ಗೀತಾಮೃತ - 31

ಗೀತಾಮೃತ - 31

 *ಅಧ್ಯಾಯ ೯*

       *ನ ಚ ಮಾಂ ತಾನಿ ಕರ್ಮಾಣಿ ನಿಬದ್ನಂತಿ ಧನಂಜಯ/*

*ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು//೯//*

   ಹೇ ಅರ್ಜುನನೇ ! ಆ ಕರ್ಮಗಳಲ್ಲಿ ಆಸಕ್ತಿರಹಿತನಾಗಿ ಮತ್ತು ಉದಾಸೀನನಂತೆ ಸ್ಥಿತನಾಗಿರುವ ಪರಮಾತ್ಮನಾದ ನನ್ನನ್ನು ಆ ಕರ್ಮಗಳು ಬಂಧಿಸುವುದಿಲ್ಲ.

        *ಮಯಾಧ್ಯಕ್ಷೇಣ ಪ್ರಕೃತಿ: ಸೂಯತೇ ಸಚರಾಚರಮ್/*

*ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ//೧೦//*

   ಹೇ ಅರ್ಜುನನೇ ! ಅಧಿಷ್ಠಾತೃನಾದ ನನ್ನ ಅಧ್ಯಕ್ಷತೆಯಲ್ಲಿ ಪ್ರಕೃತಿಯು ಚರಾಚರಸಹಿತ ಸರ್ವಜಗತ್ತನ್ನು ರಚಿಸುತ್ತದೆ ಮತ್ತು ಈ ಕಾರಣದಿಂದಲೇ ಈ ಸಂಸಾರ ಚಕ್ರವು ತಿರುಗುತ್ತಾ ಇದೆ.

***

 *ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾ:/*

*ಭಜಂತ್ಯ ನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್//೧೩//*

       ಆದರೆ ಹೇ ಕುಂತೀ ಪುತ್ರನೇ ! ದೈವೀ ಪ್ರಕೃತಿಯನ್ನು ಆಶ್ರಯಿಸಿರುವ  ಮಹಾತ್ಮರು ನನ್ನನ್ನು ಎಲ್ಲಾ ಭೂತಗಳ ಸನಾತನ ಕಾರಣ ಮತ್ತು ನಾಶರಹಿತವಾದ ಅಕ್ಷರಸ್ವರೂಪನೆಂದು ತಿಳಿದುಕೊಂಡು ಅನನ್ಯ ಮನಸ್ಸಿನಿಂದ ಯುಕ್ತರಾಗಿ ನಿರಂತರ ಭಜಿಸುತ್ತಾರೆ.

     *ಸತತಂ ಕೀರ್ತಿಯಂತೋ ಮಾಂ ಯತಂತಶ್ಚ ದೃಢವ್ರತಾ:/*

*ನಮಸ್ಯಂತಶ್ಚ ಮಾಂ ಭಕ್ತ್ನಾ ನಿತ್ಯಯುಕ್ತಾ ಉಪಾಸತೇ//೧೪//*

   ಆ ದೃಢ ನಿಶ್ಚಯವುಳ್ಳ ಭಕ್ತಜನರು ನಿರಂತರ ನನ್ನ ನಾಮ  ಮತ್ತು ಗುಣಗಳ ಕೀರ್ತನೆ ಮಾಡುತ್ತಾ ಹಾಗೂ ನನ್ನ ಪ್ರಾಪ್ತಿಗಾಗಿ ಪ್ರಯತ್ನಮಾಡುತ್ತಾ  ಮತ್ತು ಪದೇ ಪದೇ ನನಗೆ ನಮಸ್ಕರಿಸುತ್ತಾ , ಸದಾ ಕಾಲ ನನ್ನ ಧ್ಯಾನದಲ್ಲಿ ಯುಕ್ತರಾಗಿ ಅನನ್ಯ ಪ್ರೇಮದಿಂದ ನನ್ನ ಉಪಾಸನೆಯನ್ನು ಮಾಡುತ್ತಾರೆ.

