ಗೀತಾಮೃತ - 13

ಗೀತಾಮೃತ - 13

*ಅಧ್ಯಾಯ ೪*

*ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/*

*ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//*

       ಯಾರಿಗೆ ಯಾವುದೇ ಪ್ರಕಾರದ ಆಸೆಯಿಲ್ಲವೋ ,ಯಾರು ಅಂತ:ಕರಣ ಮತ್ತು ಇಂದ್ರಿಯಗಳ ಸಹಿತ ಶರೀರವನ್ನು ಗೆದ್ದಿರುವನೋ,ಯಾರು ಸಮಸ್ತ ಭೋಗ ಸಾಮಗ್ರಿಗಳನ್ನು ತ್ಯಜಿಸಿದ್ದಾನೋ,ಅಂತಹ ಸಾಂಖ್ಯಯೋಗಿಯು ಕೇವಲ ಶರೀರ ಸಂಬಂಧವಾದ ಕರ್ಮಗಳನ್ನು ಮಾಡುತ್ತಾ ಇದ್ದರೂ ಪಾಪವನ್ನು ಪಡೆಯುವುದಿಲ್ಲ.

*ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರ: /*

*ಸಮ: ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ//೨೨//*

      ಯಾರು ತಾನು ಇಚ್ಛಿಸದೆ,ತಾನೇ ತಾನಾಗಿ ಪ್ರಾಪ್ತವಾದ ಪದಾರ್ಥದಲ್ಲಿ ಸದಾ ಸಂತುಷ್ಟನಾಗಿರತ್ತಾನೆಯೋ,ಯಾರಲ್ಲಿ ಈರ್ಷೆಯು ಸಂಪೂರ್ಣ ಅಭಾವವಾಗಿ ಹೋಗಿದೆಯೋ, ಯಾರು ಹರ್ಷ ಶೋಕ ಮೊದಲಾದ ದ್ವಂದ್ವಗಳಿಂದ ಸರ್ವಥಾ ಅತೀತನಾಗಿದ್ದಾನೋ ಅಂತಹ ಸಿದ್ಧಿ ಮತ್ತು ಅಸಿದ್ಧಿಯಲ್ಲಿ ಸಮಚಿತ್ತನಾಗಿರುವ ಕರ್ಮಯೋಗಿಯು ಕರ್ಮವನ್ನು ಮಾಡುತ್ತಿದ್ದರೂ ಕೂಡ ಅವುಗಳಿಂದ ಬಂಧಿತನಾಗುವುದಿಲ್ಲ.

***

*ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸ:/*

*ಯಜ್ಞಾಯಾಚರತ: ಕರ್ಮ ಸಮಗ್ರಂ ಪ್ರವಿಲೀಯತೇ//೨೩//*

    ಯಾರ ಆಸಕ್ತಿಯು ಸರ್ವಥಾ ನಷ್ಟವಾಗಿ ಹೋಗಿದೆಯೋ,ಯಾರು ದೇಹಾಭಿಮಾನ ಮತ್ತು ಮಮತಾರಹಿತನಾಗಿ ಹೋಗಿದ್ದಾನೋ,ಯಾರ ಚಿತ್ತವು ನಿರಂತರವಾಗಿ ಪರಮಾತ್ಮನ ಜ್ಞಾನದಲ್ಲಿ ನೆಲೆನಿಂತಿದೆಯೋ ,ಕೇವಲ ಯಜ್ಞಸಂಪಾದನೆಗಾಗಿ ಕರ್ಮಮಾಡುವಂತಹ  ಮನುಷ್ಯನ ಸಮಗ್ರ ಕರ್ಮವು ಪೂರ್ಣವಾಗಿ ವಿಲೀನವಾಗುತ್ತದೆ.

