ಗೀತಾಮೃತ - 39

ಗೀತಾಮೃತ - 39

*ಅಧ್ಯಾಯ ೧೧*

     *//ಅಥ ಏಕಾದಶೋಧ್ಯಾಯ://*

*ವಿಶ್ವರೂಪದರ್ಶನಯೋಗವು*

*ಅರ್ಜುನ ಉವಾಚ*

          *ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್/*

*ಯತ್ವ್ತಯೋಕ್ತಂ ವಚಸ್ತೇನ ಮೋಹೋಯಂ ವಿಗತೋಮಮ//೧//*

     ಅರ್ಜುನನು ಹೇಳಿದನು _

ನನ್ನ ಮೇಲೆ ಅನುಗ್ರಹಿಸುವುದಕ್ಕಾಗಿ ನೀನು ಯಾವ ಪರಮ ಗೋಪ್ಯವಾದ ಆಧ್ಯಾತ್ಮ ವಿಷಯವಾದ ವಚನ ಅರ್ಥಾತ್ ಉಪದೇಶವನ್ನು ಮಾಡಿದೆಯೋ,ಅದರಿಂದ ನನ್ನ ಈ ಅಜ್ಞಾನವು ನಾಶವಾಗಿ ಹೋಗಿದೆ.

   *ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ/*

*ತತ್ತ್ವ: ಕಮಲಪತ್ರಾಕ್ಷ ಮಹಾತ್ಮ್ಯಮಪಿ ಚಾವ್ಯಯಮ್//೨//*

ಏಕೆಂದರೆ ಹೇ ಕಮಲಪತ್ರಾಕ್ಷನೆ! ನಾನು ನಿನ್ನಿಂದ ಜೀವಜಗತ್ತಿನ ಉತ್ಪತ್ತಿ ಮತ್ತು ಪ್ರಳಯವನ್ನು ವಿಸ್ತಾರಪೂರ್ವಕವಾಗಿ ಕೇಳಿದ್ದೇನೆ ಹಾಗೂ ನಿನ್ನ ಅವಿನಾಶಿಯಾದ ಮಹಿಮೆಯನ್ನು ಸಹ ಕೇಳಿದ್ದೇನೆ.

***

 *ಏವಮೇತದ್ಯಥಾತ್ಥ ತ್ವಮಾತ್ಮಾನಂ  ಪರಮೇಶ್ವರ/*

*ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ//೩//*

 ಹೇ ಪರಮೇಶ್ವರನೇ! ನೀನು ನಿನ್ನನ್ನು ಹೇಗೆ ಹೇಳಿ ಕೊಂಡಿರುವೆಯೋ ಅದು ಸರಿಯಾಗಿ ಹಾಗೆಯೇ ಇದೆ.ಆದರೆ ಹೇ ಪುರುಷೋತ್ತಮನೆ! ನಿನ್ನ ಜ್ಞಾನ,ಐಶ್ವರ್ಯ,ಶಕ್ತಿ,ಬಲ,ವೀರ್ಯ ಮತ್ತು ತೇಜಸ್ಸಿನಿಂದ ಕೂಡಿದ ಐಶ್ವರ ರೂಪವನ್ನು ನಾನು ಪ್ರತ್ಯಕ್ಷವಾಗಿ ನೋಡಬಯಸುತ್ತೇನೆ.

      *ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ಷ್ಟುಮಿತಿ ಪ್ರಭೋ/*

*ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮನಮವ್ಯಯಮ್//೪//*

ಹೇ ಪ್ರಭುವೆ! ಒಂದು ವೇಳೆ ನನ್ನ ಮೂಲಕ ನಿನ್ನ ರೂಪವು ನೋಡಲ್ಪಡುವುದು ಶಕ್ಯವಾದುದು ಎಂದು ನೀನು ಭಾವಿಸುವೆಯಾದರೆ,ಆಗ ಹೇ ಯೋಗೀಶ್ವರನೆ! ನೀನು ನಿನ್ನ ಅವಿನಾಶಿಯಾದ ಸ್ವರೂಪದ ದರ್ಶನವನ್ನು ನನಗೆ ಮಾಡಿಸು.