***

*ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ/*

*ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್//೧೫//*

     ಇತರ ಜ್ಞಾನಯೋಗಿಗಳು ,ನಿರ್ಗುಣ ನಿರಾಕಾರ ಬ್ರಹ್ಮನಾದ ನನ್ನನ್ನು ಜ್ಞಾನಯಜ್ಞದ ಮೂಲಕ ಅಭಿನ್ನಭಾವದಿಂದ ಪೂಜಿಸುತ್ತಿದ್ದರೂ ನನ್ನ ಉಪಾಸನೆ ಮಾಡುತ್ತಾರೆ ಮತ್ತು ಬೇರೆ ಮನುಷ್ಯರು ಅನೇಕ ಪ್ರಕಾರದಿಂದ ಸ್ಥಿತನಾಗಿರುವ , ವಿರಾಟ್ ಸ್ವರೂಪೀ ಪರಮೇಶ್ವರ ನಾದ ನನ್ನನ್ನು ಪೃಥಕ್ಭಾವದಿಂದ ಉಪಾಸನೆ ಮಾಡುತ್ತಾರೆ.

*ಅಹಂ ಕ್ರತುಹರಂ ಯಜ್ಞ: ಸ್ವಧಾಹಮಹಮೌಷಧಮ್/*

*ಮಂತ್ರೋಹಮಹಮೇವಾಜ್ಯಮಹಮಗ್ನಿರಹಂ ಹುತಮ್//೧೬//*

    ಕ್ರತುವು ನಾನಾಗಿದ್ದೇನೆ,ಯಜ್ಞವೂ ನಾನೇ,ಸ್ವಧಾಕಾರವು ನಾನೇ,ಔಷಧವು ನಾನೇ, ಮಂತ್ರವು ನಾನೇ,ಘೃತವು ನಾನೇ,ಅಗ್ನಿಯು ನಾನೇ,ಮತ್ತು ಹವನರೂಪೀ ಕ್ರಿಯೆಯೂ ನಾನೇ ಆಗಿದ್ದೇನೆ.

***

*ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹ:/*

*ವೇದ್ಯಂ ಪವಿತ್ರಮೋಂಕಾರ ಋಕ್ಷಾಮ ಯಜುರೇವ ಚ//೧೭//*

       ಈ ಸಂಪೂರ್ಣ ಜಗತ್ತನ್ನು ಧರಿಸುವವರು ಮತ್ತು ಕರ್ಮಗಳ ಫಲವನ್ನು ಕೊಡುವವನು,ತಂದೆ,ತಾಯಿ, ಅಜ್ಜನೂ,ತಿಳಿಯಲು ಯೋಗ್ಯನಾದವನೂ ,ಪವಿತ್ರವಾದ ಓಂಕಾರವೂ ಹಾಗೂ ಋಗ್ವೇದ ,ಸಾಮವೇದ ಮತ್ತು ಯಜುರ್ವೇದವೂ ನಾನೇ ಆಗಿದ್ದೇನೆ.

    *ಗತಿರ್ಭರ್ತಾ ಪ್ರಭು: ಸಾಕ್ಷೀ ನಿವಾಸ: ಶರಣಂ ಸುಹೃತ್/*

*ಪ್ರಭವ: ಪ್ರಲಯ: ಸ್ಥಾನಂ ನಿಧಾನಂ  ಬೀಜಮವ್ಯಯಮ್//೧೮//*

    ಪಡೆಯಲು ಯೋಗ್ಯನಾದ ಪರಮಧಾಮವೂ ,ಪಾಲನೆ ಪೋಷಣೆ ಮಾಡುವವನೂ ,ಎಲ್ಲರ ಒಡೆಯನೂ, ಶುಭಾಶುಭಗಳನ್ನು ನೋಡುವವನೂ,ಎಲ್ಲರ ವಾಸಸ್ಥಾನವೂ, ಶರಣಾಗಲು ಯೋಗ್ಯನಾದವನೂ,ಪ್ರತ್ಯುಪಕಾರವನ್ನು ಬಯಸದೆ ಹಿತಮಾಡುವವನೂ ಎಲ್ಲರ ಉತ್ಪತ್ತಿ _ ಪ್ರಳಯಗಳಿಗೆ ಕಾರಣನೂ,ಇರುವಿಕೆಗೆ ಆಧಾರನೂ , ನಿಧಾನನೂ ಮತ್ತು ಅವಿನಾಶೀ ಕಾರಣವೂ ಸಹ ನಾನೇ ಆಗಿದ್ದೇನೆ

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್