ಗೀತಾಂಜಲಿ ಶ್ರೀ ಗೆ ಬೂಕರ್ ಪ್ರಶಸ್ತಿ ಗಳಿಸಿಕೊಟ್ಟ ‘ರೇತ್ ಸಮಾಧಿ'
ಗೀತಾಂಜಲಿ ಶ್ರೀ ಅವರಿಗೂ ತಮ್ಮ ಈ ಕೃತಿಗೆ ಪ್ರತಿಷ್ಟಿತ ಮ್ಯಾನ್- ಬೂಕರ್ (ಬುಕರ್) ಪ್ರಶಸ್ತಿ ಸಿಗಬಹುದು ಎಂಬ ಕಲ್ಪನೆ ಇರಲಿಲ್ಲವಂತೆ. ಆದರೆ ಅವರ ‘ರೇತ್ ಸಮಾಧಿ' ಎಂಬ ಕೃತಿಯು ಹಿಂದಿ ಭಾಷೆಗೆ ಪ್ರಥಮ ಬೂಕರ್ ಪ್ರಶಸ್ತಿ ಗಳಿಸಿಕೊಡುವಲ್ಲಿ ಸಫಲವಾಗಿದೆ. ಈ ಕೃತಿಯನ್ನು “ಟೋಂಬ್ ಆಫ್ ಸ್ಯಾಂಡ್" (Tomb of Sand) ಎನ್ನುವ ಹೆಸರಿನಲ್ಲಿ ಡೈಸಿ ರಾಕ್ವೆಲ್ ಅವರು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದರು. ಗೀತಾಂಜಲಿ ಶ್ರೀ ಅವರಿಗೆ ಬೂಕರ್ ಪ್ರಶಸ್ತಿ ದೊರಕಿಸಿಕೊಡುವಲ್ಲಿ ಡೈಸಿ ರಾಕ್ವೆಲ್ ಅವರ ಸಮರ್ಥ ಅನುವಾದವೂ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಬೂಕರ್ ಪ್ರಶಸ್ತಿ ಸಮಿತಿಯ ಪ್ರಕಾರ ಭಾರತೀಯ ಭಾಷೆಯೊಂದರಲ್ಲಿ ಪ್ರಕಟವಾದ ಕೃತಿಗೆ ಸಿಕ್ಕ ಮೊದಲ ಪ್ರಶಸ್ತಿ ಇದು. ಈ ಮೊದಲು ಬೂಕರ್ ಪ್ರಶಸ್ತಿ ಗಳಿಸಿದ ಕೃತಿಗಳೆಲ್ಲವೂ ಮೂಲ ಆಂಗ್ಲ ಭಾಷೆಯಲ್ಲಿ ಬರೆದವುಗಳಾಗಿವೆ. ಈ ಕೃತಿ ‘ರೇತ್ ಸಮಾಧಿ' ಯು ಮನುಷ್ಯನ ಜೀವನದಲ್ಲಿ ಸಹಜವಾಗಿ ಕಂಡು ಬರುವ ಯೌವನ-ವೃದ್ಧಾಪ್ಯ, ಪುರುಷ-ಮಹಿಳೆ, ದೇಶ-ಕುಟುಂಬ ಇಂತಹ ಮನುಜ ಸಂಬಂಧಗಳ ಬಗ್ಗೆ ಹಾಗೂ ಭಾರತ ದೇಶದ ಬಗ್ಗೆ ಸಮಗ್ರವಾಗಿ ವಿವರಣೆಯನ್ನು ನೀಡುತ್ತದೆ. ಗೀತಾಂಜಲಿ ಶ್ರೀ ಅವರ ಮೋಹಕ ಬರವಣಿಗೆ ಹಾಗೂ ಡೈಸಿ ರಾಕ್ವೆಲ್ ಅವರ ಸಮರ್ಥ ಅನುವಾದವು ಈ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ದೊರಕಿಸಿಕೊಟ್ಟದ್ದರಲ್ಲಿ ಯಾವುದೇ ಅನುಮಾನಗಳಿಲ್ಲ.
