ಗೀತಾಮೃತ - 30

ಗೀತಾಮೃತ - 30

 *ಅಧ್ಯಾಯ ೯*

*//ಅಥ ನವಮೋಧ್ಯಾಯ://*

*ರಾಜವಿದ್ಯಾ ರಾಜಗುಹ್ಯಯೋಗವು*

*ಶ್ರೀ ಭಗವಾನುವಾಚ*

*ಇದಂ ತಂ ತೇ ಗುಹ್ಯತಮಂ ಪ್ರವಕ್ಷ್ಯಾ ಮ್ಯನಸೂಯವೇ/*

*ಜ್ಞಾನಂ ವಿಜ್ಞಾನಸಹಿತಂ ಯಜ್ಞ್ಜತ್ವಾಮೋಕ್ಷ್ಯಸೇಶುಭಾತ್//*

    ಶ್ರೀ ಭಗವಂತನು ಹೇಳಿದನು _

ದೋಷ ದೃಷ್ಟಿ ರಹಿತ ಭಕ್ತನಾದ ನಿನಗೆ ಈ ಪರಮ ಗೋಪ್ಯವಾದ , ವಿಜ್ಞಾನ ಸಹಿತವಾದ ಜ್ಞಾನವನ್ನು ಪುನ: ಚೆನ್ನಾಗಿ ಹೇಳುವೆನು,ಅದನ್ನು ತಿಳಿದು ನೀನು ದು:ಖರೂಪೀ ಜಗತ್ತಿನಿಂದ ಪಾರಾಗಿ ಹೋಗುವೆ.

  *ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ /*

*ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್//೨//*

      ಈ ವಿಜ್ಞಾನಸಹಿತವಾದ ಜ್ಞಾನವು ಎಲ್ಲ ವಿದ್ಯೆಗಳ ರಾಜನೂ ಎಲ್ಲ ರಹಸ್ಯಗಳ ರಾಜನೂ ,ಅತಿಪವಿತ್ರವೂ,ಅತ್ಯುತ್ತಮವೂ,ಪ್ರತ್ಯಕ್ಷ ಫಲವುಳ್ಳದ್ದೂ,ಧರ್ಮಯುಕ್ತವೂ ಮತ್ತು ಸಾಧನೆಮಾಡಲು ತುಂಬಾ ಸುಲಭವೂ ಮತ್ತು ಅವಿನಾಶಿಯೂ ಆಗಿದೆ.

***

    *ಅಶ್ರದ್ಧಾಧಾನಾ:  ಪುರುಷಾ ಧರ್ಮಸ್ಯಾಸ್ಯ ಪರಂತಪ /*

*ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ//೩//*

       ಹೇ ಪರಂತಪನೇ! ಈ ಮೇಲೆ ಹೇಳಿದ ಧರ್ಮದಲ್ಲಿ ಶ್ರದ್ಧಾ ರಹಿತರಾದ ಪುರುಷರು ನನ್ನನ್ನು ಪಡೆಯದೆ ಮೃತ್ಯುರೂಪೀ ಸಂಸಾರಚಕ್ರದಲ್ಲಿ ಸುತ್ತುತ್ತಿರುತ್ತಾರೆ.

*ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ//*

*ಮತ್ಸ್ಯಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತ://೪//*

     ನಿರಾಕಾರ ಪರಮಾತ್ಮನಾದ ನನ್ನಿಂದ ಈ ಎಲ್ಲ ಜಗತ್ತು,ನೀರಿನಿಂದ ವ್ಯಾಪಿಸಿರುವ ಮಂಜುಗಡ್ಡೆಯಂತೆ ಪರಿಪೂರ್ಣವಾಗಿದೆ ಮತ್ತು ಎಲ್ಲ ಭೂತ(ಪ್ರಾಣಿಗಳು)ಗಳು ನನ್ನೊಳಗೆ ಸಂಕಲ್ಪದ ಆಧಾರದಿಂದ ಸ್ಥಿತವಾಗಿವೆ, ಆದರೆ ವಾಸ್ತವವಾಗಿ ನಾನು ಅವುಗಳಲ್ಲಿ ಸ್ಥಿತನಾಗಿಲ್ಲ.

