ಗೀತಾಮೃತ - 15

ಗೀತಾಮೃತ - 15

 *ಅಧ್ಯಾಯ ೪*

        *ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್/*

*ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ//೪೧//*

   ಹೇ ಧನಂಜಯನೇ ! ಯಾವಾತನು ಕರ್ಮಯೋಗದ ವಿಧಿಯಿಂದ ಸಮಸ್ತ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಿದ್ದಾನೆಯೋ ಮತ್ತು ಯಾರು ವಿವೇಕದ ಮೂಲಕ ಸಮಸ್ತ ಸಂಶಯಗಳನ್ನು ನಾಶಮಾಡಿದ್ದಾನೆಯೋ ಅಂತಹ ಅಂತ:ಕರಣವನ್ನು ವಶಮಾಡಿಕೊಂಡಿರುವ ಪುರುಷನನ್ನು ಕರ್ಮಗಳು ಬಂಧಿಸುವುದಿಲ್ಲ.

   *ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನ:/*

*ಛಿತ್ತೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ//೪೨//*

 ಆದಕಾರಣ,ಹೇ ಭರತವಂಶೀಯನಾದ ಅರ್ಜುನನೇ! ನೀನು ಹೃದಯದಲ್ಲಿ ಸ್ಥಿತನಾಗಿರುವ ಈ ಅಜ್ಞಾನಜನಿತ ನಿನ್ನ ಸಂಶಯವನ್ನು ವಿವೇಕಜ್ಞಾನರೂಪೀ ಖಡ್ಗದ ಮೂಲಕ ಕತ್ತರಿಸಿ,ಸಮತ್ವರೂಪೀ ಕರ್ಮಯೋಗದಲ್ಲಿ ಸ್ಥತನಾಗಿಬಿಡು ಮತ್ತು ಯುದ್ಧಕ್ಕೆ ಎದ್ದುನಿಲ್ಲು.

     *// ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ ಜ್ನಾನಕರ್ಮಸಂನ್ಯಾಸಯೋಗೋ ನಾಮ ಚತುರ್ಥೋಧ್ಯಾಯ://*

***

*ಅಧ್ಯಾಯ ೫*

*//ಅಥ ಪಂಚಮೋಧ್ಯಾಯ://*

*ಕರ್ಮಸಂನ್ಯಾಸ ಯೋಗವು*

ಅರ್ಜುನ ಉವಾಚ

*ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ/*

*ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್//೧//*

       ಅರ್ಜುನನು ಹೇಳಿದನು__

ಹೇ ಕೃಷ್ಣಾ! ನೀನು ಕರ್ಮಗಳ ಸಂನ್ಯಾಸವನ್ನೂ ಮತ್ತೆ ಪುನ: ಕರ್ಮಯೋಗವನ್ನೂ ಪ್ರಶಂಸೆ ಮಾಡುತ್ತಿರುವೆ.ಆದ್ದರಿಂದ ಇವೆರಡರಲ್ಲಿ ಯಾವುದಾದರೊಂದು ಚೆನ್ನಾದ ನಿಶ್ಚಿತವಾದ ಶ್ರೇಯಸ್ಕರವಾದ ಸಾಧನವಾಗಿದೆಯೋ ಅದನ್ನು ನನಗೆ ಹೇಳು.

ಶ್ರೀ ಭಗವಾನುವಾಚ__

*ಸಂನ್ಯಾಸ: ಕರ್ಮಯೋಗಶ್ಚ ನಿ:ಶ್ರೇಯಸಕರಾವುಭೌ/*

*ತಯೋಸ್ತು ಕರ್ಮಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ//೨//*

     ಶ್ರೀ ಭಗವಂತನು ಹೇಳಿದನು..

ಕರ್ಮಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಪರಮ ಕಲ್ಯಾಣಕಾರಕವಾಗಿವೆ.ಆದರೂ ಅವೆರಡರಲ್ಲಿಯೂ ಕೂಡ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು,ಸಾಧನೆಯಲ್ಲಿ ಸುಗಮವಾಗಿರುವುದರಿಂದ ಶ್ರೇಷ್ಠ ವಾಗಿವೆ.