ಸುಮಾರು ೭೫೦ ಪುಟಗಳ ಈ ಕಾದಂಬರಿಯು ಮೊದಲಿಗೆ ಮಾರುಕಟ್ಟೆಗೆ ಬಂದಾಗ ಓದುಗರ ಗಮನವನ್ನು ಅಷ್ಟಾಗಿ ಸೆಳೆದಿರಲಿಲ್ಲ. ಆದರೆ ಬೂಕರ್ ಪ್ರಶಸ್ತಿ ಘೋಷಣೆಯಾದ ಬಳಿಕ ಪುಸ್ತಕದ ಮಾರಾಟ ಹೆಚ್ಚಾಗತೊಡಗಿತು ಅನ್ನುತ್ತಾರೆ ಪುಸ್ತಕ ವ್ಯಾಪಾರಿಗಳು. ೮೦ ರ ವೃದ್ಧ ಮಹಿಳೆಯ ಅನುಭವಗಳೇ ‘ರೇತ್ ಸಮಾಧಿ' ಕಾದಂಬರಿಯ ಪ್ರಮುಖ ಕಥಾವಸ್ತು. ತನ್ನ ಪತಿಯ ಸಾವಿನ ನಂತರ ತೀವ್ರವಾದ ಮನೋವ್ಯಾಧಿಗೆ ಗುರಿಯಾಗಿ ಖಿನ್ನತೆಗೆ ಜಾರುವ ಈಕೆ ಭಾರತ-ಪಾಕ್ ವಿಭಜನೆಯ ಕಾಲದಲ್ಲಿ ಭಾರತಕ್ಕೆ ಬಂದಿರುತ್ತಾಳೆ. ಕಾದಂಬರಿಯ ಕೊನೆಯಲ್ಲಿ ತನ್ನ ಮನೋವ್ಯಾಕುಲಕ್ಕೆ ಪರಿಹಾರವನ್ನು ಹುಡುಕುತ್ತಾ ಮತ್ತೆ ಮರಳಿ ಭೂತಕಾಲದ ಪಾಕಿಸ್ತಾನದತ್ತ ಸಾಗುತ್ತಾಳೆ. ವಿನೂತನವಾದ ಶೈಲಿಯ ನಿರೂಪಣೆಯಿಂದಾಗಿ ‘ರೇತ್ ಸಮಾಧಿ' ವಿಮರ್ಶಕರ ಮೆಚ್ಚುಗೆ ಪಡೆದಿತ್ತು. ಬೂಕರ್ ಪ್ರಶಸ್ತಿ ಒಲಿದ ಬಳಿಕ ತಮ್ಮ ಕಾದಂಬರಿ ಇನ್ನಷ್ಟು ಮಂದಿಗೆ ತಲುಪುತ್ತದೆ ಎನ್ನುವ ಆಶಾಭಾವ ಗೀತಾಂಜಲಿ ಶ್ರೀ ಅವರದ್ದು.
ಹುಟ್ಟು, ಬಾಲ್ಯ, ವಿದ್ಯಾಭ್ಯಾಸ: ಗೀತಾಂಜಲಿ ಹುಟ್ಟಿದ್ದು ಜೂನ್ ೧೨, ೧೯೫೭ರಲ್ಲಿ ಉತ್ತರ ಪ್ರದೇಶದ ಮೈನ್ ಪುರಿ ಎಂಬ ಊರಿನಲ್ಲಿ. ಇವರ ತಂದೆ ಅನಿರುದ್ಧ ಪಾಂಡೆ ಹಾಗೂ ತಾಯಿ ಶ್ರೀ ಕುಮಾರಿ. ಇತಿಹಾಸದಲ್ಲಿ ಬಿ ಎ ಪದವಿಯನ್ನು ಶ್ರೀ ರಾಮ ಕಾಲೇಜಿನಲ್ಲಿ ಪೂರೈಸಿದ ಇವರು ಎಂ ಎ ಪದವಿಯ ಬಳಿಕ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಖ್ಯಾತ ಸಾಹಿತಿ ‘ಪ್ರೇಮಚಂದ್' ಅವರ ಬಗ್ಗೆ ಪ್ರಬಂಧ ಬರೆದು ಪಿ ಹೆಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಗೀತಾಂಜಲಿ ಅವರು ಮೂರು ಕಾದಂಬರಿ ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಅವರ ಹಲವಾರು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಕೊರಿಯನ್ ಮತ್ತು ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಬಾಬ್ರಿ ಮಸೀದಿ ನಾಶ ಮತ್ತು ಗುಜರಾತ್ ಗಲಭೆಗಳು ಹಾಗೂ ದೇಶದ ಸ್ಥಿತಿಯ ಬಗ್ಗೆ ಬರೆಯುತ್ತಿದ್ದ ಲೇಖನಗಳು ಬಹಳ ಚರ್ಚೆಗೆ ಗ್ರಾಸವಾಗಿದ್ದವು. ಅವರ ‘ರೇತ್ ಸಮಾಧಿ' ಪುಸ್ತಕವನ್ನು ಧರ್ಮಗಳು, ದೇಶಗಳು ಅಥವಾ ಲಿಂಗಗಳಲ್ಲಿನ ಮಿತಿಗಳು ಮತ್ತು ಗಡಿ ಸೀಮೆಗಳ ವಿನಾಶಕ ಪರಿಣಾಮದ ತುರ್ತು ಮತ್ತು ಸಕಾಲಿಕ ಪ್ರತಿಭಟನೆ' ಎಂದೇ ವಿಶ್ಲೇಷಿಸಲಾಗಿದೆ. ಈ ವಿಷಯವನ್ನೇ ಬೂಕರ್ ಪ್ರಶಸ್ತಿ ಸಮಿತಿಯ ತೀರ್ಪುಗಾರರೂ ತಮ್ಮ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿದ್ದಾರೆ.
ಗೀತಾಂಜಲಿ ಪಾಂಡೆ-ಗೀತಾಂಜಲಿ ಶ್ರೀ ಆದದ್ದು ಏಕೆ?: ಗೀತಾಂಜಲಿ ಅವರ ಹುಟ್ಟು ಹೆಸರು ಗೀತಾಂಜಲಿ ಪಾಂಡೆ. ಆದರೆ ಅವರು ಅದನ್ನು ನಂತರದ ದಿನಗಳಲ್ಲಿ ಗೀತಾಂಜಲಿ ಶ್ರೀ ಎಂದು ಬದಲಾಯಿಸಿದರು. ಇದಕ್ಕೆ ಕಾರಣ ಅವರಿಗೆ ತಮ್ಮ ಅಮ್ಮನ ಮೇಲಿದ್ದ ಮಮಕಾರ. ಈ ಬದಲಾವಣೆ ಏಕಾಯಿತು ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳಿ -
“ನಾನು ಕಾಲೇಜಿನಲ್ಲಿ ಕಲಿಯುತ್ತಿರುವಾಗ ನನಗೊಮ್ಮೆ ಬ್ಯಾಂಕ್ ಅಕೌಂಟ್ ಮಾಡಿಸಬೇಕಿತ್ತು. ಅಪ್ಪನ ಜೊತೆ ಬ್ಯಾಂಕ್ ಗೆ ಹೋಗಿ ಅಕೌಂಟ್ ಮಾಡಿಸಲು ಬೇಕಾದ ಅರ್ಜಿಯನ್ನು ಪಡೆದುಕೊಂಡು ಅದನ್ನು ಅಲ್ಲೇ ತುಂಬಿಸಿ ಸಹಿ ಮಾಡುವ ಸ್ಥಳದಲ್ಲಿ ಗೀತಾಂಜಲಿ ಪಾಂಡೆ ಎಂದು ಸಹಿ ಮಾಡಲು ಹೋದಾಗ ಅಲ್ಲೇ ಇದ್ದ ಅಪ್ಪ ನನ್ನನ್ನು ತಡೆದರು. ಅಚ್ಚರಿಯಿಂದ ಅವರತ್ತ ನೋಡಿದಾಗ ಅವರು ಹೇಳಿದರು ‘ಗೀತಾಂಜಲಿ ಎಂದು ಬರೆದರೆ ಸಾಕು, ಪಾಂಡೆ ಎಂದು ಹಾಕಬೇಡ, ಮುಂದೆ ಮದುವೆಯಾದಾಗ ಮತ್ತೆ ಗಂಡನ ಮನೆಯ ಹೆಸರನ್ನು ಸೇರಿಸುವುದು ಕಷ್ಟವಾಗುತ್ತದೆ. ಅಲ್ಲಿ ಮತ್ತೆ ಸರ್ ನೇಮ್ (ಅಡ್ಡ ಹೆಸರು) ಬದಲಾದಾಗ ನೀನು ಮತ್ತೆ ಬ್ಯಾಂಕ್ ಗೆ ಅಲೆದಾಡಬೇಕಾಗುತ್ತದೆ’ ಎಂದರು.
