಬ್ ನದಿಗೆ ಅಡ್ಡಲಾಗಿ ಕುದುರೆ ಲಾಳದಾಕೃತಿಯ ಬೃಹತ್ ಅಣೆಕಟ್ಟು ಕಟ್ಟಲಾಗಿದ್ದು ಭಾರೀ ಪ್ರಮಾಣದಲ್ಲಿ ಜಲವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ.
ಜಯಪುರದಿಂದ ಛತ್ತೀಸಗಡದ ಜಗದಾಲಪುರದ ಕಡೆಗೆ ಹೊರಟರೆ ಒರಿಸ್ಸಾ ಗಡಿಯಲ್ಲಿ ದಟ್ಟ ಅರಣ್ಯದ ನಡುವೆ ಬೃಹತ್ ಬಂಡೆಗಳ ಒಂದು ನಿವೇಶನವಿದ್ದು ಅಲ್ಲಿರುವ ಒಂದು ಗುಹೆಯಲ್ಲಿ ಆಳೆತ್ತರದ ತೆಂಗಿನಕಾಯಿ ಆಕಾರದ ಬಂಡೆಯಿದೆ. ಅದನ್ನು ಅಲ್ಲಿನ ಆದಿವಾಸಿಗಳು ಶಿವಲಿಂಗವೆಂದು ಭಾವಿಸಿ ಪೂಜಿಸುತ್ತಾರೆ. ಗುಪ್ತೇಶ್ವರವೆನ್ನುವ ಈ ಸ್ಥಳಕ್ಕೆ ಹೋಗಲು ಶಿವರಾತ್ರಿಯಂದು ಮಾತ್ರ ಅವಕಾಶವಿರುತ್ತದೆ. ಉಳಿದಂತೆ ನಾಗರಿಕರಿಗೆ ಪ್ರವೇಶ ಇರುವುದಿಲ್ಲ.
ಸಿಮಿಲಿಗುಡದಿಂದ ಪಡುವ ದಾರಿಯಲ್ಲಿ ಸುಮಾರು ೨೪ ಕಿಲೋಮೀಟರು ದೂರ ಸಾಗಿದರೆ ನಂದಪುರ್ ಎಂಬ ಊರಿದೆ. ಇಲ್ಲೊಂದು ವಿಶೇಷವಿದೆ. ವಿಕ್ರಮನ ಸಿಂಹಾಸನ ಎಂಬ ಕಥೆಯುಂಟಲ್ಲ. ಅದೇ ರಾಜನೊಬ್ಬ ಗಾಳಿಸಂಚಾರ ಹೊರಟಾಗ ಸುಂದರ ತೋಟದೊಳಗೆ ದಿಬ್ಬದ ಮೇಲೆ ನಿಂತಿದ್ದ ರೈತನೊಬ್ಬ ರಾಜನನ್ನು ತುಂಬಾ ಆದರದಿಂದ ಮಾತನಾಡಿಸಿ ತನ್ನ ತೋಟಕ್ಕೆ ಆಹ್ವಾನಿಸುತ್ತಾನೆ. ಆದರೆ ಆ ದಿಬ್ಬ ಇಳಿದುಬಂದ ಅನಂತರ ಆ ರೈತನ ಚರ್ಯೆ ಬದಲಾಗಿ ರಾಜನನ್ನು ಏಕೆ ಒಳಬಂದಿರೆಂದು ಗದರಿಸುತ್ತಾನೆ. ಕುತೂಹಲಗೊಂಡ ರಾಜ ಆ ದಿಬ್ಬವನ್ನು ಬಗೆದು ನೋಡಿದಾಗ ಅಲ್ಲೊಂದು ರಾಜಸಿಂಹಾಸನ ಇರುವುದನ್ನು ಕಾಣುತ್ತಾನೆ. ೩೨ ಮೆಟ್ಟಿಲುಗಳ ಆ ಸಿಂಹಾಸನದ ಒಂದೊಂದು ಮೆಟ್ಟಿಲಲ್ಲೂ ಒಂದೊಂದು ಬೊಂಬೆಯಿರುತ್ತದೆ. ರಾಜ ಆ ಸಿಂಹಾಸನದ ಮೇಲೆ ಒಂದೊಂದೇ ಮೆಟ್ಟಿಲು ಏರಲು ಹೋದಾಗ ಆ ಒಂದೊಂದು ಬೊಂಬೆಯೂ ಒಂದೊಂದು ಕಥೆ ಹೇಳಿ ಕ್ಲಿಷ್ಟವಾದ ಪ್ರಶ್ನೆಯೊಂದನ್ನು ಎಸೆಯುತ್ತದೆ. ಆ ಪ್ರಶ್ನೆಗೆ ಸಮರ್ಥವಾಗಿ ಉತ್ತರಿಸಿದರೆ ಮಾತ್ರ ಸಿಂಹಾಸನ ಏರುವ ಅರ್ಹತೆಯಿರುವುದೆಂದು ಹೇಳುತ್ತದೆ. ಆ ಸಿಂಹಾಸನವಿದ್ದ ಜಾಗವನ್ನು ಈ ನಂದಪುರ ಗ್ರಾಮದಲ್ಲಿ ಕಾಯ್ದಿಡಲಾಗಿದೆ. ಇಲ್ಲಿ ೩೨ ಮೆಟ್ಟಿಲುಗಳಿರುವ ದಿಬ್ಬವಿದ್ದು ಈ ಜಾಗವನ್ನು ಬತ್ತೀಸ್ ಸಿಂಹಾಸನ್ ಎಂದು ಕರೆಯುತ್ತಾರೆ. ಪ್ರಾಚ್ಯವಸ್ತು ಇಲಾಖೆಯು ಈ ಸ್ಥಳವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಒರಿಸ್ಸಾದ ಎತ್ತರದ ಗಿರಿಶಿಖರ ದೇವಮಲಿಯೂ ಇದೇ ಜಿಲ್ಲೆಯಲ್ಲಿದ್ದು ಒಟ್ಟಿನಲ್ಲಿ ಸಾಹಸಿಗರಿಗೆ ಹಾಗೂ ಚಾರಣಿಗರಿಗೆ ಕೋರಾಪುಟ್ ಜಿಲ್ಲೆಯು ತುಂಬಾ ತುಂಬಾ ಅವಕಾಶಗಳನ್ನು ತೆರೆದಿಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.