*ಬ್ರಹ್ಮಾರ್ಪಣಂ  ಬ್ರಹ್ಮಹವಿಬ್ರಹ್ಮಾಗ್ನೌಬ್ರಹ್ಮಣಾ ಹುತಮ್/*

*ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧೀನಾ//೨೪//*

      ಯಾವ ಯಜ್ಞದಲ್ಲಿ ಅರ್ಪಣ ಅರ್ಥಾತ್ 'ಸ್ರುವ' ಮೊದಲಾದುವುಗಳು ಸಹ ಬ್ರಹ್ಮವಾಗಿದೆಯೋ ಮತ್ತು ಹವನ ಮಾಡಲ್ಪಡಲು ಯೋಗ್ಯವಾದ ದ್ರವ್ಯವೂ ಸಹ ಬ್ರಹ್ಮವಾಗಿದೆಯೋ ಹಾಗೂ ಬ್ರಹ್ಮರೂಪನಾದ ಕರ್ತೃವಿನ ಮೂಲಕ ಬ್ರಹ್ಮರೂಪವಾದ ಅಗ್ನಿಯಲ್ಲಿ ಆಹುತಿ ಕೊಡುವ ರೂಪವಾದ. ಕ್ರಿಯೆಯೂ ಸಹ ಬ್ರಹ್ಮವಾಗಿದೆಯೋ ಆ ಬ್ರಹ್ಮಕರ್ಮದಲ್ಲಿ ಸ್ಥಿತನಾಗಿರುವ ಯೋಗಿಯ ಮೂಲಕ ಪಡೆಯಲು ಯೋಗ್ಯವಾದ ಫಲವೂ ಸಹ ಬ್ರಹ್ಮವೇ ಅಗಿದೆ.

***

*ದೈವಮೇವಾಪರೇ ಯಜ್ಞಂ ಯೋಗಿನ: ಪರ್ಯುಲಪಾಸತೇ/*

*ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ//೨೫//*

  ಬೇರೆ ಯೋಗೀ ಜನರು ದೇವತೆಗಳ ಪೂಜಾರೂಪವಾದ ಯಜ್ಞವನ್ನೇ ಚೆನ್ನಾಗಿ ಅನುಷ್ಠಾನವನ್ನು ಮಾಡುತ್ತಾರೆ ಮತ್ತು ಬೇರೆ ಯೋಗೀ ಜನರು ಪರಬ್ರಹ್ಮ ಪರಮಾತ್ಮ ರೂಪವಾದ ಅಗ್ನಿಯಲ್ಲಿ ಅಭೇದದರ್ಶನರೂಪೀ ಯಜ್ಞದ ಮೂಲಕವೇ ಆತ್ಮರೂಪೀ ಯಜ್ಞದ ಹವನವನ್ನು ಮಾಡುತ್ತಾರೆ.

*ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ/*

*ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ//೨೬//*

      ‌ಅನ್ಯ ಯೋಗಿಜನರು ಶ್ರವಣೇಂದ್ರಿಯಾದಿ ಸಮಸ್ತ ಇಂದ್ರಿಯಗಳನ್ನು ಸಂಯಮರೂಪೀ ಅಗ್ನಿಗಳಲ್ಲಿ ಹೋಮ ಮಾಡುತ್ತಾರೆ ಮತ್ತು ಬೇರೆ ಯೋಗಿಜನರು ಶಬ್ದಾದಿ ಸಮಸ್ತ ವಿಷಯಗಳನ್ನು ಇಂದ್ರಿಯರೂಪೀ ಅಗ್ನಿಗಳಲ್ಲಿ ಹವನ ಮಾಡುತ್ತಾರೆ.

***

 *ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ/*

*ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ//೨೭//*

     ಬೇರೆ ಯೋಗಿ ಜನರು ಇಂದ್ರಿಯಗಳ ಸಂಪೂರ್ಣ ಕ್ರಿಯೆಗಳನ್ನು ಮತ್ತು ಪ್ರಾಣಗಳ ಸಮಸ್ತಕ್ರಿಯೆಗಳನ್ನು ಜ್ಞಾನದಿಂದ ಪ್ರಕಾಶಿತವಾದ ಆತ್ಮಸಂಯಮಯೋಗರೂಪೀ ಅಗ್ನಿಯಲ್ಲಿ ಹವನ ಮಾಡುತ್ತಾರೆ.

*ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪತೇ/*

*ಸ್ವಾಧ್ಯಾಯಜ್ಞಾನಯಜ್ಞಾಶ್ಚಯತಯ: ಸಂಶಿತವ್ರತಾ://೨೮//*

     ಕೆಲವು ಪುರುಷರು ದ್ರವ್ಯಸಂಬಂಧವಾದ ಯಜ್ಞವನ್ನು ಮಾಡುವವರಾಗಿದ್ದಾರೆ.ಎಷ್ಟೋ ಪುರುಷರು ತಪಸ್ಯಾರೂಪವಾದ ಯಜ್ಞವನ್ನು ಮಾಡುವವರಾಗಿದ್ದಾರೆ ಹಾಗೂ ಎಷ್ಟೋ ಪುರುಷರು ಅಷ್ಟಾಂಗಯೋಗರೂಪೀ ಯಜ್ಞವನ್ನು ಮಾಡುವವರಾಗಿದ್ದಾರೆ ಮತ್ತು ಎಷ್ಟೋ ಪುರುಷರು ಅಹಿಂಸಾದಿ ತೀಕ್ಷ್ಣವ್ರತಗಳಿಂದ ಕೂಡಿದವರಾಗಿ ಯತ್ನಶೀಲರಾದ ಆ ಪುರುಷರು ಸ್ವಾಧ್ಯಾಯರೂಪೀ ಜ್ಞಾನಯಜ್ಞವನ್ನು ಮಾಡುವವರಾಗಿದ್ದಾರೆ.

***

  *ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಪಾನಂ ತಥಾಪರೇ/*

*ಪ್ರಾಣಾಪಾನಗತೀ ರುದ್ಧ್ವಾಪ್ರಾಣಾಯಾಮಪರಾಯಣಾ://೨೯//*

 ಬೇರೆ ಎಷ್ಟೋ ಯೋಗಿಜನರು ಅಪಾನವಾಯುವಿನಲ್ಲಿ ಪ್ರಾಣವಾಯುವನ್ನು ಹೋಮಮಾಡುತ್ತಾರೆ.ಹಾಗೆಯೇ ಬೇರೆ ಕೆಲವರು ಪ್ರಾಣವಾಯುವಿನಲ್ಲಿ ಅಪಾನವಾಯುವನ್ನು ಹೋಮಮಾಡುತ್ತಾರೆ.

*ಅಪರೇ ನಿಯತಾಹಾರಾ: ಪ್ರಾಣಾನ್ಪ್ರಾಣೇಷು ಜುಹ್ವತಿ/*

*ಸರ್ವೇಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾ://೩೦//*

 ಬೇರೆ ನಿಯಮಿತ ಆಹಾರವುಳ್ಳ, ಪ್ರಾಣಾಯಾಮಪರಾಯಣರಾದ ಎಷ್ಟೋ ಪುರುಷರು ಪ್ರಾಣ ಮತ್ತು ಅಪಾನದ  ಗತಿಯನ್ನು ತಡೆದು ಪ್ರಾಣಗಳನ್ನು ಪ್ರಾಣಗಳಲ್ಲಿಯೇ ಹೋಮಮಾಡುತ್ತಾರೆ.ಈ ಎಲ್ಲ ಸಾಧಕರು ಯಜ್ಞಗಳ ಮೂಲಕ ಪಾಪಗಳನ್ನು ನಾಶಮಾಡುವವರೂ,ಮತ್ತು ಯಜ್ಞಗಳನ್ನು ತಿಳಿದಿರುವವರೂ ಆಗಿದ್ದಾರೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು