ಗೀತಾಮೃತ - 29
*ಅಧ್ಯಾಯ ೮*
*ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹು: ಪರಮಾಂ ಗತಿಮ್/*
*ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ//೨೧//*
ಯಾವ ಅವ್ಯಕ್ತವು 'ಅಕ್ಷರ' ವೆಂಬ ಹೆಸರಿನಿಂದ ಹೇಳಲಾಗಿದೆಯೋ ಅದೇ ಅಕ್ಷರವೆಂಬ ಹೆಸರಿನ ಅವ್ಯಕ್ತ ಭಾವವನ್ನು ಪರಮಗತಿಯೆಂದು ಹೇಳುತ್ತಾರೆ ಹಾಗೂ ಯಾವ ಸನಾತನವಾದ ಅವ್ಯಕ್ತಭಾವವನ್ನು ಪಡೆದ ಮನುಷ್ಯನು ಪುನರ್ಜನ್ಮ ಪಡೆಯುವುದಿಲ್ಲವೋ ಅದೇ ನನ್ನ ಪರಮ ಧಾಮವಾಗಿದೆ.
*ಪುರುಷ: ಸ ಪರ: ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ/*
*ಯಸ್ಯಾಂತ:ಸ್ಥಾನಿ ಭೂತಾನಿ ಯೇನ ಸರ್ವಮಿದಂ ಥಮ್//೨೨//*
ಹೇ ಪಾರ್ಥನೇ! ಯಾವ ಪರಮಾತ್ಮನ ಅಂತರ್ಗತವಾಗಿ ಎಲ್ಲ ಜೀವಿಗಳಿವೆಯೋ ಮತ್ತು ಯಾವ ಸಚ್ಚಿದಾನಂದಘನ ಪರಮಾತ್ಮನಿಂದ ಈ ಸಮಸ್ತ ಜಗತ್ತು ಪರಿಪೂರ್ಣ ವಾಗಿದೆಯೋ ಆ ಸನಾತನನೂ,ಅವ್ಯಕ್ತನೂ ಆದ ಪರಮ ಪುರುಷನಾದರೋ ಅನನ್ಯವಾದ ಭಕ್ತಿಯಿಂದಲೇ ಪ್ರಾಪ್ತನಾಗಲು ಯೋಗ್ಯನಾಗಿದ್ದಾನೆ.
***
*ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನ:/*
*ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ//೨೩//*
ಹೇ ಅರ್ಜುನನೇ ! ಯಾವ ಕಾಲದಲ್ಲಿ ಶರೀರವನ್ನು ತ್ಯಾಗ ಮಾಡಿ ಹೊರಟುಹೋದ ಯೋಗಿಜನರಾದರೋ ಹಿಂದಿರುಗಿ ಬಾರದಿರುವ ಗತಿಯನ್ನು ಮತ್ತು ಯಾವ ಕಾಲ ದಲ್ಲಿ ಹೊರಟು ಹೋದವರು ಹಿಂದಿರುಗಿ ಬರುವ ಗತಿಯನ್ನೇ ಪಡೆಯುತ್ತಾರೆಯೋ ಆ ಕಾಲವನ್ನು ಅರ್ಥಾತ್ ಎರಡೂ ಮಾರ್ಗಗಳನ್ನು ಹೇಳುವೆನು.
*ಅಗ್ನಿರ್ಜ್ಯೋತಿರಹ: ಶುಕ್ಲ: ಷಣ್ಮಾಸಾ ಉತ್ತರಾಯಣ ಮ್/*
*ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮಬ್ರಹ್ಮವಿದೋ ಜನಾ://೨೪//*
ಯಾವ ಮಾರ್ಗದಲ್ಲಿ ಜ್ಯೋತಿರ್ಮಯ ಅಗ್ನಿ ಅಭಿಮಾನಿ ದೇವತೆಯಾಗಿದ್ದಾನೋ,ಹಗಲಿನ ಅಭಿಮಾನಿ ದೇವತೆಯಾಗಿದ್ದಾನೋ,ಶುಕ್ಲಪಕ್ಷದ ಅಭಿಮಾನಿ ದೇವತೆಯಿದ್ದಾನೋ ಮತ್ತು ಉತ್ತರಾಯಣದ ಆರು ತಿಂಗಳ ಅಭಿಮಾನೀ ದೇವತೆಯಾಗಿದ್ದಾನೋ ಆ ಮಾರ್ಗದಲ್ಲಿ ಸತ್ತಬಳಿಕ ಹೋದ ಬ್ರಹ್ಮವೇತ್ತರಾದ ಯೋಗಿಜನರು ಮೇಲೆ ಹೇಳಿದ ದೇವತೆಗಳ ಮೂಲಕ ಕ್ರಮವಾಗಿ ಕರೆದುಕೊಂಡು ಹೋದವರಾಗಿ ಬ್ರಹ್ಮವನ್ನು ಪಡೆಯುತ್ತಾರೆ.
***
*ಧೂಮೋ ರಾತ್ರಿಸ್ತಥಾ ಕೃಷ್ಣ: ಷಣ್ಮಾಸಾ ದಕ್ಷಿಣಾಯನಮ್/*
*ತತ್ರ ಚಾಂದ್ರಮಸಂ ಜ್ಯೋತಿ ರ್ಯೋಗೀ ಪ್ರಾಪ್ಯ ನಿವರ್ತತೇ//೨೫//*
ಯಾವ ಮಾರ್ಗದಲ್ಲಿ ಧೂಮಾಭಿಮಾನೀ ದೇವತೆಯಾಗಿದೆಯೋ,ರಾತ್ರಿಯ ಅಭಿಮಾನೀ ದೇವತೆಯಾಗಿದೆಯೋ,ಹಾಗೂ ಕೃಷ್ಣಪಕ್ಷದ ಅಭಿಮಾನೀ ದೇವತೆಯಾಗಿದೆಯೋ,ದಕ್ಷಿಣಾಯನದ ಆರು ತಿಂಗಳ ಅಭಿಮಾನೀ ದೇವತೆಯಾಗಿದೆಯೋ,ಆ ಮಾರ್ಗದಲ್ಲಿ _ ಸತ್ತು ಪ್ರಯಾಣ ಬೆಳೆಸಿದ ಸಕಾಮ ಕರ್ಮಮಾಡಿದ ಯೋಗಿಯು _ ಮೇಲೆ ತಿಳಿಸಿದ ದೇವತೆಗಳ ಮೂಲಕ ಕ್ರಮವಾಗಿ ಕರೆದುಕೊಂಡು ಹೋದವರಾಗಿ ಚಂದ್ರನ ಜ್ಯೋತಿ ಯನ್ನು ಪಡೆದುಕೊಂಡು, ಸ್ವರ್ಗದಲ್ಲಿ ತಮ್ಮ ಶುಭ ಕರ್ಮಗಳ ಫಲವನ್ನು ಭೋಗಿಸಿ ಹಿಂದಿರುಗುತ್ತಾರೆ.
*ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತ: ಶಾಶ್ವತೇ ಮತೇ/*
*ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನ://೨೬//*
ಏಕೆಂದರೆ ಜಗತ್ತಿನ ಈ ಎಡು ಪ್ರಕಾರದ,ಶುಕ್ಲ ಮತ್ತು ಕೃಷ್ಣ _ ಅರ್ಥಾತ್ ದೇವಯಾನ ಮತ್ತು ಪಿತೃಯಾನ ಮಾರ್ಗಗಳು ಸನಾತನವಾದುವು ಎಂದು ತಿಳಿಯಲಾಗಿದೆ.ಇವುಗಳಲ್ಲಿ ಒಂದರ ಮೂಲಕ ಪ್ರಯಾಣ ಬೆಳೆಸಿದವರು ಅರ್ಥಾತ್ ಅರ್ಚಿಮಾರ್ಗದಿಂದ ಹೋದವರು ಮರಳಿ ಬರಬೇಕಾಗಿರುವುದಿಲ್ಲವೋ ಅಂತಹ ಆ ಪರಮಗತಿಯನ್ನು ಪಡೆಯುತ್ತಾರೆ ಮತ್ತು ಎರಡನೇ ಮಾರ್ಗದ ಮೂಲಕ ಹೊರಟು ಹೋದವನು ಅರ್ಥಾತ್ ಧೂಮಮಾರ್ಗದಿಂದ ಹೋದ ಸಕಾಮಕರ್ಮಿಯು ಮತ್ತೆ ಹಿಂದಿರುಗಿ ಬರುತ್ತಾನೆ ಅರ್ಥಾತ್ ಜನ್ಮ_ಮೃತ್ಯುವನ್ನು ಪಡೆಯುತ್ತಾನೆ.
***
(ಸಾರ ಸಂಗ್ರಹ) ವಿಜಯಾ ಶೆಟ್ಟಿ, ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್