***

*ಶ್ರೀ ಭಗವಾನುವಾಚ*

       *ಪಶ್ಯ ಮೇ ಪಾರ್ಥ ರೂಪಾಣಿ ಶತಶೋಥ ಸಹಸ್ರಶ:/*

*ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ//೫//*

  ಶ್ರೀ ಭಗವಂತನು ಹೇಳಿದನು _ ಹೇ ಪಾರ್ಥನೇ! ಈಗ ನೀನು ನನ್ನ ನೂರಾರು,ಸಾವಿರಾರು,ನಾನಾ ಪ್ರಕಾರದ ಮತ್ತು ಬಗೆಬಗೆಯ ವರ್ಣ ಹಾಗೂ ಆಕೃತಿಗಳುಳ್ಳ ಅಲೌಕಿಕವಾದ ರೂಪಗಳನ್ನು ನೋಡು.

*ಪಶ್ಯಾದಿತ್ಯಾನ್ವಸೂನ್ ರುದ್ರಾನಶ್ವಿನೌ ಮರುತಸ್ತಥಾ/*

*ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ//೬//*

ಹೇ ಭರತವಂಶೀಯನಾದ  ಅರ್ಜುನನೇ! ನನ್ನಲ್ಲಿ ಆದಿತ್ಯರನ್ನು ಅರ್ಥಾತ್ ಅದಿತಿಯ ಹನ್ನೆರಡು ಪುತ್ರರನ್ನು ಅಷ್ಟವಸುಗಳನ್ನು,ಏಕಾದಶ ರುದ್ರರನ್ನು ,ಇಬ್ಬರು ಅಶ್ವಿನೀಕುಮಾರರನ್ನು ಮತ್ತು ನಲವತ್ತೊಂಭತ್ತು ಮರುದ್ಗಣರನ್ನು ನೋಡು.ಹಾಗೆಯೇ ಇನ್ನೂ ಕೂಡ ಅನೇಕವಾದ ಮೊದಲು ನೋಡದಿರುವ  ಆಶ್ಚರ್ಯಮಯ ರೂಪಗಳನ್ನು ನೋಡು.

***

*ಇಹೈಕಸ್ಥಂ ಜಗತ್ಕೃತ್ನ್ಸಂ ಪಶ್ಯಾದ್ಯ ಸಚರಾಚರಮ್/*

*ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ದ್ರಷ್ಟುಮಿಚ್ಛಸಿ//೭//*

    ಹೇ ಅರ್ಜುನನೇ! ಈಗ ಈ ನನ್ನ ಶರೀರದಲ್ಲಿ ಒಂದೆಡೆ ಸ್ಥಿತವಾಗಿರುವ ಚರಾಚರಸಹಿತವಾದ ಸಂಪೂರ್ಣ ಜಗತ್ತನ್ನು ನೋಡು ಹಾಗೂ ಇನ್ನೂ ಏನೇನನ್ನು ನೋಡಲು ಇಚ್ಛಿಸುವೆಯೋ ಅವನ್ನೂ ನೋಡು.

    *ನ ತು ಮಾಂ ಶಕ್ಯಸೇ ದ್ರುಷ್ಟುಮನೇನೇವ ಸ್ವಚಿಕ್ಷುಷಾ/*

*ದಿವ್ಯಂ ದದಾಮಿ ತೇ ಚಕ್ಷು: ಪಶ್ಯ ಮೇ ಯೋಗಮೈಶ್ವರಮ್//೮//*

 ಆದರೆ ನನ್ನನ್ನು ನೀನು ಈ ಪ್ರಾಕೃತವಾದ ನೇತ್ರಗಳ ಮೂಲಕ. ನೋಡುವುದರಲ್ಲಿ ನಿಸ್ಸಂದೇಹವಾಗಿ ಸಮರ್ಥನಲ್ಲ. ಆದ್ದರಿಂದ ನಾನು ನಿನಗೆ ದಿವ್ಯದೃಷ್ಟಿಯನ್ನು ಕೊಡುತ್ತೇನೆ.ಆದ್ದರಿಂದ ನನ್ನ ಈಶ್ವರೀಯವಾದ ಯೋಗ ಶಕ್ತಿಯನ್ನು ನೋಡು.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