***

*ನ ಚ ಮತ್ಸ್ಯಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್/*

*ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನ://೫//*

      ಆ ಸಮಸ್ತ ಪ್ರಾಣಿಸಂಕುಲವು ನನ್ನಲ್ಲಿ ಸ್ಥಿತವಾಗಿಲ್ಲ; ಆದರೆ ಅವುಗಳ ಧಾರಣೆ ಮತ್ತು ಪೋಷಣೆ ಮಾಡುವ ಮತ್ತು ಅವುಗಳನ್ನು ಉತ್ಪತ್ತಿಮಾಡುವವನಾದರೂ ನನ್ನ ಆತ್ಮವೂ ವಾಸ್ತವವಾಗಿ ಭೂತಗಳಲ್ಲಿ ಸ್ಥಿತವಾಗಿಲ್ಲ ಎಂಬ ನನ್ನ ಈಶ್ವರೀಯ ಯೋಗಶಕ್ತಿಯನ್ನು ನೋಡು.

*ಯಥಾ ಕಾಶಸ್ಥಿತೋ ನಿತ್ಯಂ ವಾಯು: ಸರ್ವತ್ರಗೋ ಮಹಾನ್/* *ತಥಾ ಸರ್ವಾಣಿ ಭೂತಾನಿ ಮತ್ಸ್ಯಾನೀತ್ಯುಪದಾರಯ//೬//*

 ಹೇಗೆ ಆಕಾಶದಿಂದ ಉತ್ಪನ್ನವಾಗಿ,ಎಲ್ಲೆಲ್ಲೂ ಸಂಚರಿಸುವ  ಮಹಾನ್ ವಾಯುವು ಸದಾಕಾಲ ಆಕಾಶದಲ್ಲಿಯೇ ಸ್ಥಿತವಾಗಿರುತ್ತದೋ ಹಾಗೆಯೇ ನನ್ನ ಸಂಕಲ್ಪದ ಮೂಲಕ ಉತ್ಪನ್ನವಾಗುವ ಸಂಪೂರ್ಣ ಭೂತಗಳು ನನ್ನಲ್ಲಿ ಸ್ಥಿತವಾಗಿವೆಯೆಂದು ತಿಳಿ.

***

*ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್/*ಕಲ್ಪಕ್ಷಯೇ ಪುನಸ್ತಾನಿ ಕಲ್ಪದೌ ವಿಸೃಜಾಮ್ಯಹಮ್//೭//*

   ಹೇ ಅರ್ಜುನನೇ! ಕಲ್ಪಗಳ ಅಂತ್ಯದಲ್ಲಿ ಸಮಸ್ತ ಜೀವಕೋಟಿಗಳು ನನ್ನ ಪ್ರಕೃತಿಯನ್ನು ಪಡೆಯುತ್ತವೆ,ಅರ್ಥಾತ್ ಪ್ರಕೃತಿಯಲ್ಲಿ ಲೀನವಾಗುತ್ತವೆ ಮತ್ತು ಕಲ್ಪಗಳ ಆದಿಯಲ್ಲಿ ಪುನ: ಅವುಗಳನ್ನು ನಾನು ಸೃಜಿಸುತ್ತೇನೆ.

     *ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನ: ಪುನ: /*

*ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್//೮//*

  ನನ್ನ ಪ್ರಕೃತಿಯನ್ನು ಅಂಗೀಕರಿಸಿಕೊಂಡು ಸ್ವಭಾವದ ಬಲದಿಂದ ಪರತಂತ್ರವಾದ ಈ ಸಂಪೂರ್ಣ ಭೂತಸಮುದಾಯವನ್ನು ಬಾರಿ ಬಾರಿಗೂ ಅವುಗಳ ಕರ್ಮಗಳಿಗನುಸಾರವಾಗಿ ರಚಿಸುತ್ತೇನೆ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್