***

*ಜ್ಞೇಯ: ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ/*

*ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ//೩//*

 ಹೇ ಅರ್ಜುನನೇ! ಯಾವ ಪುರುಷನು ಯಾರನ್ನೂ ದ್ವೇಷಿಸುವುದಿಲ್ಲವೋ ಮತ್ತು ಯಾವುದನ್ನೂ ಬಯಸುವುದಿಲ್ಲವೋ,ಆ ಕರ್ಮಯೋಗಿಯು ಸದಾ ಸನ್ಯಾಸಿಯೆಂದೇ ತಿಳಿಯಲು ಯೋಗ್ಯನಾಗಿದ್ದಾನೆ; ಏಕೆಂದರೆ ರಾಗ ದ್ವೇಷಾದಿ ದ್ವಂದ್ವಗಳಿಂದ ರಹಿತನಾದ ಪುರುಷನು ಸುಖಪೂರ್ವಕವಾಗಿ ಸಂಸಾರ ಬಂಧನದಿಂದ ಮುಕ್ತನಾಗಿ ಹೋಗುತ್ತಾನೆ.

*ಸಾಂಖ್ಯಯೋಗೌ ಪೃಥಗ್ಬಾಲಾ: ಪ್ರವದಂತಿ ನ ಪಂಡಿತಾ:/*

*ಏಕಮಪ್ಯಾಸ್ಥಿತ: ಸಮ್ಯಗುಭಯೋರ್ವಿಂದತೇ ಫಲಮ್//೪//*

  ಮೇಲೆ ಹೇಳಿದ ಸಂನ್ಯಾಸವನ್ನು ಮತ್ತು ಕರ್ಮಯೋಗವನ್ನು ಮೂರ್ಖಜನರು ಬೇರೆಬೇರೆಯಾದ ಫಲಗಳನ್ನು ಕೊಡುವುವು ಎಂದು ಹೇಳುತ್ತಾರೆ, ಪಂಡಿತರಾದವರು ಹೇಳುವುದಿಲ್ಲ ; ಏಕೆಂದರೆ ,ಎರಡರ ಪೈಕಿ ಒಂದರಲ್ಲಿಯಾದರೂ ಸಮ್ಯತ್ಪ್ರಕಾರದಿಂದ ಸ್ಥಿತನಾದ ಪುರುಷನು ಎರಡರ ಫಲರೂಪೀ ಪರಮಾತ್ಮನನ್ನು ಪಡೆಯುತ್ತಾನೆ.

***

*ಯತ್ಸಾಂಖ್ಯೈ:  ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ/*

*ಏಕಂ ಸಾಂಖ್ಯಂ ಚ ಯೋಗಂ ಚ ಯ: ಪಶ್ಯತಿ ಸ ಪಶ್ಯತಿ//೫//*

      ಜ್ಞಾನಯೋಗಿಗಳ ಮೂಲಕ ಯಾವ ಪರಮಧಾಮವು ಪಡೆಯಲಾಗುತ್ತದೋ, ಕರ್ಮಯೋಗಿಗಳ ಮೂಲಕವೂ ಸಹ ಅದೇ ಪಡೆಯಲಾಗುತ್ತದೆ,ಅದಕ್ಕಾಗಿ ಯಾವ ಪುರುಷನು ಜ್ಞಾನಯೋಗ ಮತ್ತು ಕರ್ಮಯೋಗವನ್ನು, ಫಲರೂಪದಲ್ಲಿ ಒಂದೆಂದು ನೋಡುತ್ತಾನೋ ಅವನೇ ಯಥಾರ್ಥವಾಗಿ ನೋಡುತ್ತಾನೆ.

    *ಸನ್ಯಾಸಸ್ತು ಮಹಾಬಾಹೋ ದು:ಖಮಾಪ್ತುಮಯೋಗತ:/*

*ಯೋಗಯುಕ್ತೋ ಮುನಿರ್ಬ್ರಹ್ಮ ನಚಿರೇಣಾಧಿಗಚ್ಛತಿ//೬//*

     ಆದರೆ ಹೇ ಅರ್ಜುನಾ! ಕರ್ಮಯೋಗವಿಲ್ಲದೆ ಸಂನ್ಯಾಸ ಅರ್ಥಾತ್ _ ಮನಸ್ಸು, ಇಂದ್ರಿಯಗಳು ಮತ್ತು ಶರೀರದ ಮೂಲಕ ನಡೆಯುವ ಸಂಪೂರ್ಣ ಕರ್ಮಗಳಲ್ಲಿ ಕರ್ತೃತ್ವದ ತ್ಯಾಗವು ಪ್ರಾಪ್ತವಾಗುವುದು ಕಠಿಣವಾಗಿದೆ ಮತ್ತು ಭಗವಂತನ ಸ್ವರೂಪವನ್ನು ಮನನ ಮಾಡುವ ಕರ್ಮಯೋಗಿಯು ಪರಬ್ರಹ್ಮ ಪರಮಾತ್ಮನನ್ನು ಶೀಘ್ರವಾಗಿಯೇ ಪಡೆಯುತ್ತಾನೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ: ಇಂಟರ್ನೆಟ್ ಸಂಗ್ರಹ