ಬ್ಯಾಂಕ್ ಅಕೌಂಟ್ ಸಿಗುತ್ತಿರುವ ಸಂಭ್ರಮದ ಮಧ್ಯೆಯೇ ನಾನು ಅಪ್ಪನ ಮಾತಿನ ಒಳ ಮರ್ಮವನ್ನು ಅರಿತು ಒಂದು ಕ್ಷಣ ಆಲೋಚನೆಯಲ್ಲಿ ಕಳೆದುಹೋದೆ. ನನ್ನ ಜೀವನದಲ್ಲಿ ಹೆತ್ತದ್ದು, ಸಾಕಿದ್ದು, ನನಗಾಗಿ ಪ್ರತೀದಿನ ತ್ಯಾಗ ಮಾಡಿದ್ದು ನನ್ನ ಅಮ್ಮ. ಆದರೆ ಅವಳಿಗೆ ನನ್ನ ಹೆಸರಿನ ಜೊತೆ ಇರುವ ಅವಕಾಶ ಏಕಿಲ್ಲ. ಬಾಲ್ಯದಲ್ಲಿ ತಂದೆಯ ಹೆಸರು, ಮದುವೆಯ ನಂತರ ಗಂಡನ ಹೆಸರು ಏಕಿರಬೇಕು ಎಂದು ಯೋಚಿಸಿ ನನ್ನ ಹೆಸರಿನ ಜೊತೆ ಅಪ್ಪನ ಹೆಸರೂ ಬೇಡ, ಭವಿಷ್ಯದಲ್ಲಿ ಗಂಡನ ಹೆಸರೂ ಬೇಡ. ನನ್ನ ಜೀವನವನ್ನು ರೂಪಿಸಿದ ಅಮ್ಮನ ಹೆಸರೇ ಇರಲಿ ಎಂದು ನಿರ್ಧಾರ ಮಾಡಿದೆ.
ನನ್ನ ಅಮ್ಮನ ಹೆಸರು ಶ್ರೀ ಕುಮಾರಿ. ಅದರ ‘ಶ್ರೀ’ ಅನ್ನು ತೆಗೆದು ನನ್ನ ಹೆಸರಾದ ಗೀತಾಂಜಲಿಗೆ ಜೋಡಿಸಿ ನಾನು ಗೀತಾಂಜಲಿ ಶ್ರೀ ಆದೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಗೀತಾಂಜಲಿ. ತಮ್ಮ ಅಮ್ಮನ ಮೇಲಿನ ಪ್ರೀತಿ ಅವರಿಂದ ಈ ಕೆಲಸ ಮಾಡಿಸಿತು. ಅಮ್ಮನ ಹಾರೈಕೆ ಮತ್ತು ಆಶೀರ್ವಾದದಿಂದಲೇ ಬೂಕರ್ ನಂತಹ ಪ್ರತಿಷ್ಟಿತ ಪ್ರಶಸ್ತಿ ಬಂತು ಅನ್ನುತ್ತಾರೆ ಗೀತಾಂಜಲಿ ಶ್ರೀ. ಏನಾದರಾಗಲಿ ಭಾರತೀಯ ಬರಹಗಾರರಿಗೆ ಈ ರೀತಿಯ ವಿದೇಶೀ ಪುರಸ್ಕಾರಗಳು ಬರುವುದು ಅಪರೂಪ. ಗೀತಾಂಜಲಿ ಅವರ ಬರವಣಿಗೆ ಇನ್ನೂ ಮುಂದುವರಿಯಲಿ, ಇನ್ನಷ್ಟು ಕೃತಿಗಳು ಹೊರಬರಲಿ ಅಲ್ಲವೇ?
ಅಮ್ಮನ ಜೊತೆ ಗೀತಾಂಜಲಿ ಶ್ರೀ ಅವರ ಚಿತ್ರ. ಕೃಪೆ: ಅಂತರ್ಜಾಲ