ಗೀತಾಮೃತ - 26
*ಅಧ್ಯಾಯ ೭*
*ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ/*
*ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ//೨೭//*
ಹೇ ಭರತವಂಶೀಯನಾದ ಅರ್ಜುನನೇ! ಜಗತ್ತಿನಲ್ಲಿ ಇಚ್ಛೆ ಮತ್ತು ದ್ವೇಷ ದಿಂದ ಉಂಟಾಗುವ ಸುಖ ದು:ಖಾದಿ ದ್ವಂದ್ವ ರೂಪೀ ಮೋಹದಿಂದ ಸಂಪೂರ್ಣ ಪ್ರಾಣಿಗಳು ಅತ್ಯಂತ ಅಜ್ಞತೆಯನ್ನು ಹೊಂದುತ್ತಿದ್ದಾರೆ.
*ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್/*
*ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾ://೨೮//*
ಆದರೆ, ನಿಷ್ಕಾಮ ಭಾವದಿಂದ ಶ್ರೇಷ್ಠ ವಾದ ಕರ್ಮಗಳ ಆಚರಣೆ ಮಾಡುವ ಯಾವ ಪುರುಷರ ಪಾಪಗಳು ನಷ್ಟವಾಗಿ ಹೋಗಿವೆಯೋ,ರಾಗ ದ್ವೇಷ ಜನಿತ ದ್ವಂದ್ವ ರೂಪೀ ಮೋಹದಿಂದ ಮುಕ್ತರಾದ ದೃಢನಿಶ್ಚಯವುಳ್ಳ ಆ ಭಕ್ತರು ನನ್ನನ್ನು ಎಲ್ಲ ಪ್ರಕಾರದಿಂದಲೂ ಭಜಿಸುತ್ತಾರೆ.
***
*ಜರಾಮರಣ ಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ/*
*ತೇ ಬ್ರಹ್ಮತದ್ವಿದು: ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್//೨೯//*
ಯಾರು ನನ್ನಲ್ಲಿ ಶರಣಾಗಿ ಮುಪ್ಪು ಮತ್ತು ಸಾವಿನಿಂದ ಬಿಡುಗಡೆ ಹೊಂದಲು ಪ್ರಯತ್ನ ಮಾಡುತ್ತಾರೋ ಆ ಪುರುಷರು ಆ ಬ್ರಹ್ಮವನ್ನೂ ಸಂಪೂರ್ಣವಾಗಿ ಆಧ್ಯಾತ್ಮವನ್ನೂ ಹಾಗೂ ಸಂಪೂರ್ಣ ಕರ್ಮವನ್ನು ತಿಳಿಯುತ್ತಾರೆ.
*ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದು:/*
*ಪ್ರಯಾಣಕಾಲೇಪಿ ಚ ಮಾಂ ತೇ ವಿದುರ್ಯುಕ್ತಚೇತನ://೩೦//*
ಯಾವ ಪುರುಷರು ಅಧಿಭೂತ ಮತ್ತು ಅಧಿದೈವದ ಸಹಿತ ಹಾಗೂ ಅಧಿಯಜ್ಞದ ಸಹಿತ ನನ್ನನ್ನು ಅಂತ್ಯಕಾಲದಲ್ಲಿಯೂ ಸಹ ತಿಳಿಯುತ್ತಾರೆಯೋ ಆ ಯುಕ್ತಚಿತ್ತರಾದ ಪುರುಷರು ನನ್ನನ್ನೇ ಅರಿಯುತ್ತಾರೆ ಅರ್ಥಾತ್ ಪಡೆಯುತ್ತಾರೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ ಜ್ಞಾನವಿಜ್ಞಾನಯೋಗೋನಾಮ ಸಪ್ತಮೋಧ್ಯಾಯ://೭//*
***
*ಅಧ್ಯಾಯ ೮*
*//ಅಥ ಅಷ್ಟಮೋಧ್ಯಾಯ://**
*ಅಕ್ಷರಬ್ರಹ್ಮಯೋಗವು*
*ಅರ್ಜುನ ಉವಾಚ*
*ಕಿಂ ತದ್ಭ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ/*
*ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ//೧//*
ಅರ್ಜುನನು ಹೇಳದನು _
ಹೇ ಪುರುಷೋತ್ತಮ! ಆ ಬ್ರಹ್ಮವು ಯಾವುದು? ಆಧ್ಯಾತ್ಮ ವೆಂದರೆ ಏನು ಮತ್ತು ಕರ್ಮವೆಂದರೆ ಯಾವುದು? ಅಧಿಭೂತವೆಂಬ ಹೆಸರಿನಿಂದ ಯಾವುದನ್ನು ಹೇಳಲಾಗಿದೆ? ಮತ್ತು ಅಧಿದೈವವೆಂದು ಯಾವುದನ್ನು ಹೇಳುತ್ತಾರೆ?
*ಅಧಿಯಜ್ಞ: ಕಥಂ ಕೋತ್ರ ದೇಹಸ್ಮಿನ್ ಮಧುಸೂದನ/*
*ಪ್ರಯಾಣಕಾಲೇ ಚ ಕಥಂ ಜ್ಞೇಯೋಸಿ ನಿಯತಾತ್ಮಭಿ://೨//*
ಹೇ ಮಧುಸೂಧನ ! ಇಲ್ಲಿ ಅಧಿಯಜ್ಞ ಎಂದರೆ ಯಾರು? ಮತ್ತು ಅವನು ಈ ಶರೀರದಲ್ಲಿ ಹೇಗಿದ್ದಾನೆ? ಹಾಗೂ ಯುಕ್ತಚಿತ್ತವುಳ್ಳ ಪುರುಷರ ಮೂಲಕ ಅಂತ್ಯಕಾಲದಲ್ಲಿ ನೀನು ಯಾವ ಪ್ರಕಾರದಿಂದ ತಿಳಿಯಲು ಬರುತ್ತೀಯೆ?
***
*ಶ್ರೀಭಗವಾನುವಾಚ*
*ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ/*
*ಭೂತಭಾವೋದ್ಭವಕರೋ ವಿಸರ್ಗ: ಕರ್ಮಸಂಜ್ಞಿತ://೩//*
ಶ್ರೀ ಭಗವಂತನು ಹೇಳಿದನು _
ಪರಮ ಅಕ್ಷರವು 'ಬ್ರಹ್ಮ' ವಾಗಿದೆ ತನ್ನ ಸ್ವರೂಪ ಅರ್ಥಾತ್ ಜೀವಾತ್ಮನು ಆಧ್ಯಾತ್ಮವೆಂಬ ಹೆಸರಿನಿಂದ ಹೇಳಲ್ಪಡುತ್ತಾನೆ ಹಾಗೂ ಭೂತಗಳ ಭಾವವನ್ನು ಉಂಟುಮಾಡುವ ಯಾವ ತ್ಯಾಗ ಅರ್ಥಾತ್ ಸೃಷ್ಟಿರಚನಾರೂಪೀ ಕ್ರಿಯೆಯಿದೆಯೋ ಅದು 'ಕರ್ಮ' ಎಂಬ ಹೆಸರಿನಿಂದ ಹೇಳಲ್ಪಟ್ಟಿದೆ.
*ಆಧಿಭೂತಂ ಕ್ಷರೋ ಭಾವ: ಪುರುಷಶ್ವಾಧಿದೈವತಮ್/*
*ಆಧಿಯಜ್ಞೋಹಮೇವಾತ್ರದೇಹೇ ದೇಹಭೃತಾಂ ವರ//೪//*
ಉತ್ಪತ್ತಿ _ ವಿನಾಶ ಧರ್ಮವುಳ್ಳ ಎಲ್ಲ ಪದಾರ್ಥಗಳೂ ಆಧಿಭೂತವಾಗಿವೆ.ಹಿರಣ್ಯಮಯ ಪುರುಷನು ಆಧಿದೈವವಾಗಿದ್ದಾನೆ ಮತ್ತು ದೇಹಧಾರಿಗಳಲ್ಲಿ ಶ್ರೇಷ್ಠ ನಾದ ಅರ್ಜುನ ನೇ! ಈ ಶರೀರದಲ್ಲಿ ವಾಸಿದೇವನಾದ ನಾನೇ ಅಂತರ್ಯಾಮಿ ರೂಪದಿಂದ ಅಧಿಯಜ್ಞನಾಗಿದ್ದೇನೆ.
***
(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