ಗೀತಾಮೃತ- 33

ಗೀತಾಮೃತ- 33

*ಅಧ್ಯಾಯ ೯*

      *ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್/*

*ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್//೨೭//* ಹೇ ಅರ್ಜುನಾ! ನೀನು ಯಾವ ಕರ್ಮವನ್ನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ,ಯಾವುದನ್ನು ಹೋಮ ಮಾಡುತ್ತೀಯೋ,ಯಾವುದನ್ನು ದಾನಮಾಡುತ್ತೀಯೋ ಮತ್ತು ತಪಸ್ಸನ್ನು ಮಾಡುತ್ತೀಯೋ ಅವೆಲ್ಲವನ್ನೂ ನನಗೆ ಅರ್ಪಣೆಮಾಡು.

*ಶುಭಾಶುಭಫಲೈರೇವಂ  ಮೋಕ್ಷ್ಯಸೇ ಕರ್ಮಬಂಧನೈ:/*

*ಸನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ//೨೮//*

ಈ ಪ್ರಕಾರವಾಗಿ ಯಾವುದರಲ್ಲಿ ಸಮಸ್ತ ಕರ್ಮಗಳು ಭಗವಂತನಾದ ನನ್ನಲ್ಲಿ ಅರ್ಪಿತವಾಗುತ್ತವೆಯೋ ಅಂತಹ ಸಂನ್ಯಾಸಯೋಗದಿಂದ ಕೂಡಿದ ಚಿತ್ತವುಳ್ಳವನಾದ ನೀನು ಶುಭಾಶುಭ ಫಲರೂಪವಾದ ಕರ್ಮಬಂಧನದಿಂದ ಮುಕ್ತನಾಗಿಬಿಡುವೆ ಮತ್ತು ಅವುಗಳಿಂದ ಮುಕ್ತನಾಗಿ ನನ್ನನ್ನೇ ಪಡೆಯುವೆ.

***

 *ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿನ ಪ್ರಿಯ:/*

*ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್//೨೯//*

    ನಾನು ಎಲ್ಲಾ ಪ್ರಾಣಿಗಳಲ್ಲಿಯೂ ಸಮಭಾವದಿಂದ ವ್ಯಾಪಕವಾಗಿದ್ದೇನೆ. ನನಗೆ ಅಪ್ರಿಯರಾದವರು ಯಾರೂ ಇಲ್ಲ ಮತ್ತು ಪ್ರಿಯರಾದವರೂ ಯಾರೂ ಇಲ್ಲ; ಆದರೆ ಯಾವ ಭಕ್ತರು ನನ್ನನ್ನು ಪ್ರೇಮಭಾವದಿಂದ ಭಜಿಸುತ್ತಾರೋ ಅವರು ನನ್ನಲ್ಲಿದ್ದಾರೆ ಮತ್ತು ನಾನು ಕೂಡ ಅವರಲ್ಲಿ ಪ್ರತ್ಯಕ್ಷವಾಗಿ ಪ್ರಕಟವಾಗಿದ್ದೇನೆ.

        *ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್/*

*ಸಾಧುರೇವ ಸ ಮಂತವ್ಯ: ಸಮ್ಯಗ್ವ್ಯವಸಿತೋ ಹಿಸ://೩೦//*

ಒಂದು ವೇಳೆ ಯಾರಾದರೂ ಅತಿಶಯ ದುರಾಚಾರಿಯಾದರೂ ಕೂಡ ಅನನ್ಯ ಭಾವದಿಂದ ನನ್ನ ಭಕ್ತನಾಗಿ ನನ್ನನ್ನು ಭಜಿಸುತ್ತಾನಾದರೆ ಅವನನ್ನು ಸಾಧುವೆಂದೇ ತಿಳಿಯಬೇಕು ; ಏಕೆಂದರೆ ಅವನು ಯಥಾರ್ಥವಾದ ನಿಶ್ಚಯವುಳ್ಳವನಾಗಿದ್ದಾನೆ, ಅರ್ಥಾತ್ ಪರಮೇಶ್ವರನ ಭಜನೆಗೆ ಸಮಾನವಾದುದು ಬೇರಾವುದೂ ಇಲ್ಲವೆಂದು ಅವನು ಚೆನ್ನಾಗಿ ನಿಶ್ಚಯಿಸಿಕೊಂಡಿರುತ್ತಾನೆ.

