ಗೀತಾಮೃತ - 27

ಗೀತಾಮೃತ - 27

*ಅಧ್ಯಾಯ ೮*

      *ಅಂತಕಾಲೇ ಚ ಮಾಮೇವ ಸ್ಮದನ್ಮುಕ್ತ್ವಾ ಕಲೇವರಮ್/*

*ಯ: ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ  ಸಂಶಯ: //೫//*      ಯಾವ ಪುರುಷನು ಅಂತ್ಯಕಾಲದಲ್ಲಿಯೂ ಕೂಡ ನನ್ನನ್ನೇ ಸ್ಮರಿಸುತ್ತ ಶರೀರವನ್ನು ತ್ಯಾಗಮಾಡಿ ಬಿಡುತ್ತಾನೋ ಅವನು ನನ್ನ ಸಾಕ್ಷಾತ್ ಸ್ವರೂಪವನ್ನು ಪಡೆಯುತ್ತಾನೆ.ಇದರಲ್ಲಿ ಯಾವುದೇ ಸಂಶಯವೂ ಇರುವುದಿಲ್ಲ.

      *ಯಂ ಯಂ ವಾಪಿ ಸ್ಮರನ್ಭಾವಂ ತ್ಯಜಂತ್ಯಂತೆ ಕಲೇವರಂ/*

*ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತ://೬//*

   ಹೇ ಕುಂತೀಪುತ್ರನಾದ ಅರ್ಜುನ ! ಈ ಮನುಷ್ಯನು ಅಂತ್ಯಕಾಲದಲ್ಲಿ ಯಾವ ಯಾವ ಭಾವವನ್ನು ಸ್ಮರಣೆ ಮಾಡುತ್ತ ಶರೀರವನ್ನು ತ್ಯಜಿಸುತ್ತಾನೋ ಅದನ್ನೇ ಪಡೆಯುತ್ತಾನೆ; ಏಕೆಂದರೆ ಅವನು ಸದಾಕಾಲ ಅದೇ ಭಾವದಿಂದ ಭಾವಿತನಾಗಿದ್ದಾನೆ.

***

 *ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ/*

*ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯ ಸಂಶಯಮ್//೭//*

    ಆದ್ದರಿಂದ ಹೇ ಅರ್ಜುನನೇ ! ನೀನು ಎಲ್ಲ ಸಮಯದಲ್ಲಿ ನಿರಂತರವಾಗಿ ನನ್ನ ಸ್ಮರಣೆಮಾಡು ಮತ್ತು ಯುದ್ಧವನ್ನೂ ಮಾಡು.ಈ ಪ್ರಕಾರ ನನ್ನಲ್ಲಿ ಅರ್ಪಿತವಾದ ಮನಸ್ಸು _ ಬುದ್ಧಿಯಿಂದ ಯುಕ್ತನಾಗಿ ನೀನು ನಿಸ್ಸಂದೇಹವಾಗಿ ನನ್ನನ್ನೇ ಪಡೆಯುವೆ.

      *ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ/*

*ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್//೮//*

   ಹೇ ಪಾರ್ಥನೇ! ಪರಮೇಶ್ವರನ ಧ್ಯಾನದ ಅಭ್ಯಾಸ ರೂಪೀ ಯೋಗದಿಂದ ಯುಕ್ತನಾಗಿ ಬೇರೆಡೆಗೆ ಹೋಗದಿರುವ ಚಿತ್ತದಿಂದ ನಿರಂತರ ಚಿಂತನೆ ಮಾಡುತ್ತ ಮನುಷ್ಯನು ಪರಮ ಪ್ರಕಾಶ ಸ್ವರೂಪೀ ದಿವ್ಯ ಪುರುಷನನ್ನು ಅರ್ಥಾತ್ ಪರಮೇಶ್ವರ ನನ್ನೇ ಹೊಂದುತ್ತಾನೆ ಇದು ನಿಯಮವಾಗಿದೆ.

