ಗೀತಾಮೃತ - 20

ಗೀತಾಮೃತ - 20

*ಅಧ್ಯಾಯ ೬*

           *ತಂ ವಿದ್ಯಾದ್ದು:ಖಸಂಯೋಗವಿಯೋಗಂ ಯೋಗಸಂಜ್ಞಿತಮ್/**ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ//೨೪//* ಯಾವುದು ದು:ಖರೂಪೀ ಸಂಸಾರದ ಸಂಯೋಗದಿಂದ ರಹಿತವಾಗಿದೆಯೋ,ಹಾಗೂ ಯಾವುದರ ಹೆಸರು ಯೋಗವೆಂಬುದಾಗಿದೆಯೋ ಅದನ್ನು ತಿಳಿಯಬೇಕು.ಆ ಯೋಗವನ್ನು ಬೇಸರಿಸದೆ ಅರ್ಥಾತ್ ಧೈರ್ಯ ಮತ್ತು ಉತ್ಸಾಹದಿಂದ ಕೂಡಿದ ಚಿತ್ತದಿಂದ ನಿಶ್ಚಯಪೂರ್ವಕವಾಗಿ ಮಾಡುವುದು ಕರ್ತವ್ಯವಾಗಿದೆ.       *ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತ:/**ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತ://೨೪//*      ಸಂಕಲ್ಪದಿಂದ ಉತ್ಪನ್ನವಾಗುವ ಸಂಪೂರ್ಣ ಕಾಮನೆಗಳನ್ನು ನಿಶ್ಯೇಷರೂಪದಿಂದ ತ್ಯಾಗಮಾಡಿ ಮತ್ತು ಮನಸ್ಸಿನ ಮೂಲಕ ಇಂದ್ರಿಯಗಳ ಸಮುದಾಯವನ್ನು ಎಲ್ಲ ಕಡೆಗಳಿಂದಲೂ ಪೂರ್ಣವಾಗಿ ತಡೆದುಕೊಂಡು..

***

  *ಶನೈ: ಶನೈರುಪರಮೇದ್ಬುದ್ಧ್ಯಾ ಧೃತಿಗೃಹೀತಯಾ/*

*ಆತ್ಮಸಂಸ್ಥಂ ಮನ: ಕೃತ್ವಾನ ಕಿಂಚಿದಪಿ ಚಿಂತಯೇತ್//೨೫//*

     ಕ್ರಮಕ್ರಮವಾಗಿ ಅಭ್ಯಾಸಮಾಡುತ್ತ ಉಪರತಿಯನ್ನು ಪಡೆದು ಹಾಗೂ ಧೈರ್ಯದಿಂದ ಕೂಡಿದ ಬುದ್ಧಿಯ ಮೂಲಕ ಮನವನ್ನು ಪರಮಾತ್ಮನಲ್ಲಿ ಸ್ಥಿತಗೊಳಿಸಿ, ಪರಮಾತ್ಮನಲ್ಲದೆ ಮತ್ತೇನನ್ನೂ ಕೂಡ ಚಿಂತಿಸಬಾರದು.

*ಯತೋ ಯತೋ ನಿಶ್ಚಿರತಿ ಮನಶ್ಚಲಮಸ್ಥರಮ್/*

*ತಪಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್//೨೬//*

ಈ ಅಸ್ಥಿರವಾಗಿರುವ ಮತ್ತು ಚಂಚಲವಾದ ಮನಸ್ಸು ಯಾವ ಯಾವ ಶಬ್ದಾದಿ ವಿಷಯಗಳ ನಿಮಿತ್ತದಿಂದ ಜಗತ್ತಿನಲ್ಲಿ ವಿಹರಿಸುತ್ತದೆಯೋ ,ಆಯಾಯಾ ವಿಷಯಗಳಿಂದ ತಡೆದು ಎಂದರೆ ಹಿಂದಕ್ಕೆಳೆದುಕೊಂಡು ಅದನ್ನು ಪದೇ ಪದೇ ಪರಮಾತ್ಮನಲ್ಲಿಯೇ ತೊಡಗಿಸಬೇಕು.

***

*ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮತ್ತಮಮ್/*

*ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್//೨೭//*

 ಏಕೆಂದರೆ ಯಾರ ಮನಸ್ಸು ಒಳ್ಳೆಯ ರೀತಿಯಲ್ಲಿ ಶಾಂತವಾಗಿದೆಯೋ, ಯಾರು ಪಾಪರಹಿತನಾಗಿದ್ದಾನೋ ,ಮತ್ತು ಯಾರ ರಜೋಗುಣವು ಶಾಂತವಾಗಿ ಹೋಗಿದೆಯೋ , ಈ ಸಚ್ಚಿದಾನಂದ ಘನನಾದ ಬ್ರಹ್ಮನೊಡನೆ ಏಕೀಭಾವ ವುಂಟಾಗಿರುವ ಅಂತಹ ಯೋಗಿಗೆ ಉತ್ತಮವಾದ ಆನಂದವು ಪ್ರಾಪ್ತವಾಗುತ್ತದೆ.

*ಯುಂಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷ:/*

*ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ//೨೮//*

 ಆ ಪಾಪರಹಿತನಾದ ಯೋಗಿಯು ಈ ಪ್ರಕಾರ ನಿರಂತರವಾಗಿ ಆತ್ಮವನ್ನು ಪರಮಾತ್ಮನಲ್ಲಿ ತೊಡಗಿಸುತ್ತ ಸುಖಪೂರ್ವಕವಾಗಿ ಪರಬ್ರಹ್ಮ ಪರಮಾತ್ಮನ ಪ್ರಾಪ್ತಿರೂಪವಾದ ಅನಂತ ಆನಂದವನ್ನು ಅನುಭವಿಸುತ್ತಾನೆ.

***

*ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ/*

*ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನ://೨೯//*

   ಸರ್ವವ್ಯಾಪಿಯಾದ ಅನಂತ ಚೇತನದಲ್ಲಿ ಏಕೀಭಾವದಿಂದ ಸ್ಥಿತಿರೂಪವಾದ ಯೋಗದಿಂದ ಕೂಡಿದ ಆತ್ಮವುಳ್ಳವನು ಹಾಗೂ ಎಲ್ಲರನ್ನು ಸಮಭಾವದಿಂದ ನೋಡುವ ಯೋಗಿಯು ಆತ್ಮವನ್ನು ಸಂಪೂರ್ಣ ಪ್ರಾಣಿಗಳಲ್ಲಿ ಸ್ಥಿತನಾಗಿರುವ ಮತ್ತು ಸಮಸ್ತ ಪ್ರಾಣಿಗಳನ್ನು ಆತ್ಮನಲ್ಲಿ ಕಲ್ಪಿತವಾಗಿ ನೋಡುತ್ತಾನೆ.

     *ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ/*

*ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ//೩೦//*

    ಯಾವ ಪುರುಷನು ಸಮಸ್ತ ಜೀವಿಗಳಲ್ಲಿ ಎಲ್ಲರ ಆತ್ಮರೂಪೀ ವಾಸುದೇವನಾದ ನನ್ನನ್ನೇ ವ್ಯಾಪಕವಾಗಿ ನೋಡುತ್ತಾನೋ ಮತ್ತು ಸಂಪೂರ್ಣ ಜೀವಿಗಳನ್ನು ವಾಸುದೇವನಾದ ನನ್ನಲ್ಲಿ ಅಂತರ್ಗತವಾಗಿರುವಂತೆ ನೋಡುತ್ತಾನೋ ಅವನಿಗೆ ನಾನು ಅದೃಶ್ಯನಾಗುವುದಿಲ್ಲ ಮತ್ತು ಅವನು ನನಗೂ ಅದೃಶ್ಯನಾಗುವುದಿಲ್ಲ.

***

 *ಸರ್ವಭೂತಸ್ಥಿರಂ  ಯೋ ಮಾಂ ಭಜತ್ಯೇಕತ್ವಮಾಸ್ಥಿತ:/*

*ಸರ್ವಥಾ ವರ್ತಮಾನೋಪಿ ಸಯೋಗೀ ಮಯಿ ವರ್ತತೇ//೩೧//*

   ಯಾವ ಪುರುಷನು ಏಕೀಭಾವದಲ್ಲಿ ಸ್ಥಿತನಾಗಿ,ಸಂಪೂರ್ಣ ಭೂತಗಳಲ್ಲಿ ಆತ್ಮರೂಪದಿಂದ ಸ್ಥಿತನಾದ,ಸಚ್ಚಿದಾನಂದಘನ,ವಾಸುದೇವನಾದ ನನ್ನನ್ನು ಭಜಿಸುತ್ತಾನೋ ಆ ಯೋಗಿಯು ಎಲ್ಲ ಪ್ರಕಾರದಿಂದ ವರ್ತಿಸುತ್ತಿದ್ದರೂ ಸಹ ನನ್ನಲ್ಲಿಯೇ ವರ್ತಿಸುತ್ತಾನೆ.ಅರ್ಥಾತ್ ಅವನ ಎಲ್ಲ ಕ್ರಿಯೆಗಳು ಭಗವಂತನೊಂದಿಗೆ ನಡೆಯುತ್ತವೆ.

      *ಆತ್ಮೌಪಮ್ಯೇನ ಸರ್ವತ್ರ ಸಮಂ  ಪಶ್ಯತಿ ಯೋರ್ಜುನ/*

*ಸುಖಂ ವಾ ಯದಿ ವಾ ದು:ಖಂ ಸ ಯೋಗೀ ಪರಮೋ ಮತ://೩೨//*

       ಹೇ ಅರ್ಜುನಾ! ಯಾವ ಯೋಗಿಯು ತನ್ನಂತೆಯೇ ಸಂಪೂರ್ಣ ಪ್ರಾಣಿಗಳನ್ನು ಸಮದೃಷ್ಠಿಯಿಂದ ನೋಡುತ್ತಾನೋ ಮತ್ತು ಸುಖ ಅಥವಾ ದು:ಖವನ್ನೂ ಕೂಡ ಎಲ್ಲರಲ್ಲಿ ಸಮವಾಗಿ ನೋಡುತ್ತಾನೋ ಆ ಯೋಗಿಯು ಪರಮಶ್ರೇಷ್ಠನೆಂದು ತಿಳಿಯಲ್ಪಟ್ಟಿದ್ದಾನೆ.

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ : ಇಂಟರ್ನೆಟ್ ತಾಣ