***

 *ಕ್ಷಿಪ್ರಂ  ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ/*

*ಕೌಂತೇಯ ಪ್ರತಿ ಜಾನೀಹಿ ನ ಮೇ ಭಕ್ತ: ಪ್ರಣಶ್ಯತಿ//೩೧//*

  ಅವನು ಶೀಘ್ರವಾಗಿಯೇ ಧರ್ಮಾತ್ಮನಾಗುತ್ತಾನೆ ಮತ್ತು ಸದಾಕಾಲ ಇರುವಂತಹ ಪರಮಶಾಂತಿಯನ್ನು ಪಡೆಯುತ್ತಾನೆ. ಹೇ ಅರ್ಜುನಾ! ನನ್ನ ಭಕ್ತನು ನಷ್ಟವಾಗುವುದಿಲ್ಲವೆಂದು ನೀನು ನಿಶ್ಚಯಪೂರ್ವಕವಾದ ಸತ್ಯವನ್ನು ತಿಳಿ.

      *ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಪಿ ಸ್ಯು: ಪಾಪಯೋನಯ: /*

*ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂ ಗತಿಮ್//೩೨//*

 ಹೇ ಅರ್ಜುನಾ! ಸ್ರ್ತೀಯರು,ವೈಶ್ಯರು,ಶೂದ್ರರು ಹಾಗೂ ಪಾಪಯೋನಿಗಳು ಮುಂತಾದ ಯಾರೇ ಆಗಿರಲಿ, ಅವರೂ ಕೂಡ ನನ್ನಲ್ಲಿ ಶರಣಾಗಿ ಪರಮಗತಿಯನ್ನೇ ಪಡೆಯುತ್ತಾರೆ.

***

 *ಕಿಂ ಪುನರ್ಬ್ರಾಹ್ಮಣಾ: ಪುಣ್ಯಾ ಭಕ್ತಾ ರಾಜರ್ಷಯಸ್ತಥಾ/* *ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್//೩೪//*

  ಪುಣ್ಯಶೀಲರಾದ ಬ್ರಾಹ್ಮಣರು ಹಾಗೂ ರಾಜರ್ಷಿ ಭಕ್ತಜನರು ನನ್ನಲ್ಲಿ ಶರಣಾಗಿ ಪರಮಗತಿಯನ್ನು ಪಡೆಯುತ್ತಾರೆ, ಇದರಲ್ಲಿ ಹೇಳುವುದಾದರೂ ಏನಿದೆ! ಅದಕ್ಕಾಗಿ ಸುಖರಹಿತವಾದ ಕ್ಷಣಭಂಗುರವಾದ ಈ ಮನುಷ್ಯ ಶರೀರವನ್ನು ಪಡೆದುಕೊಂಡು ನೀನು ನಿರಂತರ ನನ್ನನ್ನೇ ಭಜಿಸು.

    *ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/*

*ಮಾಮೇವೈಷ್ಯಸಿ ಯುಕ್ತೈವಮಾತ್ಮಾನಾಂ ಮತ್ಪರಾಯಣ://೩೪//*

     ನನ್ನಲ್ಲಿ  ಮನಸ್ಸುಳ್ಳವನಾಗು,ನನ್ನ ಭಕ್ತನಾಗು,ನನ್ನನ್ನು ಪೂಜಿಸುವವನಾಗು. ನನಗೆ ನಮಸ್ಕರಿಸು,ಈ ಪ್ರಕಾರ ಆತ್ಮವನ್ನು ನನ್ನಲ್ಲಿ ನಿಯುಕ್ತಿಗೊಳಿಸಿ ನನ್ನ ಪರಾಯಣನಾಗಿ ನೀನು ನನ್ನನ್ನೇ ಪಡೆಯುವೆ.

    *ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು*

* *ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ* 

*ರಾಜ ವಿದ್ಯಾರಾಜಗುಹ್ಯಯೋಗೋ ನಾಮ ನವಮೋಧ್ಯಾಯ://*

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