ಗೀತಾಮೃತ - 22

ಗೀತಾಮೃತ - 22

*ಅಧ್ಯಾಯ ೬*

        *ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀ: ಸಮಾ:/*

*ಶುಚೀನಾಂ ಶ್ರೀ ಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ//೪೧//*

      ಯೋಗಭ್ರಷ್ಟನಾದ ಪುರುಷನು ಪುಣ್ಯವಂತರುಗಳ ಲೋಕಗಳನ್ನು ಅರ್ಥಾತ್ ಸ್ವರ್ಗಾದಿ ಉತ್ತಮವಾದ ಲೋಕಗಳನ್ನು ಪ್ರಪ್ತಮಾಡಿಕೊಂಡು ,  ಅವುಗಳಲ್ಲಿ ಬಹಳ ವರ್ಷಗಳವರೆಗೆ ವಾಸಮಾಡಿದ ನಂತರ ಶುದ್ಧವಾದ ಆಚರಣೆ ಮಾಡುವ ಶ್ರೀಮಂತ ಪುರುಷರ ಮನೆಯಲ್ಲಿ ಜನ್ಮವೆತ್ತುತ್ತಾನೆ.

*ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್/*

*ಏತದ್ದಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್//೪೨//*

     ಅಥವಾ ವೈರಾಗ್ಯವಂತನಾದ ಪುರುಷನು ಆ ಲೋಕಗಳಿಗೆ ಹೋಗದೆ ಜ್ಞಾನವಂತರಾದ ಯೋಗಿಗಳ ಕುಲದಲ್ಲಿಯೇ ಜನಿಸುತ್ತಾನೆ.ಆದರೆ ಈ ಪ್ರಕಾರದ ಯಾವ ಈ ಜನ್ಮವಿದೆಯೋ ಅದು ಜಗತ್ತಿನಲ್ಲಿ ನಿಸ್ಸಂದೇಹವಾಗಿ ಅತ್ಯಂತ ದುರ್ಲಭವಾಗಿದೆ.

***

 *ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್/*

*ಯತತೇ ಚ ತತೋ ಭೂಯ: ಸಂಸಿದ್ಧೌಕುರುನಂದನ//೪೩//*

    ಅಲ್ಲಿ ಆ ಹಿಂದಿನ ಶರೀರದಲ್ಲಿ ಸಂಗ್ರಹಿಸಿದ ಬುದ್ಧಿಸಂಯೋಗವನ್ನು ಅರ್ಥಾತ್ ಸಮಬುದ್ಧಿರೂಪವಾದ ಯೋಗದ ಸಂಸ್ಕಾರಗಳನ್ನು ಅನಾಯಾಸವಾಗಿಯೇ ಪಡೆಯುತ್ತಾನೆ ಮತ್ತು ಹೇ ಕುರುನಂದನ ! ಅದರ ಪ್ರಭಾವದಿಂದ ಅವನು ಪುನ: ಪರಮಾತ್ಮನ ಪ್ರಾಪ್ತಿರೂಪವಾದ ಸಿದ್ಧಿಗಾಗಿ ಮೊದಲಿಗಿಂತಲೂ ಹೆಚ್ಚಿನ ಪ್ರಯತ್ನ ಮಾಡುತ್ತಾನೆ.

     *ಪೂರ್ವಾಭ್ಯಾಸೇನ ತೇನೈವ ಹ್ರೀಯತೇ ಹ್ಯವಶೋಪಿ ಸ:/*

*ಜಿಜ್ಞಾಸುರಪಿ ಯೋಗಸ್ಯ ಶಬ್ಧಬ್ರಹ್ಮಾತಿವರ್ತತೇ//೪೪//*

    ಆ ಶ್ರೀಮಂತ ರ ಮನೆಯಲ್ಲಿ ಜನಿಸುವ ಯೋಗಭ್ರಷ್ಟನು ಪರಾಧೀನನಾಗಿದ್ದರೂ ಸಹ ಆ ಮೊದಲಿನ ಅಭ್ಯಾಸದಿಂದಲೇ ನಿಸ್ಸಂದೇಹವಾಗಿ ಭಗವಂತನ ಕಡೆಗೆ ಆಕರ್ಷಿಸಲ್ಪಡುತ್ತಾನೆ ಹಾಗೂ ಸಮಬುದ್ಧಿರೂಪವಾದ ಯೋಗದ ಜಿಜ್ಞಾಸುವು ಕೂಡ ವೇದದಲ್ಲಿ ಹೇಳಲಾಗಿರುವ ಸಕಾಮ ಕರ್ಮಗಳ ಫಲವನ್ನು ದಾಟಿ ಹೋಗುತ್ತಾನೆ.

***

 *ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷ:/*

*ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್//೪೫//*

    ಆದರೆ ಪ್ರಯತ್ನಪೂರ್ವಕವಾಗಿ ಅಭ್ಯಾಸಮಾಡುವ ಯೋಗಿಯಾದರೋ ಹಿಂದಿನ ಅನೇಕ ಜನ್ಮಗಳ ಸಂಸ್ಕಾರ ಬಲದಿಂದ ಇದೇ ಜನ್ಮದಲ್ಲಿ ಸಂಸಿದ್ಧನಾಗಿ ,ಸಂಪೂರ್ಣ ಪಾಪಗಳಿಂದ ರಹಿತನಾಗಿ ನಂತರ ತತ್ಕಾಲದಲ್ಲಿಯೇ ಪರಮ ಗತಿಯನ್ನು ಪಡೆಯುತ್ತಾನೆ.

    *ತಪಸ್ವಿಭ್ಯೋಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕ:/*

*ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ://೪೬//*

    ಯೋಗಿಯು ತಪಸ್ವಿಗಳಿಗಿಂತ ಶ್ರೇಷ್ಠ ನಾಗಿದ್ದಾನೆ,ಶಾಸ್ತ್ರ ಜ್ಞಾನಿಗಳಿಗಿಂತಲೂ ಶ್ರೇಷ್ಠ ನೆಂದು ತಿಳಿಯಲಾಗಿದೆ ಮತ್ತು ಸಕಾಮ ಕರ್ಮ ಮಾಡುವವರಿಗಿಂತಲೂ ಸಹ ಯೋಗಿಯು ಶ್ರೇಷ್ಠ ನಾಗಿದ್ದಾನೆ.ಆದ್ದರಿಂದ ಹೇ ಅರ್ಜುನಾ! ನೀನೂ ಯೋಗಿಯಾಗು.

***

  *ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ/*

*ಶ್ರದ್ಧಾವಾನ್ ಭಜತೇ ಯೋ ಮಾಂ  ಸ ಮೇ ಯುಕ್ತತಮೋ ಮತ://೪೭//*

   ಸಂಪೂರ್ಣ ಯೋಗಿಗಳಲ್ಲಿ ಕೂಡ ಯಾವ ಶ್ರದ್ಧಾವಂತನಾದ ಯೋಗಿಯು ನನ್ನಲ್ಲಿ ತೊಡಗಿದ್ದ ಅಂತರಾತ್ಮನಿಂದ ನನ್ನನ್ನು ನಿರಂತರ ಭಜಿಸುತ್ತಾನೋ ಆ ಯೋಗಿಯು ನನಗೆ ಪರಮಶ್ರೇಷ್ಠನೆಂದು ಮಾನ್ಯನಾಗಿದ್ದಾನೆ.

      *ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು*

*ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ*

*ಆತ್ಮಸಂಯಮಯೋಗೋ ನಾಮ ಷಷ್ಠೋಧ್ಯಾಯ://೬//*

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ: ಇಂಟರ್ನೆಟ್ ತಾಣ