***

 *ಕವಿಂ ಪುರಾಣಮನುಶಾಸಿತಾರ*

*ಮಣೋರಣೀಯಾಂಸಮನುಸ್ಮರೇದ್ಯ://*

*ಸರ್ವಸ್ಯ ಧಾತಾರಮಚಿಂತ್ಯರೂಪ ಮಾದಿತ್ಯವರ್ಣಂ ತಮಸ: ಪರಸ್ತಾತ್//೯//*

    ಸರ್ವಜ್ಞ ನೂ,ಅನಾದಿಯೂ,ಎಲ್ಲರನ್ನು ಆಳುವವನೂ,ಸೂಕ್ಷ್ಮಕ್ಕಿಂತ ಅತಿಸೂಕ್ಷ್ಮ ನೂ,ಎಲ್ಲರ ಧಾರಣೆ _ ಪೋಷಣೆ ಮಾಡುವವನೂ, ಅಚಿಂತ್ಯಸ್ವರೂಪನೂ,ಸೂರ್ಯನಂತೆ ನಿತ್ಯಚೇತನ ಪ್ರಕಾಶರೂಪನೂ ಮತ್ತು ಅವಿದ್ಯೆಗಿಂತ ಪರ, ಶುದ್ಧನೂ ಆದ ಸಚ್ಚಿದಾನಂದಘನ ಪರಮೇಶ್ವರನ ಸ್ಮರಣೆಯನ್ನು ಯಾವ ಪುರುಷನು ಮಾಡುತ್ತಾನೋ _

     *ಪ್ರಯಾಣಕಾಲೇ ಮನಸಾಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ/*

*ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್//೧೦//*

ಆ ಭಕ್ತಿಯುಕ್ತನಾದ ಪುರುಷನು ಅಂತ್ಯಕಾಲದಲ್ಲಿಯೂ ಯೋಗಬಲದಿಂದ ಭ್ರೂಮಧ್ಯದಲ್ಲಿ ಪ್ರಾಣವನ್ನು ಒಳ್ಳೆಯ ಪ್ರಕಾರದಿಂದ ಸ್ಥಾಪನೆ ಮಾಡಿ ಮತ್ತೆ ನಿಶ್ಚಲವಾದ ಮನಸ್ಸಿನಿಂದ ಸ್ಮರಣೆ ಮಾಡುತ್ತ ಆ ದಿವ್ಯ ಸ್ವರೂಪನಾದ ಪರಮ ಪುರುಷ ಪರಮಾತ್ಮನನ್ನೇ ಪಡೆಯುತ್ತಾನೆ.

***

*ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾ:/*

*ಯದಿಚ್ಛಂತೋ ಬ್ರಹ್ಮಚರ್ಯಂ  ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ//೧೧//*

     ವೇದವನ್ನು ತಿಳಿದ ವಿದ್ವಾಂಸರು ಯಾವ ಸಚ್ಚಿದಾನಂದ ಘನರೂಪೀ ಪರಮಪದವನ್ನು ಅವಿನಾಶೀ ಎಂದು ಹೇಳುತ್ತಾರೋ, ಆಸಕ್ತಿರಹಿತರಾದ ಯತ್ನಶೀಲ ಸಂನ್ಯಾಸೀ ಮಹಾತ್ಮರು ಯಾವುದರಲ್ಲಿ ಪ್ರವೇಶ ಮಾಡುತ್ತಾರೋ ಮತ್ತು ಯಾವ ಪರಮಪದವನ್ನು ಬಯಸುವ ಬ್ರಹ್ಮಚಾರಿಗಳು ಬ್ರಹ್ಮಚರ್ಯದ ಆಚರಣೆಯನ್ನು ಮಾಡತ್ತರೋ ಆ ಪರಮ ಪದವನ್ನು ನಾನು ನಿನಗಾಗಿ ಸಂಕ್ಷೇಪವಾಗಿ ಹೇಳುವನು.

        *ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ/*

*ಮೂರ್ಧ್ವ್ನಾಧಾಯತ್ಮನ: ಪ್ರಾಣಮಾಸ್ಥಿತೋ ಯೋಗಧಾರಣಾಮ್//೧೨//*

      ಎಲ್ಲ ಇಂದ್ರಿಯಗಳ ದ್ವಾರಗಳನ್ನು ತಡೆದು ಹಾಗೂ ಮನಸ್ಸನ್ನು ಹೃದ್ದೇಶದಲ್ಲಿ ಸ್ಥಿರವಾಗಿಸಿ ಮತ್ತೆ ಆ ಗೆಲ್ಲಲ್ಪಟ್ಟ ಮನಸ್ಸಿನ ಮೂಲಕ ಪ್ರಾಣವನ್ನು ಮಸ್ತಕದಲ್ಲಿ ಸ್ಥಾಪಿಸಿಕೊಂಡು ಪರಮಾತ್ಮನ ಸಂಬಂಧವಾದ ಯೋಗಧಾರಣೆಯಲ್ಲಿ ಸ್ಥಿರನಾಗಿದ್ದರೆ…

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ: ಇಂಟರ್ನೆಟ್ ತಾಣ